ಶಿರೂರು ಹೆದ್ದಾರಿ ಕಾಮಗಾರಿ ನಿರ್ಲಕ್ಷ್ಯ: ಕಾಯಿಲೆ ಹರಡುವ ಭೀತಿ

0
368

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ಆರೋಗ್ಯ ಇಲಾಖೆ ಸಾರ್ವಜನಿಕರು ರೋಗ ರುಜಿನಗಳಿಂದ ಮುಕ್ತವಾಗಬೇಕು, ಸಾಂಕ್ರಾಮಿಕ ಕಾಯಿಲೆಗಳು ಹರಡಬಾರದು ಎಂದು ಹಲವು ವಿಭಾಗಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ.ಆದರೆ ಇಲಾಖೆಯ ನಿದರ್ಶನವನ್ನು ಕಡೆಗಣಿಸಿ ಸಾರ್ವಜನಿಕ ಸ್ಥಳದಲ್ಲಿ ತೆರೆದ ಗಟಾರ ನಿರ್ಮಿಸುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಚತುಷ್ಪಥ ಹೆದ್ದಾರಿ ಕಾಮಗಾರಿ ಅಧಿಕಾರಿಗಳಿಂದ ನಡೆಯುತ್ತಿದೆ.

shiroor

ಏನಿದು ಸಮಸ್ಯೆ? 
ಬೈಂದೂರು ವಲಯದಲ್ಲಿ ಸದಾ ಒಂದಿಲ್ಲೊಂದು ಸಮಸ್ಯೆಗಳಿಂದಾಗಿ ಹೆದ್ದಾರಿ ಚತುಷ್ಪಥ ಕಾಮಗಾರಿ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಆರು ತಿಂಗಳ ಹಿಂದೆ ತರಾತುರಿಯಲ್ಲಿ ವಾಣಿಜ್ಯ ಮಳಿಗೆಗಳ ಎದುರು ಮಾರುದ್ದದ ಚರಂಡಿ ತೆಗೆಯುವ ಮೂಲಕ ವ್ಯಾಪಾರ ವಹಿವಾಟಿಗೆ ಹಿನ್ನಡೆ ನೀಡಿದರು.ಬಳಿಕ ಸಾರ್ವಜನಿಕರು ಪ್ರತಿಭಟಿಸಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಅಲ್ಲಲ್ಲಿ ತೇಪೆ ಹಾಕುವ ಕಾಮಗಾರಿ ನಡೆಸಿದರು. ಇನ್ನು ಕೆಲವು ಕಡೆ ಮಾರುದ್ದದ ಹೊಂಡಗಳು ಅಪಾಯದ ಮುನ್ಸೂಚನೆ ನೀಡುತ್ತಿದೆ.ಆಶ್ಚರ್ಯವೆಂದರೆ ಸರಕಾರದ ನಿಯಮದ ಪ್ರಕಾರ ಕಾಮಗಾರಿ ನಡೆಸುವ ಕಂಪೆನಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಬೇಕು ಮತ್ತು ಸೂಕ್ತ ಮುಂಜಾಗ್ರತೆ ವಹಿಸಬೇಕೆಂದಿದ್ದರೂ ಸಹ ಅಧಿಕಾರಿಗಳು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೆದ್ದಾರಿ ತುಂಬಾ ಧೂಳು, ಕಲ್ಲು ಮಣ್ಣುಗಳ ಶೇಖರಣೆ, ಸೂಕ್ತ ಎಚ್ಚರಿಕೆಯ ಫಲಕಗಳಿಲ್ಲದೆ ವಾಹನ ಸವಾರರು ಕಂಗೆಡಬೇಕಾದ ಪರಿಸ್ಥಿತಿಯಿದೆ.ಪ್ರತಿಫಲಕದ ಅಳವಡಿಕೆಗಳಿಲ್ಲದ ರಾತ್ರಿ ವೇಳೆ ಸರಣಿ ಅಪಘಾತಗಳು ನಡೆಯುತ್ತಿವೆ. ಮಂದಗತಿಯ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ನಿತ್ಯದ ಗೋಳು ಸಾಮಾನ್ಯವಾಗಿಬಿಟ್ಟಿದೆ.

ಇಲಾಖೆಗಳು ಕೂಡ ತಟಸ್ಥ  
ಇತ್ತೀಚಿಗೆ ವಿವಿಧ ಇಲಾಖೆಗಳ ತಟಸ್ಥ ನಡವಳಿಕೆಗಳು ಹೆದ್ದಾರಿ ಕಾಮಗಾರಿಯ ನಿರ್ಲಕ್ಷ್ಯಕ್ಕೆ ಇನ್ನಷ್ಟು ಹುರುಪು ನೀಡಿದಂತಾಗಿದೆ.ಈಗಾಗಲೇ ಕಾಮಗಾರಿ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಲಾರಿಗಳು ಅನ್ಯ ರಾಜ್ಯಗಳದ್ದಾಗಿವೆ. ಹೆಚ್ಚಿನ ವಾಹನಗಳಲ್ಲಿ ಸೂಕ್ತ ದಾಖಲೆಗಳು, ಹೆದ್ದಾರಿ ನಿಯಮಗಳನ್ನು ಅನುಸರಿಸಬೇಕಾದ ವ್ಯವಸ್ಥೆಗಳಿಲ್ಲ. ಪ್ರತಿದಿನ ತೆರೆದ ಬೃಹತ್‌ ಕಂಟೈನರ್‌ಗಳಲ್ಲಿ ಕೂಲಿಯಾಳುಗಳನ್ನು ಸಾಗಿಸಲಾಗುತ್ತಿದೆ.ಸೇತುವೆ ಸೇರಿದಂತೆ ಅಪಾಯಕಾರಿ ಕೆಲಸಗಳಲ್ಲಿ ಸಮವಸ್ತ್ರ ಹಾಗೂ ಹೆಲ್ಲೆಟ್‌ ಧರಿಸಬೇಕೆಂಬ ನಿಯಮವಿದ್ದರೂ ಸಹ ಗುತ್ತಿಗೆದಾರರು ಗಮನಹರಿಸುತ್ತಿಲ್ಲ.

ಸಂಬಂಧ ಪಟ್ಟ ಇಲಾಖೆಯು ಸಹ ಯಾವುದೇ ಕ್ರಮಕೈಗೊಳ್ಳದೆ ಕಣ್ಮುಚ್ಚಿ ಕುಳಿತುಕೊಂಡಿದೆ. ಸಾರ್ವಜನಿಕರು ರಸ್ತೆ ನಿಯಮ ಪಾಲಿಸದಿದ್ದರೆ ಕ್ರಮಕೈಗೊಳ್ಳುವ ಇಲಾಖೆ ಚತುಷ್ಪಥ ಕಾಮಗಾರಿಯ ವಾಹನಗಳ ಮೇಲೆ ಸಡಿಲಿಕೆ ಮಾಡಿರುವುದು ತಾರತಮ್ಯದ ಜೊತೆಗೆ ಅನುಮಾನಪಡುವಂತೆ ಮಾಡಿದೆ ಎನ್ನುವುದು ರಾಘು ಬೈಂದೂರು ಅವರ ಅಭಿಪ್ರಾಯವಾಗಿದೆ.

ಅದೇನೆಯಿದ್ದರೂ ಸಹ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಕಾಮಗಾರಿ ನಡೆಸುವ ಕಂಪೆನಿಯ ವಿರುದ್ಧ ಜನಸಾಮಾನ್ಯರು ಪ್ರತಿಭಟಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ತೆರೆದ ಗಟಾರಗಳನ್ನು ಮುಚ್ಚುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ತೆರೆದ ಗಟಾರಗಳು: ಕಾಯಿಲೆ ಭೀತಿ 
ಶಿರೂರು ಚೆಕ್‌ಪೋಸ್ಟ್‌ ಬಳಿ ಕಳೆದ ಎಂಟು ತಿಂಗಳುಗಳಿಂದ ತೆರೆದ ಗಟಾರದಲ್ಲಿ ದುರ್ನಾತ ಬೀರುತ್ತಿದೆ.ಸೂಕ್ತ ಮೇಲ್ಛಾವಣಿ ಅಳವಡಿಸದ ಕಾರಣ ಸತ್ತ ಪ್ರಾಣಿಗಳನ್ನು, ಇನ್ನಿತರ ತ್ಯಾಜ್ಯ ಕಸಗಳನ್ನು ಗಟಾರಕ್ಕೆ ಎಸೆಯುತ್ತಿದ್ದಾರೆ. ಇದರಿಂದಾಗಿ ತ್ಯಾಜ್ಯ ವಸ್ತುಗಳು ಕೊಳೆತು ನಿತ್ಯ ಸಾರ್ವಜನಿಕರು ಮೂಗು ಮುಚ್ಚಿ ಸಾಗಬೇಕಾಗಿದೆ.ಈ ಬಗ್ಗೆ ಗ್ರಾಮ ಪಂಚಾಯತ್‌ ಅಧಿಕಾರಿಗಳು, ಸಾರ್ವಜನಿಕರು ದೂರು ನೀಡಿದರೂ ಸಹ ಹೆದ್ದಾರಿ ಕಾಮಗಾರಿ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)