ಸಂಬಂಧಗಳ ಕೊಂಡಿ ಶಿಥಿಲವಾಗದಿರಲಿ…

1
2905

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ch.navuda..

ಹುಡುಗಿಯೊಬ್ಬಳು ಚಿನ್ನಾಭರಣಗಳಿಗಾಗಿ ತನ್ನ ಅಜ್ಜಿಯನ್ನೇ ಹತ್ಯೆಗೈಯ್ಯುತ್ತಾಳೆ ! ಸಾಕಿ ಸಲಹಿ ದೊಡ್ಡವನನ್ನಾಗಿ ರೂಪಿಸಿದ ವೃದ್ದ ತಾಯಿಯನ್ನೇ ಮನೆಯಿಂದ ಹೊರಗಟ್ಟುತ್ತಾನೆ ಆಕೆಯ ಮಗ ! ಮಂಗಳೂರಲ್ಲೊಂದು ದಂಪತಿಗಳು ಸಂತಾನವಿಲ್ಲದ ವೃದ್ದೆಯೋರ್ವಳನ್ನು ಪುಸಲಾಯಿಸಿ ಆಕೆಯ ಮನೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾರೆ ! ಇಂತಹ ಹೃದಯ ವಿದ್ರಾವಕ ನೂರಾರು ಘಟನೆಗಳ ಕುರಿತು ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ, ದೃಶ್ಯ ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಇಂತಹ ಘಟನೆಗಳ ಕುರಿತು ನಿಮಗೇನೆನಿಸುತ್ತದೆ ?

ಸಾವಿರಾರು ವರ್ಷಗಳಿಂದ ‘ಅತಿಥಿ ದೇವೋ ಭವ ‘ ಎಂದು ಹೊರಗಿನವರನ್ನೂ ಪ್ರೀತ್ಯಾದರದಿಂದ ಕಾಣುವಂತಹ ಸಂಸ್ಕಾರ ಹೊಂದಿದ್ದ ನಾವು ಇಂದು ಆರ್ಥಿಕ ಸಂಪನ್ನತೆಯ ಹಮ್ಮು ಬಿಮ್ಮಿನಲ್ಲಿ ನಮ್ಮವರನ್ನೇ ವಂಚಿಸುವಷ್ಟು ದುಷ್ಟರಾಗುತ್ತಿದ್ದೇವೆಯೇ?ನಮ್ಮ ರೀತಿ ರಿವಾಜುಗಳ ಭವ್ಯ ಪರಂಪರೆ ಎಲ್ಲಿ ಹೋಯಿತು ? ಹೊಸ ಪೀಳಿಗೆಗೆ ನಾವು ಎಂತಹ ಸಂದೇಶ ಕೊಡುತ್ತಿದ್ದೇವೆ? ಹಣದ ಲಾಲಸೆ ನಮ್ಮ ಸಾಮಾಜಿಕ ಸಂಬಂಧಗಳ ನಡುವಿನ ಕೊಂಡಿಯನ್ನು ಶಿಥಿಲಗೊಳಿಸುತ್ತಿದೆಯೇ ?

ನಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಗಳು ನಮ್ಮ ಕುಟುಂಬದ ಪರಿಕಲ್ಪನೆಯ ಪರಿಧಿ ಸಣ್ಣದಾಗುತ್ತಿರುವ ಸೂಚನೆ ನೀಡುತ್ತಿಲ್ಲವೆ ? ವಿವಾಹದವರೆಗೆ ಸಹೋದರ-ಸಹೋದರಿ, ತಂದೆ-ತಾಯಿಯರು ಕುಟುಂಬವಾದರೆ, ನಂತರ ಹೆಂಡತಿ-ಮಕ್ಕಳಿಗಷ್ಟೇ ಸೀಮಿತವಾಗುತ್ತದೆ. ಆರ್ಥಿಕ ಅಸಮಾನತೆ ಅಣ್ಣ ತಮ್ಮಂದಿರ ಮಧ್ಯೆ ಗೋಡೆ ನಿರ್ಮಿಸುತ್ತದೆ. ಉನ್ನತ ಹುದ್ದೆಯಲ್ಲಿದ್ದ ಮಹಾಶಯರೋರ್ವರು ತಮ್ಮನ್ನು ಹುಡುಕಿಕೊಂಡು ಹಳ್ಳಿಯಿಂದ ಬಂದ ಸಹೋದರನನ್ನು ಬಹಳ ಕೀಳಾಗಿ ನಡೆಸಿಕೊಂಡಿದ್ದು ಕಂಡ ಪ್ರತ್ಯಕ್ಷ ಉದಾಹರಣೆ ನನ್ನೆದುರಿಗಿದೆ. ಎಷ್ಟೋ ಮನೆಗಳಲ್ಲಿ ಸಹೋದರರು ಪರಸ್ಪರ ಮಾತನಾಡದಷ್ಟು ಸಂಬಂಧ ಕೆಟ್ಟಿರುತ್ತದೆ. ಪ್ರೀತಿಯಿಂದ ಮಾತನಾಡುವುದರಿಂದಲೇ ಪರಸ್ಪರ ಸಂಬಂಧ ಗಟ್ಟಿಗೊಳ್ಳುತ್ತದೆ.

ವಿಶ್ವಕ್ಕೆ ನೈತಿಕ, ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ ನಮ್ಮ ಸಮಾಜದಲ್ಲಿ ಸಂಬಂಧಗಳ ಕೊಂಡಿ ಶಿಥಿಲವಾಗಿ ಆಸ್ತಿ, ಹಣದ ಮಹತ್ವ ಹೆಚ್ಚುತ್ತಿದೆ. ಮನೆಗಳಲ್ಲಿ ನಡೆಯುವ ಮದುವೆ, ಮುಂಜಿ, ಗೃಹ ಪ್ರವೇಶ, ಧಾರ್ಮಿಕ ಕಾರ್ಯಕ್ರಮಗಳು, ಅಷ್ಟೇಕೆ ಸಾವಿನ ಸಮಾರಂಭಗಳೂ ಸಂಪತ್ತಿನ ಅಹಂ ಪ್ರದರ್ಶನದ ವೇದಿಕೆಗಳಾಗುತ್ತಿವೆ. ಉಪೇಕ್ಷೆಗೊಳಗಾದವರು ಆವೇಶದಲ್ಲಿ ದುಡುಕಿನ ನಿರ್ಣಯ ತೆಗೆದುಕೊಳ್ಳುವ ಉದಾಹರಣೆಗಳೂ ಇರುತ್ತವೆ. ಕೆಲವೊಮ್ಮೆ ಇದು ಹಿಂಸೆಗೆ ದಾರಿಮಾಡಿಕೊಡುತ್ತದೆ.ಇವುಗಳಿಗೆಲ್ಲಾ ಕಾರಣವೇನು ? ಕಾರಣ ನಮ್ಮ ನೈತಿಕ ನೆಲಗಟ್ಟು ಬಲಹೀನವಾಗಿರುವುದು, ನಮ್ಮಲ್ಲಿನ ಅತಿಯಾದ ಸ್ವಾರ್ಥ ಬುದ್ಧಿ ಮತ್ತು ಸಂಪತ್ತಿನ ಕ್ರೋಢೀಕರಣದ ವಿಪರೀತ ವ್ಯಾಮೋಹ.

