ಕರಾವಳಿ ಸುರಕ್ಷಿತವೆಂದು ಹಗುರವಾಗಿ ಪರಿಗಣಿಸುವಂತಿಲ್ಲ – ಬೈಂದೂರು ಚಂದ್ರಶೇಖರ ನಾವಡ

0
1089

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಫೆ.08 : ಮುಂಬಯಿ ಕಡಲ ತೀರದಲ್ಲಿ ಕೆಲವು ಸಂಶಯಾಸ್ಪದ ವ್ಯಕ್ತಿಗಳನ್ನು ಕಂಡ  ಶಾಲಾ ವಿದ್ಯಾರ್ಥಿಗಳು ನೀಡಿದ ಸುದ್ದಿಯಿಂದಾಗಿ ಕಳೆದ ಸಪ್ಟಂಬರದಲ್ಲಿ  ಮುಂಬಯಿಯಲ್ಲಿ ಭಯದ ವಾತಾವರಣ ಉಂಟಾಗಿತ್ತು. ಸುರಕ್ಷಾ ಏಜೆನ್ಸಿಗಳು ಸಂಪೂರ್ಣ ತೀರ ಪ್ರದೇಶವನ್ನು ಜಾಲಾಡಿ ಅಪಾಯಕಾರಿ ತತ್ವಗಳಿಲ್ಲದಿರುವುದನ್ನು ಖಾತರಿ ಪಡಿಸಿದ ನಂತರ ಸಾಮಾನ್ಯ ಜನತೆ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಹಿಂದೆ ಯುದ್ದಸ್ಥಿತಿಯಲ್ಲೂ ತೀರ ಪ್ರದೇಶದ ಜನತೆ ಹೆಚ್ಚೇನೂ ಪ್ರಭಾವಿತರಾಗಿರಲಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಉಗ್ರವಾದಿಗಳ ವಿಧ್ವಂಸಕ ಕೃತ್ಯಗಳಿಂದಾಗಿ ಕರಾವಳಿ ತೀರ ಪ್ರದೇಶವೂ ಈಗ ಸಂಪೂರ್ಣ ಸುರಕ್ಷಿತವೆಂದು ತಿಳಿಯುವಂತಿಲ್ಲ.

ಮುಂಬಯಿ ಧಾಳಿಯ ನಂತರ : ಪಾಕಿಸ್ಥಾನದಿಂದ ಹೊರಟ ಶಸ್ತ್ರ ಸಜ್ಜಿತ 10 ಉಗ್ರವಾದಿಗಳು ಸಮುದ್ರ ಮಾರ್ಗದಲ್ಲಿ ಬಂದು 26 ನವಂಬರ್ 2008 ರಂದು ಮುಂಬಯಿಯ ತಾಜ್ ಪ್ಯಾಲೇಸ್ ಮತ್ತು  ಒಬೇರಾಯ್ ಹೋಟೇಲ್ ಮೇಲೆ  ಧಾಳಿ ಮಾಡಿ ನೂರಾರು ಅಮಾಯಕರ ಹತ್ಯೆ ಮಾಡಿದಾಗ ಮೊದಲ ಬಾರಿಗೆ ಸಮುದ್ರ ತೀರದ ಕಡೆಯಿಂದ ಒದಗಬಹುದಾದ ಗಂಡಾಂತರದ ಕುರಿತು ದೇಶ ಎಚ್ಚೆತ್ತುಕೊಂಡಿತು. 1978 ರಷ್ಟು ಹಿಂದೆಯೇ ಕರಾವಳಿ ಸುರಕ್ಷತೆಗಾಗಿ ಕೋಸ್ಟ್ ಗಾರ್ಡ್ ಸ್ಥಾಪಿಸಲಾಗಿತ್ತಾದರೂ ಮುಂಬಯಿ ಧಾಳಿ ನಡೆಯುವವರೆಗೆ ಕರಾವಳಿ ಸುರಕ್ಷತೆ ಕುರಿತು ಗಂಭೀರ ಚಿಂತನೆ ನಡೆಯಲಿಲ್ಲ ಎಂದರೆ ತಪ್ಪಾಗದು.

17 ದ್ವೀಪಗಳನ್ನೊಳಗೊಂಡ ಸುಮಾರು 320 ಕಿಮೀ ದೂರದ ತೀರ ಪ್ರದೇಶ  ಹೊಂದಿದ ಕರ್ನಾಟಕ ಕರಾವಳಿಯ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ 9 ಕೋಸ್ಟಲ್ ಪೋಲೀಸ್ ಸ್ಟೇಷನ್ ಸ್ಥಾಪನೆಯಂತಹ ಕ್ರಮಗಳನ್ನು ಕೈಗೊಂಡಿದೆಯಾದರೂ ಈ ನಿಟ್ಟಿನಲ್ಲಿ ಸರ್ಕಾರದ ಜತೆಯಲ್ಲಿ ಜನ ಭಾಗೀದಾರಿ ಕೂಡಾ ಅಪೇಕ್ಷಣೀಯ. ಕೋಸ್ಟ್ ಗಾರ್ಡ್ ಮತ್ತು ಪೋಲೀಸ್ ಠಾಣೆಗಳಲ್ಲಿ ನಿಯೋಜನೆಗೊಂಡ ಸಿಬ್ಬಂದಿ ಎಷ್ಟರ ಮಟ್ಟಿಗೆ ವೃತ್ತಿ ಪರಿಣತರು ಎನ್ನುವುದರ ಮೇಲೆ ನಮ್ಮ ಸುರಕ್ಷತೆಯ ಸ್ಥಿತಿ ನಿರ್ಧಾರವಾಗುತ್ತದೆ ಎನ್ನುವುದೂ ಕೂಡಾ  ಚಿಂತನಾರ್ಹ.

ಸುರಕ್ಷಾ ಪಡೆಗಳ ಜವಾಬ್ದಾರಿ ಎನ್ನುವ ಧೋರಣೆ ಸರಿಯಲ್ಲ :  ಸಮುದ್ರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಮ್ಮ ಸುರಕ್ಷಾ ಚಿಂತೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಸಂಪೂರ್ಣ ಕರಾವಳಿಯ ಕಾವಲು ಜಟಿಲವಾದದ್ದೆನ್ನುವುದರಲ್ಲಿ ಸಂದೇಹವಿಲ್ಲ. ತೀರ ಪ್ರದೇಶದಲ್ಲಿರುವ ಅಣು ಸ್ಥಾವರಗಳು, ತೈಲ ಸ್ಥಾವರಗಳು, ಬಂದರುಗಳು, ಜನದಟ್ಟಣೆಯ ಶಾಪಿಂಗ್ ಮಾಲ್ ಗಳು ಮತ್ತು ಪಟ್ಟಣಗಳು ವಿದ್ರೋಹಿಗಳಿಗೆ ಸುಲಭ ಲಕ್ಷ್ಯಗಳಾಗುವ ಎಲ್ಲಾ ಸಾಧ್ಯತೆಗಳಿವೆ. ಎಷ್ಟು ಸಾಧ್ಯವೋ ಅಷ್ಟು ಅಧಿಕ ಹಾನಿ ಉಂಟು ಮಾಡಲು ಹವಣಿಸುತ್ತಿರುವ ದೇಶ ವಿರೋಧಿ ಶಕ್ತಿಗಳು ಯಾವಾಗ ಎಲ್ಲಿ ಸಂಚು ಹೂಡುತ್ತವೆಂದು ಅಂದಾಜಿಸುವುದು ಸಾದ್ಯವಿಲ್ಲ. ಸಮುದ್ರದಲ್ಲಿ ಸಾಕಷ್ಟು ನಾನ್ ಸ್ಟೇಟ್ ಉಗ್ರರು, ಸಮುದ್ರಗಳ್ಳರು ಸಕ್ರಿಯವಾಗಿರುವ ಕುರಿತು ಆಗಾಗ್ಗೆ ವರದಿಯಾಗುತ್ತಿರುತ್ತದೆ. ಒಟ್ಟಿನಲ್ಲಿ ನಮ್ಮ ಕರಾವಳಿಯ ಸುರಕ್ಷತೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ದೇಶದ ಸುರಕ್ಷತೆಯನ್ನು ಕೇವಲ ಸೈನಿಕ, ಪೋಲೀಸ ಅಥವಾ ಇನ್ನಿತರ ಸುರಕ್ಷಾ ಪಡೆಗಳ ಜವಾಬ್ದಾರಿ ಎನ್ನುವ ಧೋರಣೆ ನಮ್ಮಲ್ಲಿ ಮನೆ ಮಾಡಿದೆ. ಗಲ್ಲಿ ಗಲ್ಲಿಗಳಲ್ಲಿ ನಡೆಯುತ್ತಿರುವ ಅಪರಾಧಗಳನ್ನು ಸಿಸಿ ಟೀವಿ ಅಳವಡಿಸಿಯಾಗಲೀ ಅಥವಾ ಪೋಲೀಸ್ ಸುರಕ್ಷತೆ ನೀಡಿಯಾಗಲೀ ನಿಗ್ರಹಿಸಲು ಸಾಧ್ಯವಿಲ್ಲ. ದೇಶದ ಪ್ರತಿಯೋರ್ವ ಪ್ರಜೆ ಸುರಕ್ಷಾ ದೃಷ್ಟಿಕೋಣ ಬೆಳೆಸಿಕೊಂಡಾಗ ಮಾತ್ರ ಅಪರಾಧಗಳನ್ನು ನಿಗ್ರಹಿಸಲು ಸಾದ್ಯ. ದೇಶದ ಸುರಕ್ಷೆಯ ಚಿಂತೆ ಪ್ರತಿಯೋರ್ವರ ಚಿಂತೆಯಾದಾಗ ಮಾತ್ರ ದೇಶ ಸುರಕ್ಷಿತವಾಗಿರಲು ಸಾದ್ಯ.

ಸ್ಥಳೀಯರ ಪಾತ್ರ ಮಹತ್ವಪೂರ್ಣ : ರಾಜ್ಯದಲ್ಲಿ ಆಗಾಗ್ಗೆ ಉಗ್ರವಾದಿಗಳ ಹಿಂಸಾಚಾರ ನಡೆಯುತ್ತಿರುತ್ತದೆ. ಸುರಕ್ಷಾ ಬಲಗಳಿಗೆ ಸಹಾಯ ಮಾಡಲು ನಾಗರಿಕ ಸಮಿತಿಗಳು, ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡ ಅರೆಕಾಲಿಕ ಸ್ಪೆಷಲ್ ಪ್ರೊಟೆಕ್ಷನ್ ಆಫಿಸರ್ಸ್ ಎನ್ನುವ SPO ಗಳನ್ನು ಅಲ್ಲಿ ನಿಯೋಜಿಸಲಾಗಿದೆ. ಸ್ಠಳೀಯರ ಸಹಕಾರವಿಲ್ಲದೇ ಹೊರಗಿನಿಂದ ಬಂದವರು ತಮ್ಮ ದುರಾಲೋಚನೆಯಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಸಮುದ್ರ ಪ್ರದೇಶದಲ್ಲಿ ಹೊಸಬರ, ಹೊಸ ಬೋಟ್, ನಾವೆಗಳ, ಸಮುದ್ರಗಳ್ಳರ ಕುರಿತು ಸ್ಥಳೀಯರಿಗೆ, ಆಳ ಸಮುದ್ರ ಮೀನುಗಾರರಿಗೆ ಸುಳಿವು ಸಿಗುತ್ತದೆ. ಸಮುದ್ರ ಪ್ರದೇಶಗಳಲ್ಲಿರುವವರು ತಮ್ಮ ಕಣ್ಣು ಕಿವಿಗಳನ್ನು ಸಕ್ರಿಯವಾಗಿರಿಸಿಕೊಂದು ಸಂದೇಹಗ್ರಸ್ಥ ವಿಷಯಗಳನ್ನು ಯಥಾಶೀಘ್ರ ಸಂಬಂಧಿತರಿಗೆ ತಿಳಿಸುವಂತಾಗಬೇಕು. ತೀರ ಪ್ರದೇಶದುದ್ದಕ್ಕೂ ಸ್ಥಳೀಯ ಯುವಕರ ಚಿಕ್ಕ ಚಿಕ್ಕ ಗುಂಪುಗಳು ರಚನೆಗೆ ಪ್ರೋತ್ಸಾಹ ನೀಡುವಂತಾಗಲಿ. ಇಂಥಹ ಸ್ವ ಸಹಾಯ ಗುಂಪುಗಳು ತುರ್ತು ಸ್ಥಿತಿಯಲ್ಲಿ ಸಶಸ್ತ್ರ ಗಸ್ತುದಳಕ್ಕೆ ಸಹಾಯಕವಾಗಬಲ್ಲದು.

