ಬೈಂದೂರು :ಎಲ್ಲೆಡೆ ಗ್ರಾಮೀಣ ಆಚರಣೆ “ಹೊಸ್ತು” ಸಂಭ್ರಮ

1
1881

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

hosthu 3

ಬೈಂದೂರು,ಅ,14 : ಕುಂದಾಪುರ ತಾಲೂಕಿನಾದ್ಯಂತ ಎಲ್ಲೆಡೆ ಬುಧವಾರ ಗ್ರಾಮೀಣ ಆಚರಣೆಯಾದ “ಹೊಸ್ತು” ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಮಳೆಗಾಲ ಮುಗಿದು ಮಾಘ ಮಾಸದ ಸಂಕ್ರಮಣ ಕಾಲದಲ್ಲಿ ಪ್ರಕೃತಿಗೆಲ್ಲಾ ಹೊಸತನ ಸಂಭ್ರಮ. ಮೈತುಂಬಿ ಹಸಿರುಟ್ಟು ನಿಂತ ನಿಸರ್ಗದ ಸೊಬಗು ಕಣ್ಮನ ಸೂರೆಗೊಳ್ಳುತ್ತದೆ. ಚೌತಿ ಆಚರಣೆಯ ಜೊತೆ ಜೊತೆಗೆ ಗ್ರಾಮೀಣ ಭಾಗದಲ್ಲಿ ಆಚರಿಸಲ್ಪಡುವ ಹಬ್ಬ “ಹೊಸ್ತು”.

ಹೊಸ್ತು ಎಂಬ ಹೆಸರೇ ಹೇಳುವಂತೆ ಹೊಸತನದ ಸ್ವಾಗತ ಕಳೆದ ನಾಲ್ಕು ತಿಂಗಳಿನಿಂದ ಕೃಷಿ ಕೈಕಂರ್ಯದಲ್ಲಿ ತೊಡಗಿ ವಿರಾಮದಲ್ಲಿದ್ದ ರೈತರಿಗೆ ಹೊಸತನದ ಚೇತನವನ್ನಿಕ್ಕುತ್ತಾರೆ. ಹೊಲಗದ್ದೆಗಳಲ್ಲಿ ಉಳುಮೆ ಮಾಡಿದ ಭತ್ತದ ಪೈರುಗಳು ತೆನೆಬಿಟ್ಟು ಸಂಭ್ರಮವನ್ನು ಭಕ್ತಿ ಭಾವದಿಂದ ಬರಮಾಡಿಕೊಳ್ಳುತ್ತದೆ. ಹೀಗಾಗಿ ಮನೆ ಮಂದಿಯೆಲ್ಲಾ ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ.

hosthu 4

ತಮ್ಮ ಮನೆ ಸೇರಿದಂತೆ ಅಂಗಳದ ಪರಿಸರವನ್ನು ಸ್ವಚ್ಛಗೊಳಿಸಿ ಹೊಸ್ತು (ಕದಿರು ಕಟ್ಟುವ ಹಬ್ಬಕ್ಕೆ) ತಯಾರಿ ನಡೆಸುತ್ತಾರೆ. ಹೊಸ್ತು ಕದಿರು ಕಟ್ಟುವ ಹಬ್ಬದ ಬೆಳಿಗ್ಗೆನ ಜಾವ ಹತ್ತಿರದ ಗದ್ದೆಯಲ್ಲಿ ಬೆಳೆದ ಭತ್ತದ ತೆನೆ (ಕದಿರು)ಗಳನ್ನು ಹೊಸ್ತು ಹಬ್ಬದ ದಿನ ಮುಂಜಾನೆ ಹಿರಿಯರು ಕೊಯ್ದು ತರುತ್ತಾರೆ. ಬಳಿಕ ಮನೆಯ ಹಿರಿಯರು, ಮಕ್ಕಳು ಶುಚಿಯಾಗಿ ಮನೆಯ ಸಮೀಪದಲ್ಲಿ ಭತ್ತದ ತೆನೆ(ಕದಿರು) ತಂದಿಟ್ಟ ಸ್ಥಳಕ್ಕೆ ಪೂಜಾ ಸಾಮಗ್ರಿಗಳೊಂದಿಗೆ ಹೋಗುತ್ತಾರೆ. ತೆನೆ (ಕದಿರು)ಗಳಿಗೆ ಗಂಧ ಹಚ್ಚಿ ಸಿಂಗಾರ ಹೂವು ಇತರ ಜಾತಿಯ ಹೂವುಗಳಿಂದ ಶಂಗರಿಸಿ, ಮುಳ್ಳು ಸೌತೆ, ಬಾಳೆ ಹಣ್ಣು, ಅರ್ಪಿಸುತ್ತಾರೆ. ಕದಿರುಗಳನ್ನು ಹೊರುವವರು ಹೊಸ ಬಿಳಿ ಬಟ್ಟೆ ರುಮಾಲು ಸುತ್ತಿ, ಪೂಜಿಸಿದ ಭತ್ತದ ತೆನೆಯ ಕದಿರುಗಳನ್ನು ಕೊಯ್ದು, ಬಾಳೆ ಎಲೆ ಮೇಲಿಟ್ಟು ಹರಿವಾಣಕ್ಕೆ ಹಾಕಿ ಕದಿರುಗಳನ್ನು ತಲೆ ಮೇಲೆ ಹೊತ್ತುಕೊಂಡು ಮಕ್ಕಳು ಜಾಗಟೆ ಹೊಡೆಯುತ್ತಾ ಶಬ್ದದೊಂದಿಗೆ ಮನೆಯಂಗಳಕ್ಕ್ಕೆ ಬರುತ್ತಿರುವಾಗ ಮನೆಯೊಡತಿ ಕದಿರು ಹೊತ್ತು ತಂದವರ ಕಾಲಿಗೆ ನೀರೆರೆದು ನಮಸ್ಕರಿಸಿ ಬರ ಮಾಡಿಕೊಳ್ಳುತ್ತಾರೆ.

hosthu 1

hosthu 2

ಈ ಆಧುನಿಕ ದಿನಗಳಲ್ಲಿಯೂ ಗ್ರಾಮೀಣ ಜನರಲ್ಲಿ ಶದ್ಧೆ ಭಕ್ತಿ, ಉತ್ಸಾಹದಿಂದ ಕೃಷಿ ಬದುಕಿನೊಂದಿಗೆ ಹೊಸ್ತು ಆಚರಿಸಲ್ಪಡುತಿದ್ದರೂ ಹೊಸ್ತು ಹಬ್ಬ ಆಧುನಿಕ ಜನ ಜೀವನದಲ್ಲಿ ಬದಲಾವಣೆಯನ್ನು ಕಂಡುಕೊಳ್ಳುತ್ತಿದೆ. ಕೆಲವು ಭಾಗಗಳಲ್ಲಿ ಮನೆ ಅಂಗಳದಲ್ಲಿರುವ ತುಳಸಿಕಟ್ಟೆ ಪೂಜೆ, ಮನೆಯೊಳಗಡೆ ಆಯ್ದ ಕೋಣೆಯಲ್ಲಿಟ್ಟು ಪೂಜಿಸಿ, ಹಲಸಿನ ಎಲೆ,ಮಾವಿನ ಎಲೆ, ಬಿದಿರಿನ ಎಲೆಯೊಂದಿಗೆ ಕದಿರನ್ನು ಕವಾಲು ನಾರಿನಿಂದ ಬಿಗಿದ ಕದಿರುಗಳನ್ನು ಮೇಟಿ ಕಂಬಕ್ಕೆ ಕಟ್ಟಿದ ನಂತರ ತುಳಸಿಕಟ್ಟೆ, ಮನೆ ಮುಂಭಾಗದ ಬಾಗಿಲು, ಬಾವಿ, ಹಾರೆ ಪಿಕ್ಕಾಸು, ವಾಹನ, ಯಂತ್ರಗಳಿಗೆ, ಅನ್ನದ ಪಾತ್ರೆ, ಕದಿರು ಕಟ್ಟುವ ಹಬ್ಬದ ಸಂತಸದ ಕ್ಷಣಗಳು ಕೃಷಿ ಜೀವನದಲ್ಲಿ ಹೊಸತನದೊಂದಿಗೆ ಧಾರ್ಮಿಕ ಆಚರಣೆಗೆ ಸಾಕ್ಷಿಯಾಗಿದೆ. ಆಧುನೀಕತೆಯ ಅಭಿವೃದ್ಧಿಯ ನಡುವೆ ಗ್ರಾಮೀಣ ಸಿರಿವಂತಿಕೆ ಸಾರುವ ಇಂತಹ ಹಬ್ಬಗಳ ಮೂಲಕ ಕೌಟುಂಬಿಕ ಕೂಡುವಿಕೆ, ಗ್ರಾಮೀಣ ಸಂಸ್ಕ್ರತಿ ಸದಾ ಹಸಿರಾಗಿರುತ್ತದೆ.

ಹೊಸತು ಊಟ: ಹೊಸ್ತು ಹಬ್ಬದಂದು ಅನ್ನದ ಪಾತ್ರೆಯಲ್ಲಿ ಬೇಯುತ್ತಿರುವ ಹಳೇ ಅಕ್ಕಿಯೊಂದಿಗೆ ಹೊಸ ಭತ್ತದ ಕಾಳುಗಳನ್ನು ಸುಲಿದು ಹಾಕುವುದು ಹಿಂದಿನಿಂದಲೂ ಇದೆ. ನಾನಾ ತರಕಾರಿಗಳ ಹಲವು ಬಗೆಯ ಸಾಂಬಾರು ಪಲ್ಯ ಹಾಗೂ ಪಾಯಸ, ಸಿಹಿ ಊಟ ಸಿಹೊಸ್ತು ಹಬ್ಬದ ಸ್ಪೇಶಲ್ ಆಗಿರುತ್ತೆ. ಊಟ ಮಾಡುವ ಮೊದಲು ಎಲ್ಲರ ಬಳಿ `ಹೊಸ್ತು ಉಂತೆ’ (ಹೊಸ್ತು ಊಟ ಮಾಡುವೆ) ಎನ್ನುವ ಸಂಪ್ರದಾಯವಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)