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳಿಗೆ, ಜೀವನದ ಉದಾತ್ತ ಗುಣಗಳಿಗೆ ಪ್ರಾಮುಖ್ಯತೆಯಿಲ್ಲದಿರುವುದು ಮತ್ತು ಹಣ ಸಂಪಾದನೆಗೆ ಪ್ರಾಶಸ್ತ್ಯ ಹೆಚ್ಚುತ್ತಿರುವುದು ಸಹಾ ಸಮಾಜದ ನೈತಿಕ ಅಧಪತನಕ್ಕೆ ಕಾರಣ. ಹಿಂದೊಮ್ಮೆ ಪಠ್ಯ ಮತ್ತು ಪಠ್ಯೇತರ ಶಿಕ್ಷಣದ ಭಾಗವಾಗಿದ್ದ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಥೆಗಳು, ಶ್ರವಣ ಕುಮಾರ, ಸತಿ ಸಾವಿತ್ರಿ, ಶ್ರೀ ರಾಮಚಂದ್ರ, ದಾನ ಶೂರ ಕರ್ಣ ರಂತಹ ಮಹಾನ್ ಪುರುಷ ಮತ್ತು ಸ್ತ್ರೀಯರ ಜೀವನ ಕಥೆಗಳಿಗೆ ಇಂದಿನ ಪಠ್ಯಕ್ರಮದಲ್ಲಿ ಅವಕಾಶವಿಲ್ಲದಿರುವುದು. ಹಿಂದೆಲ್ಲಾ ಅನುಭವೀ ಶಿಕ್ಷಕರು ಶಿಕ್ಷಣ ಮತ್ತು ಶಿಕ್ಷಣೇತರ ಪಠ್ಯಕ್ರಮದ ಭಾಗವಾಗಿ ಮಕ್ಕಳಿಗೆ ಅಧ್ಯಾತ್ಮಿಕ ಶಿಕ್ಷಣನೀಡುತ್ತಿದ್ದರು. ಮಕ್ಕಳೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧವಿಲ್ಲದ ಇಂದಿನ ಸೂಟು-ಬೂಟು ಸಂಸ್ಕೃತಿಯ ಆಂಗ್ಲ ಮಾಧ್ಯಮದ ಶಿಕ್ಷಕರಿಗೆ ಇವುಗಳೆಲ್ಲಾ ಅಡಗಲೂಜ್ಜಿಯ ಕಥೆಗಳೆಂಬ ತಾತ್ಸಾರ.

ಇನ್ಫೋಸಿಸ್ ನ ಎನ್ ಆರ್ ನಾರಾಯಣ ಮೂರ್ತಿಯವರ ಪುತ್ರ ರೋಹನ್ ಮೂರ್ತಿ ಅವರ ಪ್ರಕಾರ ಅವರು ಕಲಿತ ಬೆಂಗಳೂರಿನ ಪ್ರತಿಷ್ಠಿತ ಸ್ಕೂಲಿನಲ್ಲಿ ಟಿ ಎಸ್ ಇಲಿಯೆಟ್, ಶೇಕ್ಸ್ ಪಿಯರ್ ಸಹಿತ ಆಂಗ್ಲ ಸಾಹಿತಿಗಳ ಭರಪೂರ ಸಾಹಿತ್ಯ ಜ್ಞಾನ ನೀಡಲಾಗುತಿತ್ತು. ಭಾರತದ ಯಾವುದೇ ಪುರಾತನ ಪೌರಾಣಿಕ ಕಲಾತ್ಮಕ ಸಾಹಿತ್ಯದ ಗಂಧ ಗಾಳಿಯೂ ಅವರಿಗಿರಲಿಲ್ಲ. ವಿದೇಶಗಳಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಆಂಗ್ಲ ಸಾಹಿತ್ಯದ ಕುರಿತು ಆಳವಾಗಿ ಚರ್ಚಿಸಬಹುದಾಗಿತ್ತಾದರೂ ತನ್ನ ಸ್ವಂತ ನೆಲದ ಮಹಾನ್ ಸಾಹಿತ್ಯದ ಅಲ್ಪ ಜ್ನಾನವೂ ಅವರಿಗಿರಲಿಲ್ಲ. ಇದೇ ಅವರಿಗೆ ಈಗ ತುಲಸೀದಾಸರ ರಾಮಚರಿತಮಾನಸ, ಕಿರಾತರ್ಜುನೀಯ, ತೇರಿಗಾಥಾ, ಮನುವಿನ ಕಥೆ ಸಹಿತ ಭಾರತದ ೧೪ ಭಾಷೆಗಳ ಅಪಾರ ಜ್ಞಾನ ಸಾಗರವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡುವ ಮಹಾನ್ ಯೋಜನೆಗೆ ಪ್ರೇರೇರಿಪಿಸಿದೆ. ಅಷ್ಟರ ಮಟ್ಟಿಗೆ ನಮ್ಮ ನೆಲದಲ್ಲಿನ ಅಮರ ಗ್ರಂಥಗಳನ್ನು ನಾವು ನಿರ್ಲಕ್ಷಿಸಿದ್ದೇವೆ ಎಂದ ಮೇಲೆ ನಮ್ಮ ಶಿಕ್ಷಣ ಎಷ್ಟು ನಿಸ್ಸಾರವಾಗಿದೆಯಲ್ಲ !

ಸಾರವಿಲ್ಲದ ಮತ್ತು ಪೂರಕ ನೈತಿಕ ಮೌಲ್ಯಗಳಿಲ್ಲದ ನಮ್ಮ ಶಿಕ್ಷಣ ನಮ್ಮ ಮಕ್ಕಳನ್ನು ಹೆಚ್ಚು ಹೆಚ್ಚು ಸ್ವ ಕೇಂದ್ರಿತ ಮತ್ತು ಅಂತರ್ಮುಖಿ ಮಾಡುತ್ತಿವೆ. ಇವು ಸಾಮಾಜಿಕ ಸಂಬಂಧಗಳ ಕೊಂಡಿ ಶಿಥಿಲಗೊಳ್ಳಲು ಕಾರಣವಾಗುತ್ತಿದೆ. ವೃದ್ಧರ ಉಪೇಕ್ಷೆ ಹಿಂದೆಂದಿಗಿಂತಲೂ ಇಂದು ನಮ್ಮ ಸಮಾಜದಲ್ಲಿ ಅಧಿಕವಾಗಿದೆ. ಮಕ್ಕಳ ಅನಾದರ, ತಾತ್ಸಾರಕ್ಕೆ ಜರ್ಝರಿತರಾದ ವೃದ್ಧರನ್ನು ನಮ್ಮ ಸುತ್ತಮುತ್ತ ಎಲ್ಲೆಡೆ ಕಾಣಬಹುದು. ಅಶಕ್ತರು ಮತ್ತು ಆರ್ಥಿಕವಾಗಿ ಸುಧೃಡರಲ್ಲದ ಹಿರಿಯರು ಮನೆಯ ಕಿರಿಯ ಸದಸ್ಯರಿಗೆ ಹೊರೆಯಾಗಿ ಕಾಣುತಿದ್ದಾರೆ. ಹಣಕಾಸಿನ ಅಹಂಕಾರದಲ್ಲಿ ರಕ್ತ ಸಂಬಂಧಿಗಳನ್ನು ಕಡೆಗಣಿಸುವ ಮತ್ತು ಭೇದಭಾವ ಮಾಡುವ ಪೃವೃತ್ತಿ ಮಾಮೂಲಿಯಾಗುತ್ತಿದೆ.

ಶಹರೀಕರಣ ಹೆಚ್ಚುತ್ತಿದ್ದಂತೆ ಎಲ್ಲವನ್ನೂ ದುಡ್ಡಿನಿಂದ ಅಳೆಯುವ ಮನೋವೃತ್ತಿ ನಮ್ಮಲ್ಲಿ ಹೆಚ್ಚಾಗುತ್ತಿದೆ ಮತ್ತು ಕೌಟುಂಬಿಕ ಸಂಬಂಧಗಳ ಮಹತ್ವ ಕಡಿಮೆಯಾಗುತ್ತಿದೆ. ನಾನು, ನನ್ನ ಹೆಂಡತಿ, ನನ್ನ ಮಕ್ಕಳು – ಎಂಬಷ್ಟಕ್ಕೆ ನಾವು ಸೀಮಿತರಾಗುತ್ತಿದ್ದೇವೆ. ಮುಂದೊಂದು ದಿನ ಇದೇ ಮಕ್ಕಳು ದೊಡ್ಡವರಾಗಿ ನಮ್ಮನ್ನು ತಿರಸ್ಕರಿಸಿದಾಗ, ಅಸಡ್ಡೆ ಮಾಡಿದಾಗ ಬಾಳು ಬರಿದಾದಂತಾಗಿ, ಅನಾಥ ಪ್ರಜ್ನೆ ಕಾಡುತ್ತದೆ. ತನ್ನವರು ಹಾಗಲ್ಲ ಎಂಬ ಭ್ರಮಾ ಲೋಕದಲ್ಲಿ ತೇಲುತ್ತಿದ್ದವರಿಗೆ ಅಚಾನಕ್ ಸತ್ಯದ ಅರಿವಾದಾಗ ಜೀವನ ದಿಶಾಹೀನವೆನಿಸುತ್ತದೆ. ಇದೀಗ ಯವ್ವನಿಗ ದೇಶವೆನಿಸಿದ (ಅತಿ ಹೆಚ್ಚು ಯುವಕರ ದೇಶ) ನಮ್ಮ ದೇಶದಲ್ಲಿ ಮುಂದಿನ ಎರಡು ಮೂರು ದಶಕಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚಾದಂತೆ ಈ ಪರಿಸ್ಥಿತಿ ಇನ್ನಷ್ಟು ಉಲ್ಭಣಿಸಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಮತ್ತು ಅಟಲ್ ಪೆನ್ಷನ್ ಯೋಜನೆಗಳು ಶ್ಲಾಘನೀಯ. ವೃದ್ದಾಪ್ಯದಲ್ಲಿ ಆರ್ಥಿಕವಾಗಿ ಸುಧೃಡ ಮತ್ತು ಸ್ವಾವಲಂಬಿಯಾಗುವ ಅವಶ್ಯಕತೆಯಿದೆ.

ಬೂಟಾನ್ ದಂತಹ ಚಿಕ್ಕ ವಿಕಾಸ ಶೀಲ ರಾಷ್ಟ್ರ GROSS NATIONAL HAPPINESS ಮೌಲ್ಯಾಂಕನದಲ್ಲಿ ವಿಶ್ವದ ಆರ್ಥಿಕ ಸಂಪನ್ನ ರಾಷ್ಟ್ರಗಳನ್ನು ಹಿಂದಿಕ್ಕಿದೆ. ಹಲವಾರು ಸೂಪರಸ್ಪೆಶಾಲಿಟಿ ಆಸತ್ರೆಗಳನ್ನು ಸ್ಥಾಪಿಸಿ ವೈದ್ಯಕೀಯ ರಂಗದಲ್ಲಿ ಸಾಕಷ್ಟು ಹೆಸರು ಮಾಡಿ ಅಪರಿಮಿತ ಹಣಕಾಸಿನ ಒಡೆಯನಾಗಿದ್ದ ವ್ಯಕ್ತಿಯೋರ್ವರು ಇತ್ತೀಚೆಗೆ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ವಿರಕ್ತರಾದ ಘಟನೆಯಿಂದ ತಿಳಿಯಬೇಕಾದ್ದೇನೆಂದರೆ ಇನ್ನಷ್ಟು, ಮತ್ತಷ್ಟು ಎಂಬ ಆಸ್ತಿ-ಐಷ್ವರ್ಯದ ಹಪಹಪಿ ನಮಗೆ ಶಾಂತಿ-ಸಮಾಧಾನ ನೀಡದು. ಹಿರಿಯರನ್ನು , ಕೌಟುಂಬಿಕರನ್ನು, ಸಮಾಜವನ್ನು ಪ್ರೀತಿಸುವ ಹೃದಯ ವೈಶಾಲ್ಯತೆ ಮಾತ್ರ ನಮ್ಮ ಬದುಕನ್ನು ಸುಖಮಯವಾಗಿಸುವುದು. ಕಲ್ಲರಳಿ ಹೂವಾಗಿ ಎಲ್ಲರಿಗೂ ಬೇಕಾಗಿ ಬದುಕುವ ಮಾರ್ಗದಲ್ಲಿ ಜೀವನದ ಸಾರ್ಥಕತೆಯಿದೆ.

 -ಬೈಂದೂರು ಚಂದ್ರಶೇಖರ ನಾವಡ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)