ಏಕಿಷ್ಟು ಚಿಂತೆ ? ನಿವೃತ್ತಿ ವೃತ್ತಿ ಬದುಕಿಗೆ, ಸಾಮಾಜಿಕ ಬದುಕಿಗಲ್ಲವಲ್ಲ : ಬೈಂದೂರು ಚಂದ್ರಶೇಖರ ನಾವಡ

0
199

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

byndooru chandrashekar navada

ವೈದ್ಯಕೀಯ ಕ್ಷೇತ್ರದ  ಪ್ರಗತಿ ಮತ್ತು ಹೆಚ್ಚುತ್ತಿರುವ ಆರೋಗ್ಯಕರ ಜೀವನಶೈಲಿಯ ಅರಿವಿನಿಂದ ಭಾರತೀಯರ ಜೀವಿತಾವಧಿ ನಿಧಾನವಾಗಿ ಹೆಚ್ಚುತ್ತಿದೆ. ಹೀಗಾಗಿ ನಮ್ಮ ನಡುವೆ ಆರೋಗ್ಯವಂತ ಹಿರಿಯ ನಾಗರಿಕರ ಸಂಖ್ಯೆಯೂ ಹೆಚ್ಚುತ್ತಿರುವುದನ್ನು ಕಾಣಬಹುದು. ಸರ್ಕಾರಿ, ಅರೆ ಸರ್ಕಾರಿ ಮತ್ತು ಸಂಘಟಿತ ವಲಯದ ಉದ್ಯೋಗಗಳಲ್ಲಿದ್ದವರಿಗೆ ನಿವೃತ್ತಿಯ ನಂತರದ ಬದುಕು ಹೊಸ ಲೋಕದ ಪರಿಚಯವನ್ನೇ ಮಾಡಿಸುತ್ತದೆ. ಕೆಲವರಿಗೆ ಅದು ಮಧುರವಾದರೆ ಇನ್ನು ಕೆಲವರಿಗೆ ಯಾತನಾಮಯವಾಗಬಹುದು. ಇದೆಲ್ಲವೂ ಅವರವರು ಜೀವನವನ್ನು ಕಾಣುವ ಮತ್ತು ಸ್ವೀಕರಿಸುವ ವೈಖರಿಯಿಂದ ನಿರ್ಧಾರವಾಗುತ್ತದೆ ಅಷ್ಟೇ. ರಭಸದ ಸ್ಥಿತ್ಯಂತರಗಳನ್ನು ಕಾಣುತ್ತಿರುವ ಸಮಕಾಲೀನ ಸಮಾಜದಲ್ಲಿ ಹೆಚ್ಚಿನ ನಿವೃತ್ತರು ಮತ್ತು ಹಿರಿಯ ನಾಗರಿಕರಲ್ಲಿ ದುಗುಡ ಮನೆ ಮಾಡಿದೆ.

ನಗದಿನ ಅವಶ್ಯಕತೆ 

            ತಮ್ಮ ಗಳಿಕೆಯನ್ನೆಲ್ಲಾ ರಿಯಲ್ ಎಸ್ಟೇಟ್ ಅರ್ಥಾತ್ ಸೈಟ್, ಫ್ಲ್ಯಾಟ್ ಗಳಲ್ಲಿ ಹೂಡಿಕೆ ಮಾಡಿ ಬದುಕಿಗಾಗಿ ಸಣ್ಣ ಮೊತ್ತದ ಪೆನ್ಷನ್ ಮತ್ತು ಅಷ್ಟೊ ಇಷ್ಟೊ ಬ್ಯಾಂಕ್ ಠೇವಣಿಯನ್ನೇ ನಂಬಿಕೊಂಡವರೊಬ್ಬರು ತೋಡಿಕೊಂಡ ಅಳಲನ್ನು ಇತ್ತೀಚೆಗೆ ಮಿತ್ರರೋರ್ವರು ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಹಂಚಿಕೊಂಡಿದ್ದರು. ಕೋಟ್ಯಂತರ ರೂಪಾಯಿಯ ಮೌಲ್ಯದ ಆಸ್ತಿಪಾಸ್ತಿ ಹೊಂದಿದ್ದೂ ವೃದ್ದಾಪ್ಯದ ಅಶಕ್ತತೆಯ ನಡುವೆ ಅದನ್ನು ನೋಡಿಕೊಳ್ಳಲೂ ಆಗದೇ, ವೈದ್ಯಕೀಯ ಖರ್ಚುಗಳಿಗೆ ಬೇಕಾದ ಭಾರೀ ಮೊತ್ತಾಕ್ಕಾಗಿ  ನಗದೀಕರಿಸಿಕೊಳ್ಳಲೂ ಆಗದೇ ಪೇಚಾಡುತ್ತಿದ್ದರು. ವಿದೇಶಗಳಲ್ಲಿ ನೆಲೆಸಿರುವ ತಮ್ಮ ಸಂತಾನಗಳಿಗೆ ಬೇಡವಾದ ಆಸ್ತಿಪಾಸ್ತಿಯನ್ನು ದುರುಳರ ಕಾಕದೃಷ್ಟಿಯಿಂದ (ಮಹಾನಗರಗಳಲ್ಲಿ ವೃದ್ಧರ ಸೈಟ್, ಪ್ಲಾಟ್ ಗಳನ್ನು ಅಕ್ರಮವಾಗಿ ಕಬಳಿಸುವವರೇನು ಕಮ್ಮಿಯಿಲ್ಲ)  ಉಳಿಸಿಕೊಳ್ಳಲು ಹೆಣಗಬೇಕಾದ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದರು. ನಿವೃತ್ತ ಬದುಕಿನ ಹಣಕಾಸಿನ ಅವಶ್ಯಕತೆಗಳ ಕುರಿತು ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಶೀಘ್ರ ನಗದಾಗಿಸಲಾಗದ ಸ್ಥಿರ ಆಸ್ತಿಕ್ಕಿಂತ ಆಗ ನಗದು ಹಣದ ಪ್ರಾಮುಖ್ಯತೆ ಹೆಚ್ಚು ಎನ್ನುವ ಅವರ ಸಲಹೆ ಪ್ರಾಯಶ: ಎಲ್ಲರೂ ಗಮನಿಸಬೇಕಾದದ್ದು.

ಹಣಕಾಸಿನ ವಿಷಯವಷ್ಟೇ ಅಲ್ಲದೇ ಸಾಮಾಜಿಕ ಜೀವನದಲ್ಲಿ ಕೂಡಾ ರಚನಾತ್ಮಕ ಮತ್ತು ಸಕಾರಾತ್ಮಕತೆಯಿಂದ ಹೊಸ ಬದುಕಿಗೆ ಒಗ್ಗಿಕೊಂಡರೆ ರಿಟಾಯರ್ಡ್ ಆದರೂ ಟಾಯರ್ಡ್ ನೆಸ್ ಅಥವಾ ಖಾಲಿತನ ಕಾಡದು. ನಿವೃತ್ತಿ ಕೇವಲ ನಾವು ಮಾಡುವ ವೃತ್ತಿ ಬದುಕಿಗೆ ಮಾತ್ರ ಸೀಮಿತವಾಗಿರುತ್ತದೆಯೇ ವಿನಹ ನಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಜೀವನಕ್ಕಲ್ಲ. ವೃತ್ತಿ ಬದುಕು ನಮ್ಮ ಜೀವನದ ಒಂದು ಭಾಗವೇ ಹೊರತು ಸಂಪೂರ್ಣವಲ್ಲ. ಹಾಗಿರುವಾಗ ನಿವೃತ್ತಿಯ ಭೂತ ನಮ್ಮ ಆತ್ಮವಿಶ್ವಾಸ, ಲವಲವಿಕೆ,ಪ್ರೀತಿ,ವಾತ್ಸಲ್ಯಗಳನ್ನು ಕಬಳಿಸಲು ಬಿಡಬಾರದು. ಗಾಣದ ಎತ್ತಿನಂತೆ ದುಡಿಯುವುದೇ ಬದುಕಲ್ಲ. ವೃತ್ತಿ ಬದುಕಿನ ಹೊರಗೂ ಮಾಡಲು ಬೇಕಾದಷ್ಟಿದೆ ಎನ್ನುವ ಗಟ್ಟಿತನ ತೋರಿದರೆ ನಿವೃತ್ತಿಯ ಕೊರಗು ನಮ್ಮನ್ನು ಆವರಿಸದು.

ಬದಲಾವಣೆಯ ನೋವು (pain of transition)

          ಮುಂಬಯಿಯಲ್ಲಿ  ಖಾಸಗಿ ನೌಕರಿಯಲ್ಲಿ ಹಲವಾರು ದಶಕಗಳು ಸೇವೆ ಸಲ್ಲಿಸಿ ನಿವೃತ್ತರಾದವರೊಬ್ಬರು ತಾವು ನಿವೃತ್ತ ಬದುಕಿಗೆ ಒಗ್ಗಿಕೊಳ್ಳಲು ಪಟ್ಟ ಶ್ರಮವನ್ನು ಸ್ವಾರಸ್ಯಕರವಾಗಿ ವರ್ಣಿಸುತ್ತಾರೆ. ಅವರು ನಿವೃತ್ತರಾದದ್ದನ್ನು ಮನೆಯಲ್ಲಿ ಯಾರಿಗೂ ಹೇಳಲೇ ಇಲ್ಲ.  ನಿವೃತ್ತಿಯ ಮರುದಿನ ಎಂದಿನಂತೆ ನಿತ್ಯಕರ್ಮಗಳನ್ನು ಪೂರೈಸಿ ಲಗುಬಗೆಯಿಂದ ಮನೆಯಲ್ಲಿ ಕೊಟ್ಟ ಲಂಚ್ ಬಾಕ್ಸ್ ತಮ್ಮ ಕಚೇರಿಯ ಬ್ಯಾಗ್ ನಲ್ಲಿ ತುರುಕಿಕೊಂಡು, ತಾವು ದಿನ ನಿತ್ಯ ಹೋಗುತ್ತಿದ್ದ ಬಸ್ ಕಾದು ಅದರಲ್ಲಿ ಎಂದಿನಂತೆ ಒಂದು ಗಂಟೆ ಪ್ರಯಾಣ ಮಾಡಿ ನಿಗದಿತ ಬಸ್ ಸ್ಟಾಪ್ ನಲ್ಲಿ ಇಳಿದು ಕಛೇರಿಗೆ ಹೋದರು.  ವೃತ್ತಿ ಸ್ನೇಹಿತರ ಕುಶಲೋಪರಿ ವಿಚಾರಿಸಿ ಕೊಂಚ ಹೊತ್ತು ಅಲ್ಲಿದ್ದು, ಹತ್ತಿರದಲ್ಲಿದ್ದ ಯಾವುದೋ ಪಾರ್ಕನಲ್ಲಿ ಕುಳಿತು ದಿನ ಪತ್ರಿಕೆ ಓದಿ, ಹೊತ್ತು ಕಳೆದು, ಸಂಜೆ ಮನೆಗೆ ತೆರಳಿದರಂತೆ! ಕೆಲವು ದಿನ ಇದೇ ದಿನಚರಿ ಮುಂದುವರೆಸಿ ತಮ್ಮ ನಿವೃತ್ತಿ ಬದುಕಿಗೆ ನಿಧಾನವಾಗಿ ಹೊಂದಿಕೊಂಡರಂತೆ!  ಒಂದು ವ್ಯವಸ್ಥೆಯಿಂದ ಇನ್ನೊಂದು ವ್ಯವಸ್ಥೆಗೆ ವರ್ಗಾವಣೆ (transition) ಯಾವಾಗಲೂ ಕೊಂಚ ನೋವಿನದ್ದೇ ಎನ್ನುವುದರಲ್ಲಿ ಸಂದೇಹವಿಲ್ಲ.

ನೌಕರಿಗಳಿಂದ ನಿವೃತ್ತರಾದವರಲ್ಲಿ ಅನೇಕರು ತಮ್ಮ ದಿನಚರ್ಯೆಯ ಶಿಸ್ತನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಾರೆ. ಬೆಳಗಿನಿಂದ ಸಂಜೆಯತನಕದ ಅವರ ಎಲ್ಲಾ ಚಟುವಟಿಕೆಗಳು ಅನಿಯಂತ್ರಿತವಾಗಿ ಸಾಕಷ್ಟು ಏರುಪೇರುಗಳನ್ನು ಕಾಣುತ್ತದೆ. ನನ್ನದೇನು ಉಳಿದಿಲ್ಲ, ಇನ್ನು ನನಗೇನು ಆಗ್ಬೇಕು… ಎನ್ನುವ ಮನೋಧರ್ಮ ಸವಾರಿಯಾದರೆ ಬದುಕು ಅರ್ಥಹೀನವೆನಿಸುತ್ತದೆ.  ನೆರೆತ ತಲೆಗೂದಲು-ಗಡ್ದ,  ಉಡುಗೆ-ತೊಡುಗೆಗಳಲ್ಲಿನ ಅನಾಸಕ್ತಿ, ಕುಂದಿದ ಆತ್ಮವಿಶ್ವಾಸ ಮುಂತಾದವುಗಳಿಂದ ನಿವೃತ್ತಿಯ ಕೆಲವೇ ವರ್ಷಗಳಲ್ಲಿ ಅವರು ನಿಜವಯಸ್ಸಿಗಿಂತ ಹೆಚ್ಚಿನ ವಯಸ್ಕರಂತೆ ಕಾಣುತ್ತಾರೆ. ಒಂದೆರಡು ವರ್ಷಗಳಲ್ಲೇ ತಮ್ಮ ಬದುಕೆಲ್ಲಾ ಮುಗಿಯಿತೆನ್ನುವ ಮಾನಸಿಕತೆ ಮತ್ತು ಖಿನ್ನತೆ  ಮೈಮನಗಳನ್ನು ತುಂಬಿಕೊಂಡು ಆಯಾಸಗೊಂಡವರಂತೆ (ಟಾಯರ್ಡ್)  ಕಾಣುತ್ತಾರೆ.

ಪ್ರೀತಿ ವಾತ್ಸಲ್ಯಗಳ ನಡೆ-ನುಡಿಗಿರಲಿ ಒತ್ತು

          ನಿವೃತ್ತಿಯ ಹೊತ್ತಿಗೆ ವ್ಯಕ್ತಿಯ ಕೌಟುಂಬಿಕ ಬದುಕಿನ ಹೆಚ್ಚಿನ ಜವಾಬ್ದಾರಿಗಳು ಮುಗಿದಿರುತ್ತದೆ. ವೃತ್ತಿ ಬದುಕಿನ ಒತ್ತಡ ಮತ್ತು ಕೌಟುಂಬಿಕ ಭಾರದ ಕಾರಣದಿಂದಾಗಿ ತಮ್ಮನ್ನು ತಾವೇ ಬಹಳ ಕಾಲದಿಂದ ನಿರ್ಲ್ಯಕ್ಷಿಸಿದ್ದವರಿಗೆ ತಮ್ಮ ಸ್ವಂತ ಸಂತೋಷದ ಕಡೆಗೆ ಗಮನ ಕೊಡಲು ಇದು ಸಕಾಲ. ತಮ್ಮಲ್ಲಿದ್ದ ಸಾಮಾಜಿಕ ತುಡಿತದ  ಒಲವನ್ನು ಹತ್ತಿಕ್ಕಿಕೊಂಡು ವೃತ್ತಿ ಬದುಕಿನಲ್ಲಿ ವ್ಯಸ್ತರಾಗಿದ್ದವರಿಗೆ ತಮ್ಮ ಸುಪ್ತ ಇಚ್ಚೆಗಳಿಗೆ ನೀರೆರೆಯಲು ನಿವೃತ್ತಿ ಜೀವನ ಸುವರ್ಣಾವಕಾಶ ಒದಗಿಸಬಲ್ಲದು. ನಿವೃತ್ತಿಯ ನಂತರ ಸಾಮಾಜಿಕ, ಸಾಂಸ್ಕೃತಿಕ ಮತ್ತಿತರ ರಂಗಗಳಲ್ಲಿ ಮಿಂಚುತ್ತಿರುವ ಪ್ರತಿಭೆಗಳನ್ನು ನಮ್ಮ ಆಸುಪಾಸಿನಲ್ಲೇ ಕಾಣಬಹುದು. ಕೊಂಚ ಸಮಯದ ಹಿಂದೆ ನಿವೃತ್ತ ಅಧಿಕಾರಿಯೊಬ್ಬರು ರಸ್ತೆಯ ಹೊಂಡಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ತುಂಬಿಸಿ ಸಾರ್ವಜನಿಕ ಸೇವೆಯ ಹೊಸ ಮಾದರಿಯೊಂದನ್ನು ಪ್ರಸ್ತುತಪಡಿಸಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿಯಾಗಿತ್ತು.

ನೌಕರಿಯ ಒತ್ತಡದಲ್ಲಿ ಕೌಟುಂಬಿಕರ ಸುಖ ದುಖಗಳಲ್ಲಿ ಭಾಗಿಯಾಗದ ನೋವಿನಲ್ಲಿದ್ದವರಿಗೆ ನಿವೃತ್ತ ಬದುಕು ಅನುವು ಮಾಡಿ ಕೊಡುತ್ತದೆ. ನಿವೃತ್ತರು ಎಂದರೆ ಆಗಲೋ.. ಈಗಲೋ… ಎನ್ನುವ ಧರೆಗೊರಗಿದ ವೃಕ್ಷವಲ್ಲ, ಮಾಗಿದ ಹಣ್ಣುಗಳುಳ್ಳ ಪರಿಪಕ್ವ ವೃಕ್ಷ. ತನ್ನನ್ನಾಶ್ರಯಿಸಿ ಬಂದವರಿಗೆ ಫಲವನ್ನಿತ್ತು, ತಂಪನೆರೆಯು ವೃಕ್ಷದಂತೆ, ಸಂಬಂಧಿಗಳ, ಸಮಾಜದ ಸದಸ್ಯರೊಂದಿಗೆ ತನ್ನೆಲ್ಲಾ ಸಿನಿಕತೆ, ಸಿಟ್ಟು, ಸೆಡವು, ಪೂರ್ವಾಗ್ರಹಗಳನ್ನು ತ್ಯಜಿಸಿ ಸಕಾರಾತ್ಮಕತೆ, ಸಹೃದಯತೆಯ   ಪ್ರೀತಿ, ವಾತ್ಸಲ್ಯಗಳ ನಡೆ-ನುಡಿಗಳಿಂದ ಎಲ್ಲರಿಗೂ  ಬೇಕಾಗಬಲ್ಲರು.  ತಮ್ಮ ಪೃವೃತ್ತಿಯಲ್ಲಿ ಸೂಕ್ತ ಬದಲಾವಣೆಯಿಂದ ವೃತ್ತಿ ಬದುಕಿನ ಧಾವಂತವಿಲ್ಲದ ನಿವೃತ್ತಿ ಜೀವನದಲ್ಲಿ ಕಲ್ಲರಳಿ ಹೂವಾಗಿ ಎಲ್ಲರಿಗೂ ಬೇಕಾಗಿ.. ಎನ್ನುವ ಮಾತಿನಂತೆ ಖುಷಿ ಕಾಣಬಹುದು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia