ಬಿಜೆಪಿ ಪಾಳಯಕ್ಕೆ ನಡೆದ ಕೃಷ್ಣ …

0
976

s m krashna

(ಡಿ.ಉಮಾಪತಿ)
23 Mar, 2017

ಎಂಬತ್ತೈದು ವರ್ಷ ವಯಸ್ಸು ಸಮೀಪಿಸಿರುವ ಹೊತ್ತಿನಲ್ಲಿ ತಮ್ಮ ಈವರೆಗಿನ ರಾಜಕೀಯ ಸಿದ್ಧಾಂತಗಳಿಗೆ ಸಂಪೂರ್ಣ ವ್ಯತಿರಿಕ್ತ ತತ್ವಗಳ ಪಕ್ಷವನ್ನು ಸೇರುವ ತೀವ್ರ ಒತ್ತಡವಾದರೂ ಏನು ಎಂದು ಕೃಷ್ಣ ಬಹಿರಂಗಪಡಿಸಿಲ್ಲ…

ನವದೆಹಲಿ: ಬದುಕಿನ ಬಹುಕಾಲವನ್ನು ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಎಸ್.ಎಂ.ಕೃಷ್ಣ, ಇಳಿಸಂಜೆಯಲ್ಲಿ ಬಿಜೆಪಿ ಸೇರಿದರೇಕೆ ಎಂಬ ಸಾರ್ವಜನಿಕ ಕೌತುಕ ಪ್ರಾಯಶಃ ಸದ್ಯಕ್ಕೆ ತೀರುವುದಿಲ್ಲ.

ಏಕಕಾಲದಲ್ಲಿ ಈ ಬೆಳವಣಿಗೆಯನ್ನೊಂದು ನಿಗೂಢದಂತೆಯೂ, ಹಿಂಗದ ಅಧಿಕಾರದ ಲಾಲಸೆಯಂತೆಯೂ, ಹಗೆ ತೀರಿಸಿಕೊಳ್ಳುವ ಜಿಗುಟಿನಂತೆಯೂ, ಕುಟುಂಬದ ವಾಣಿಜ್ಯ ಆಸಕ್ತಿಗಳಿಗೆ ಕೇಂದ್ರ ಬಿಜೆಪಿ ಸರ್ಕಾರದ ಬಿಸಿ ತಾಗದಂತೆ ಕಾಪಾಡುವ ಸ್ವಾರ್ಥದಂತೆಯೂ ಕರ್ನಾಟಕದ ರಾಜಕೀಯ ವಲಯಗಳು ಕಾಣುತ್ತಿವೆ.

ರಾಜ್ಯ ಬಿಜೆಪಿಯ ಮೊದಲ ಸಾಲಿನ ತಲೆಯಾಳುಗಳು ಕೂಡ ಈ ಬೆಳವಣಿಗೆ ಕುರಿತು ಖಾಸಗಿಯಾಗಿ ಮೂಗಿನ ಮೇಲೆ ಬೆರಳಿರಿಸಿಕೊಂಡಿದ್ದಾರೆ. ‘ಕೃಷ್ಣ ಅವರಿಗೆ ಕಾಂಗ್ರೆಸ್ ಪಕ್ಷ ಈವರೆಗೆ ಕೊಟ್ಟಿರದ ಯಾವ ಸ್ಥಾನಮಾನವನ್ನು ತಾನೇ ಈಗ ಅವರಿಗೆ ಬಿಜೆಪಿ ಕೊಟ್ಟೀತು… ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಶಾಂತಕುಮಾರ್, ಯಶವಂತ ಸಿನ್ಹಾ ಅವರಂತಹ ಅತಿರಥ ಮಹಾರಥರನ್ನೇ ‘ಮಾರ್ಗದರ್ಶಕ ಮಂಡಳಿ’ಗೆ ಸೇರಿಸಿ ಮೂಲೆಗುಂಪು ಮಾಡಲಾಗಿದೆ. ಇನ್ನೂ ಈಗಷ್ಟೇ ಪಕ್ಷಕ್ಕೆ ಕಾಲಿಟ್ಟಿರುವ ಕೃಷ್ಣ ಅವರಿಗೆ ಏನು ಸಿಕ್ಕೀತು’ ಎಂಬುದು ಈ ನಾಯಕರ ಕುತೂಹಲವೂ ಹೌದು.

ಎಂಬತ್ತೈದು ವರ್ಷ ವಯಸ್ಸು ಸಮೀಪಿಸಿರುವ ಹೊತ್ತಿನಲ್ಲಿ ತಮ್ಮ ಈವರೆಗಿನ ರಾಜಕೀಯ ಸಿದ್ಧಾಂತಗಳಿಗೆ ಸಂಪೂರ್ಣ ವ್ಯತಿರಿಕ್ತ ತತ್ವಗಳ ಪಕ್ಷವನ್ನು ಸೇರುವ ತೀವ್ರ ಒತ್ತಡವಾದರೂ ಏನು ಎಂದು ಕೃಷ್ಣ ಬಹಿರಂಗಪಡಿಸಿಲ್ಲ.

ಕಾಂಗ್ರೆಸ್ ಅಧಿಕಾರ ಸೂತ್ರ ತಾಯಿಯಿಂದ ಮಗನ ಕೈಗೆ ಹಸ್ತಾಂತರ ಆಗುತ್ತಿರುವಾಗ ಹೊಸ ತಲೆಮಾರು ತಮ್ಮನ್ನು ಒರಟಾಗಿ ನಡೆಸಿಕೊಂಡೀತು ಎಂಬ ಆತಂಕ ಕೃಷ್ಣ ಅವರನ್ನು ತಿಂಗಳುಗಟ್ಟಲೆ ಕಾಡಿರುವ ನಿಚ್ಚಳ ಸೂಚನೆಗಳಿವೆ.

ಹೆಸರು ಹೇಳದೆಯೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಕುರಿತು ಒಳಗುದಿಯನ್ನು ಇತ್ತೀಚೆಗೆ ಕೃಷ್ಣ ಹೊರಹಾಕಿದ್ದರು. ಕಾಂಗ್ರೆಸ್ಸಿನ ಪ್ರಥಮ ಕುಟುಂಬ ಹಿರಿಯ ಕಾಂಗ್ರೆಸ್ಸಿಗರನ್ನು ನಡೆಸಿಕೊಳ್ಳುವ ಕುರಿತು ಕೃಷ್ಣ ಕುಟುಂಬದಲ್ಲಿ ಅಸಮಾಧಾನ ಹೊಗೆಯಾಡಿತ್ತು. ಸೋನಿಯಾಗಾಂಧಿ ಅವರು ಕೃಷ್ಣ ಅವರನ್ನು ಘನತೆಯಿಂದಲೇ ನಡೆಸಿಕೊಂಡು ಬಂದಿದ್ದರು. ಅದನ್ನು ಕೃಷ್ಣ ಅವರೂ ಒಪ್ಪಿದ್ದಾರೆ.

ಆದರೆ ಸಮಸ್ಯೆ ಎದುರಾಗಿದ್ದು ರಾಹುಲ್ ಗಾಂಧಿಯವರೊಂದಿಗೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಜೊತೆ ಕೆಲಸ ಮಾಡಿರುವ ಹಿರಿತನವಿದ್ದರೂ ಉಪಾಧ್ಯಕ್ಷರ ಭೇಟಿಗಾಗಿ ದಿನಗಟ್ಟಲೆ ಕಾಯಬೇಕಾಗುವುದು ಅವಹೇಳನಕರ ಎಂದು ಭಾವಿಸಿರುವ ಕಾಂಗ್ರೆಸ್ಸಿಗರಿದ್ದಾರೆ. ರಾಜ್ಯಸಭೆಗೆ ಮರುನಾಮಕರಣದ ಬೇಡಿಕೆ ಇರಿಸಲು ಬಂದಿದ್ದ ಕೃಷ್ಣ ಅವರನ್ನು ರಾಹುಲ್ ಗಾಂಧಿ ಸರಿಯಾಗಿ ನಡೆಸಿಕೊಂಡಿಲ್ಲ ಕೃಷ್ಣ ಅವರನ್ನು ಕೆರಳಿಸಿತೆಂದು ವಿಶ್ವಾಸಾರ್ಹ ಮೂಲಗಳು ಹೇಳಿವೆ.

ಕೇಂದ್ರ ಮಂತ್ರಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ, ಸ್ಪೀಕರ್, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲ, ರಾಜ್ಯಸಭಾ ಸದಸ್ಯ, ಪುನಃ ವಿದೇಶಾಂಗ ಸಚಿವ ಹುದ್ದೆಗಳಲ್ಲಿ ಹಲವು ಅವರು ಬೇಡದೆಯೇ ಬಂದಂತಹವು. 2012 ರಲ್ಲಿ ವಿದೇಶಾಂಗ ಸಚಿವ ಹುದ್ದೆಯನ್ನು ಅವರಿಂದ ಕಿತ್ತುಕೊಂಡದ್ದು ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿ ಅವರ ಅಭಿಮಾನಕ್ಕೆ ಪೆಟ್ಟು ಬಿದ್ದ ಪ್ರಸಂಗ. ಇನ್ನೂ ಎರಡು ವರ್ಷಗಳ ಕಾಲ ಮುಂದುವರೆಸಿ ಘನತೆಯ ನಿವೃತ್ತಿಗೆ ಅವಕಾಶ ಕೊಡಲಿಲ್ಲ ಎಂಬುದು ಅವರ ಕೊರಗಾಗಿತ್ತು.

‘ಪಕ್ಷದಿಂದ ನಾನು ಬೇರೇನನ್ನೂ ನಿರೀಕ್ಷಿಸಿಲ್ಲ. ಎಲ್ಲವೂ ಸಿಕ್ಕಿದೆ ಪಕ್ಷದಿಂದ. ನನ್ನ ಕೈಲಾದದ್ದನ್ನು ಪಕ್ಷಕ್ಕೆ ವಾಪಸು ಕೊಡಬೇಕಾದ ಸಮಯವಿದು’ ಎಂದಿದ್ದರು. ‘20014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಿದೆ ಎಂಬುದು ಪಟ್ಟಭದ್ರ ಹಿತಾಸಕ್ತಿಗಳು ಹುಟ್ಟಿ ಹಾಕಿರುವ ಭ್ರಮೆ’ ಎಂದು ಟೀಕಿಸಿದ್ದರು. ಅದೇ ವರ್ಷ ಪಕ್ಷ ತಮ್ಮನ್ನು ರಾಜ್ಯಸಭೆಗೆ ಮರುನಾಮಕರಣ ಮಾಡುತ್ತದೆಂಬ ಅವರ ಗಾಢ ವಿಶ್ವಾಸ ಹುಸಿಯಾಯಿತು. ಒಕ್ಕಲಿಗ ಜನಾಂಗಕ್ಕೆ ಸೇರಿದ ಪ್ರೊ.ಎಂ.ವಿ.ರಾಜೀವಗೌಡ ಅವರಿಗೆ ಈ ಸ್ಥಾನ ಒಲಿಯಿತು.

ಗಾಯಕ್ಕೆ ಉಪ್ಪು ಉಜ್ಜಿದಂತೆ ವರಿಷ್ಠ ಮಂಡಳಿಯ ನಾಯಕರೊಬ್ಬರು ಒರಟಾಗಿ ಮಾತಾಡಿದರೆಂದು ಮೂಲಗಳು ತಿಳಿಸಿವೆ. 2016ರ ಏಪ್ರಿಲ್ ತಿಂಗಳಲ್ಲಿ ರಾಜ್ಯಸಭೆಯ ಸದಸ್ಯತ್ವದ ಮತ್ತೊಂದು ಅವಕಾಶವೂ ಕೈ ತಪ್ಪಿತು. ಈ ನಡುವೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವೂ ತಮ್ಮನ್ನು ನಿರ್ಲಕ್ಷಿಸಿದೆ ಎಂಬ ಭಾವ ಅವರಲ್ಲಿ ಬಲಿಯಿತು. ರಾಜ್ಯದ ಯುವ ಒಕ್ಕಲಿಗ ನಾಯಕರ ಒಂದು ವರ್ಗವೂ ತಮ್ಮನ್ನು ನಿರ್ಲಕ್ಷಿಸಿದೆಯೆಂಬ ಭಾವವೂ ಅವರನ್ನು ಬಾಧಿಸಿತೆನ್ನಲಾಗಿದೆ.

2016ರ ಜುಲೈ 12ರಂದು ಮೊದಲ ಬಾರಿಗೆ ಉಡುಪಿಯಲ್ಲಿ ಮೋದಿ ಸರ್ಕಾರವನ್ನು ಹೊಗಳಿ, ಅವರ ಕೈ ಬಲಪಡಿಸಬೇಕೆಂಬ ಹೇಳಿಕೆ ನೀಡಿದರು. ಪ್ರಧಾನಿ ಮೋದಿ ಅವರು ವಿದೇಶಾಂಗ ನೀತಿಯನ್ನು ನೇರವಾಗಿ ನಿರ್ವಹಿಸಿ ಕೈಗೊಂಡ ‘ಬಿರುಗಾಳಿ ಪ್ರವಾಸ’ವನ್ನು ಮೆಚ್ಚಿದರು. ದೂರವಾಣಿಯಲ್ಲಿ ತಾವಾಗಿಯೇ ಕೃಷ್ಣ ಅವರನ್ನು ಸಂಪರ್ಕಿಸಿ ಕೃತಜ್ಞತೆ ಸಲ್ಲಿಸುತ್ತಾರೆ ಮೋದಿ. ಆನಂತರ ದಿಲ್ಲಿಯಲ್ಲಿ ಇಬ್ಬರ ಭೇಟಿಯೂ ಜರುಗುತ್ತದೆ. ಭೇಟಿಯ ವಿವರಗಳ ಕುರಿತು ಕೃಷ್ಣ ತಮ್ಮ ಅತಿ ಆಪ್ತ ವಲಯದಲ್ಲೂ ಬಾಯಿ ಬಿಟ್ಟಿಲ್ಲ

B.G.Mohandas (ಬೀಜಿ)

B.G.Mohandas; M.Pharm FAGE DBM Founder ; GulfKannadiga.com & Kannadigaworld.com; kollur.com, devadiga.com & byndoor.com | Formerly Head of Pharmacy at Gulf Medical University, Dubai & Professor KMC Manipal