ಮುದ್ರಾ ಸಾಲ ಯೋಜನೆಯಿಂದ ಮಹಿಳೆಯರ ಉತ್ಥಾನ ಸಾಧ್ಯ.

0
1734

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ch.navuda..

ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಪ್ರಸಕ್ತ ವಿತ್ತ ವರ್ಷದ ಎರಡನೇ ತ್ರಿಮಾಹಿ ಅಂತ್ಯದ ವರದಿ ಹೊರ ಬಂದಿದೆ. ಕೆಲವು ಬ್ಯಾಂಕುಗಳು ಬಹಳ ಕಷ್ಟಪಟ್ಟು ಲಾಭಾಂಶದ ಮೊತ್ತವನ್ನು ಕೊಂಚ ಹೆಚ್ಚಿಸಿ ತೋರಿಸಿವೆಯಾದರೂ, ವರದಿಯನ್ನು ಅವಲೋಕಿಸಿದರೆ ನಿರಂತರ ಬೆಳೆಯುತ್ತಿರುವ ಅನುತ್ಪಾದಕ ಆಸ್ತಿಯ ಭಾರವನ್ನು ಹೊರಲಾಗದೇ ಬ್ಯಾಂಕುಗಳ ವಿತ್ತೀಯ ಸ್ಥಿತಿ ಹೇಗೆ ಕೆಡುತ್ತಿದೆ ಎಂದು ತಿಳಿಯುತ್ತದೆ. ಒಂದು ಅಂದಾಜಿನ ಮೇರೆಗೆ ಸುಮಾರು 7035 ಅನುಕೂಲಸ್ಥ ಪ್ರಭಾವಿ ವ್ಯಕ್ತಿಗಳು ಅಥವಾ ಅವರಿಂದ ನಿಯಂತ್ರಿತ ಔದ್ಯೋಗಿಕ ಸಂಸ್ಥೆಗಳು 59000 ಕೋಟಿ ರೂ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿವೆ. ಕಿಂಗ್ ಫಿಷರ್ ಮಾಲಿಕ ವಿಜಯ ಮಲ್ಯರಂತಹ ಪ್ರಭಾವಿ ವ್ಯಕ್ತಿಗಳಿಗೆ ಕೊಡ ಮಾಡಿದ್ದ ಸಾಲ ವಸೂಲಿಯಾಗದೇ, ಆ ಬಾಬತ್ತು ಲಾಭಾಂಶದ ದೊಡ್ಡ ಮೊತ್ತವನ್ನು ತೆಗೆದಿರಿಸಬೇಕಾಗುವುದರಿಂದ ಬ್ಯಾಂಕುಗಳ ಮುನಾಫೆಯ ಮೇಲೆ ನಕಾರಾತ್ಮಕ ಪರಿಣಾಮವುಂಟಾಗುತ್ತಿದೆ.

ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ದೊಡ್ಡ ಮೊತ್ತದ ಸಾಲವನ್ನು ಪ್ರಭಾವಿ ವ್ಯಕ್ತಿಗಳಿಗೆ ನೀಡುವಂತೆ ಕೆಲವು ರಾಜಕಾರಣಿಗಳು ಪ್ರಭಾವ ಬೀರುವುದಲ್ಲದೇ ಉದ್ದೇಶ್ಯ ಪೂರ್ವಕವಾಗಿ ಸಾಲ ಮರು ಪಾವತಿ ಉಳಿಸಿಕೊಂಡವರನ್ನು ಸಂರಕ್ಷಿಸಲು ಯತ್ನಿಸುತ್ತಿರುವುದರಿಂದಲೇ ನಮ್ಮ ಸಂಪೂರ್ಣ ಬ್ಯಾಂಕಿಂಗ್ ರಂಗ ಇಂದು ಅನುತ್ಪಾದಕ ಆಸ್ತಿಯ ಹೆಚ್ಚಳದಿಂದ ಜರ್ಝರಿತವಾಗಿದೆ. ಇದೀಗ ವಿತ್ತ ಮಂತ್ರಿ ಸ್ವತಹ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಈ ಕುರಿತು ಚರ್ಚಿಸಿದ್ದಾರೆ. ಸಾಲ ವಸೂಲಾತಿಗೆ ಅನುಕೂಲವಾಗುವಂತೆ ಕಾನೂನಿನಲ್ಲಿ ಅಗತ್ಯ ಬದಲಾವಣೆ ತರುವ ಕುರಿತು ಸಹಾ ಚಿಂತನೆ ನಡೆದಿದೆ. ದೊಡ್ದ ಮೊತ್ತದ ಸಾಲಗಾರರಿಗಿಂತ ಮದ್ಯಮ ವರ್ಗದ ಗ್ರಾಹಕರೇ ಬ್ಯಾಂಕುಗಳ ಸಾಲವನ್ನು ಕ್ಲಪ್ತ ಕಾಲಕ್ಕೆ ಪಾವತಿ ಮಾಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಸಾಲ ವಾಪಸಾತಿಯ ವಿಷಯದಲ್ಲಿ ಅತ್ಯಂತ ಪ್ರಾಮಾಣಿಕತೆ ಮತ್ತು ಶಿಸ್ತು ತೋರುತ್ತಿದ್ದಾರೆ ಎನ್ನುವುದು ವಾಸ್ತವ. ಬ್ಯಾಂಕುಗಳು ಕೊಡ ಮಾಡುವ ಹಣ ತಮ್ಮಂತಹ ಸಾಮಾನ್ಯ ಗ್ರಾಹಕರ ಮೆಹನತ್ತಿನ ಆಪದ್ಧನ ಎನ್ನುವ ಕಳಕಳಿ ಮಹಿಳೆಯರಲ್ಲಿರುತ್ತದೆ.

ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಉತ್ಥಾನಕ್ಕಾಗಿ ಶಿಕ್ಷಣ, ಉದ್ಯೋಗ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಈಗಾಗಲೇ ಸಾಕಷ್ಟು ಆದ್ಯತೆ, ಸೌಲಭ್ಯ ನೀಡಲಾಗಿದೆಯಾದರೂ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಸ್ಥಿತಿ ಇನ್ನೂ ಬಹಳ ಉತ್ತಮ ಎನ್ನುವ ಹಾಗಿಲ್ಲ. ನಿರಕ್ಷರತೆ, ನಿರುದ್ಯೋಗ,ನಿರ್ಲಕ್ಷ್ಯಕ್ಕೊಳಗಾದ ಗ್ರಾಮೀಣ ಮಹಿಳೆಯರು ನಿರಾಶೆ ಮತ್ತು ಹತಾಶೆಯಲ್ಲಿ ತಮ್ಮ ಜೀವನ ಸವೆಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಆರ್ಥಿಕ ಪರಾವಲಂಬನೆ ಮತ್ತು ಆತ್ಮ ವಿಶ್ವಾಸದ ಕೊರತೆ ಅವರ ಬದುಕಿನಲ್ಲಿ ಎದ್ದು ಕಾಣಿಸುತ್ತಿದೆ. ಇವುಗಳಿಂದ ಹೊರ ಬರುವ ದಾರಿ ಮಹಿಳೆಯರು ಸ್ವತಹ ಕಂಡುಕೊಳ್ಳಬೇಕಾಗಿದೆ.

