ಸರಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಸಾಧ್ಯವಿಲ್ಲವೇ…?

0
1184

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 ch.navuda..

–ಬೈಂದೂರು ಚಂದ್ರಶೇಖರ ನಾವಡ

ಕಳೆದ ತಿಂಗಳು ಅಲಹಾಬಾದ್ ಉಚ್ಚ ನ್ಯಾಯಾಲಯ ಮುಂದಿನ ಶೈಕ್ಷಣಿಕ ವರ್ಷದಿಂದ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ನ್ಯಾಯಾಲಯಗಳ ನೌಕರರು ಸಹಿತ ಸರಕಾರದಿಂದ ಸಂಬಳ ಪಡೆಯುವ ಪ್ರತಿಯೊಬ್ಬರೂ ಉತ್ತರ ಪ್ರದೇಶ ಬೋರ್ಡ್ ನಡೆಸುವ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವಂತೆ ಆದೇಶ ನೀಡಿತು. ಆದೇಶವನ್ನು ಪಾಲಿಸದವರ ವಿರುದ್ಧ ನ್ಯಾಯಾಧೀಶ ಸುದೀಪ್ ಅಗರ್ವಾಲ್ ಅವರು ಆರ್ಥಿಕ ಜುರ್ಮಾನೆ, ಇನ್ ಕ್ರಿಮೆಂಟ್ ಕಡಿತ ಮುಂತಾದ ಕಠಿಣ ದಂಡಾತ್ಮಕ ಕ್ರಮ ಕೈಗೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದರು. ರಾಜ್ಯಸರಕಾರ ಶಿಕ್ಷಕರ ನೇಮಕಾತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅತ್ಯಂತ ಬೇಜವಾಬ್ದಾರಿಯಿಂದ ನೇಮಕಾತಿ ನಡೆಸಿದ್ದರ ಪರಿಣಾಮ ಸಾವಿರಾರು ಮೊಕದ್ದೆಮೆಗಳು ನ್ಯಾಯಾಲಯಕ್ಕೆ ಬರುತ್ತಿರುವ ಮತ್ತು ಸರಕಾರಿ ಶಾಲೆಗಳ ದಯನೀಯ ಸ್ಥಿತಿಯ ಹಿನ್ನೆಲೆಯಲ್ಲಿ ಅವರು ಈ ಆದೇಶ ನೀಡಿದ್ದರು.

ದೇಶದಲ್ಲಿನ ಸರಕಾರೀ ಶಾಲೆಗಳ ಸ್ಥಿತಿ ಗತಿ ಎಷ್ಟರ ಮಟ್ಟಿಗೆ ದಯನೀಯ ಸ್ಥಿತಿಯಲ್ಲಿದೆ ಎನ್ನುವುದು ಇದರಿಂದ ತಿಳಿಯುತ್ತದೆ. ಹರ್ಯಾಣಾ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ಸರಕಾರಗಳು ತನ್ನ ನೌಕರರಿಗೆ ತನ್ನದೇ ಆದ ವೇತನ ಆಯೋಗ ನೇಮಿಸುವುದಿಲ್ಲ. ಕೇಂದ್ರ ಸರಕಾರ ಪ್ರತಿ ಹತ್ತು ವರ್ಷಕ್ಕೊಮ್ಮೆ ತನ್ನ ನೌಕರರ ವೇತನ ಆಯೋಗದ ಶಿಫಾರಿಸಿನಂತೆ ವೇತನ ಪರಿಕಷ್ಕರಣೆ ಮಾಡಿದಾಗ ಅದಕ್ಕೆ ತತ್ಸಮಾನ ವೇತನ ಈ ರಾಜ್ಯಗಳೂ ತಮ್ಮ ನೌಕರರಿಗೆ ನೀಡುತ್ತದೆ. ಅಂತೆಯೇ ಅಲ್ಲಿಯ ಶಿಕ್ಷಕರೂ ಸಹಾ ಕೇಂದ್ರೀಯ ವಿದ್ಯಾಯಲಯಗಳ ಶಿಕ್ಷಕರ ಸಮಾನ ವೇತನ ಪಡೆಯುತ್ತಾರೆ. ಆದರೆ ಈ ಶಿಕ್ಷಕರು ಅಷ್ಟೇ ದಕ್ಷತೆಯಿಂದ ಕೆಲಸ ಮಾಡುತ್ತಾರೆಯೇ.? ತಮ್ಮ ತಮ್ಮ ಹಳ್ಳಿಗಳಲ್ಲೇ ಕೆಲಸ ಮಾಡುವ ಅಲ್ಲಿಯ ಶಿಕ್ಷಕರನೇಕರು ಬೆಳಿಗ್ಗೆ ಬಂದು ಮೇಜಿನ ಮೇಲೆ ತಮ್ಮ ಮುಂಡಾಸಿಟ್ಟು ( ಪಗಡಿ ) ತರಗತಿಯನ್ನು ಹಿರಿಯ ಹುಡುಗನೋರ್ವನ ಸುಪುರ್ದಿಗೊಪ್ಪಿಸಿ ಹತ್ತಿರದಲ್ಲೇ ಇರುವ ತಮ್ಮ ಗದ್ದೆಗಳಲ್ಲಿ ಕೆಲಸ ಮಾಡಲು ತೆರಳುತ್ತಾರೆ ! ಇಂತಹ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಅಪೇಕ್ಷಿಸಬಹುದೇ ?

ರಾಜಸ್ಥಾನದ ಮುಖ್ಯಮಂತ್ರಿ ವಸುಂಧರೇ ರಾಜೇ ಅವರು ಇತ್ತೀಚೆಗೆ ಸರಕಾರೀ ಶಾಲೆಯೊಂದಕ್ಕೆ ಅಚಾನಕ್ ಭೇಟಿ ನೀಡಿದಾಗ ಅಲ್ಲಿದ್ದ ಏಕಮಾತ್ರ ಶಿಕ್ಷಕರೊಬ್ಬರು ನಾಲ್ಕನೇಯ ತರಗತಿಯ ಮಕ್ಕಳಿಗೆ ಓದಿಸುವಲ್ಲಿ ವಿಫಲರಾದರು. ಸರಕಾರದಿಂದ ಮಾಸಿಕ ನಲವತ್ತು ಸಾವಿರ ವೇತನ ಪಡೆಯುವ ಶಿಕ್ಷಕರ ಅದಕ್ಷತೆಯನ್ನು ಕಂಡು ಸಿಟ್ಟಾದ ಮುಖ್ಯಮಂತ್ರಿ ಆ ಶಿಕ್ಷಕರನ್ನು ತತ್ ಕ್ಷಣ ಸಸ್ಪೆಂಡ್ ಮಾಡಲು ಆದೇಶಿಸಿದರು. ಬಿಹಾರದಲ್ಲಿ ಐದನೇ ತರಗತಿಯ ಮಟ್ಟದ ಗಣಿತ, ವಿಜ್ಞಾನ, ಹಿಂದಿ ವಿಷಯಗಳನ್ನೊಳಗೊಂಡ ಪರೀಕ್ಷೆಯಲ್ಲಿ 8% ಶಿಕ್ಷಕರು ಉತ್ತಿರ್ಣರಾಗಲಿಲ್ಲ ! ಶಿಕ್ಷಕರ ಕಳಪೆ ಗುಣಮಟ್ಟದ ಕುರಿತು ವ್ಯಾಪಕ ದೂರಿನ ನಂತರ ಗುಣಮಟ್ಟ ಸುಧಾರಿಸುವ ಉದ್ದೇಶ್ಯದಿಂದ ಇದೀಗ ಬಿಹಾರದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಈ ರೀತಿಯ ಪರೀಕ್ಷೆ ನಡೆಸಲಾಗುತ್ತಿದೆ.

ಹಿಂದೊಮ್ಮೆ ಕ್ರಾಂತಿಯ ಕಿಡಿ ಹೊತ್ತಿಸಿದ, ಸಾಹಿತ್ಯದ ಅಮೃತ ಧಾರೆ ಹರಿಸಿದ, ಶಾಸನ ವ್ಯವಸ್ಥೆಯ ಉನ್ನತ ಹಂತಗಳನ್ನು ತಲುಪಿ ತಮ್ಮ‌ಅಳಿಸಲಾಗದ ಚಾಪು ಮೂಡಿಸಿದ ಮಹಾನ್ ಶಿಕ್ಷಕರನ್ನು ಹೊಂದಿದ ನಾಡು ನಮ್ಮದು. ಗುರು ಪರಂಪರೆಯ ಬೀಡಿನಲ್ಲಿ ಇದೀಗ ಶಿಕ್ಷಣ ವ್ಯಾಪಾರೀಕರಣದ ಸೊತ್ತಾಗುತ್ತಿದ್ದರೆ, ಶಿಕ್ಷಕ ಹುದ್ದೆ ಆರ್ಥಿಕ ಉದಾರೀಕರಣದ ಫಲವಾಗಿ ಲಭಿಸಿದ ಸಂಪನ್ನತೆಯ ಮೆರುಗಿನಲ್ಲಿ ಅನ್ಯ ಉದ್ಯೋಗಾವಕಾಶಗಳ ಮುಂದೆ ಮಂಕಾಗುತ್ತಿದೆ. ಸಮಾಜದಲ್ಲಿ ಆಸ್ತಿ, ಸಂಪತ್ತು, ಐಶ್ವರ್ಯಕ್ಕೆ ಆದ್ಯತೆ ಹೆಚ್ಚುತ್ತಿದ್ದಂತೆ ಶಿಕ್ಷಕ ವೃತ್ತಿ ತನ್ನ ಘನತೆ, ಗೌರವ ಕಳೆದುಕೊಳ್ಳುತ್ತಿರುವುದು ವಿಷಾದಜನಕ.

ಭವಿಷ್ಯದ ಮಾನವ ಸಂಪನ್ಮೂಲ ಅಭಿವೃದ್ಧಿಯ ಹೊಣೆ ಹೊತ್ತ ನಮ್ಮ ಶಿಕ್ಷಣ ಸಂಸ್ಥಾನಗಳು ದಕ್ಷ ಮತ್ತು ಗುಣ ಮಟ್ಟದ ಶಿಕ್ಷಕರ ಕೊರತೆಯಿಂದ ಸೊರಗುತ್ತಿದೆ. ಶಿಕ್ಷಕರ ನೇಮಕಾತಿಯಲ್ಲಿ ಜಾತಿ, ಧರ್ಮ, ಹಣ ತಮ್ಮ ಮಿತಿ ಮೀರಿದ ಅಧಿಪತ್ಯ ಸ್ಥಾಪಿಸಿಕೊಂಡು ಬಿಟ್ಟಿದೆ. ಪ್ರತಿಭೆಗೆ ಪ್ರಾತಿನಿಧ್ಯ ನೀಡುವ ಬದಲು ನೌಕರಿ ನೀಡುವ ಕೇಂದ್ರಗಳಾಗಿ ಬಿಟ್ಟಿವೆ. ಶಿಕ್ಷಕರ ಮೇಲೆ ಅನವಶ್ಯಕ ಶಿಕ್ಷಣೇತರ ಕೆಲಸಗಳ ಹೊರೆಯನ್ನಿತ್ತು ಅವರ ಪ್ರಾಥಮಿಕ ಕೆಲಸವನ್ನೇ ಮರೆತು ಬಿಡುವಂತೆ ಮಾಡಿದೆ. ನಮ್ಮ ರಾಜ್ಯದಲ್ಲಿ ಶಿಕ್ಷಕರ ಮತ್ತು ಶಾಲೆಗಳ ಸ್ಥಿತಿ ಅಷ್ಟೊಂದು ಶೋಚನೀಯವಾಗಿಲ್ಲವಾದರೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮುಂದೊಂದು ದಿನ ಅದೇ ಉತ್ತರ ಭಾರತದಲ್ಲಿನ ಪರಿಸ್ಥಿತಿಗೆ ಹೋದರೂ ಆಶ್ಚರ್ಯವಿಲ್ಲ. ಹಿಂದೊಮ್ಮೆ ಗುಣಮಟ್ಟಕ್ಕೆ ಹೆಸರಾಗಿದ್ದ ನಮ್ಮ ಸರಕಾರೀ ಶಾಲೆಗಳು ವಿಧ್ಯಾರ್ಥಿಗಳಿಲ್ಲದೇ ಒಂದೊಂದಾಗಿ ಮುಚ್ಚುತ್ತಿದೆ.

ಸರಕಾರಿ ಶಾಲೆಯೆಂದರೆ ಕಳಪೆ ಗುಣಮಟ್ಟದ ಶಿಕ್ಷಣ ಕೊಡುವ ಶಾಲೆಗಳೆಂಬ ನಕಾರಾತ್ಮಕ ಭಾವನೆ ನಮ್ಮಲ್ಲಿ ಆಳವಾಗಿ ಮತ್ತು ವ್ಯಾಪಕವಾಗಿ ಬೇರೂರಿದೆ. ಅಲ್ಲಿಯ ಶೈಕ್ಷಣಿಕ ಮತ್ತು ಶೈಕ್ಷಣೇತರ ಚಟುವಟಿಕೆಗಳು ಓಬೀರಾಯನ ಕಾಲದವು ಎನ್ನುವ ಕಾರಣದಿಂದ ಅನೇಕ ವಿದ್ಯಾವಂತ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲು ಹಿಂಜರಿಯುತ್ತಾರೆ. ಸರಕಾರದಿಂದ ಸಂಬಳ ಪಡೆಯುವ ಶಿಕ್ಷಕರು ಕೂಡಾ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಇಷ್ಟ ಪಡುವುದಿಲ್ಲ. ಕೇಂದ್ರ ಸರಕಾರದಿಂದ ನಡೆಸಲ್ಪಡುತ್ತಿರುವ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯಗಳು ಉತ್ತಮ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು, ಉತ್ತಮ ಶೈಕ್ಷಣಿಕ ಗುಣಮಟ್ಟಕ್ಕೆ ಹೆಸರಾಗಿರುವಾಗ ರಾಜ್ಯ ಸರಕಾರದ ಶಿಕ್ಷಣ ಸಂಸ್ಥೆಗಳ ಕುರಿತು ಜನರ ಚಿಂತನೆ ನಕಾರಾತ್ಮಕವಾಗಿದೆಯೇಕೆ ?

ಕಳೆದೆರಡು ದಶಕಗಳಲ್ಲಿ ರಾಜ್ಯದಲ್ಲಿ ಖಾಸಗಿ ಶಾಲೆಗಳು ಕೇವಲ ಪಟ್ಟಣ ಪ್ರದೇಶದಲ್ಲಷ್ಟೇ ಅಲ್ಲ, ಗ್ರಾಮೀಣ ಪ್ರದೇಶದಲ್ಲೂ ತಮ್ಮ ಅಧಿಪತ್ಯ ಸ್ಥಾಪಿಸಿವೆ. ಖಾಸಗಿ ಶಾಲೆಗಳು ಸರಕಾರಿ ಶಾಲೆಗಳೆದುರು ತಮ್ಮ ಪ್ರಾಬಲ್ಯ ಮೆರೆದಿವೆ. ಪೋಷಕರ ಖಾಸಗಿ ಶಾಲೆಗಳತ್ತ ಒಲವು ಮತ್ತು ಆಂಗ್ಲ ಮಾಧ್ಯಮದ ಗೀಳು ಸರಕಾರಿ ಶಾಲೆಗಳನ್ನು ಬಡವಾಗಿಸಿವೆ. ಎಗ್ಗಿಲ್ಲದೇ ಎಲ್ಲೆಂದರಲ್ಲಿ, ಮಕ್ಕಳ ಕನಿಷ್ಠ ಆಟೋಟಗಳಿಗೆ ಸಹಾ ಸರಿಯಾದ ಸ್ಥಳಾವಕಾಶವಿಲ್ಲದೇ ತಲೆ ಎತ್ತುತ್ತಿರುವ ಈ ಖಾಸಗಿ ಶಾಲೆಗಳೆಲ್ಲವೂ ಸರಕಾರಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನೀಡುತ್ತಿವೆಯೇ? ಈ ಭ್ರಮೆಯನ್ನು ನಿವಾರಿಸುವಲ್ಲಿ ಕೆಲವು ಸರಕಾರಿ ಶಾಲೆಗಳ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಪ್ರಯತ್ನಿಸುತ್ತಿರುವುದು ಸಂತಸದ ವಿಷಯ. ಶಾಲೆಗಳನ್ನು ಸಂಘ-ಸಂಸ್ಥೆಗಳು ದತ್ತು ತೆಗೆದುಕೊಳ್ಳುವ ಕೆಲವು ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪ್ರಾಮಾಣಿಕ ಪ್ರಯತ್ನಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕಿದೆ.

ಭವ್ಯವಾದ ಮತ್ತು ಆಕರ್ಷಕ ಕಟ್ಟಡ, ಆಧುನಿಕತೆಯ ಲೇಪನೆಯಿಂದ ಕಂಗೊಳಿಸುತ್ತಿರುವ ಖಾಸಗಿ ಆಂಗ್ಲ ಮಾಧ್ಯಮದ ಶಾಲೆಗಳ ಹೆಚ್ಚಿನ ಶಿಕ್ಷಕರು ಕಡಿಮೆ ವೇತನದಲ್ಲಿ ಅಸ್ಥಾಯಿಯಾಗಿ ದುಡಿಯುತ್ತಿದ್ದಾರೆ ಎನ್ನುವುದು ವಾಸ್ತವಾಂಶ. ಮಕ್ಕಳೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧ ಹೊಂದಿರದ ಈ ಅನನುಭವಿ ಮತ್ತು ನೌಕರಿಯ ಭದ್ರತೆಯಿರದ ಹಂಗಾಮಿ ಶಿಕ್ಷಕರಿಂದ ಎಂತಹ ಶಿಕ್ಷಣ ನಿರೀಕ್ಷಿಸಲು ಸಾಧ್ಯ? ಸರಕಾರಿ ಶಾಲೆಯ ಸುದೀರ್ಘ ಸೇವೆ ಸಲ್ಲಿಸಿದ ಅನುಭವೀ ಶಿಕ್ಷಕರಿಗಿಂತ ಹೆಚ್ಚಿನ ಗುಣಮಟ್ಟದ ಶಿಕ್ಷಣ ಇವರಿಂದ ನಿರೀಕ್ಷಿಸಲು ಸಾಧ್ಯವೇ..? ಖಂಡಿತಾ ಸಾಧವಿಲ್ಲ.

ಪೋಷಕರ ಆಂಗ್ಲ ಮಾಧ್ಯಮದ ಆಕರ್ಷಣೆಯಿಂದ ಮಕ್ಕಳಿಗೆ ಸರಿಯಾದ ಮೂಲ ಸೌಕರ್ಯಗಳನ್ನು ನೀಡದ ಈ ಶಾಲೆಗಳೆಂಬ ಪಕ್ಕಾ ವ್ಯಾಪಾರಿ ಉದ್ದೇಶ್ಯದ ಅಂಗಡಿಗಳು ಗಲ್ಲಿಗೊಂದೆಂಬಂತೆ ಹುಟ್ಟಿಕೊಂಡಿವೆ. ಕೇವಲ ಪೋಷಕರ ಜೇಬು ಹಗುರಗೊಳಿಸುವ ಈ ಶಾಲೆಗಳು ಮಕ್ಕಳಿಗೆ ಅತ್ತ ಕನ್ನಡವೂ ಇಲ್ಲ, ಇತ್ತ ಇಂಗ್ಲೀಷ್ ಭಾಷಾ ಸಾಮರ್ಥ್ಯವೂ ಇಲ್ಲ ಎಂಬಂತೆ ಮಾಡುತ್ತಿವೆ. ಮಕ್ಕಳನ್ನು ಯಾವುದೇ ಒಂದು ಭಾಷೆಯಲ್ಲೂ ಹಿಡಿತ ಸಾಧಿಸಲಾಗದಂತಹ ಶೋಚನೀಯ ಸ್ಥಿತಿಗೆ ತಳ್ಳುತ್ತಿವೆ. ಕೇವಲ ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಆ ಮಕ್ಕಳು ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಗಣಿತ, ಸಾಮಾನ್ಯ ಜ್ಞಾನ, ಬುದ್ಧಿ ಕೌಶಲದ ಪರೀಕ್ಷೆಗಳಲ್ಲಿ ಸಫಲತೆ ಪಡೆಯಲು ಸಾಧ್ಯವೇ.? ಇಲ್ಲ ತಾನೇ..? ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ಸರಕಾರಿ ಶಾಲೆಯಲ್ಲಿ ಏಕೆ ಓದಬಾರದು.?

ದೇಶದಾದ್ಯಂತ ಸಶಸ್ತ್ರ ಬಲ, ತೈಲ ನಿಗಮ, ರೈಲ್ವೆ ಇನ್ನಿತರ ಕೇಂದ್ರ ಸರಕಾರಿ ನೌಕರರು ಹೆಚ್ಚಾಗಿ ಒಂದೆಡೆ ಇರುವ ಕಡೆ ಸ್ಥಾಪಿಸಲ್ಪಟ್ಟಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಹೆಚ್ಚಿನವು ಉತ್ತಮ ಶಿಕ್ಷಣಕ್ಕೆ ಹೆಸರಾಗಿವೆ. . ಬೆಂಗಳೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ಸಿಗುವುದೇ ಕಷ್ಟ ಎನ್ನಿಸುವ ಮಟ್ಟಿಗೆ ಆ ಶಾಲೆಗಳು ತಮ್ಮ ಗುಣಮಟ್ಟವನ್ನು ಕಾಯ್ದುಕೊಂಡಿವೆ. ನವೋದಯ ವಿದ್ಯಾಲಯಗಳು ಕೂಡಾ ಸರಕಾರಿ ವ್ಯವಸ್ಥೆಯ ಅಂಗವಾಗಿದ್ದರೂ ಕೂಡಾ ಉತ್ತಮ ಸಫಲತೆ ಕಂಡಿವೆ.

ಕೆಲವು ಸಮಯದ ಹಿಂದೆ ಶತಮಾನ ಪೂರೈಸಿದ ಗ್ರಾಮೀಣ ಸರಕಾರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಸಂಭ್ರಮದ ಶಾಲಾ ವಾರ್ಷಿಕೋತ್ಸವ ದಿನಾಚರಣೆಯಲ್ಲಿ ಭಾಗವಹಿಸುವ ಸದವಕಾಶ ದೊರಕಿತ್ತು. ಕವಿ ಪ್ರೊ|| ಕೆ ಎಸ್ ನಿಸಾರ್ ಅಹ್ಮದ್ ರವರ ನಿತ್ಯೋತ್ಸವ ಗೀತೆಗೆ ಹಳ್ಳಿಯ ಮಕ್ಕಳು ಹೆಜ್ಜೆ ಹಾಕುತ್ತಿದ್ದ ರೀತಿ ಹಾಗೂ ವಿವಿಧ ನೃತ್ಯ ಭಂಗಿಯಲ್ಲಿ ಕುಣಿಯುತ್ತಿದ್ದ ಪುಟಾಣಿ ಮಕ್ಕಳ ಪ್ರತಿಭೆ ಕಂಡು ಅಲ್ಲಿ ನೆರೆದಿದ್ದವರೆಲ್ಲರೂ ರೋಮಾಂಚಿತಗೊಂಡಿದ್ದರು ! ಅಷ್ಟೇಕೆ ಆ ರಸ್ತೆಯಲ್ಲಿ ಹೋಗುತ್ತಿದ್ದ ದಾರಿಹೋಕರಲ್ಲಿ ಕೆಲವರು ಅಲ್ಲಿ ಅದ್ಯಾವುದೋ ಸಿನಿಮೀ ತಾರೆಯರ ನೃತ್ಯ ನಡೆಯುತ್ತಿದೆಯೊ ಎಂಬಂತೆ ಕೊಂಚ ಹೊತ್ತು ನಿಂತು ಮುಂದೆ ಸಾಗುತ್ತಿದ್ದರೆ, ಇನ್ನು ಕೆಲವರು ಅಲ್ಲೇ ಕುಳಿತು ಆನಂದಿಸಿದರು.. ಅಷ್ಟರ ಮಟ್ಟಿಗೆ ಆ ಮಕ್ಕಳು ಎಲ್ಲಾ ದರ್ಶಕರನ್ನು ಮಂತ್ರಮುಗ್ದಗೊಳಿಸಿದ್ದರು! ಸರಕಾರೀ ಶಾಲೆಗಳಲ್ಲೂ ಯೋಗ್ಯ ಶಿಕ್ಷಕರ ಮಾರ್ಗದರ್ಶನ ಮತ್ತು ಮೂಲಭೂತ ಸೌಕರ್ಯಗಳು ಸಿಕ್ಕರೆ ಹಳ್ಳಿಯ ಮಕ್ಕಳೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಅದೊಂದು ಉದಾಹರಣೆಯಾಗಿ ಅಲ್ಲಿರುವವರಿಗೆ ಆ ಕ್ಷಣ ಕಂಡಿತ್ತು.

ಕೇವಲ ಆಂಗ್ಲ ಮಾಧ್ಯಮದಲ್ಲಿ ಅಥವಾ ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳು ಮಾತ್ರ ಯಶಸ್ಸು ಗಳಿಸುತ್ತಾರೆ ಎನ್ನುವ ಪೋಷಕರ ಮಾನಸಿಕತೆಯನ್ನು ಬದಲಿಸಬೇಕಾದರೆ ಅವರಿಗೆ ತಮ್ಮ ಸ್ಥಿತಿಗತಿ ಸುಧಾರಿಸಿಕೊಂಡ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸರಕಾರಿ ಶಾಲೆಗಳ ಪರ್ಯಾಯ ವ್ಯವಸ್ಥೆ ಇರಬೇಕು. ಪ್ರತಿಭೆಯ ವಿಕಸನಕ್ಕೆ ಆಂಗ್ಲ ಮಾಧ್ಯಮ ಮತ್ತು ಖಾಸಗಿ ಶಾಲೆಗಳ ಅಗತ್ಯವಿಲ್ಲ, ಸರಕಾರಿ ಶಾಲೆಗಳ ದಕ್ಷ ಶಿಕ್ಷಕರು ಸಹಾ ಈ ಕೆಲಸ ಮಾಡಬಲ್ಲರು ಎನ್ನುವುದು ಮನದಟ್ಟಾಗಬೇಕು. ಶಿಕ್ಷಕರು ಇದನ್ನೊಂದು ಸವಾಲಾಗಿ ಸ್ವೀಕರಿಸಲಿ ಮತ್ತು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಸರಕಾರ ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಅದು ವ್ಯರ್ಥವಾಗಬಾರದು. ಸರಕಾರಿ ಶಾಲೆಗಳು ಮೈಕೊಡವಿ ನಿಲ್ಲಲಿ.

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)