ಹಲವು ವರ್ಷಗಳಿಂದ ವಿಗ್ರಹ ರಚನೆಯಲ್ಲಿ ತೊಡಗಿಸಿಕೊಂಡ ನಮ್ಮೂರ ಹಿರಿಯ ಕಲಾವಿದ ವೆಂಕಟರಮಣ ಆಚಾರ್ಯ

1
2526

ಬೈಂದೂರು :ಹಲವು ವರ್ಷಗಳಿಂದ ಗಣಪತಿ ವಿಗ್ರಹ ರಚನೆಯಲ್ಲಿ ತೊಡಗಿಸಿಕೊಂಡಿರುವ ಸಾಧನೆ ಬೈಂದೂರು ಸಮೀಪದ ಬಂಕೇಶ್ವರ ವೆಂಕಟರಮಣ ಆಚಾರ್ಯರದ್ದು. ಬಂಕೇಶ್ವರದ ನಾಗಪ್ಪ ಆಚಾರ್ಯ ಹಾಗೂ ಸೀತಮ್ಮ ದಂಪತಿಗಳ ಪುತ್ರರಾದ ವೆಂಕಟರಮಣ ಆಚಾರ್ಯ ತಂದೆಯಿಂದ ಶಿಲ್ಪಕಲೆಯನ್ನ ದೀಕ್ಷೆ ಪಡೆದು ತನ್ನ 16ನೇ ವಯಸ್ಸಿನಲ್ಲಿ ಮಣ್ಣು ಮತ್ತು ಕೃಷ್ಣ ಶಿಲ್ಪದಿಂದ ಮೂರ್ತಿ ರಚನೆಯಲ್ಲಿ ತೊಡಗಿಸಿಕೊಂಡು ಪ್ರತಿವರ್ಷ ಗಣೇಶೋತ್ಸವಕ್ಕೆ ಗಣೇಶ ವಿಗ್ರಹ ಮತ್ತು ಶಾರದೋತ್ಸವಕ್ಕೆ ಶಾರದ ವಿಗ್ರಹ ಹಾಗೂ ದೇವಾಲಯಗಳಿಗೆ ಮೂರ್ತಿಯನ್ನು ಕಶ್ಯಪ ಶಿಲ್ಪಶಾಸ್ತ್ರ ಪ್ರಕಾರದಲ್ಲಿ ರಚಿಸಿ ಪರಂಪರಾಗತವಾಗಿ ಬಂದಿರುವ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.

venka 1

1934 ರಂದು ಜನಿಸಿದ ಆಚಾರ್ಯರು ಶಿರಾಲಿಯಿಂದ ನಾವುಂದದವರೆಗೆ ಬೈಂದೂರಿನಿಂದ ಶಿವಮೊಗ್ಗದ ವರೆಗೆ ಅವರು ಗಣೇಶ ವಿಗ್ರಹ ನೀಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರ ತಂದೆಯ ಕಾಲದಿಂದ ಪ್ರಾರಂಭವಾಗಿ ಇಂದಿನವರೆಗೂ ನೂರು ವರ್ಷಕ್ಕೂ ಅಧಿಕ ಕಾಲ ಬೈಂದೂರಿನ ಐತಿಹಾಸಿಕ ಪ್ರಸಿದ್ಧವಾದ ಸೇನೇಶ್ವರ ದೇವಸ್ಥಾನಕ್ಕೆ ಗಣೇಶ ಮೂರ್ತಿ ರಚಿಸಿಕೊಡುತ್ತಾ ಬಂದಿದ್ದಾರೆ.  ಪ್ರತಿವರ್ಷ ಪರಿಸರದ ನೂರಾರು ಸಂಘ ಸಂಸ್ಥೆಗಳಿಗೆ ವಿವಿಧ ಮೂರ್ತಿ ರಚಿಸಿಕೊಡುತ್ತಿದ್ದಾರೆ. ಕಶ್ಯಪ ಶಿಲ್ಪಶಾಸ್ತ್ರ ಅನುಸರಿಸಿ ,ಆಕರ್ಷಕ ಹಾಗೂ ವಿಶಿಷ್ಟತೆಯಿಂದ ರಚಿಸುವುದರಿಂದ ಇವರಿಗೆ ಉತ್ತಮ ಬೇಡಿಕೆಯಿದ್ದು, ಮನೆಯ ಒಳಾಂಗಣ ಸಂಪೂರ್ಣ ಮೂರ್ತಿಮಯವಾದಂತಿದೆ. ಕಟ್ಟಡಗಳ ಕುಸುರಿ ಕೆತ್ತನೆ, ವಿವಿಧ ಆಕಾರದ ದ್ವಾರಗಳ ನಿರ್ಮಾಣದಲ್ಲಿ ಇವರು ಸಿದ್ಧ ಹಸ್ತರು. ನೂರಾರು ಮೂರ್ತಿ ರಚಿಸಿದರೂ ಕೂಡಾ ವ್ಯಾವಹಾರಿಕ ದೃಷ್ಟಿಕೋನದಿಂದ ನೋಡದೆ ಸೇವೆ ಎಂದು ತಿಳಿದು ಕೊಟ್ಟಿದ್ದನ್ನು ಸ್ವೀಕರಿಸುವ ಇವರ ಹೃದಯ ಶ್ರೀಮಂತಿಕೆ ಶ್ಲಾಘನೀಯ.

venka 2

ಕುಂದದ ಉತ್ಸಾಹ : ದೀಪದ ಬುಡದಲ್ಲಿ ಕತ್ತಲಿರುವಂತೆ ಇವರು ನೀಡಿದ ನೂರಾರು ಮೂರ್ತಿಗಳು ದೇವರಾಗಿ ಪೂಜಿಸಲ್ಪಟ್ಟರೂ ಸಹ ದೇವರು ಇವರ ಸಾಧನೆ ಬಗೆಗೆ ಅನುಕಂಪ ತೋರಿದಂತಿಲ್ಲ. ಆಡಂಬರ ಬಯಸದ ಬಡತನದಲ್ಲೆ ತೃಪ್ತಿಪಡುವ ಆಚಾರ್ಯರು ನೋವನ್ನು ಹೃದಯದಲ್ಲೆ ನುಂಗಿ ಹಾಸ್ಯ ಪ್ರಜ್ಝೆ ಮೆರೆಯುವ ವ್ಯಕ್ತಿತ್ವ ಹೊಂದಿದ್ದಾರೆ.

venka 3

 ವೆಂಕಟರಮಣ ಆಚಾರ್ಯರು 83 ವರ್ಷಗಳಿಂದ ಮೂರ್ತಿ ರಚನೆಯಲ್ಲಿ ತೊಂಡಗಿಸಿಕೊಂಡಿದ್ದಾರೆ. ಇವರಿಗೆ ವಯಸ್ಸಾಗಿರುವುದರಿಂದ ಇವರ ಮಕ್ಕಳಾದ ನಾಗರಾಜ, ಗಣೇಶ ಹಾಗೂ ಗಂಗಾಧರ ಮೂರ್ತಿ ರಚನೆಯಲ್ಲಿ ಸಹಕರಿಸುತ್ತಾರೆ. ಮೂರ್ತಿಯನ್ನು ಪರಿಪೂರ್ಣಗೊಳಿಸುವುದರಿಂದಲೇ ಆತ್ಮತೃಪ್ತಿ ಹೊಂದಿರುವ ಇವರಿಗೆ ಈ ಪ್ರವೃತ್ತಿ ಬದುಕನ್ನು ನೀಡಿಲ್ಲ ಎಂಬೂದು ಕೂಡಾ ಸತ್ಯ. ಉತ್ತಮ ಯಕ್ಷಾಗಾನ ಕಲಾವಿದರೂ ಆಗಿರುವ ಆಚಾರ್ಯರು ಕಳವಾಡಿಯ ಹವ್ಯಾಸಿ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿದ್ದರು. ವೆಂಕಟರಮಣ ಆಚಾರ್ಯರ ಸಾಧನೆಗಳನ್ನು ಗಮನಿಸಿ ಅನೇಕ ಸಂಘ, ಸಂಸ್ಥೆಗಳಿಂದ ಗೌರವಿಸಿ ಸನ್ಮಾನಿಸಿವೆ. ಆದರೆ ಈ ಹಿರಿಯ ಕಲಾವಿದನಿಗೆ ಈ ತನಕ ಸರಕಾರದಿಂದ ಯಾವುದೇ ಗೌರವ ದೊರೆಯದಿರುವುದು ವಿಷಾದದ ಸಂಗತಿ.

venka 5

ಪ್ರಸ್ತುತ ವೆಂಕಟರಮಣರ ಜೊತೆ ಆಚಾರ್ಯರ ಮಗಳು ಸಹಾ ಗಣಪತಿ ವಿಗ್ರಹ ಮಾಡಲು ಸಹಾಯ ಮಾಡುತ್ತಾರೆ. ಆದರೆ ಕಳೆದ ಒಂದು ವರ್ಷದ ಹಿಂದೆ ವೆಂಕಟರಮಣ ಆಚಾರ್ಯರ ಧರ್ಮಪತ್ನಿ ಸೀತಾ ಅವರು ತಿರಿಹೋಗಿದ್ದಾರೆ. ಆಚಾರ್ಯರರು ಈ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರಿಗೆ 3 ಜನ ಗಂಡು ಮಕ್ಕಳು ಹಾಗೂ 6 ಜನ ಹೆಣ್ಣು ಮಕ್ಕಳು, ತುಂಬಿದ ಸಂಸಾರ ಇವರದ್ದು. ನೂರಾರು ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಚೇತನದ ಕೊಂಡಿ ಕಳಚುವ ಮುನ್ನ ಸರಕಾರ, ಸಂಘ ಸಂಸ್ಥೆಗಳು ಸೂಕ್ತ ಮನ್ನಣೆ ನೀಡಿದರೆ ಗ್ರಾಮೀಣ ಭಾಗದ ಕಲಾವಿದರೊಬ್ಬರ ಸೇವೆಗೆ ಸಾರ್ಥಕತೆ ಬರುತ್ತಿತ್ತೆನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯ.