ರಾಷ್ಟ್ರ ನಿಷ್ಠೆ ಮತ್ತು ಧರ್ಮ ನಿಷ್ಠೆ ಯ ನಡುವಿನ ದ್ವಂದ್ವ

0
1549

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

by . ch. navuda...

ರಾಷ್ಟ್ರ ನಿಷ್ಠೆ ಮತ್ತು ಧರ್ಮ ನಿಷ್ಠೆ ಇವೆರಡರಲ್ಲಿ ಯಾವುದು ಹೆಚ್ಚಿನದು ಎನ್ನುವ ದ್ವಂದ್ವ ನಮ್ಮ ಯುವಜನತೆಯನ್ನು ಕಾಡುತ್ತಿದೆ. ಯುವ ಜನತೆಗೆ ದಾರಿ ತೋರಿಸಬೇಕಾದ ನಮ್ಮ ಧಾರ್ಮಿಕ ಮತ್ತು ರಾಜಕೀಯ ನಾಯಕರನೇಕರು ಸಮಸ್ಯೆಯನ್ನು ಶಮನಗೊಳಿಸುವ ಬದಲು ಇನ್ನಷ್ಟು ವಿಷಮಿಸುವಂತೆ ಮಾಡುತ್ತಿರುವುದು ದುರದೃಷ್ಟಕರ. ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಮ್ಮು ಕಾಶ್ಮೀರದ ಶಾಸಕರೊರ್ವರು ಇತ್ತೀಚೆಗೆ ದೇಶಕ್ಕೆ ಅಪಚಾರವಾದರೆ ಸಹಿಸಿಯೇನು, ಧರ್ಮಕ್ಕೆ ಆಗುವ ಅಪಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಧಾರ್ಮಿಕ ಪ್ರವಚನ ಮಾಡುವ ಧರ್ಮಗುರುಗಳು ಸ್ವತಹ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿರುವ ಅನೇಕ ಘಟನೆಗಳು ದೇಶದಾದ್ಯಂತ ಬೆಳಕಿಗೆ ಬರುತ್ತಿವೆ. ರಾಷ್ಟ್ರೀಯ ತನಿಖಾ ದಳ (NIA) ಅನೇಕರನ್ನು ತನ್ನ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದೆ.ಸುಶಿಕ್ಷಿತರೂ ಉತ್ತಮ ಉದ್ಯೋಗದಲ್ಲಿರುವವರೂ ರಾಷ್ಟ್ರವಿರೋಧಿಕೃತ್ಯಗಳಲ್ಲಿ ತೊಡಗಿರುವುದು ಆಗಾಗ್ಗೆ ವರದಿಯಾಗಿ ನಮ್ಮನ್ನು ಬೆಚ್ಚಿ ಬೀಳಿಸುತ್ತಿದೆ. ಇವ್ಯಾವುದರ ಅರಿವಿಲ್ಲದ ಹಿರಿಯರು ತಮ್ಮ ಮಕ್ಕಳು ಅಂತಹವರಲ್ಲ ಎನ್ನುವ ಪ್ರತಿಕ್ರಿಯೆ ನೀಡುವುದು ಸಾಮಾನ್ಯವಾಗಿ ಕೇಳಿ ಬರುತ್ತಿದೆ.

ಇಹ-ಪರ ದ ಕಲ್ಯಾಣದ ಕುರಿತು ಧಾರ್ಮಿಕ ಪ್ರವಚನ ನೀಡುವ ಧಾರ್ಮಿಕ ನಾಯಕರು, ಶಿಕ್ಷಕರು ಯುವ ಜನತೆಯನ್ನು ತಮ್ಮ ವಾಕ್ಚಾತುರ್ಯದಿಂದ ತಪ್ಪು ದಾರಿಗೆಳೆಯುತ್ತಿರುವುದು ವಿಷಾದಕರ. ರಾಷ್ಟ್ರಕ್ಕಿಂತ ಧರ್ಮ ದೊಡ್ದದು ಎಂಬ ಭಾವನೆಯನ್ನು ಉಗ್ರವಾಗಿ ಪ್ರತಿಪಾದಿಸುತ್ತಿರುವ ಇಂತಹ ಮತಾಂಧರಿಂದ ಇಂದು ಜಗ ಹೊತ್ತಿ ಉರಿಯುತ್ತಿದೆ. ಸಭ್ಯರಂತೆ ಸಮಾಜದಲ್ಲಿ ಮಾನ ಸಮ್ಮಾನಗಳಿಂದಿರುವ ಅನೇಕರು ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುತ್ತಿರುವುದರ ಕುರಿತು ಮಾಧ್ಯಮಗಳ ಮೂಲಕ ತಿಳಿದ ಪ್ರಜ್ನಾವಂತರು ಚಕಿತರಾಗುತ್ತಿದ್ದಾರೆ.ಇಂದಿನ ನಮ್ಮ ಯುವಕರಲ್ಲಿ ರಾಷ್ಟ್ರ ನಿಷ್ಠೆ ಮತ್ತು ಧರ್ಮದ ಕುರಿತು ದ್ವಂದ್ವ ಮತ್ತು ಗಲಿಬಿಲಿಯ ಮನೋಭಾವ ಮನೆ ಮಾಡಿದೆ. ಇದಕ್ಕೆ ಸೆಕ್ಯುಲರ್ ವಾದದ ಹೆಸರಲ್ಲಿ ನೀಡುತ್ತಿರುವ ನಮ್ಮ ಶಿಕ್ಷಣದಲ್ಲಿ ರಾಷ್ಟ್ರಕ್ಕಾಗಿ ದುಡಿದ-ಮಡಿದ ನಿತ್ಯಸ್ಮರಣೀಯರ ನಿರ್ಲಕ್ಶ್ಯವೂ ಕಾರಣ. ರಾಷ್ಟ್ರ ರಕ್ಷಣೆ ಕೇವಲ ಸೈನಿಕರ ಕರ್ತವ್ಯ ಎಂಬ ಭಾವನೆ ವ್ಯಾಪಕವಾಗಿ ಎಲ್ಲೆಡೆ ಕಾಣಿಸುತ್ತಿದೆ.

ಜಗತ್ತನ್ನೆ ತಲ್ಲಣಗೊಳಿಸುತ್ತಿರುವ ಧಾರ್ಮಿಕ ಮತಾಂಧತೆ, ಧರ್ಮದ ಹೆಸರಲ್ಲಿ ವೃದ್ಧರ, ಹೆಂಗಸರ, ಮಕ್ಕಳ, ಅಮಾಯಕರ ಮೇಲಿನ ಬರ್ಬರ ಕೃತ್ಯಗಳ ಕುರಿತು ಧಾರ್ಮಿಕ ನಾಯಕರು ಚಿಂತಿಸಬೇಕಾಗಿದೆ. ತನ್ನ ಗಳಿಕೆಯಲ್ಲಿ ಒಂದಂಶವನ್ನು ಬಡವರಿಗೆ, ಅಶಕ್ತರಿಗೆ ಕಡ್ಡಾಯವಾಗಿ ನೀಡಬೇಕೆಂದೂ, ದಿನವಿಡೀ ದುಡಿದ ಶ್ರಮಿಕನಿಗೆ ಆತನ ಬೆವರು ಒಣಗುವ ಮೊದಲೇ ಆತನ ಕೂಲಿ ನೀಡಬೇಕು ಎಂಬ ಉದಾತ್ತ ವಿಚಾರಗಳನ್ನು ಉಪದೇಶಿಸುವ ಧರ್ಮದ ಅದ್ಯಾವ ಉಪದೇಶಗಳು ಈ ನರಹಂತಕರಿಗೆ ಸ್ಪೂರ್ತಿ ನೀಡುತ್ತಿವೆ ಎಂದು ಆಶರ್ಯವಾಗುತ್ತಿಲ್ಲವೇ..?

ದೇವನೊಬ್ಬ ನಾಮ ಹಲವು ಎಂಬಂತೆ ಐಹಿಕ ಜೀವನಕ್ಕೆ ನೆಲೆ ಕೊಡುವ, ಪಾರಮಾರ್ಥಿಕಕ್ಕೆ ದಾರಿ ತೋರಿಸುವ ಧರ್ಮಗಳ ಹೆಸರು ಬೇರೆ ಬೇರೆಯಾದರೂ ಎಲ್ಲಾ ಧರ್ಮಗಳೂ ಮಾನವೀಯತೆಯ ಮುಖ್ಯವಾಹಿನಿಯಿಂದ (mainstream) ಹೊರಗಿಲ್ಲ ಎನ್ನುವುದು ಗಮನಾರ್ಹ. ಹಾಗಿರುವಾಗ ಈ ಮತಾಂಧರು ಯಾವ ಧಾರ್ಮಿಕ ತತ್ವಗಳನ್ನು ಪಾಲಿಸುತ್ತಿದ್ದಾರೆ? ಇವರು ಕೇವಲ ಧರ್ಮ ವಿರೋಧಿಗಳಷ್ಟೇ ಅಲ್ಲ ಮಾನವೀಯತೆಗೆ ಕಲಂಕ ಎಂದು ಸಾರಬೇಕಾದ ಸಮಯ ಬಂದಿದೆ . ದಯೆಯೇ ಧರ್ಮದ ಮೂಲವಯ್ಯಾ, ದಯೆಯಿಲ್ಲದ ಧರ್ಮ ಯಾವುದಯ್ಯಾ.? ಎಂದು ಬಸವಣ್ಣನವರು ನೂರಾರು ವರ್ಷಗಳ ಹಿಂದೆ ನುಡಿದಿದ್ದರು. ಎಂತಹ ಮಾತು…! ಎಷ್ಟು ಮಾರ್ಮಿಕ ನುಡಿ..! ರಕ್ತ ಪಿಪಾಸು ಉಗ್ರವಾದಿಗಳು, ಧಾರ್ಮಿಕ ಉಗ್ರಗಾಮಿಗಳು ಮುಗ್ದರ ತಲೆ ಕಡಿಯುವ ಘೋರ ದೃಶ್ಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ, ಮಾಧ್ಯಮಗಳಲ್ಲಿ ನೋಡುತ್ತಿದ್ದಾಗ ಬಸವಣ್ಣನವರ ಈ ನುಡಿ ಮತ್ತೆ ಮತ್ತೆ ನೆನಪಾಗುತ್ತದೆ. ಅಶಾಂತ ಮನಸ್ಸನ್ನು ಕಾಡುತ್ತದೆ.

ಭಾರತೀಯ ಸೇನೆಯ ಜಮ್ಮು ಕಾಶ್ಮೀರ ಲೈಟ್ ಇನ್ಫೆಂಟ್ರಿ, ಜಮ್ಮು ಕಾಶ್ಮೀರ್ ರೈಫಲ್ಸ್ ಮತ್ತು ಟಿ ಎ ಬಟಾಲಿಯನ್ ಗಳಲ್ಲಿ ಜಮ್ಮು ಕಾಶ್ಮೀರ ರಾಜ್ಯದ ಹಿಂದೂ. ಮುಸಲ್ಮಾನ, ಸಿಖ್ ಬಾಂಧವರು ಸಹೋದರರಂತೆ ಸಹಬಾಳ್ವೆ ನಡೆಸುತ್ತಿದ್ದಾರೆ. ಮಂದಿರ, ಮಸೀದಿ, ಗುರುದ್ವಾರಗಳ ಧಾರ್ಮಿಕ ಆಚರಣೆಗಳಲ್ಲಿ ಅಲ್ಲಿ ಎಲ್ಲರೂ ಭಾಗವಹಿಸುವ ಉತ್ತಮ ಪರಂಪರೆ ಇದೆ. ಸಾಮಾನ್ಯವಾಗಿ ದಿನದಲ್ಲಿ ಐದು ಬಾರಿ ನಮಾಜು ಮಾಡುವ ಮುಸಲ್ಮಾನ್ ಸೈನಿಕರ ಸಹಿತ ಎಲ್ಲಾ ಸೈನಿಕರಿಗೆ ಕರ್ತವ್ಯದ ಕರೆ ಬಂದಾಗ ನಮಾಜ್, ಪೂಜೆ ಗಿಂತ ರಾಷ್ಟ್ರ ನಿಷ್ಠೆ ದೊಡ್ಡದಾಗುತ್ತದೆ. ಅಲ್ಲಿ ಮೌಲವಿ, ಪಂಡಿತಜಿ, ಸಿಖ್ ಬಾಬಾಜಿ ಒಟ್ಟಿಗೆ ಒಂದೆಡೆ ಕುಳಿತು ಯಾವ ದ್ವೇಶ ಭಾವನೆಯಾಗಲೀ ಅಥವಾ ತಮ್ಮ ಧರ್ಮ ಶ್ರೇಷ್ಠ ಎಂಬ ಭಾವನೆಯಿಲ್ಲದೇ ಧಾರ್ಮಿಕ ಪ್ರವಚನ ನೀಡುತ್ತಾರೆ. ಏಕೆಂದರೆ ಅಲ್ಲಿರುವ ಎಲ್ಲಾ ಸೈನಿಕರಿಗೆ ರಾಷ್ಟ್ರ ನಿಷ್ಠೆ ಶ್ರೇಷ್ಠ ಎಂಬ ಕುರಿತು ಒಂದಿನಿತೂ ಸಂದೇಹವಿಲ್ಲ.

ಧಾರ್ಮಿಕ ನಂಬಿಕೆಗಳು ವ್ಯಕ್ತಿಯ ಖಾಸಗಿ ವಿಷಯವಾಗಿರುತ್ತದೆ. ರಾಷ್ಟ್ರ ನಿಷ್ಠೆ ಎನ್ನುವುದು ವ್ಯಕ್ತಿಯ ಆದ್ಯ ಕರ್ತವ್ಯವಾಗಿರುತ್ತದೆ. ಹಕ್ಕುಗಳಿಗಾಗಿ ಹೋರಡುವ ನಾವು ಕರ್ತವ್ಯಕ್ಕಿಂತ ಯಾವ ಧಾರ್ಮಿಕ ನಂಬಿಕೆಗಳೂ ದೊಡ್ಡದಲ್ಲ ಎಂಬುದನ್ನು ತಿಳಿಯಬೇಕಾಗಿದೆ. ವಾಸ್ತವ ಏನೆಂದರೆ ಸರಿಯಾಗಿ ಅರ್ಥೈಸಿಕೊಂಡರೆ ರಾಷ್ಟ್ರ ಹಿತ ಮತ್ತು ರಾಷ್ಟ್ರ ನಿಷ್ಠೆ ಎಂದಿಗೂ ಯಾವ ಧಾರ್ಮಿಕ ನಂಬಿಕೆಗಳೊಂದಿಗೆ ಸಂಘರ್ಷಕ್ಕಿಳಿಯದು. ಸಂವಿಧಾನ ನಮಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ನಾವು ಎಷ್ಟು ಪ್ರೀತಿಸುತ್ತೇವೋ ಅಷ್ಟೆ ಪ್ರೀತಿಯಿಂದ ಸಂವಿಧಾನದಲ್ಲಿ ಇರುವ ಮೂಲಭೂತ ಕರ್ತವ್ಯಗಳನ್ನು ಅನುಸರಿಸಿದರೆ ಇಂತಹ ಸಂಘರ್ಷ ಎಂದಿಗೂ ಉಂಟಾಗದು. ದ್ವೇಷ ಪೂರಿತ ಮತ್ತು ರಾಷ್ಟ್ರ ವಿರೋಧಿ ಧಾರ್ಮಿಕ ಪ್ರವಚನಗಳನ್ನು ಒಪ್ಪಿಕೊಳ್ಳದೇ ಕಾನೂನು ಪಾಲಕರ ಗಮನಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯ. ರಾಷ್ಟ್ರನಿಷ್ಠೆ ಎಲ್ಲಾ ನಾಗರಿಕರಿಗೆ ಸರ್ವೋಪರಿಯಾಗಲಿ.

 

–ಬೈಂದೂರು ಚಂದ್ರಶೇಖರ ನಾವಡ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)