ಪರಿಣಾಮ ನೆಟ್ಟಗಿರದು: ಪಾಕ್‌ಗೆ ಭಾರತ ಎಚ್ಚರಿಕೆ

0
231

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹೊಸದಿಲ್ಲಿ/ಇಸ್ಲಾಮಾಬಾದ್‌: ಪಾಕ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ರನ್ನು ನೇಣಿಗೇರಿಸಿದರೆ ಭಾರೀ ಪ್ರತಿಕೂಲ ಪರಿಣಾಮ ಉಂಟಾದೀತು ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಅವರನ್ನು ಸ್ವದೇಶಕ್ಕೆ ವಾಪಸ್‌ ಕರೆಸಿಕೊಳ್ಳಲು ರಾಜತಾಂತ್ರಿಕ ವಿಧಾನದ ಜತೆಗೆ “ಇತರ ಮಾರ್ಗ’ಗಳನ್ನು ಅನುಸರಿಸಲು ಭಾರತ ಹಿಂಜರಿಯದು ಎಂದು ಸಂಸತ್‌ನಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಎಚ್ಚರಿಕೆ ನೀಡಿದ್ದಾರೆ.

sushma-swaraj

ಅವರು ತಪ್ಪು ಎಸಗಿದ್ದಾರೆಯೋ ಎಂಬ ಬಗ್ಗೆ ಇದುವರೆಗೆ ಸಾಕ್ಷ ದೊರಕಿಲ್ಲ ಎಂದು ಹೇಳಿದ ಸುಷ್ಮಾ, ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳಂಕ ತರಲು ಪಾಕಿಸ್ಥಾನ ನಡೆಸಿದ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆಂದು ಆರೋಪಿಸಿದರು. ಇದೇ ವೇಳೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪಾಕಿಸ್ಥಾನ ಸರಕಾರದ ಕ್ರಮದ ಬಗ್ಗೆ ಒಕ್ಕೊರಲ ಖಂಡನೆ ವ್ಯಕ್ತವಾಯಿತು. ನೆರೆಯ ರಾಷ್ಟ್ರದ ನಿರ್ಧಾರದ ಬಗ್ಗೆ ಸಂಸತ್‌ ಸದಸ್ಯರೆಲ್ಲರೂ ಪ್ರಬಲವಾಗಿ ಆಕ್ಷೇಪಿಸಿದ್ದಾರೆ. ಈ ನಡುವೆ ಪಾಕ್‌ ನಡೆ ಬಗ್ಗೆ ಅಲ್ಲಿನ ಮಾಧ್ಯಮಗಳು ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತು ಎಂಬ ಎಚ್ಚರಿಕೆ ನೀಡಿವೆ.

“ಜಾಧವ್‌ ಅವರು ಅಪಹರಣಕ್ಕೊಳಗಾದ ಅಮಾಯಕ ಭಾರತೀಯ. ಅವರಿಗೆ ನ್ಯಾಯ ಒದಗಿಸಿಕೊಡಲು ಏನನ್ನು ಬೇಕಿದ್ದರೂ ಮಾಡಲು ಸಿದ್ಧ. ಗಲ್ಲಿಗೇರಿಸುವ ವಿಚಾರದಲ್ಲಿ ಪಾಕ್‌ ಮುಂದುವರಿದದ್ದೇ ಆದಲ್ಲಿ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ನಾವು
ಪಾಕ್‌ಗೆ ಎಚ್ಚರಿಸಬಯಸುತ್ತೇವೆ. ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರವಾದ ಪಾಕ್‌ ಆ ವಿಚಾರದಿಂದ ಗಮನ ಬೇರೆಡೆಗೆ ಸೆಳೆದು, ಜಾಗತಿಕವಾಗಿ ಭಾರತದ ಹೆಸರು ಕೆಡಿಸಲು ಯತ್ನಿಸುತ್ತಿದೆ’ ಎಂದರು ಸುಷ್ಮಾ.

ಒಕ್ಕೂರಲ ಖಂಡನೆ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ಗಲ್ಲುಶಿಕ್ಷೆ ವಿಧಿಸಿ ಪಾಕಿಸ್ಥಾನದ ಸೇನಾ ನ್ಯಾಯಾಲಯ ಹೊರಡಿಸಿರುವ ಆದೇಶಕ್ಕೆ ಭಾರತದ ಸಂಸತ್‌ನಲ್ಲಿ ಒಕ್ಕೊರಲ ಖಂಡನೆ ವ್ಯಕ್ತವಾಗಿದೆ. ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಜಾಧವ್‌ರನ್ನು ನೇಣಿಗೇರಿಸಲು ಹೊರಟಿರುವ ಪಾಕ್‌ ಕ್ರಮವನ್ನು ಮಂಗಳವಾರ ಸಂಸತ್‌ ಸದಸ್ಯರು ಪಕ್ಷಭೇದ ಮರೆತು ಖಂಡಿಸಿದರು.

ಜತೆಗೆ, ಜಾಧವ್‌ಗೆ ಮರಣದಂಡನೆ ವಿಧಿಸಿದ್ದೇ ಆದಲ್ಲಿ ಎರಡೂ ದೇಶಗಳ ಸಂಬಂಧದ ಮೇಲೆ ಆಗುವ ಪ್ರತಿಕೂಲ ಪರಿಣಾಮಗಳನ್ನು ಪಾಕಿಸ್ಥಾನವು ಗ್ರಹಿಸಬೇಕು ಎಂಬ ಎಚ್ಚರಿಕೆಯ ಸಂದೇಶವನ್ನೂ ಭಾರತ ರವಾನಿಸಿದೆ. ಮಂಗಳವಾರ ಸಂಸತ್‌ನಲ್ಲಿ ಕಲಾಪ ಆರಂಭವಾಗು ತ್ತಿದ್ದಂತೆ ಬೇಹುಗಾರಿಕೆ ಆರೋಪದಲ್ಲಿ ಜಾಧವ್‌ಗೆ ಗಲ್ಲುಶಿಕ್ಷೆ ಘೋಷಿಸಿರುವ ವಿಚಾರವೇ ಪ್ರಮುಖವಾಗಿ ಪ್ರಸ್ತಾವವಾಯಿತು. ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲದಂಥ ತೀರ್ಪನ್ನು ಎಲ್ಲ ಪಕ್ಷಗಳ ನಾಯಕರೂ ಖಂಡಿಸಿದ್ದಲ್ಲದೆ, ಜಾಧವ್‌ರನ್ನು ರಕ್ಷಿಸಲು ಸರಕಾರ ಯಾವ ಕ್ರಮಕ್ಕೂ ಹೇಸಬಾರದು ಎಂದು ಒತ್ತಡ ಹೇರಿದರು.

ಕಾಂಗ್ರೆಸ್‌ ಪ್ರತಿಭಟನೆ: ಸಂಸತ್‌ನ ಹೊರಗೂ ಕಾಂಗ್ರೆಸ್‌ ನಾಯಕರು ಮಾತನಾಡಿ, ಜಾಧವ್‌ರನ್ನು ಬಿಡುಗಡೆ ಮಾಡುವಂತೆ ಪಾಕ್‌ ಮೇಲೆ ಪ್ರಧಾನಿ ಮೋದಿ ಅವರು ರಾಜತಾಂತ್ರಿಕ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು. “ಗಲ್ಲುಶಿಕ್ಷೆಯು ಉದ್ದೇಶಪೂರ್ವಕವಾಗಿ ಭಾರತವನ್ನು ಪ್ರಚೋದಿಸಲು ಮಾಡುತ್ತಿರುವ ಕ್ರಮ. ಕೇಂದ್ರ ಸರಕಾರವು ಸಲಹೆಗಳಾಚೆಗೆ ಹೋಗಿ ಜಾಧವ್‌ ಬಿಡುಗಡೆಗೆ ಶ್ರಮಿಸ
ಬೇಕು’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲಾ ಆಗ್ರಹಿಸಿದರು. ಪಾಕ್‌ ಹೈಕಮಿಷನ್‌ ಮುಂದೆ ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ವಿರೋಧಿಸಿದ್ದ ಭುಟ್ಟೋ: ಏತನ್ಮಧ್ಯೆ, ಜಾಧವ್‌ ಗಲ್ಲುಶಿಕ್ಷೆಯನ್ನು ಪಾಕಿಸ್ಥಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್‌ ಭುಟ್ಟೋ ಪರೋಕ್ಷವಾಗಿ ಖಂಡಿಸಿದ್ದಾರೆ. ಜಾಧವ್‌ ವಿಚಾರವು ವಿವಾದಾತ್ಮಕಧಿವಾಗಿದ್ದು ಮರಣದಂಡನೆಯಂಥ ಶಿಕ್ಷೆಯನ್ನೇ ನಮ್ಮ ಪಕ್ಷ ತಾತ್ವಿಕವಾಗಿ ವಿರೋಧಿಸುತ್ತದೆ ಎಂದಿದ್ದಾರೆ.

ಪಾಕ್‌ ಮಾಧ್ಯಮಗಳಿಂದ ಎಚ್ಚರಿಕೆ: ಭಾರತೀಯ ನಾಗರಿಕ ಜಾಧವ್‌ಗೆ ಗಲ್ಲುಶಿಕ್ಷೆ ಪ್ರಕಟಿಸಿರುವುದನ್ನು ಪಾಕ್‌ ಮಾಧ್ಯಮಗಳು “ಹಿಂದೆಂದೂ ಕಂಡರಿಯದಂತಹ ಘಟನೆ’ ಎಂದು ಬಣ್ಣಿಸಿವೆ. ಅಷ್ಟೇ ಅಲ್ಲ, ಇದು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೆ ದೊಡ್ಡ ಬರೆ ಎಳೆಯಲಿದೆ ಎಂದೂ ಎಚ್ಚರಿಸಿವೆ. ಇದೇ ವೇಳೆ “ಜಾಧವ್‌ಗೆ ಮರಣದಂಡನೆ ವಿಧಿಸುವ ಕುರಿತು ಸರಕಾರ ನಿರ್ಧಾರ ಕೈಗೊಂಡಿರುವ ವಿಚಾರ ನಮಗೆ ಗೊತ್ತೇ ಇಲ್ಲ. ನಮ್ಮ ಸಂಸತ್‌ನಲ್ಲೂ ಈ ಕುರಿತು ಪ್ರಸ್ತಾವವಾಗಿಲ್ಲ’ ಎಂದು ಪಾಕ್‌ ಸಂಸತ್‌ನ ವಿಪಕ್ಷ ನಾಯಕ ಸೈಯದ್‌ ಖುರ್ಷಿದ್‌ ಅಹ್ಮದ್‌ ಷಾ ಹೇಳಿದ್ದಾರೆ.

ಪಾಕಿಸ್ಥಾನೀಯರ ರಕ್ಷಿಸಿದ ಬೆಸ್ತರು: ಜಾಧವ್‌ ಗಲ್ಲುಶಿಕ್ಷೆ ವಿಚಾರ ಎರಡೂ ದೇಶಗಳ ನಡುವಿನ ಮನಸ್ತಾಪವನ್ನು ಹೆಚ್ಚಿಸುತ್ತಿರುವ ನಡುವೆಯೇ ಸೋಮವಾರ ನಡೆದ ಘಟನೆಯೊಂದು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದೆ. ಗುಜರಾತ್‌ ಕರಾವಳಿಯಾಚೆ ಭಾರತೀಯ ಬೆಸ್ತರು ಮೀನು ಹಿಡಿಯಲೆಂದು ಹೋಗಿದ್ದಾಗ ಪಾಕಿಸ್ಥಾನದ ನೌಕಾ ಭದ್ರತಾ ಸಂಸ್ಥೆ (ಪಿಎಂಎಸ್‌ಎ)ಯ ಅಧಿಕಾರಿಗಳು ಬೆಸ್ತರನ್ನು ಹಾಗೂ ಅವರ ಬೋಟುಗಳನ್ನು ವಶಕ್ಕೆ ಪಡೆದುಕೊಂಡು ಕರಾಚಿಯತ್ತ ಕರೆದೊಯ್ಯುತ್ತಿದ್ದರು. ಈ ವೇಳೆ ಭಾರತದ ಒಂದು ದೋಣಿಗೆ ಪಾಕ್‌ನ ದೋಣಿ ಢಿಕ್ಕಿ ಹೊಡೆದ ಪರಿಣಾಮ ಪಾಕಿಸ್ಥಾನದ ನಾಲ್ವರು ಅಧಿಕಾರಿಗಳು ನೀರಲ್ಲಿ ಮುಳುಗಿದರು. ಕೂಡಲೇ ಕಾರ್ಯಪ್ರವೃತ್ತರಾದ ಭಾರತೀಯ ಬೆಸ್ತರು ನಾಲ್ವರ ಪೈಕಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಇದಾದ ಬೆನ್ನಲ್ಲೇ, ತಮ್ಮ ಅಧಿಕಾರಿಗಳ ಪ್ರಾಣ ರಕ್ಷಿಸಿದ ಹಿನ್ನೆಲೆಯಲ್ಲಿ ಪಾಕ್‌ ಭಾರತದ 60 ಮಂದಿ ಬೆಸ್ತರು, ಅವರ ಬೋಟುಗಳನ್ನು ಬಿಡುಗಡೆ ಮಾಡಿತು.

ಉತ್ತಮ ಬಾಂಧವ್ಯ ಬಯಸುತ್ತೇವೆ: ಪಾಕಿಸ್ಥಾನವು ಶಾಂತಿ ಬಯಸುವ ದೇಶ. ನೆರೆರಾಷ್ಟ್ರಗಳು ಸಹಿತ ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ಅದು ಬಯಸುತ್ತದೆ ಎಂದು ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಹೇಳಿದ್ದಾರೆ. ಜಾಧವ್‌ ಗಲ್ಲುಶಿಕ್ಷೆ ಘೋಷಣೆಯ ಮಾರನೇ ದಿನವೇ ಅವರು ಈ ಮಾತುಗಳನ್ನು ಆಡಿದ್ದಾರೆ. ಇದೇ ವೇಳೆ, ನಮ್ಮ ಸಶಸ್ತ್ರ ಪಡೆಗಳು ಸಮರ್ಥವಾಗಿದ್ದು, ಯಾವುದೇ ಬೆದರಿಕೆಯನ್ನೂ ಎದುರಿಸುವ ಸಾಮರ್ಥ್ಯ ಹೊಂದಿವೆ ಎಂದೂ ಹೇಳಿದ್ದಾರೆ.

ತರೂರ್‌ ನೆರವು ಕೋರಿದ ಸುಷ್ಮಾ?
ಎಲ್ಲ ವಿಚಾರಗಳಲ್ಲೂ ಪರಸ್ಪರ ದೂಷಿಸಿಕೊಳ್ಳುವ ಪಕ್ಷಗಳು ಜಾಧವ್‌ ವಿಚಾರದಲ್ಲಿ ಒಂದಾದ ಬೆನ್ನಲ್ಲೇ, ಸಚಿವೆ ಸುಷ್ಮಾ ಸ್ವರಾಜ್‌ ಅವರು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ನೆರವನ್ನು ಕೋರಿದ್ದು ಮತ್ತೂಂದು ವಿಶೇಷ. ಜಾಧವ್‌ ಗಲ್ಲುಶಿಕ್ಷೆ ಖಂಡಿಸಿ ಸಂಸತ್‌ನ ಎರಡೂ ಸದನಗಳಲ್ಲಿ ಅಂಗೀಕಾರ ಮಾಡುವ ನಿರ್ಣಯದ ಕರಡು ಸಿದ್ಧಪಡಿಸಲು ನೆರವು ನೀಡುವಂತೆ ತರೂರ್‌ ಬಳಿ ಸುಷ್ಮಾ  ಕೇಳಿಕೊಂಡದ್ದು ಮಂಗಳವಾರ ಕಂಡುಬಂತು. ಲೋಕಸಭೆಯಲ್ಲಿ ಹೇಳಿಕೆ ನೀಡಿದ ಅನಂತರ ನೇರವಾಗಿ ತರೂರ್‌ ಇದ್ದಲ್ಲಿಗೆ ತೆರಳಿದ ಸುಷ್ಮಾ, ನಿರ್ಣಯದ ಕರಡು ಸಿದ್ಧಪಡಿಸಲು ಸಹಾಯ ಮಾಡುವಂತೆ ಕೇಳಿಕೊಂಡರು. ಕೂಡಲೇ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಒಪ್ಪಿಗೆ ಪಡೆದು, ತರೂರ್‌ ಸುಷ್ಮಾಗೆ ಸಹಾಯಹಸ್ತ ಚಾಚಿದರು. ಇದು ನಮ್ಮೆಲ್ಲರ ಮೇಲೂ ಪರಿಣಾಮ ಬೀರುವಂಥ ವಿಚಾರ ಎಂದೂ ಅವರು ಹೇಳಿದರು. ಆದರೆ  ಸಹಾಯಹಸ್ತ ವಿಚಾರವನ್ನು ಸುಷ್ಮಾ ಸ್ವರಾಜ್‌ ಬಳಿಕ ಅಲ್ಲಗಳೆದಿದ್ದು, ತರೂರ್‌ ಬಳಿ ಅಂತಹ ಮಾತುಕತೆ ನಡೆಸಿಲ್ಲ ಎಂದಿದ್ದಾರೆ. ಕಳೆದ ವರ್ಷ ಪಾಕಿಸ್ಥಾನವು ಉಗ್ರ ಲಖೀÌಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅದರ ಖಂಡನಾ ನಿರ್ಣಯದ ಕರಡು ಸಿದ್ಧಪಡಿಸುವಂತೆ ತರೂರ್‌ ಬಳಿ ಪ್ರಧಾನಿ ಮೋದಿಯೇ ಮನವಿ ಮಾಡಿಕೊಂಡಿದ್ದನ್ನು  ಸ್ಮರಿಸಬಹುದು.

ಕೊಂದಿರಲೂಬಹುದು
ಜಾಧವ್‌ರನ್ನು ಈಗಾಗಲೇ ಪಾಕಿಸ್ಥಾನವು ಕೊಂದಿರುವ ಸಾಧ್ಯತೆಯೂ ಇದೆ ಎಂದು ಬಿಜೆಪಿ ಸಂಸದ, ಮಾಜಿ ಗೃಹ ಕಾರ್ಯದರ್ಶಿ ಆರ್‌.ಕೆ. ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ಈ ಕುರಿತು ಮಾತನಾಡಿದ ಅವರು, “ಪಾಕಿಸ್ಥಾನವು ಜಾಧವ್‌ಗೆ ಚಿತ್ರಹಿಂಸೆ ನೀಡಿ ಕೊಂದಿರಬಹುದು. ತನ್ನ ಕ್ರೌರ್ಯವನ್ನು ಮುಚ್ಚಲೆಂದು ಈಗ ವಿಚಾರಣೆ ನಡೆಸಿ ತೀರ್ಪು ನೀಡಿದಂಥ ನಾಟಕ ಆಡುತ್ತಿರಬಹುದು. ಇದು ಸುಳ್ಳೆಂದಾದರೆ, ಪಾಕಿಸ್ಥಾನವು ಜಾಧವ್‌ರನ್ನು ಭೇಟಿಯಾಗಲು ಕಾನ್ಸುಲರ್‌ಗೆ ಅವಕಾಶ ನೀಡಬೇಕಿತ್ತಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದು ದಿನ ಪಾಕ್‌ ಜಾಧವ್‌ರನ್ನು ಗಲ್ಲಿಗೇರಿಸಿ ಆಯಿತು ಎಂದೂ ಹೇಳುವ ಸಾಧ್ಯತೆಯಿದೆ ಎಂದಿದ್ದಾರೆ.

ಪಾಕಿಸ್ಥಾನವು ಜಾಧವ್‌ರನ್ನು ಗಲ್ಲಿಗೇರಿಸಿದ್ದೇ ಆದಲ್ಲಿ, ಬಲೂಚಿಸ್ಥಾನಧಿವನ್ನು ಸ್ವತಂತ್ರ ರಾಷ್ಟ್ರವೆಂದು ಭಾರತ ಗುರುತಿಸಬೇಕು. ದೇಶದಲ್ಲಿ ಹಿಂದೂ-ಮುಸ್ಲಿಂ ಏಕತೆ ಸಾಧ್ಯವಾಗಬೇಕೆಂದರೆ ಭಾರತ-ಪಾಕ್‌ ಸ್ನೇಹ ಅಗತ್ಯ ಎಂಬ ವಾದಗಳೆಲ್ಲ ಸುಳ್ಳು – ಸುಬ್ರಮಣಿಯನ್‌ ಸ್ವಾಮಿ, ರಾಜ್ಯಸಭೆ ಸದಸ್ಯ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)