ಯೋಧರಿಗೆ ನಮನ, ದಾಸವಾಣಿ ಅಂತ್ಯಾಕ್ಷರಿಯ ವೈಶಿಷ್ಟ್ಯಮಯ ಸಂಜೆ

0
2065

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

     ಹುಟ್ಟುಹಬ್ಬ, ವೈವಾಹಿಕ ಜೀವನದ ವರ್ಷಾಚರಣೆ, ಷಷ್ಯಬ್ಧಿಪೂರ್ತಿಯಂತಹ  ಆಚರಣೆಗಳು ನಮ್ಮ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳಿಗೆ ವ್ಯತಿರಿಕ್ತವಾದ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯ ಮೋಜಿನ ಪಾರ್ಟಿಗಳಾಗುತ್ತಿವೆ ಎನ್ನುವ ಹಿರಿಯರ ನೋವಿನ ನುಡಿಗಳನ್ನು ಕೇಳುತ್ತಿರುತ್ತೇವೆ. ಜೀವನದ ಯಶಸ್ವೀ 60 ಸಂವತ್ಸರಗಳನ್ನು ಪೂರೈಸಿದ ಸಂಭ್ರಮಾಚರಣೆಯ ಅದೇಷ್ಟೋ ಅದ್ದೂರಿ, ವೈಭವದ ಸಮಾರಂಭ ನಮ್ಮ ಸುತ್ತಮುತ್ತ ನಡೆಯುತ್ತಿರುತ್ತದೆ. ಆದರೆ ಇಂತಹ ಖಾಸಗಿ ಸಮಾರಂಭದಲ್ಲಿ ಮಾಜಿ ಸೈನಿಕರನ್ನು ಗುರುತಿಸಿ ಗೌರವಿಸಿ, ನೆರೆದ ಬಂಧು-ಮಿತ್ರರಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ದಾಸ ವರೇಣ್ಯರ ಭಾವ ವಿಭೋರವಾಗಿಸುವ ಸಂಗೀತ ಸುಧೆಯನ್ನು ಉಣ ಬಡಿಸಿ ಸಂತಸಪಟ್ಟು, ಮುಂದಿನ ಬದುಕಿಗೆ ಅದನ್ನು ಸ್ಮರಣೀಯ ನೆನಪಿನ ಸಂಜೆಯಾಗಿಸಿಕೊಂಡ  ವೈಶಿಷ್ಟ್ಯಮಯ ಷಷ್ಯಬ್ಧಿಪೂರ್ತಿ ಸಂಜೆಯ ಸಮಾರಂಭ ಅಪರೂಪವೇ ಸರಿ.

      ಬೈಂದೂರು-ಉಪ್ಪುಂದ ಮೂಲದ ರಾಯಚೂರಿನ ರಾಮಚಂದ್ರ ಪ್ರಭು ತಮ್ಮ  ಷಷ್ಯಬ್ಧಿಪೂರ್ತಿ ಸಮಾರಂಭವನ್ನು ದಿಸೆಂಬರ 25 ರಂದು ವೈಶಿಷ್ಟ್ಯಮಯವಾಗಿ ಆಚರಿಸಕೊಂಡು ಪರಿಸರದ ಜನರ ಶ್ಲಾಘನೆಗೆ ಪಾತ್ರರಾದರು. ಸಂಜೆಯ ಸಮಾರಂಭದ ಪ್ರಾರಂಭದಲ್ಲಿ ೧೦ ಜನ ಮಾಜಿ ಸೈನಿಕರನ್ನು ಸಾಂಪ್ರದಾಯಿಕವಾಗಿ ಫಲ ಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಅವರ ಸೇವೆಯ ವಿವರವನ್ನು ಸ್ಮರಿಸಲಾಯಿತು.  ಬಳಿಕ ರಾಯಚೂರಿನ ಪ್ರಸಿದ್ಧ ಗಾಯಕರಾದ ಶೇಷಗಿರಿ ದಾಸರ ಸಂಯೋಜಕತ್ವದಲ್ಲಿ ನಡೆದ ದಾಸವಾಣಿ ಅಂತ್ಯಾಕ್ಷರಿಯಲ್ಲಿ ಬೆಂಗಳೂರಿನ ದಿವ್ಯಾ ಗಿರಿಧರ್, ಪ್ರಸನ್ನ ಕೊರ್ತಿ, ಅನನ್ಯ ಭಾರ್ಗವ್ ಮತ್ತು ಉಡುಪಿಯ ಸಂಗೀತಾ ಬಾಲಚಂದ್ರ  ತಮ್ಮ ಮಧುರ ಕಂಠದಿಂದ ದಾಸ ವಾಣಿಯ ಅಮೃತ ಧಾರೆಯನ್ನೇ ಹರಿಸಿದರು.  ಪ್ರಥಮ ಸುತ್ತಿನಲ್ಲಿ ದಿವ್ಯಾ ಗಿರಿಧರ್ ಅವರಿಂದ ಮೊದಲ್ಗೊಂಡು  ಅಂತ್ಯಾಕ್ಷರವನ್ನು ಹಿಡಿದು ಒಬ್ಬೊಬ್ಬರಾಗಿ  ಹಾಡಿದ ಗಾಯಕರು ಎರಡನೇ ಹಂತದಲ್ಲಿ ಶೋತೃಗಳು ಲಾಟರಿ ಮೂಲಕ ಆರಿಸಿದ ವಿಷಯ ಆಧಾರಿತ ದಾಸರ ಹಾಡು ಹಾಡಿದರೆ ಮೂರನೇ ಸುತ್ತಿನಲ್ಲಿ  ಜಾನಪದ ಶೈಲಿಯ ದಾಸರ ಪದಗಳನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರ ಮನತಣಿಸಿದರು.

    ಅನನ್ಯ ಭಾರ್ಗವ ಅವರ ” ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ….ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ.” ಎನ್ನುವ ಹಾಡಿನಲ್ಲಿ ನೆರೆದ ಜನಸ್ತೋಮ ಬಾವಾತಿರೇಕದಿಂದ ಪುಳಕಗೊಂಡರೆ  ಪ್ರಸನ್ನ ಕೊರ್ತಿ ಅವರ ” ಯಾರ್ಯಾರು ಏನೇನೆಂದರೊ ರಂಗಯ್ಯ….” ಎನ್ನುವ ಹಾಡು, ಸಂಗೀತಾ ಬಾಲಚಂದ್ರ ಅವರ ” ಹಾಡಿದರೆ ಎನ್ನ ಒಡೆಯನ ಹಾಡುವೆ..” ಹಾಡುಗಳು ಬಾವಪರವಶಗೊಳಿಸಿತು. ಜಾನಪದ ಶೈಲಿಯಲ್ಲಿನ ಹಾಡುಗಳಲ್ಲೊಂದಾದ ಸುವಿ..ಸುವಿ.. ಎನ್ನುವ ದಿವ್ಯಾ ಗಿರಿಧರ್ ಅವರ ಮತ್ತು ” ಎಲ್ಲಾರೂ ಮಾಡುವುದು ಹೊಟ್ಟೆಗಾಗಿ….” ಎನ್ನುವ ಅನನ್ಯಾ ಭಾರ್ಗವ್ ಅವರ ಹಾಡು ದಾಸ ಸಾಹಿತ್ಯದ ಶ್ರೀಮಂತಿಕೆಗೆ ದರ್ಪಣ ಹಿಡಿಯಿತು. ಮೂರು ಶತಮಾನಗಳಷ್ಟು ಹಳೆಯದಾದ ದಾಸರ ಹಾಡುಗಳು ಹೇಗೆ ಇಂದಿನ ದಿನದಲ್ಲೂ ಪ್ರಾಸಂಗಿಕವಾಗಿದೆ ಎನ್ನುವುದನ್ನು ಶೇಷಗಿರಿ ದಾಸರು  ಧಾರ್ಮಿಕವಾಗಿ-ಮಾರ್ಮಿಕವಾಗಿ ” ಹೆತ್ತ ತಾಯಿ ತಂದೆಯ ಚಿತ್ತವ ನೋಯಿಸಿ ಹತ್ತು ದಾನವ ಮಾಡಿ ಫಲವೇನು..” ಎನ್ನುವ ಹಾಡನ್ನು ಲಯಬದ್ದವಾಗಿ ಹಾಡಿ ನೆರೆದ ಯುವಜನಾಂಗದ ಅಂತಸಾಕ್ಷಿಯನ್ನು ಜಾಗೃತಗೊಳಿಸಿದರು.

ಸಂತೋಷ ಎನ್ನುವುದು ಒಂದು ಮಾನಸಿಕ ಸ್ಥಿತಿ.  ಜೀವನದ ವಿಶೇಷ ಸಂದರ್ಭವನ್ನು ನಮ್ಮ ಧಾರ್ಮಿಕ-ಸಾಂಸ್ಕೃತಿಕ ಚೌಕಟ್ಟಿನಲ್ಲಿ ಅರ್ಥಪೂರ್ಣವಾಗಿ ಹೇಗೆ ಆಚರಿಸಿಕೊಳ್ಳಬಹುದೆಂಬುದನ್ನು ಪ್ರಭು ಸಹೋದರರು ತೋರಿಸಿಕೊಟ್ಟು ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಅರ್ಥ ಹೀನ ಹಾಡುಗಳು, ಅಸಭ್ಯ ನರ್ತನಗಳನ್ನೇ ಕಂಡು ಬೇಸತ್ತ ಹಿರಿ-ಕಿರಿಯರೆಲ್ಲರಿಗೆ  ಅಪಾರ ಸಂತೋಷ ನೀಡಿದ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇತರರಿಗೂ ಪ್ರ‍ೇರಣೆ ನೀಡುವಂತಾಗಿದೆ.

ಬೈಂದೂರು ಚಂದ್ರಶೇಖರ ನಾವಡ                                                                                                     ಫೋಟೋ: ಶೃಂಗಾರ್ ಸ್ಟುಡಿಯೋ ಬೈಂದೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)