ಸದ್ಭಾವನಾ ಸಾರುವ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ

0
782

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಭಟ್ಕಳ: ಹಿಂದೂ,ಮುಸ್ಲಿ, ಕ್ರೈಸ್ತರಲ್ಲಿ ಸದ್ಭಾವನೆ ಮೂಡಿಸುವ ಭಟ್ಕಳದ ಗ್ರಾಮ ದೇವತೆ ಚೆನ್ನಪಟಟ್ಟಣ ಹನುಮಂತ ದೇವರ ರಥೋತ್ಸವವು ಪ್ರತಿವರ್ಷದಂತೆ ರಾಮನವಮಿಯಂದು ಬುಧವಾರ  ನಡೆಯಿತು.

bhatakla 04

ಭಟ್ಕಳ ತಾಲೂಕಿನ ಸಾವಿರಾರು ಭಕ್ತರು ಸಾಕ್ಷಿಯಾಗುವ ಈ ರಥೋತ್ಸವ ತನ್ನದೇ ಆದ ಇತಿಹಾಸ ಹೊಂದಿದ್ದು, ಮುಸ್ಲಿಮ್ ಹಾಗೂ ಕ್ರೈಸ್ತ ಸಮುದಾಯವು ಈ ರಥೋತ್ಸವಕ್ಕೆ ಸಹಕಾರ ನೀಡುತ್ತಿರುವ ವಿಷಯ ನಿಜಕ್ಕೂ ಭಟ್ಕಳದಲ್ಲಿ ವಿಭಿನ್ನ ಸಮುದಾಯಗಳ ಮಧ್ಯೆ ಸಾಮರಸ್ಯ, ಸೌಹಾರ್ಧತೆ ಹಾಗೂ ಸದ್ಭಾವನೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ. ಚೆನ್ನಪಟ್ಟಣ ಮಾರೂತಿ ದೇವರ ರಥೋತ್ಸವವು ಸುಲ್ತಾನ್ ಪಳ್ಳಿ ಸಮೀಪವಿರುವ ಚರ್ಕಿನ್ ಮುಹಮ್ಮದ್ ಅನ್ಸಾರ್ ಸಾಹೇಬರ ಕುಟುಂಬಕ್ಕೆ ಆಹ್ವಾನ ನೀಡುವುದರ ಮೂಲಕ ಚಾಲನೆ ಪಡೆದುಕೊಳ್ಳುತ್ತಿದ್ದು ಇದು ನೂರಾರು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ.

bhatakla 01

ಕರಾವಳಿಯ ಅರಬ್ಬಿ ಸಮುದ್ರದ ಕಿನಾರೆಯಲ್ಲಿರುವ ಸುಂದರ ನಗರ ಭಟ್ಕಳ. ಇಲ್ಲಿ ಬಹು ಸಂಸ್ಕೃತಿ ಹಾಗು ಬಹುಧರ್ಮಿಯರು ತಲೆತಲಾಂತರದಿಂದಲೂ ಕೂಡಿ ಬಾಳಿ ಸೌಹರ್ಧತೆಯನ್ನು ಮೆರೆಯುತ್ತ ಬಂದಿದ್ದು ಕೆಲವೊಂದು ಕಹಿಘಟನೆಗಳನ್ನು ಹೊರತುಪಡಿಸಿದರೆ, ಹಿಂದೂ, ಮುಸ್ಲಿಮ, ಕ್ರೈಸ್ತರು ಅನೋನ್ಯವಾಗಿ ಬಾಳುತ್ತಿದ್ದಾರೆ. ರಾಜಕೀಯ ಪ್ರೇರಿತ ಕೆಲ ಸ್ವಾಹಿತಾಸಕ್ತ ಮನಸ್ಸುಳ್ಳವರೂ ಈಗಲೂ ಇಲ್ಲಿನ ಸೌಹಾರ್ಧತೆಗೆ ಹುಳಿ ಹಿಂಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಇದೆಲ್ಲವನ್ನೂ ಮೆಟ್ಟಿ ನಿಂತ ಇಲ್ಲಿನ ಶಾಂತಿ ಪ್ರೀಯ ಜನತೆ ಯಾವುದಕ್ಕೂ ಆಸ್ಪದ ನೀಡದೆ ಇಂದಿಗೂ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

ಭಟ್ಕಳ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ವಿಗೃಹವು ಅಪರೂಪದ ಗಂಡು ಶಿಲೆ ಕಲ್ಲಿನಿಂದ ಮಾಡಿದ್ದಾಗಿದ್ದು ಆಗಮೋಕ್ತ ಪದ್ಧತಿಯಲ್ಲಿ ತ್ರಿಕಾಲ ಪೂಜೆಗೊಳ್ಳುವುದು ವಿಶೇಷವಾಗಿದೆ. ಬಹಳ ವರ್ಷಗಳ ಹಿಂದೆ ದೇವರ ಮೂರ್ತಿಯು ಮೂರ್ತಿ ಭಂಜಕರ ಕೈಗೆ ಸಿಲುಕಿಯೋ ಇಲ್ಲವೇ ದೇವಸ್ಥಾನವು ಜೀರ್ಣಗೊಂಡು ಬಾವಿ ದಂಡಿಗೆಯನ್ನು ಸೇರಿದ್ದು ಸನ್ಯಾಸಿಯೋರ್ವರಿಗೆ ಗೋಚರವಾದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಕಟ್ಟಿಸಿ ಪೂಜಿಸಲಾಯಿತು ಎನ್ನುವುದು ಪ್ರತೀತಿ.

bhatakla 03

ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಸುತ್ತಲೂ ಅಷ್ಟ ದಿಕ್ಕುಗಳಲ್ಲಿ ಒಂದೊಂದು ಹನುಮಂತನ ದೇವಸ್ಥಾನವಿದ್ದು  ಎಲ್ಲಾ ಅಷ್ಟ ದಿಕ್ಕಿಗಳ ಹನುಮಂತನ ವಿಗ್ರಹಗಳು ಶ್ರೀ ಚೆನ್ನಪಟ್ಟಣ ಹನುಮಂತ ದೇವರ ವಿಗ್ರಹವನ್ನೇ ಹೋಲುತ್ತಿರುವುದು ಇನ್ನೊಂದು ವೈಶಿಷ್ಟ್ಯ್ಟಯವಾಗಿದ್ದು ಇವುಗಳೆಲ್ಲ ಸುಮಾರು ಒಂದೇ ಕಾಲಮಾನದ್ದಾಗಿರಬಹುದೆಂದು ಊಹಿಸಬಹುದಾಗಿದೆ. ಎಲ್ಲಾ ವಿಗ್ರಹಗಳ ಕೆತ್ತನೆ, ಕಲೆ, ಮುಂತಾದವುಗಳು ಒಂದೇ ರೀತಿಯಲ್ಲಿ ಇವೆ. ಅಷ್ಟ ದಿಕ್ಕುಗಳ ಹನುಮಂತ ದೇವಸ್ಥಾನಗಳೆಂದರೆ  ಪೂರ್ವದಲ್ಲಿ ವೀರ ಮಾರುತಿ, ಆಗ್ನೇಯದಲ್ಲಿ ಕಾಸ್ಮುಡಿ ಹನುಮಂತ, ದಕ್ಷಿಣದಲ್ಲಿ ಗರಡಿ ಹನುಮಂತ, ನೈರುತ್ಯದಲ್ಲಿ ದೊಡ್ಡಕಂಠ ಹನುಮಂತ, ಪಶ್ವಿಮದಲ್ಲಿ ದಾಟಬಾಗಿಲ ಹನುಮಂತ, ವಾಯುವ್ಯದಲ್ಲಿ  ಕಳಿ ಹನುಮಂತ, ಉತ್ತರದಲ್ಲಿ ಕೋಟೆ ಹನುಮಂತ ಹಾಗೂ ಈಶಾನ್ಯದಲ್ಲಿ  ಮಣಕುಳಿ ಹನುಮಂತ.  ಭಟ್ಕಳ ಪಟ್ಟಣದಲ್ಲಿ ಅಷ್ಟ ದಿಕ್ಕುಗಳಲ್ಲಿಯೂ ಇದೆ.

