ಯಕ್ಷ ಸುಂದರ- ಪ್ರಸನ್ನ ಶೆಟ್ಟಿಗಾರ್

0
2028

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (1) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)

ಮಂದಾರ್ತಿ ಮಣ್ಣಿನ ಸಿರಿ

 

ಪ್ಲೀಸ್ ಟೀಚರ್, ಈ ವರ್ಷನಾದ್ರೂ ನನ್ನನ್ನು ಫೇಲ್ ಮಾಡಿ. ನಾನು ಮೇಳ ಸೇರ್ಕೋತೆ..“ ಅಂತ ಸ್ಕೂಲ್ ಟೀಚರ್ರಿಗೆ ದಂಬಾಲು ಬೀಳ್ತಾ ಇದ್ದ ಹೈಸ್ಕೂಲ್ ಹುಡುಗ ಈಗ ಬಡಗು ತಿಟ್ಟಿನ ಖ್ಯಾತ ಯಕ್ಷಗಾನ ಮೇಳವೊಂದರ ಪ್ರಧಾನ ವೇಷದಾರಿ. ಆದ್ರೆ ಬಿಡದ ಟೀಚರ್ ಕಿವಿ ಹಿಂಡಿ ಒಂದು ಹಂತದವರೆಗೆ ಪಾಸು ಮಾಡಿಸಿದ್ದಾಯ್ತು. ಶಿಕ್ಷಣದ ಜತೆಗೇ ಯಕ್ಷಗಾನವನ್ನೂ ಪಟ್ಟು ಹಿಡಿದು ಕಲೆಯನ್ನು ಒಲಿಸಿಕೊಂಡ ಹುಟ್ಟು ಪ್ರತಿಭಾವಂತ ಈತ.. ಹೌದು, ಇದು ಅಚ್ಚ ಕುಂದಗನ್ನಡದ ಯುವಕ ಯಕ್ಷಸಿರಿಯಾಗಿ ಅರಳಿಕೊಂಡ ಕಥೆ..

ಪ್ರಸ.. ಪ್ರಸನ್ನ ಶೆಟ್ಟಿಗಾರ್..ಯಕ್ಷಗಾನ ಕ್ಷೇತ್ರದಲ್ಲಿ ಬಿರಿದರಳುತ್ತಿರುವ ಪ್ರತಿಭಾವಂತ ಯುವ ಕಲಾವಿದ. ನಾಯಕ ಖಳನಾಯಕನ ಪಾತ್ರಗಳಿಗೆ ಗತ್ತು ಗಾಂಭೀರ್ಯವನ್ನು ತುಂಬಬಲ್ಲ ಕಟ್ಟಾಳು. ಸ್ವರ್ಣಕುಟುಂಬದ ನಾಯಕ, ಪುಷ್ಪಚಂದನದ ನಾಗಭೂಷಣ, ಅಂಬಾ ಶಪಥದ ಸಾಲ್ವ ಭೂಪತಿ, ದಕ್ಷಯಜ್ಞದ ಮಹಾದೇವ, ಶ್ರೀಕೃಷ್ಣ ಪಾರಿಜಾತದ ಕೃಷ್ಣ, ಕೃಷ್ನಾರ್ಜುನದ ಕೃಷ್ಣ, ವಜ್ರಮಾನಸಿ ಪ್ರಸಂಗದ ಕಥಾನಾಯಕ, ಸತ್ಯ ಹರಿಶ್ಚಂದ್ರ ಪ್ರಸಂಗದ ಹರಿಶ್ಚಂದ್ರ, ಹೀಗೆ ಪ್ರಮುಖ ಪಾತ್ರಗಳಲ್ಲಿ ಗುರುತಿಸಿಕೊಂಡಿರುವ ಕಲಾವಿದ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿಕೊಡುತ್ತಿದ್ದಾರೆ.

ಕಲೆ ಎಲ್ಲರಿಗೂ ಒಲಿಯೋದಿಲ್ಲ ಅನ್ನೊ ಹಾಗೆ ಅದಕ್ಕೆ ತಾದ್ಯಾತ್ಮತೆ, ಪರಿಶ್ರಮ, ತೀವ್ರ ಹಂಬಲ, ನಿರಂತರ ಕಲಿಕೆ, ಬೇಕಾಗುತ್ತೆ. ಹಾಗೇ ಅದೊಂದು ತಪಸ್ಸು ಅಂತ ಬದ್ಧವಾಗಿರಬೇಕಾಗುತ್ತೆ. ಅಂಥಾ ಒಂದು ಬದ್ಧತೆ, ಪರಿಶ್ರಮ, ಯಕ್ಷಗಾನದ ತೀವ್ರ ಸೆಳೆಯವೇ ಈ ಯುವಕನನ್ನು ಕಲಾಕ್ಷೇತ್ರದಲ್ಲಿ ಈ ಮಟ್ಟಕ್ಕೆ ಬೆಳೆಸಿದ್ದು

ಕುಂದಾಪುರ ತಾಲೂಕಿನ ಮಂದಾರ್ತಿಯ ತಂತ್ರಾಡಿ ಪ್ರಸನ್ನನ ಹುಟ್ಟೂರು. ಗಂಗಾಧರ್ ಶೆಟ್ಟಿಗಾರ್ ಸುಲೋಚನಾ ದಂಪತಿಯ 3 ಮಕ್ಕಳಲ್ಲಿ ಹಿರಿಯ ಮಗ. ತನ್ನ 6 ರ ವಯಸ್ಸಿನಲ್ಲಿಯೇ ಯಕ್ಷಗಾನದ ಬಗ್ಗೆ ತೀವ್ರ ಸೆಳೆತ. ಅಲ್ಲಿಂದಲೇ ರಂಗಪಯಣ ಶುರು.

20 ನೇ ವಯಸ್ಸಿನಲ್ಲಿ ತಂತ್ರಾಡಿಯ ಹಿರಿಯಣ್ಣ ಶೆಟ್ಟಿಗಾರ್ ಅವರಿಂದ ಪ್ರಾಥಮಿಕ ರಂಗಾಭ್ಯಾಸ. ಮುಂದೆ ಮಂದಾರ್ತಿ ಕಲಾಕೇಂದ್ರದಲ್ಲಿ ಪೂರ್ಣ ಪ್ರಮಾಣದ ಅಭ್ಯಾಸ ಪೂರೈಸಿರುವ ಪ್ರಸನ್ನ ಬಳಿಕ ಪ್ರಥಮ ಬಾರಿಗೆ ಮಿಂಚಿದ್ದು ಹುಟ್ಟೂರಿನ ಮೇಳವಾಗಿರುವ ಮಂದಾರ್ತಿ ಮೇಳದಲ್ಲಿ. ಆಗ ಬಾಲಗೋಪಾಲ ಒಡ್ಡೋಲಗದ ನೃತ್ಯ ಇತ್ಯಾದಿ ವೇಷಗಳ ಮೂಲಕ ಆಂಗಿಕ, ವಾಚಿಕ ಬಾಷಿಕ, ಬಣ್ಣಗಾರಿಕೆ, ವೇಷಗಾರಿಕೆ ಮೊದಲಾದ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡ ಪ್ರಸನ್ನ ತಿರುಗಾಟದಲ್ಲೇ ಇನ್ನಷ್ಟು ಪಳಗಿದ್ದಾರೆ.

ಸಾಲಿಗ್ರಾಮ ಗುರುಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ ಪ್ರಮುಖ ವೇಷಧಾರಿಯಾಗಿ ಗುರುತಿಸಿಕೊಂಡಿರುವ ಪ್ರಸನ್ನ ವಿಶೇಷವಾಗಿ ಖಳನಾಯಕನ ಪಾತ್ರಗಳಲ್ಲಿ ರೈಸುತ್ತಾರೆ. ನಿಜ ಜೀವನದಲ್ಲಿ ಸೌಮ್ಯ ಸ್ವಬಾವದ ಪ್ರಸನ್ನ, ರಂಗದ ಮೇಲೆ ಗದಾಯುದ್ಧದ ಕೌರವ, ಕಾರ್ತವೀರ್ಯ, ಚಕ್ರಚಂಡಿಕಾದ ಬರ್ಬರೀಕ, ಬಬ್ರುವಾಹನ, ದೇವಿಮಹಾತ್ಮೆಯ ಮಹಿಷಾಸುರ, ರುದ್ರಗೋಪ ಪಾತ್ರಗಳಲ್ಲಿ ಮಿಂಚಿದ್ದಾರೆ. 6 ವರ್ಷ ಮಂದಾರ್ತಿ ಮೇಳದಲ್ಲಿ ಹೆಸರು ಮಾಡಿ, ಈಗ ಸಾಲಿಗ್ರಾಮ ಮೇಳದಲ್ಲಿ ತಿರುಗಾಟದಲ್ಲಿದ್ದಾರೆ. ಇನ್ನು ರಂಗದ ಮೇಲೆ ಪ್ರಸನ್ನನ ಜೊತೆ ಸ್ತ್ರೀ ಪಾತ್ರದಲ್ಲಿ ಶಶಿಕಾಂತ್ ಶೆಟ್ಟಿ ಬಹಳ ಹೆಸರು ಮಾಡಿರುವ ಜೋಡಿ. ಅಲ್ಲದೆ, ಮಂಕಿ ಈಶ್ವರ್ ನಾಯಕ್ – ಪ್ರಸನ್ನ, ಹಾಸ್ಯದಲ್ಲಿ ಜಾರ್ಕಳ- ಪ್ರಸನ್ನ ಬಲು ಮೋಡಿ ಮಾಡುತ್ತೆ.

ಇನ್ನು ವಿನಯದಿಂದಲೇ ಮಾತನಾಡುವ ಪ್ರಸನ್ನ ಶೆಟ್ಟಿಗಾರ್ ಕಲಾರಾಧನೆಗೋಸ್ಕರ ಯಕ್ಷಗಾನದ ನಂಟು ಬೆಳೆಸಿಕೊಂಡೆ. ಇದೀಗ ಹೊಟ್ಟೆಪಾಡಿಗೂ ಹೌದು. ಇದು ಪ್ರಸನ್ನನ ಮಾತು. ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಕಲಾವಿದರಿಗೆ ವಿಶೇಷ ಗೌರವ ಮನ್ನಣೆಗಳು ಸಿಗ್ತಾ ಇವೆ ಅಷ್ಟೇ ಅಲ್ಲದೆ ಸಂಪಾದನೆಗೂ ಏನೂ ಕೊರತೆ ಇಲ್ಲ. ಇದು ಒಳ್ಳೆಯ ಬೆಳವಣಿಗೆ ಅಂತ ಸಂತೃಪ್ತಿಯ ಮಾತುಗಳನ್ನು ಹೇಳ್ತಾರೆ.

ಕಳೆದಮೂರುವರ್ಷಗಳಿಂದವೀಣಾಜತೆಅನ್ಯೋನ್ಯದಾಂಪತ್ಯಜೀವನನಡೆಸುತ್ತಿರುವಪ್ರಸನ್ನಇದೀಗಹೊಸಸಂಭ್ರಮಕ್ಕಾಗಿಕಾಯುತ್ತಿದ್ದಾರೆ. ಇಬ್ಬರನಡುವೆನ್ಯೂಕಮರ್ಆಗಮನವಾಗ್ತಿದೆ. ಹೌದು ಹೊಸ ಅತಿಥಿಯನ್ನು ಒಡಲಲ್ಲಿ ತುಂಬಿಕೊಂಡು ಸೊಬಗಿಯಾಗಿದ್ದಾರೆ ವೀಣಾ.

ಪ್ರಸನ್ನನ ಪ್ರತಿಭೆ ಕರಾವಳಿಗಷ್ಟೇ ಸೀಮಿತವಾಗದೆ, ರಾಜ್ಯ, ದೇಶದ ನಾನಾಭಾಗಗಳಲ್ಲೂ ಸಾಲಿಗ್ರಾಮ ಮೇಳದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಮಳೆಗಾಲದ ಕೂಟಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಯಕ್ಷಗಾನದ ಕಂಪು ಹರಡ್ತಿದ್ದಾರೆ. ಜುಲೈ ತಿಂಗಳಲ್ಲಿ ರಾಜದಾನಿ ಬೆಂಗಳೂರಿನ ರಂಗಶಂಕರದಲ್ಲಿ ವಜ್ರಮಾನಸಿ, ಅಂಬಾ ಶಪಥ, ಓಂ ನಮಃ ಶಿವಾಯ, ಪುಷ್ಪಚಂದನ ಯಕ್ಷಗಾನ ಪ್ರದರ್ಶನಗೊಂಡಿವೆ. ಆಗಸ್ಟ್ ತಿಂಗಳಿನಲ್ಲಿ ಮುಂಬೈನಲ್ಲೂ ಪ್ರದರ್ಶನ ನೀಡೋದಕ್ಕೆ ತಯಾರಾಗ್ತಿದೆ ಅವರ ತಂಡ. ಅವರ ಕಲಾಸೇವೆ ಇನ್ನಷ್ಟು ಮುಂದುವರೀಲಿ. ಯಕ್ಷಗಾನವನ್ನೇ ಬದುಕು ಮಾಡಿಕೊಂಡಿರುವ ಅವರ ಪ್ರತಿಭೆಗೆ ಪ್ರಶಸ್ತಿಗಳು ಅರಸಿ ಬರಲಿ ಅನ್ನೊದೇ ಹಾರೈಕೆ.

ಶುಭಾಶಯ ಜೈನ್

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (1) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)