ಜನಪ್ರಿಯ ಮುಂದಾಳು – ಕೋ.ಮ.ಕಾರಂತ ಪ್ರಶಸ್ತಿ ಪುರಸ್ಕೃತ ಸುರೇಶ್ ಡಿ.ಪಡುಕೋಣೆ

0
1362

suresh p.

ಕುಂದಾಪುರ, ಜ.20:  ಕುಂದಪ್ರಭ ವತಿಯಿಂದ ಜನವರಿ 24 ರಂದು ಸಂಜೆ 4 ಘಂಟೆಗೆ ಆರಂಭಗೊಳ್ಳುವ ವಾರ್ಷಿಕ ಸಮಾರಂಭದಲ್ಲಿ ಕೋ.ಮ.ಕಾರಂತ ಪ್ರಶಸ್ತಿಯೊಂದಿಗೆ ಪುರಸ್ಕರಿಸಲ್ಪಡುವ ಖ್ಯಾತ ಉದ್ಯಮಿ, ಸಾಮಾಜಿಕ ಧುರೀಣ, ಸಾಹಸಿ, ಸಮಾಜ ಸೇವಕ, ಸುರೇಶ್ ಡಿ.ಪಡುಕೋಣೆ ಕುಂದಾಪುರ ತಾಲೂಕಿನಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ದಿಗೆ ಬಹುದೊಡ್ಡ ಕೊಡುಗೆ ನೀಡಿದ ಮುಖಂಡರಾಗಿದ್ದಾರೆ.

ಕುಂದಾಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶ ಪಡುಕೋಣೆಯ ಕೃಷಿಕ ಕುಟುಂಬದಲ್ಲಿ ಜನಿಸಿದ ಇವರು ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಪಡುಕೋಣೆಯಲ್ಲಿ ಪಡೆದು ನಂತರ ಗಂಗೊಳ್ಳಿ ಎಸ್.ವಿ.ಪ.ಪೂ. ಕಾಲೇಜಿನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಮುಂಬೈಗೆ ತೆರಳಿ ಆಟೋ ಮೊಬೈಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮ ಪಡೆದರು.

ಸ್ವಂತ ಉದ್ಯಮದ ಮೂಲಕ  ಸಾಧನೆ ಮಾಡಬೇಕು ಎಂಬ ಛಲದಿಂದ ಉದ್ಯಮ ಆರಂಭಿಸಿದರು. ಅಪೋಲೋ ಬೋರಿಂಗ್ ವಕ್ರ್ಸ್, ಗ್ರಾಹಕರ ಮೆಚ್ಚುಗೆ ಗಳಿಸಿತು. ಮುಂಬೈ ಮಾತ್ರವಲ್ಲ ವಿದೇಶದಲ್ಲೂ ಬೇಡಿಕೆ ಪಡೆಯಿತು.
ಸಂಪಾದನೆ ಮಾಡಿದ ಒಂದಂಶವನ್ನು ಸಮಾಜಕ್ಕೆ ನೀಡಬೇಕು ಮುಖ್ಯವಾಗಿ ಊರಿನ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತಾನು ಕ್ರಿಯಾಶೀಲನಾಗಿ ಪಾಲ್ಗೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆ ಇರಿಸಿಕೊಂಡವರು ಅವರು.

ಆರಂಭದಲ್ಲಿ ಪಡುಕೋಣೆಯ ಕ್ರೀಡಾ  ಪಂದ್ಯಗಳನ್ನು ಪರಿಸರದ ಗ್ರಾಮಸ್ಥರಿಗೆ ಪ್ರತಿವರ್ಷ ಏರ್ಪಡಿಸುವ ಮೂಲಕ ಯುವಕರಲ್ಲಿ  ಉತ್ಸಾಹ ತುಂಬಿದವರು. ಪಡುಕೋಣೆಯ ಮಹಾವಿಷ್ಣು ದೇವಸ್ಥಾನದ ಜೀರ್ಣೊದ್ದಾರದಲ್ಲಿ ಪಾಲ್ಗೊಂಡರು. ಲಕ್ಷ್ಮೀ ಗಣಪತಿ, ಮಹೇಶ್ವರ ದೇವರ ಗುಡಿಗಳನ್ನು ನಿರ್ಮಿಸಿದವರು.

ಕುಂದಾಪುರ ತಾಲ್ಲೂಕಿನ ಪ್ರಸಿದ್ಧ ದೇವಸ್ಥಾನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಬರುವ ಪರವೂರ ಭಕ್ತರಿಗೆ ಕಾಣುವಂತೆ ಕುಂಭಾಶಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗುಡ್ಡೆ ರಸ್ತೆಗೆ ಬೃಹತ್ ಸ್ವಾಗತ ಮಂಟಪ ಸುಂದರವಾಗಿ ನಿರ್ಮಿಸಿದರು.

ತಾನು ಶಿಕ್ಷಣ ಪಡೆದ ಶಾಲೆಗಳ ಅಭಿವೃದ್ದಿಗೆ ನೆರವಾದರು. ಹಂಗ್ಲೂರಿನಲ್ಲಿ “ಸೂರಜ್ ಕುಂಡ” ಎಂಬ ಮನೆ ನಿರ್ಮಿಸಿದ ನಂತರ ಅದೇ ಮನೆಯ ಎದುರು ಸುಮಾರು 82 ಅಡಿ ಎತ್ತರದ ಬೃಹತ್ ಹನುಮಂತನ ವಿಗ್ರಹ ಸ್ಥಾಪಿಸಿ ಹನುಮ ಭಕ್ತರಲ್ಲಿ ಪ್ರೇರಣೆ ತುಂಬಿದರು. ಇದೇ ಸ್ಥಳದಲ್ಲಿ ಕ್ರೀಡಾ ಪಂದ್ಯವನ್ನು ನಡೆಸಿದರು.

ಇಂದು ಸಮಾಜದ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗಾಗಿ ನೆರವು ನೀಡುವ ಮೂಲಕ ಸ್ಪೂರ್ತಿ ತುಂಬುತ್ತಿದ್ದಾರೆ. ಮುಂಬಯಿಯ ದೇವಾಡಿಗೆ ವೆಲ್ಫ಼ೇರ್ ಅಸೋಶಿಯನ್ ಇದರ ಗೌರವ ಅದ್ಯಕ್ಷರಾಗಿಿದ್ದಾರೆ.

ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿರುವ ಸುರೇಶ್ ಡಿ ಪಡುಕೋಣೆಯವರು ಅವರ ಹತ್ತಾರು ಬಗೆಯ ಸಾಮಾಜಿಕ ಸೇವೆಗಾಗಿ “ಕುಂದಪ್ರಭ” ಸಂಸ್ಥೆ ಪ್ರತಿವರ್ಷ ಸಾಧಕರಿಗಾಗಿ ಹಿರಿಯ ಪತ್ರಕರ್ತ, ವಾಗ್ಮಿ ಬ್ಯಾಂಕರ್ ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಹೆಸರಲ್ಲಿ ನೀಡುವ ಕೋ.ಮ.ಕಾರಂತ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.