ಭಟ್ಕಳದ ಹಾಡುವಳ್ಳಿಯ ರಾಜ್ಯವಾಳಿದ ಚೆನ್ನಭೈರಾ ದೇವಿ (೧೫೪೦-೯೯) ಭಟ್ಕಳಕ್ಕೆ ಜೀವಕಳೆ ತಂದಳೆನ್ನುವುದು ಇತಿಹಾಸ.  ಇಲ್ಲಿನ  ಅನೇಕ ದೇವಸ್ಥಾನಕ್ಕೆ ಉಂಳಿಯನ್ನು ಬಿಟ್ಟು ಜೀಣೋದ್ಧಾರ ಮಾಡಿದಳಲ್ಲದೇ  ಈ ದೇವಸ್ಥಾನಕ್ಕೆ ಕೂಡಾ ತಮ್ಮ ಸಂಸ್ಥಾನದ ವತಿಯಿಂದ ರಾಣಿಯ ಆಸ್ತಿಯನ್ನು ಉಂಬಳಿಯಾಗಿ ನೀಡಿದ್ದರಿಂದ ಅಂದಿನಿಂದ ಇದು ಚೆನ್ನಪಟ್ಟಣ ಶ್ರೀ ಹನುಮಂತ ಎಂದು ಕರೆಯಲ್ಪಟ್ಟಿದ್ದು ಎಂದೂ ಪ್ರತೀತಿ ಇದೆ.
ಕರ್ನಾಟಕದಲ್ಲಿ ವಿರಳ ಎಂಬಂತೆ ಇಲ್ಲಿ ಹನುಮಂತನನ್ನು ಅಗಮೋಕ್ತ ರೀತಿಯಲ್ಲಿ ಪೂಜಿಸಲಾಗುತ್ತಿದೆ. ಇತರ ಪ್ರಧಾನ ದೇವರಿಗೆ ಸಲ್ಲಿಸುವ ಎಲ್ಲಾ ವಿವಿಧ ಪೂಜೆಗಳು ಇಲ್ಲಿ ಸಲ್ಲುತ್ತದೆ.

bhatakla 02

ವಿವಿಧ ಧರ್ಮ, ಸಮುದಾಯಗಳ ಸಾಮರಸ್ಯದ ಸಂಗಮದಂತಿರುವ ಈ ಚೆನ್ನಪಟ್ಟಣ ಮಾರೂತಿ ದೇವರ ರಥೋತ್ಸವಕ್ಕೆ ತನ್ನದೇ ಆದ  ಶತ-ಶತಮಾನಗಳ ಇತಿಹಾಸವನ್ನು ಹೊಂದಿದ್ದು ಒಂದು ಅಂದಾಜಿನ ಪ್ರಕಾರ ಸುಮಾರು ೨೦೦ ವರ್ಷಗಳ ಹಿಂದೆ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ರಥೋತ್ಸವಕ್ಕೆ ಚಾಲನೆಯನ್ನು ನೀಡಲು ಒಬ್ಬ ಗೌರವಯುತ ವ್ಯಕ್ತಿಯು ಅದನ್ನು ವಹಿಸಿಕೊಳ್ಳಬೇಕಿತ್ತು. ಈ ಮಹತ್ತರ ಜವಾಬ್ದಾರಿಯನ್ನು ಅಂದಿನ ಕಾಲದ ಭಟ್ಕಳದ ಮುಸ್ಲಿಮ್ ನವಾಯತ್ ಸಮುದಾಯದ ಶಾಬಂದ್ರಿ ಸಿದ್ದಿ ಮುಹಮ್ಮದ್ ಎಂಬ ಓರ್ವ ಶ್ರೀಮಂತರು  ಈ ಜವಾಬ್ದಾರಿಯನ್ನು  ವಹಿಸಿಕೊಂಡು ರಥೋತ್ಸವಕ್ಕೆ ಸಂಬಂಧಿಸಿದಂತೆ ಬ್ರಟೀಷ್ ಸರ್ಕಾರಕ್ಕೆ ಜಾಮೀನಾಗಿ ನಿಂತು  ರಥೋತ್ಸವವನವನ್ನು ಸುಗಮವಾಗಿ ನೆರವೇರುವಂತೆ ಮಾಡಿದ್ದರು ಎನ್ನಲಾಗಿದ್ದು  ಅದರ ಗೌರವ ಪ್ರತೀಕವೆಂಬಂತೆ ಇಂದಿಗೂ ಪ್ರತಿ ವರ್ಷ ರಾಮನವಮಿಯೆಂದು ಶಾಂಬಂದ್ರಿ ಸಿದ್ದಿ ಮುಹಮ್ಮದ್ ರ ಮೂರನೇ ಪೀಳಿಗೆಯಾಗಿರುವ ಶಾಂಬಂದ್ರಿ ಚಿರ್ಕಿನ್ ಮುಹಮ್ಮದ್ ಅನ್ಸಾರ್ ಎನ್ನುವವರ ಮನೆಗೆ ದೇವಸ್ಥಾನದ ಆಡಳಿತ ಮಂಡಳಿಯವರು ವಾದ್ಯಘೋಷಗಳೊಂದಿಗೆ ಆಗಮಿಸಿ ಅವರಿಗೆ ವೀಳೆದೈಲೆಯನ್ನು ಅರ್ಪಿಸಿ ರಥೋತ್ಸವಕ್ಕೆ ಆಹ್ವಾನ ನೀಡುವ ವಾಡಿಕೆಯುಂಟು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)