ಪಕ್ಷರಾಜಕಾರಣ ಮರೆತು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಕರಾವಳಿ ಸುರಕ್ಷೆಯ ಕುರಿತು ಉತ್ತಮ ಸಾಮಂಜಸ್ಯದ ಅಗತ್ಯವಿದೆ. ಕರಾವಳಿ ರಕ್ಷಣಾ ಪಡೆಗಳಲ್ಲಿ ಸ್ಥಳೀಯ ಮೀನುಗಾರ ಯುವ ಮತ್ತು ನುರಿತ ಅಭ್ಯರ್ಥಿಗಳಿಗೆ ಪ್ರಾತಿನಿಧ್ಯ ಸಿಗುವಂತಾಗಲಿ. ಉಗ್ರವಾದಿಗಳು ಸದಾ ನಮ್ಮ ಊಹನೆಗೆ ನಿಲುಕದ ರೀತಿಯಲ್ಲಿ ಯೋಚಿಸುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ. ಸೇನೆಯ ತರಬೇತಿ ಕೇಂದ್ರವೊಂದರಲ್ಲಿ ರಾತ್ರಿಯ ಹೊತ್ತು ಡ್ಯೂಟಿಯಲ್ಲಿದ್ದ ಜವಾನನೋರ್ವ ಒಳಪ್ರವೇಶಿಸುತ್ತಿದ್ದ ವ್ಯಕ್ತಿಯೋರ್ವನನ್ನುತಡೆದಾಗ ಆ ವ್ಯಕ್ತಿ ತಾನು ತರಬೇತಿ ಕೇಂದ್ರದ ಡೆಪ್ಯುಟಿ ಕಮಾಂಡರ್ ಎಂದರೂ ಒಪ್ಪದೇ ಗುರುತು ಪತ್ರವನ್ನು ತೋರಿಸಬೇಕೆಂದು ಜವಾನ ಪಟ್ಟು ಹಿಡಿದಿದ್ದ. ಜವಾನನ ಕರ್ತವ್ಯಪರಾಯಣತೆಯನ್ನು ಮೆಚ್ಚಿ ಡೆಪ್ಯುಟಿ ಕಮಾಂಡರ್ ಆತನಿಗೆ ಶಾಬಾಶ್ ಹೇಳಿದ್ದರು. ಫೌಜಿ ಜವಾನನಂತೆ ಹೊಸಬರನ್ನು ಪ್ರಶ್ನಿಸುವ, ಪೂರ್ವಾಪರ ವಿಚಾರಿಸುವ ಅಗತ್ಯದ ಕುರಿತು ತೀರ ಪ್ರದೇಶದ ನಿವಾಸಿಗಳು ಹಾಗೂ ಮೀನುಗಾರರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

10897988_412169475604827_5216926115326453765_n

 ವಿಶೇಷ ವರದಿ : ಬೈಂದೂರು ಚಂದ್ರಶೇಖರ ನಾವಡ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)