ಮೋಡ ಬಿತ್ತನೆಗೆ ಡ್ರೋನ್‌: ಪ್ರಾಯೋಗಿಕ ಹಾರಾಟ

0
1203

ಉಡುಪಿ: ಅತೀ ಕಡಿಮೆ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸುವ ಮಾನವ ರಹಿತ, ಪರಿಸರ ಸ್ನೇಹಿ ಡ್ರೋನ್‌ ಆವಿಷ್ಕರಿಸಲಾಗಿದ್ದು, ಅಜ್ಜರಕಾಡು ಕ್ರೀಡಾಂಗಣದಲ್ಲಿ ರವಿವಾರ ಸಂಜೆ ಡೆಮೋ ಪ್ರಾಯೋಗಿಕ ಹಾರಾಟ ನಡೆಸಲಾಯಿತು.

drono udupi

ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಪ್ರಾಯೋಗಿಕ ಹಾರಾಟಕ್ಕೆ ಚಾಲನೆಯಿತ್ತು ಮಾತನಾಡಿ, ಮೇಲ್ಮಟ್ಟದಲ್ಲಿ ಮೋಡಗಳ ಮಧ್ಯೆ ಹಾರಾಟ ನಡೆಸಿ ಮೋಡ ಬಿತ್ತನೆ ಕಾರ್ಯ ಮಾಡಬೇಕಾದರೆ ಸರಕಾರಗಳಿಂದ ಹಲವು ಅನುಮತಿಗಳನ್ನು ಪಡೆಯಬೇಕಿದೆ. ಡ್ರೋನ್‌ ತಂಡದವರು ಬೆಂಗಳೂರಿಗೆ ಬಂದರೆ ಕೃಷಿ ಸಚಿವರು, ಮುಖ್ಯಮಂತ್ರಿಗಳ ಜತೆ ಮಾತನಾಡಿ ಸರಕಾರದ ಕಡೆಯಿಂದ ಸರ್ವ ಸಹಕಾರ ನೀಡಲಾಗುವುದು. ರಾಜ್ಯದೆಲ್ಲೆಡೆ ಬರ ಪರಿಸ್ಥಿತಿ ಇರುವಾಗ ಮೋಡ ಬಿತ್ತನೆ ಕಾರ್ಯ ಅಗತ್ಯವಾಗಿ ಆಗಬೇಕಿದೆ. ಈ ಸಂದರ್ಭ ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸುವ ಡ್ರೋನ್‌ ತಯಾರಿಸಿರುವುದು ಉತ್ತಮ ಕಾರ್ಯ ಎಂದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯ ಕೆ. ಜನಾರ್ದನ ಭಂಡಾರ್ಕರ್‌, ಡ್ರೋನ್‌ ಯೋಜನೆಯ ನಿರ್ಮಾತೃ ಕರುಣಾಕರ ನಾಯಕ್‌, ಇಸ್ರೋದ ನಿವೃತ್ತ ಎಂಜಿನಿಯರ್‌ ಜನಾರ್ದನ ರಾವ್‌, ಯೋಜನೆಯ ಇನ್ನೋರ್ವ ರೂವಾರಿ ಏರೋನಾಟಿಕಲ್‌ ಎಂಜಿನಿಯರ್‌ ಪ್ರಜ್ವಲ್‌ ಹೆಗ್ಡೆ ಬೈಲೂರು, ದಿವಾಕರ್‌ ಕಾರ್ಕಳ ಉಪಸ್ಥಿತರಿದ್ದರು.