ಕಂಡ್ಲೂರಿನಲ್ಲಿ ಪೊಲೀಸ್ ಠಾಣೆ ಸ್ಥಾಪಿಸಲು ಚಿಂತನೆ: ಐಜಿಪಿ ಅಮೃತ್‌ಪಾಲ್

0
373

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ: ಕುಂದಾಪುರಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯೊಂದು ಮಂಜೂರಾಗಲಿದ್ದು, ಅದನ್ನು ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕಂಡ್ಲೂರಿನಲ್ಲಿ ಆದ್ಯತೆಯ ಮೇರೆಗೆ ಸ್ಥಾಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು ಎಂದು ಮಂಗಳೂರು ಪಶ್ಚಿಮ ವಲಯದ ಐಜಿಪಿ ಅಮೃತ್ ಪಾಲ್ ತಿಳಿಸಿದ್ದಾರೆ.

18-10-2015-1

ಕುಂದಾಪುರ ಪೊಲೀಸ್ ಠಾಣೆಗೆ ಶನಿವಾರ ಭೇಟಿ ನೀಡಿದ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಕುಂದಾಪುರ ತಾಲೂಕಿನ ಹೃದಯ ಭಾಗದಲ್ಲೇ ಆರು ವರ್ಷಗಳ ಹಿಂದೆ  ನಡೆದ ಉದ್ಯಮಿ ಸುಬ್ರಾಯ ಹೊನ್ನಾವರ್ಕರ್ ಶೂಟೌಟ್ ಪ್ರಕರಣ, ಅಲ್ಬಾಡಿಯಲ್ಲಿ ನಡೆದ ಉದಯ ಶೆಟ್ಟಿ ಕೊಲೆ, ಹಂಗ್ಳೂರು ಕುಸುಮಾ ಕೊಲೆ ಸೇರಿದಂತೆ 2005ರ ನಂತರ ಆರೋಪಿಗಳನ್ನು ಪತ್ತೆ ಹಚ್ಚದ ಕೊಲೆ ಪ್ರಕರಣಗಳ ಮರುತನಿಖೆ ಮಾಡಲಾಗುವುದು ಎಂದರು.

ಶಿರೂರು ರತ್ನಾ ಕೊಠಾರಿ ಕೊಲೆಯ ಕುರಿತು ಮಹತ್ವದ ಸುಳಿವುಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಇನ್ನೂ ಕೂಡ ಮುಕ್ತಾಯಗೊಳಿಸದೆ ತನಿಖೆಯ ಹಂತದಲ್ಲಿ ಇರಿಸಿದೆ ಎಂದು ಐಜಿಪಿ ಹೇಳಿದರು. ಕುಂದಾಪುರ ಮಹಿಳಾ ಪೊಲೀಸ್ ಠಾಣೆಯನ್ನು ಉಡುಪಿಗೆ ಸ್ಥಳಾಂತರಿಸುವ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐಜಿಪಿ, ಇದು ಸರಕಾರಿ ಆದೇಶವಾಗಿರುವುದರಿಂದ ನಮಗೆ ಹಸ್ತಕ್ಷೇಪ ಮಾಡಲು ಆಗುವುದಿಲ್ಲ ಎಂದರು.

ಪೊಲೀಸರಿಗೆ ‘ಆರೋಗ್ಯ ಭಾಗ್ಯ’ ಯೋಜನೆ ಕುಂದಾಪುರ ತಾಲೂಕಿನ ಪೊಲೀಸರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಲಭ್ಯವಾಗದ ಕುರಿತು ಐಜಿಪಿ ಮುಂದಿನ ದಿನಗಳಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಈ ಯೋಜನೆ ಪೊಲೀಸರಿಗೆ ಮತ್ತು ಅವರ ಕುಟುಂಬಕ್ಕೆ ದೊರಕುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್, ಕುಂದಾಪುರ ಡಿವೈ‌ಎಸ್ಪಿಮಂಜುನಾಥ್ ಶೆಟ್ಟಿ, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ , ಮಹಿಳಾ ಠಾಣೆ ಎಸ್ಸೈ ಸುಜಾತಾ, ಟ್ರಾಫಿಕ್ ಠಾಣೆಯ ಉಪನಿರೀಕ್ಷಕರಾದ ಜಯ ಹಾಗೂ ದೇವೇಂದ್ರ, ಶಂಕರನಾರಾಯಣ ಎಸ್ಸೈ ದೇಜಪ್ಪ, ಅಮಾಸೆಬೈಲು ಎಸ್ಸೈ ಸುನೀಲ್,  ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್ ಮೊದಲಾದವರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)