ಅನೇಕ ಅಂತರಾಷ್ಟ್ರೀಯ ರೇಟಿಂಗ್ ಮತ್ತು ಹಣಕಾಸು ಸಂಸ್ಥೆಗಳು ನಮ್ಮ ದೇಶದ ದುಡಿಯುವ ವರ್ಗದಲ್ಲಿ ಮಹಿಳೆಯರ ಸಂಖ್ಯೆ ತೃಪ್ತಿಕರವಾಗಿಲ್ಲದಿರುವತ್ತ ಬೊಟ್ಟು ಮಾಡಿವೆ. ದುಡಿಯುವ ವರ್ಗದಲ್ಲಿ ಇನ್ನೂ ಹೆಚ್ಚು ಮಹಿಳೆಯರು ಭಾಗಿದಾರರಾಗುವುದರಿಂದ ದೇಶದ ಜಿ.ಡಿ.ಪಿ.ಯಲ್ಲಿ ಅಭೂತಪೂರ್ವ ವೃದ್ಧಿಯ ಸಾಧ್ಯತೆ ಇದೆ ಎಂದು ಈ ಸಂಸ್ಥೆಗಳು ಹೇಳಿವೆ. ಇತ್ತೀಚಿನ ವರ್ಷಗಳಲ್ಲಿ ಹಲವೆಡೆ ಮಹಿಳಾ ಸ್ವ ಸಹಾಯ ಸಂಘಗಳು ಅಸ್ತಿತ್ವಕ್ಕೆ ಬಂದಿವೆ. ಹಲವು ಸರಕಾರೇತರ ಸಂಸ್ಥೆಗಳು (NGO) ಈ ನಿಟ್ಟಿನಲ್ಲಿ ಸಾಕಷ್ಟು ಸಕ್ರಿಯವಾಗಿವೆ ಮತ್ತು ಮಹಿಳೆಯರನ್ನು ಸಂಘಟಿತರಾಗಿ ದುಡಿಯುವಂತೆ ಪ್ರೇರೇಪಿಸುತ್ತಿವೆ. ಈ ಸ್ವ ಸಹಾಯ ಸಂಘಗಳು ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆದು ಸ್ವ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಇಡುತ್ತಿರುವುದು ಸಂತಸದ ವಿಷಯ.

ಕಾರ್ಪೋರೇಟ್ ದಿಗ್ಗಜರುಗಳಿಗೆ ನೀಡಿದ ಅನೇಕ ದೊಡ್ಡ ಮೊತ್ತದ ಸಾಲ ಸರಿಯಾಗಿ ಮರುಪಾವತಿಯಾಗದೇ ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿಯಿಂದಾಗಿ ಆರ್ಥಿಕ ಸ್ಥ್ತಿತಿ ಹದಗೆಡುತ್ತಿರುವ ಇಂದಿನ ದಿನಗಳಲ್ಲಿ ಬ್ಯಾಂಕುಗಳು ಸಣ್ಣ ಸಾಲಗಾರತ್ತ ಮುಖ ಮಾಡಿ ನಿಂತಿವೆ. ಕೇಂದ್ರ ಸರ್ಕಾರ ಸಹಾ ಸಣ್ಣ ಉದ್ದಿಮೆದಾರರನ್ನು ದೃಷ್ಟಿಯಲ್ಲಿಟ್ಟು ಮುದ್ರಾ ಸಾಲ ಯೋಜನೆ ರೂಪಿಸಿದೆ. 50ಸಾವಿರ ರೂ ವರೆಗೆ ಸುಲಭವಾಗಿ ದೊರೆಯುವ ಈ ಯೋಜನೆಯನ್ನು ಮಹಿಳೆಯರು ಉಪಯೋಗಿಸಿಕೊಳ್ಳಬೇಕು. ಇದೀಗ ಬೇಸ್ ದರದಲ್ಲಿಯೇ ( ಬೇರೆ ಬೇರೆ ಬ್ಯಾಂಕುಗಳ ಬೇಸ್ ರೇಟ್ ಬೇರೆ ಬೇರೆ ಇರುತ್ತದಾದರೂ ಸದ್ಯ ಇದು 9.5% ರ ಆಸು-ಪಾಸು ಇದೆ) ಮುದ್ರಾ ಸಾಲವನ್ನು ನೀಡಲಾಗುತ್ತಿದೆ. ಖಾಸಗಿ ಮತ್ತು ಸಹಕಾರಿ ಬ್ಯಾಂಕುಗಳ 16% – 17% ಬಡ್ದಿದರಕ್ಕೆ ಹೋಲಿಸಿದರೆ ಇದು ಕಡಿಮೆ ಬಡ್ಡಿದರದಲ್ಲಿ ಸಿಗುವ ಸಾಲವಾಗಿರುತ್ತದೆ. ಸಣ್ಣ ವ್ಯಾಪಾರ ಮತ್ತು ಸ್ವಂತ ಉದ್ಯೋಗಿಗಳಿಗೆ ಇದು ವರದಾನವಾಗಿದೆ.

ಮನಸ್ಸಿದ್ದರೆ ಮಾರ್ಗವಿದೆ ಎನ್ನುವ ಮಾತಿನಂತೆ ಪಶು ಸಾಕಣೆ, ಹೈನುಗಾರಿಕೆ, ಗೃಹೋದ್ಯಮಗಳು, ಸಣ್ಣ ವ್ಯಾಪಾರ, ಆಹಾರೋತ್ಪನ್ನಗಳ ತಯಾರಿಕೆ ಮತ್ತು ಸಂಸ್ಕರಣೆ, ತರಕಾರಿ, ಹೂ , ಹಣ್ಣು ಬೆಳೆಯುವಂತಹ ಕೃಷಿ ಕಾರ್ಯಗಳಲ್ಲಿ ಮಹಿಳೆಯರು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಯಶಸ್ಸು ಖಚಿತ. ಪ್ರಾಮಾಣಿಕತೆ ಮತ್ತು ಪರಿಶ್ರಮದ ವಿಷಯದಲ್ಲಿ ಮಹಿಳೆಯರು ಹೆಚ್ಚು ವಿಶ್ವಾಸಾರ್ಹರು ಎನ್ನುವುದು ಅನೇಕ ಬ್ಯಾಂಕ್ ಅಧಿಕಾರಿಗಳ ಅಭಿಮತ. ಹೀಗಾಗಿ ಹೆಚ್ಚು ಹೆಚ್ಚು ಬ್ಯಾಂಕ್ ಗಳು ಮಹಿಳೆಯರಿಗೆ ಹಾಗೂ ಅವರ ಸ್ವಹಾಯ ಸಂಘಗಳಿಗೆ ಸಾಲ ಕೊಡುವ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆ.

ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರೂ ಮತ್ತು ಸಂಪನ್ನರೂ ಆದಾಗ ಮಾತ್ರ ಸಮಾಜದಲ್ಲಿ ಅವರಿಗೆ ಆದರ ಮತ್ತು ಗೌರವ ಸಿಗುತ್ತದೆ. ಆರ್ಥಿಕ ಸಂಪನ್ನತೆ ಅವರ ಸಾಮಾಜಿಕ ಪ್ರತಿಷ್ಠೆಯನ್ನು ಹೆಚ್ಚಿಸುವುದರಿಂದ ಮಹಿಳೆಯರು ಇಂದು ಎದುರಿಸುತ್ತಿರುವ ಎಷ್ಟೋ ಸಮಸ್ಯೆಗಳು, ತಾರತಮ್ಯಗಳು ತನ್ನಿಂದ ತಾನೇ ತೊಡೆದು ಹೋಗಲಿದೆ. ಅವರಲ್ಲಿ ಆತ್ಮವಿಶ್ವಾಸ ಮೂಡಲಿದೆ. ಆತ್ಮವಿಶ್ವಾಸದಿಂದ ಭರಪೂರ ಮಹಿಳೆ ದೇಶದ ಆರ್ಥಿಕ ರಂಗದ ದಿಕ್ಕು ದೆಸೆಯನ್ನು ಬದಲಿಸಬಲ್ಲಳೆಂಬುದರಲ್ಲಿ ಸಂಶಯವಿಲ್ಲ. ಶಕ್ತಿಶಾಲಿ ಭಾರತದ ನಿರ್ಮಾಣ ಮಹಿಳಾ ಶಕ್ತಿಯ ಉದಯದಿಂದ ಮಾತ್ರ ಸಾಧ್ಯ. ಮಹಿಳೆಯರು ತಮ್ಮನ್ನಾವರಿಸಿದ ನಿರಾಶೆ ಮತ್ತು ಹತಾಶೆಯಿಂದ ಹೊರ ಬರಲಿ.

 

—ಬೈಂದೂರು ಚಂದ್ರಶೇಖರ ನಾವಡ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)