ತೆರಿಗೆ ದರವನ್ನು ಅಂತಿಮಗೊಳಿಸಿದ ಜಿಎಸ್‌ಟಿ ಮಂಡಳಿ; ಜು.1ರಿಂದ ಆಹಾರ ಧಾನ್ಯ ಅಗ್ಗ

0
112

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

GST

ಶ್ರೀನಗರ: ಇಲ್ಲಿ ನಡೆಯುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆಯು, ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಗುರುವಾರ ಇನ್ನೊಂದು ದೃಢ ಹೆಜ್ಜೆ ಇಟ್ಟಿದೆ.

ಆರು ಸರಕುಗಳನ್ನು ಹೊರತುಪಡಿಸಿ ಉಳಿದೆಲ್ಲ ಸರಕುಗಳ ಮೇಲಿನ ತೆರಿಗೆ ದರ ಅಂತಿಮಗೊಳಿಸಲಾಗಿದೆ. ಇವುಗಳಲ್ಲಿ ಬಹುತೇಕ ಸರಕುಗಳು ಶೇ 18ರ ಒಳಗಿನ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ.

ದಿನಬಳಕೆಯ ಅವಶ್ಯಕ ಸರಕುಗಳನ್ನು ಕನಿಷ್ಠ ತೆರಿಗೆ ಹಂತ ಶೇ 5ರ ವ್ಯಾಪ್ತಿಯಲ್ಲಿ ತರಲಾಗಿದೆ. ಇದರಿಂದಾಗಿ, ಜುಲೈ 1ರಿಂದ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದರೆ ಆಹಾರ ಧಾನ್ಯಗಳು ಅಗ್ಗವಾಗಲಿವೆ. ಸದ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ತೆರಿಗೆಗಳ ಕಾರಣಕ್ಕೆ ದಿನಬಳಕೆ ಸರಕುಗಳ ಮೇಲಿನ ಶೇ 22 ರಿಂದ ಶೇ 24ರಷ್ಟಾಗುತ್ತಿದ್ದ ಹೊರೆ ಈಗ ಶೇ 18ರಷ್ಟಾಗಲಿದೆ.

‘ತೆರಿಗೆ ಹಂತಗಳಾದ ಶೇ 5,12,18 ಮತ್ತು  28ರ ವ್ಯಾಪ್ತಿಯಲ್ಲಿ ತರಬೇಕಾದ ಸರಕು ಮತ್ತು ಸೇವೆಗಳ ಪಟ್ಟಿಯನ್ನು ಸಭೆ ಆಖೈರುಗೊಳಿಸಿದೆ. ಬಳಕೆದಾರರಿಗೆ ತೆರಿಗೆ ಹೊರೆಯಾಗದಂತೆ  ನೋಡಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ ಮಾತ್ರ ವಿನಾಯ್ತಿ ನೀಡಲಾಗುವುದು.  ತೆರಿಗೆ ಪಾವತಿ ವಿಸ್ತರಿಸುವ ಉದ್ದೇಶಕ್ಕೆ ಕನಿಷ್ಠ ವಿನಾಯ್ತಿ  ನೀಡಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ  ತಿಳಿಸಿದ್ದಾರೆ.

ತೆರಿಗೆ ವಿನಾಯ್ತಿಗೆ ಸಲಹೆ: ವಿವಿಧ ರಾಜ್ಯಗಳ ಹಣಕಾಸು ಸಚಿವರು ಬೇರೆ, ಬೇರೆ ಸರಕುಗಳಿಗೆ ತೆರಿಗೆ ವಿನಾಯ್ತಿಯ ಬೇಡಿಕೆ ಮುಂದಿಟ್ಟರು. ರೇಷ್ಮೆ ನೂಲು, ಪೂಜಾ ಸಾಮಗ್ರಿ ಮತ್ತು ಕರಕುಶಲ ಉತ್ಪನ್ನಗಳಿಗೆ ತೆರಿಗೆ ವಿನಾಯ್ತಿ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಚಿನ್ನಕ್ಕೆ ಶೇ 1ರಷ್ಟು ಮಾತ್ರ ತೆರಿಗೆ ವಿಧಿಸಬೇಕು ಎನ್ನುವ ಬೇಡಿಕೆ ಕೇಳಿ ಬಂದಿದ್ದಕ್ಕೆ ಕೇರಳ ಹಣಕಾಸು ಸಚಿವ ಥಾಮಸ್‌ ಇಸಾಕ್‌ ಆಕ್ಷೇಪ ದಾಖಲಿಸಿದ್ದಾರೆ.  ಚಿನ್ನವು ಅವಶ್ಯಕ ಸರಕುಗಳ ಪಟ್ಟಿಯಲ್ಲಿ ಬರುವುದಿಲ್ಲ. ಹೀಗಾಗಿ ಅದಕ್ಕೆ ಶೇ 5ರಷ್ಟು ತೆರಿಗೆ ಅನ್ವಯಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಪೂಜಾ ಸಾಮಗ್ರಿಗಳಿಗೆ ಉದ್ದೇಶಿತ ಶೇ 18ರಷ್ಟು ತೆರಿಗೆ  ಬದಲಿಗೆ ವಿನಾಯ್ತಿ ನೀಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ  ನೇತೃತ್ವದ ನಿಯೋಗವು  ಒತ್ತಾಯಿಸಿತು.

ಸೇವಾ ತೆರಿಗೆಯು ಶೇ 12 ಮತ್ತು ಶೇ 18ರಷ್ಟು ಇರಬೇಕು ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ತೆರಿಗೆ ವ್ಯವಸ್ಥೆಯ  9 ನಿಯಮಗಳ ಪೈಕಿ 7 ನಿಯಮಗಳಿಗೆ ಸಭೆ ಅನುಮೋದನೆ ನೀಡಿದೆ.

ಸೇವೆಗಳ ದರ ಇಂದು ನಿರ್ಧಾರ

ಸೇವೆಗಳಿಗೆ ಅನ್ವಯವಾಗುವ ತೆರಿಗೆ ದರಗಳನ್ನು ಮಂಡಳಿಯು ಶುಕ್ರವಾರ ನಿರ್ಧರಿಸಲಿದೆ. ನಾಳಿನ ಸಭೆಯಲ್ಲಿ ಎಲ್ಲ ಸರಕು ಮತ್ತು ಸೇವೆಗಳ ತೆರಿಗೆಗಳನ್ನು ಅಂತಿಮಗೊಳಿಸಲು ಸಾಧ್ಯವಾಗದಿದ್ದರೆ ಮಂಡಳಿಯು ಇನ್ನೊಮ್ಮೆ ಸಭೆ ಸೇರಲಿದೆ.

‘ಚಿನ್ನ, ಬೀಡಿಗಳ ಮೇಲಿನ ತೆರಿಗೆ ದರ ಮತ್ತು ತೆರಿಗೆ ವಿನಾಯ್ತಿಯ ಅಂತಿಮ ಪಟ್ಟಿ ಬಗ್ಗೆಯೂ ನಾಳೆಯೇ ತೀರ್ಮಾನಕ್ಕೆ ಬರಲಾಗುತ್ತಿದೆ’ ಎಂದು ರೆವೆನ್ಯೂ ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಅವರು ತಿಳಿಸಿದ್ದಾರೆ.

gst_2017

ವಿವಿಧ ಸರಕುಗಳಿಗೆ ಅನ್ವಯವಾಗುವ ತೆರಿಗೆ ದರ

5% ಸಕ್ಕರೆ, ಚಹ, ಇನ್‌ಸ್ಟಂಟ್‌ ಹೊರತುಪಡಿಸಿದ ಕಾಫಿ, ಖಾದ್ಯ ತೈಲ, ಸಿಹಿ ತಿನಿಸು, ಕಲ್ಲಿದ್ದಲು

18 % ಕೇಶ ತೈಲ, ಸೋಪ್‌, ಟೂತ್‌ಪೇಸ್ಟ್, ಭಾರಿ ಯಂತ್ರೋಪಕರಣ

12%ರಿಂದ18% ಜನಸಾಮಾನ್ಯರು ಬಳಸುವ ಬಹುತೇಕ ಸರಕುಗಳು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia