ಐಪಿಎಲ್: ಉದ್ಯಾನನಗರಿಯ ಮಳೆಯ ಆಟದಲ್ಲಿ ಮಿಂಚಿದ ಗಂಭೀರ್: ಕ್ವಾಲಿಫೈಯರ್‌ಗೆ ಕೆಕೆಆರ್

0
108

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

kkr_sharuk

ಬೆಂಗಳೂರು: ಮಧ್ಯರಾತ್ರಿಯವರೆಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾದು ಕುಳಿತಿದ್ದ ಕ್ರಿಕೆಟ್‌ ಪ್ರಿಯರಿಗೆ ಗೌತಮ್‌ ಗಂಭೀರ್‌(ಔಟಾಗದೆ 32, 19ಎ, 2ಬೌಂ, 2ಸಿ) ನಿರಾಸೆ ಮಾಡಲಿಲ್ಲ. ಸಂಕಷ್ಟದ ಸ್ಥಿತಿಯಲ್ಲೂ ಕೆಚ್ಚೆದೆಯಿಂದ ಹೋರಾಡಿದ ಅವರು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ಗೆ 7 ವಿಕೆಟ್‌ಗಳ  ಅಮೂಲ್ಯ ಗೆಲುವು ತಂದುಕೊಟ್ಟರು.

ಸಂಕಷ್ಟ: ಡಕ್ವರ್ಥ್‌ ಲೂಯಿಸ್‌ ನಿಯಮ ದ ಅನ್ವಯ ಕೆಕೆಆರ್‌ ಗೆಲುವಿಗೆ 6 ಓವರ್‌ಗಳಲ್ಲಿ 48ರನ್‌ಗಳ ಗುರಿ ನೀಡಲಾಗಿತ್ತು. ಭುವನೇಶ್ವರ್‌ ಕುಮಾರ್‌ ಹಾಕಿದ ಮೊದಲ ಓವರ್‌ನಲ್ಲೇ ಗಂಭೀರ್‌ ಪಡೆಗೆ ಆಘಾತ ಎದುರಾ ಯಿತು. ತಾವೆದುರಿಸಿದ ಮೊದಲ ಎಸೆತವನ್ನು ಸಿಕ್ಸರ್‌ಗಟ್ಟಿದ ಕ್ರಿಸ್‌ ಲಿನ್‌ (6)  ಮರು ಎಸೆತದಲ್ಲಿ ವಿಕೆಟ್‌ ಕೀಪರ್‌ ನಮನ್‌ ಓಜಾಗೆ ಕ್ಯಾಚ್‌ ನೀಡಿದರು.

ನಾಲ್ಕನೇ ಎಸೆತದಲ್ಲಿ ಯೂಸುಫ್‌ ಪಠಾಣ್‌ (0) ರನ್‌ಔಟ್‌ ಆದರು. ಕ್ರಿಸ್‌ ಜೋರ್ಡಾನ್‌ ಹಾಕಿದ ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ರಾಬಿನ್‌ ಉತ್ತಪ್ಪ (1) ಪೆವಿಲಿಯನ್‌ ಸೇರಿದಾಗ ನೈಟ್‌ರೈಡರ್ಸ್‌ ಪಾಳಯದ ಮೇಲೆ ಆತಂಕ ಆವರಿಸಿತ್ತು. ತಂಡದ ಜಯಕ್ಕೆ 30 ಎಸೆತಗಳಲ್ಲಿ 36ರನ್‌ಗಳು ಬೇಕಿದ್ದವು. ಈ ಹಂತದಲ್ಲಿ ನಾಯಕ ಗೌತಮ್‌ ಗಂಭೀರ್‌ ಜವಾಬ್ದಾರಿ ಯಿಂದ ಆಡಿದರು.

ಜೋರ್ಡಾನ್‌ ಹಾಕಿದ ಐದನೇ ಎಸೆತವನ್ನು ಸಿಕ್ಸರ್‌ಗಟ್ಟಿದ ಅವರು ಸಿದ್ದಾರ್ಥ್‌ ಕೌಲ್‌ ಬೌಲ್‌ ಮಾಡಿದ ನಾಲ್ಕನೇ ಓವರ್‌ನ ಎರಡು ಮತ್ತು ಮೂರನೇ ಎಸೆತಗಳಲ್ಲಿ ಕ್ರಮವಾಗಿ ಬೌಂಡರಿ ಮತ್ತು ಸಿಕ್ಸರ್‌ ಸಿಡಿಸಿ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಆ ನಂತರ ನಿರಾತಂಕವಾಗಿ ಬ್ಯಾಟ್‌ ಬೀಸಿದ ಗೌತಮ್‌, ಕೆಕೆಆರ್‌ಗೆ ಗೆಲುವಿನ ಸಿಹಿ ಉಣಬಡಿಸಿದರು.

ಇದರೊಂದಿಗೆ ನೈಟ್‌ರೈಡರ್ಸ್‌ ಹೋದ ಆವೃತ್ತಿಯ ಎಲಿಮಿನೇಟರ್‌ನಲ್ಲಿ ವಾರ್ನರ್‌ ಬಳಗದ ವಿರುದ್ಧ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು. ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಗೌತಮ್‌ ಪಡೆ ಮುಂಬೈ ಇಂಡಿಯನ್ಸ್‌ ವಿರುದ್ಧ ಆಡಲಿದೆ.

ವಾರ್ನರ್‌–ಕೇನ್ ಆಸರೆ
ನಿಧಾನಗತಿಯ ಪಿಚ್‌ನಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ ಬೌಲರ್‌ಗಳನ್ನು ಸಮರ್ಥ ವಾಗಿ ಎದುರಿಸಿದ ನಾಯಕ ಡೇವಿಡ್‌ ವಾರ್ನರ್‌ (37; 35ಎ, 2ಬೌಂ, 2ಸಿ)  ಮತ್ತು ಕೇನ್‌ ವಿಲಿಯಮ್ಸನ್‌ (24; 26ಎ, 2ಬೌಂ, 1ಸಿ) ಹಾಲಿ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಆಸರೆಯಾದರು.

ಇವರು ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ ಸೇರಿಸಿದ ಅರ್ಧಶತಕದ ಬಲದಿಂದ ವಾರ್ನರ್‌ ಪಡೆ   ಸಾಧಾರಣ ಮೊತ್ತ ಪೇರಿಸಿತು.  ಸನ್‌ರೈಸರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 128ರನ್‌ ಗಳಿಸಿತು.

ನಡೆಯದ ಧವನ್‌ ಆಟ: ಬ್ಯಾಟಿಂಗ್‌ ಆರಂಭಿಸಿದ ಸನ್‌ರೈಸರ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟ್ಸ್‌ ಮನ್‌ ಧವನ್‌, ರನ್‌ ‘ಶಿಖರ’ ನಿರ್ಮಿಸಬಹುದೆಂಬ ಅಭಿಮಾನಿಗಳ ನಿರೀಕ್ಷೆ ಸುಳ್ಳಾಯಿತು. ಕೆಕೆಆರ್‌ ವಿರುದ್ಧದ ಹಿಂದಿನ ಲೀಗ್‌ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ ಅವರು 13 ಎಸೆತಗಳಲ್ಲಿ ಒಂದು ಬೌಂಡರಿ ಸಹಿತ 11ರನ್‌ ಕಲೆ ಹಾಕಿ ಉಮೇಶ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು. ಆಗ ತಂಡದ ಖಾತೆಯಲ್ಲಿ 25ರನ್‌ಗಳಿದ್ದವು.

ಜವಾಬ್ದಾರಿಯುತ  ಇನಿಂಗ್ಸ್‌: ಈ ಹಂತದಲ್ಲಿ ನಾಯಕ ವಾರ್ನರ್‌ ಮತ್ತು ನ್ಯೂಜಿಲೆಂಡ್‌ನ ವಿಲಿಯಮ್ಸನ್‌ ಜವಾಬ್ದಾರಿಯುತ  ಇನಿಂಗ್ಸ್‌ ಕಟ್ಟಿದರು. ಇವರು ರನ್‌ ಗಳಿಸುವ ಜೊತೆಗೆ ವಿಕೆಟ್‌ ಕಾಪಾಡಿಕೊಳ್ಳುವತ್ತಲೂ ಚಿತ್ತ ಹರಿಸಿದರು.

ಈ ಬಾರಿಯ ಟೂರ್ನಿಯಲ್ಲಿ ಹೆಚ್ಚು ರನ್‌ಗಳಿಸಿರುವ ಆಟಗಾರ ಎಂಬ ಹಿರಿಮೆ ಹೊತ್ತಿರುವ ಆಸ್ಟ್ರೇಲಿಯಾದ ವಾರ್ನರ್‌, ಉಮೇಶ್‌ ಯಾದವ್‌ ಬೌಲ್‌ ಮಾಡಿದ ಮೊದಲ ಓವರ್‌ನ ಐದನೇ ಎಸೆತ ಮತ್ತು ಟ್ರೆಂಟ್‌ ಬೌಲ್ಟ್‌ ಹಾಕಿದ ಎರಡನೇ ಓವರ್‌ನ ಕೊನೆಯ ಎಸೆತಗಳಲ್ಲಿ ಬೌಂಡರಿ ಗಳಿಸಿದರು.

ಪಿಯೂಷ್‌ಚಾವ್ಲಾ ಬೌಲ್‌ ಮಾಡಿದ 9ನೇ ಓವರ್‌ನ ಎರಡನೇ ಎಸೆತವನ್ನು ಡೇವಿಡ್‌, ಸಿಕ್ಸರ್‌ಗಟ್ಟಿದಾಗ ಅಂಗಳದಲ್ಲಿ ಖುಷಿಯ ಅಲೆ ಎದ್ದಿತು.  ಪಂದ್ಯದಲ್ಲಿ ಸನ್‌ರೈಸರ್ಸ್‌ ದಾಖಲಿಸಿದ ಮೊದಲ ಸಿಕ್ಸರ್‌ ಅದಾಗಿತ್ತು.10ನೇ ಓವರ್‌ನಲ್ಲಿ ವಿಲಿಯಮ್ಸನ್‌ ರಟ್ಟೆ ಅರಳಿಸಿದರು. ಕೌಲ್ಟರ್‌ನೈಲ್‌ ಹಾಕಿದ ಎರಡು ಮತ್ತು ಮೂರನೇ ಎಸೆತಗಳನ್ನು ಅವರು ಕ್ರಮವಾಗಿ ಬೌಂಡರಿ ಮತ್ತು ಸಿಕ್ಸರ್‌ಗಟ್ಟಿದರು.

ಹೀಗಾಗಿ ಮೊದಲ ಹತ್ತು ಓವರ್‌ಗಳ ಆಟ ಮುಗಿದಾಗ ಹಾಲಿ ಚಾಂಪಿಯನ್ನರು 6.10 ರ ಸರಾಸರಿಯಲ್ಲಿ 61ರನ್‌ ದಾಖಲಿಸಿದರು. 12ನೇ ಓವರ್‌ ಬೌಲ್‌ ಮಾಡಲು ಕೆಕೆಆರ್‌ ನಾಯಕ ಗಂಭೀರ್‌, ಕೌಲ್ಟರ್‌ನೈಲ್‌ಗೆ ಚೆಂಡು ನೀಡಿದ್ದು ಫಲ ನೀಡಿತು.

ಕೊನೆಯ ಎಸೆತದಲ್ಲಿ ವಿಲಿ ಯಮ್ಸನ್‌ ವಿಕೆಟ್‌ ಕೆಡವಿದ ನೇಥನ್‌ 50ರನ್‌ಗಳ ಎರಡನೇ ವಿಕೆಟ್‌ ಜೊತೆಯಾಟ ಮುರಿದರು. 13ನೇ ಓವರ್‌ ಬೌಲ್‌ ಮಾಡಿದ ಸ್ಪಿನ್ನರ್‌ ಪಿಯೂಷ್‌ ಚಾವ್ಲಾ ಎರಡನೇ ಎಸೆತದಲ್ಲಿ ವಾರ್ನರ್‌ ವಿಕೆಟ್‌ ಪಡೆದು ಸನ್‌ರೈಸರ್ಸ್‌ ಗಾಯದ ಮೇಲೆ ಉಪ್ಪು ಸವರಿದರು. ವಾರ್ನರ್‌ ಔಟಾದಾಗ ಗ್ಯಾಲರಿಯಲ್ಲಿದ್ದ ಸನ್‌ರೈಸರ್ಸ್ ಅಭಿಮಾನಿಗಳು ತಲೆ ಮೇಲೆ ಕೈಹೊತ್ತು ಕುಳಿತಿದ್ದರು.

ಉದ್ಯಾನನಗರಿಯಲ್ಲಿ ಮಳೆಯ ಆಟ
ಚಿನ್ನಸ್ವಾಮಿ ಅಂಗಳದಲ್ಲಿ ಬುಧವಾರ ವರುಣನ ಆಟ ನಡೆಯಿತು. ಸನ್‌ರೈಸರ್ಸ್‌ ತಂಡದ ಇನಿಂಗ್ಸ್‌ ಮುಗಿಯಲು ಮೂರು ಎಸೆಗಳು ಬಾಕಿ ಇದ್ದಾಗ ಬಿರುಗಾಳಿ ಸಹಿತ ಜೋರು ಮಳೆ  ಶುರುವಾಯಿತು. ಹೀಗಾಗಿ ಆಟ ಸ್ಥಗಿತಗೊಳಿಸಲಾಗಿತ್ತು. 11 ಗಂಟೆ ಸುಮಾರಿಗೆ ಮಳೆ ನಿಂತಿದ್ದರಿಂದ ಮೈದಾನದ ಸಿಬ್ಬಂದಿ ಪಿಚ್‌ ಮೇಲೆ ಹಾಕಿದ್ದ ಹೊದಿಕೆ ತೆಗೆದು ನೀರು ಹೊರ ಹಾಕುವ ಕಾರ್ಯಕ್ಕೆ ಮುಂದಾದರು.

ಈ ವೇಳೆ ಪಿಚ್‌ ಪರಿಶೀಲಿಸಿದ ಅಂಪೈರ್‌ಗಳು 11.25ಕ್ಕೆ 20 ಓವರ್‌ಗಳ ಪೂರ್ಣ ಇನಿಂಗ್ಸ್‌ ಆಡಿಸುವ ನಿರ್ಧಾರ ಪ್ರಕಟಿಸಿದರು. ಇದರ ಬೆನ್ನಲ್ಲೇ ಮತ್ತೆ ತುಂತುರು ಮಳೆ ಬೀಳಲಾರಂಭಿಸಿತು. 11.52ರವರೆಗೂ ಕಾದರೂ ಇದು ನಿಲ್ಲಲಿಲ್ಲ, 12.58ರ ವೇಳೆಗೆ ಮಳೆ ನಿಂತರೆ ಐಪಿಎಲ್‌ ನಿಯಮದ ಅನುಸಾರ ಐದು ಓವರ್‌ಗಳ ಆಟ ಆಡಿಸಲಾಗುತ್ತದೆ.

ರಾತ್ರಿ 1.20ರ ಒಳಗೆ ನಿಂತರೆ ಸೂಪರ್‌ ಓವರ್‌ ಮೊರೆ ಹೋಗಲಾಗುತ್ತದೆ. ಬಳಿಕವೂ ವರುಣನ ಮುನಿಸು ಮುಂದುವರಿದರೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ಗೆ ಅದೃಷ್ಟದ ಗೆಲುವು ಒಲಿಯುವ ಅವಕಾಶವಿತ್ತು. ಆದರೆ 12.55ಕ್ಕೆ ಪಂದ್ಯ ಆರಂಭವಾಯಿತು.

ಕಣಕ್ಕಿಳಿಯದ ಮನೀಷ್‌ ಪಾಂಡೆ
ಬೆಂಗಳೂರು: ಕರ್ನಾಟಕದ ಮನೀಷ್‌ ಪಾಂಡೆ ಗಾಯಗೊಂಡಿದ್ದ ಕಾರಣ ಕೆಕೆಆರ್‌ ಫ್ರಾಂಚೈಸ್‌ ಬುಧವಾರದ ಮಹತ್ವದ ಪಂದ್ಯದಲ್ಲಿ ಅವರನ್ನು ಕಣಕ್ಕಿಳಿಸಲಿಲ್ಲ. ಹೀಗಾಗಿ ಮನೀಷ್‌ ಆಟ ನೋಡಲು ಬಂದಿದ್ದ ತವರಿನ ಅಭಿ ಮಾನಿಗಳಿಗೆ ನಿರಾಸೆ ಎದುರಾಯಿತು.

‘ಮಾಡು ಇಲ್ಲವೇ ಮಡಿ’ ಹೋರಾಟದಲ್ಲಿ ಎರಡೂ ತಂಡಗಳು ತಲಾ ನಾಲ್ಕು ಬದಲಾವಣೆ ಗಳೊಂದಿಗೆ ಅಂಗಳಕ್ಕಿಳಿದಿದ್ದವು.

ಕೆಕೆಆರ್‌ ತಂಡ ಸೂರ್ಯಕುಮಾರ್‌ ಯಾದವ್‌, ನೇಥನ್‌ ಕೌಲ್ಟರ್‌ನೈಲ್‌, ಪಿಯೂಷ್‌ ಚಾವ್ಲಾ ಮತ್ತು ಇಶಾಂಕ್‌ ಜಗ್ಗಿ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಿದರೆ, ಸನ್‌ರೈಸರ್ಸ್‌ ತಂಡದಲ್ಲಿ ಯುವರಾಜ್‌ ಸಿಂಗ್‌, ಕೇನ್ ವಿಲಿಯಮ್ಸನ್‌, ಕ್ರಿಸ್‌ ಜೋರ್ಡಾನ್‌ ಮತ್ತು ಬಿಪುಲ್‌ ಶರ್ಮಾ ಆಡಿದರು.

ಮುಂಬೈ ವಿರುದ್ಧದ ಲೀಗ್‌ ಪಂದ್ಯದ ವೇಳೆ ಬಲಗೈನ ಕಿರು ಬೆರಳಿಗೆ ಗಾಯ ಮಾಡಿಕೊಂಡಿದ್ದ ಯುವಿ, ಮಂಗಳವಾರ ಬ್ಯಾಟಿಂಗ್‌ಗೆ ಒತ್ತು ನೀಡಿ ಕಠಿಣ ಅಭ್ಯಾಸ ನಡೆಸಿದ್ದರು.

ಸ್ಕೋರ್‌ಕಾರ್ಡ್‌
ಸನ್‌ರೈಸರ್ಸ್‌ ಹೈದರಾಬಾದ್‌ 7ಕ್ಕೆ 128 (20ಓವರ್‌ಗಳಲ್ಲಿ)

ಡೇವಿಡ್‌ ವಾರ್ನರ್‌ ಬಿ ಪಿಯೂಷ್‌ ಚಾವ್ಲಾ  37
ಶಿಖರ್‌ ಧವನ್‌ ಸಿ ರಾಬಿನ್‌ ಉತ್ತಪ್ಪ ಬಿ ಉಮೇಶ್‌ ಯಾದವ್‌  11
ಕೇನ್‌ ವಿಲಿಯಮ್ಸನ್‌ ಸಿ ಸೂರ್ಯಕುಮಾರ್‌ ಯಾದವ್‌ ಬಿ ನೇಥನ್‌ ಕೌಲ್ಟರ್‌ನೈಲ್‌  24
ಯುವರಾಜ್ ಸಿಂಗ್‌ ಸಿ ಪಿಯೂಷ್‌ ಚಾವ್ಲಾ ಬಿ ಉಮೇಶ್ ಯಾದವ್‌  09
ವಿಜಯ್‌ ಶಂಕರ್‌ ಸಿ ಸೂರ್ಯಕುಮಾರ್‌ ಯಾದವ್‌ ಬಿ  ಕೌಲ್ಟರ್‌ನೈಲ್‌  22
ನಮನ್‌ ಓಜಾ ಸಿ ಕ್ರಿಸ್‌ ಲಿನ್‌ ಬಿ ಟ್ರೆಂಟ್‌ ಬೌಲ್ಟ್‌  16
ಕ್ರಿಸ್‌ ಜೋರ್ಡಾನ್‌ ಸಿ ಮತ್ತು ಬಿ ನೇಥನ್‌ ಕೌಲ್ಟರ್‌ನೇಲ್‌  00
ಬಿಪುಲ್‌ ಶರ್ಮಾ ಔಟಾಗದೆ  02
ಇತರೆ: (ಲೆಗ್‌ಬೈ 3, ವೈಡ್‌ 4)  07
ವಿಕೆಟ್‌ ಪತನ:  1–25 (ಧವನ್‌; 4.2), 2–75 (ವಿಲಿಯಮ್ಸನ್‌; 11.6), 3–75 (ವಾರ್ನರ್‌; 12.2), 4–99 (ಯುವರಾಜ್‌; 15.3), 5–118 (ಶಂಕರ್‌; 18.1), 6–119 (ಜೋರ್ಡಾನ್‌; 18.3), 7–128 (ಓಜಾ; 19.6).
ಬೌಲಿಂಗ್‌: ಉಮೇಶ್‌ ಯಾದವ್‌ 4–0–21–2, ಟ್ರೆಂಟ್‌ ಬೌಲ್ಟ್‌ 4–0–30–1, ಸುನಿಲ್‌ ನಾರಾಯಣ್‌ 4–0–20–0, ಯೂಸುಫ್‌್ ಪಠಾಣ್‌ 1–0–7–0, ನೇಥನ್‌ ಕೌಲ್ಟರ್‌ನೈಲ್ 4–0–20–3, ಪಿಯೂಷ್ ಚಾವ್ಲಾ 3–0–27–1

ಕೋಲ್ಕತ್ತ ನೈಟ್ ರೈಡರ್ಸ್ 3ಕ್ಕೆ 48 (5.2 ಓವರ್‌ಗಳಲ್ಲಿ)

ರಾಬಿನ್‌ ಉತ್ತಪ್ಪ ಸಿ ಶಿಖರ್‌ ಧವನ್‌ ಬಿ ಕ್ರಿಸ್‌ ಜೋರ್ಡಾನ್‌  01
ಕ್ರಿಸ್‌ ಲಿನ್‌ ಸಿ ನಮನ್‌ ಓಜಾ ಬಿ ಭುವನೇಶ್ವರ್‌ ಕುಮಾರ್‌  06
ಯೂಸುಫ್‌ ಪಠಾಣ್‌ ರನ್‌ಔಟ್‌ (ಭುವನೇಶ್ವರ್‌)  00
ಗೌತಮ್‌ ಗಂಭೀರ್‌ ಔಟಾಗದೆ  32
ಇಶಾಂಕ್‌ ಜಗ್ಗಿ ಔಟಾಗದೆ  05
ಇತರೆ: (ಲೆಗ್‌ಬೈ 1, ವೈಡ್‌ 3)  04
ವಿಕೆಟ್‌ ಪತನ:  1–7 (ಲಿನ್‌; 0.3), 2–7 (ಪಠಾಣ್‌; 0.4), 3–12 (ಉತ್ತಪ್ಪ; 1.1). ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 1–0–11–1, ಕ್ರಿಸ್‌ ಜೋರ್ಡಾನ್‌ 1–0–9–1, ರಶೀದ್‌ ಖಾನ್‌ 2–0–11–0, ಸಿದ್ದಾರ್ಥ್‌ ಕೌಲ್‌ 1–0–14–0, ಬಿಪುಲ್‌ ಶರ್ಮಾ 0.2–0–2–0.
ಫಲಿತಾಂಶ: ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ ಕೆಕೆಆರ್‌ಗೆ 7 ವಿಕೆಟ್‌ಗಳ  ಗೆಲುವು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia