ಕಿರಿಮಂಜೇಶ್ವರ ಗ್ರಾಮ ದರ್ಶನ

1
4262

kiru 1

ಬೈಂದೂರು: ಕಿರಿಮಂಜೇಶ್ವರ ಗ್ರಾಮ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿದೆ. ಸ್ಥಳ ಪುರಾಣದಂತೆ, ದ್ವಾಪರಯುಗದಲ್ಲಿ ಕುರುಕ್ಷೇತ್ರದಲ್ಲಿ ಪಾಂಡವರಿಗೂ ಕೌರವರಿಗೂ ನಡೆದ ಮಹಾಯುದ್ಧದಲ್ಲಿ ಈಶಾನ್ಯ ದಿಕ್ಕಿನ ದಿಗ್ಗಜವಾದ ಸುಪುರೇಕ ಎಂಬ ಆನೆ ನಾಶವಾಯಿತು. ಇದರಿಂದ ಆ ದಿಕ್ಕಿನ ನೆಲಭಾಗ ಕೆಳಕ್ಕೆ ತಗ್ಗಿತು. ಭೂಮಿ ಏರುಪೇರು ಆದ್ದರಿಂದ ಋಷಿಗಳು ಹಾಗೂ ಜನರು ಭೀತಿಯಿಂದ ಈಶ್ವರನ ಮೊರೆ ಹೋದರು. ಆಗ ಈಶ್ವರನು ವಿಂದ್ಯಾಚಲ ಶಿಖರವು ಮೇರು ಪರ್ವತದೊಡನೆ ಸ್ಪರ್ಧಿಸುವ ಮನೋಭಾವದಿಂದ ಅತೀ ಎತ್ತರವಾಗಿ ಬೆಳೆದು ಸೂರ್ಯನ ಸಂಚಾರಕ್ಕೆ ಅಡ್ಡಿ ಮಾಡುತ್ತಿದೆ. ಅದರ ಅಹಂಕಾರವನ್ನು ಇಳಿಸಲು ತಪೋ ಬಲದಿಂದ ಹೆಚ್ಚು ಭಾರ ಉಳ್ಳವರಾದ ಕುಂಭ ಸಂಭವರೆನಿಸಿದ ಅಗಸ್ತ್ಯ ಮುನಿಗಳು ಕಳುಹಿಸುತ್ತೇನೆ. ಅವರು ಎತ್ತರವಾದ ಪ್ರದೇಶದಲ್ಲಿ ನೆಲೆಸಿದರೆ ಎತ್ತರವಾದ ಸ್ಥಳವು ಭಾರವಾಗಿ ತಗ್ಗಾದ ಪ್ರದೇಶವು ಮೇಲೆ ಬಂದು ಭೂಭಾಗ ಸಮತಟ್ಟಾಗುತ್ತದೆ ಎಂದು ಋಷಿ ಮುನಿಗಳಿಗೆ ಸಮಾಧಾನ ಮಾಡುತ್ತಾನೆ.

kiru 3

kiru 2

ಅಗಸ್ತ್ಯ ಮುನಿಗಳು ಎತ್ತರವಾದ ವಿಂಧ್ಯ ಶಿಖರವನ್ನು ತಗ್ಗುವಂತೆ ಮಾಡುತ್ತಾರೆ. ಅನಂತರ ಪುಣ್ಯ ಕ್ಷೇತ್ರವನ್ನು ನೋಡುವ ಅಪೇಕ್ಷೆಯಿಂದ, ಗೋಕರ್ಣ ಮಾರ್ಗವಾಗಿ ಕುಮಾರಗಿರಿಗೆ ಬರುತ್ತಾರೆ. ಹೀಗೆ ಬರುವ ದಾರಿಯಲ್ಲಿ ಉತ್ತರಾಯಣದ ಸೋಮವಾರವು ಆರ್ಧಾ ನಕ್ಷತ್ರವೂ ಕೂಡಿದ ಜೇಷ್ಠ ಬಹುಳ ಅಮಾವಾಸ್ಯೆಯ ದಿನದಂದು ಈ ನಾಗಪುರ ಎನ್ನುವ ಸ್ಥಳಕ್ಕೆ ಬರುತ್ತಾರೆ. ಈ ಪುಣ್ಯ ದಿನದಂದು ಮುನಿಗಳು ಸಮುದ್ರ ತೀರದಲ್ಲಿ ಶಿವಲಿಂಗವನ್ನು ಪ್ರತಿಷ್ಠೆ ಮಾಡಿ ಈಶ್ವರನನ್ನು ಪೂಜಿಸುತ್ತಾರೆ. ಆಗ ಲೋಕ ಕಲ್ಯಾಣಕ್ಕೋಸ್ಕರ ಅಗಸ್ತ್ಯರಲ್ಲಿ ನೆಲೆಗೊಂಡಿದ್ದ ಈಶ್ವರನು ಶಿವಲಿಂಗದಿಂದ ಪ್ರತ್ಯಕ್ಷನಾಗುತ್ತಾನೆ. ಇನ್ನು ಮುಂದೆ ಈ ಸ್ಥಳದಲ್ಲಿ ಅಗಸ್ತ್ಯೇಶ್ವರ ಎನ್ನುವ ಹೆಸರಿನಲ್ಲಿ ನೆಲೆಸುವುದಾಗಿ ವರದಾನ ಮಾಡುತ್ತಾನೆ. ಗಾತ್ರದಲ್ಲಿ ಕುಬ್ಜರಾದ ಅಗಸ್ತ್ಯರಿಂದ ಪ್ರಸಿದ್ಧ ಪಡೆದ ಈ ಕ್ಷೇತ್ರವು, ಕಿರಿ+ಮುನಿ+ಈಶ್ವರ ಕಿರಿಮಂಜೇಶ್ವರ ಎಂದು ಪ್ರಸಿದ್ಧಿ ಪಡೆಯುತ್ತದೆ. ನಾಗಪುರದ ಉಳಿದ ಭಾಗವು ನಾಗೂರು ಎಂದಾಗುತ್ತದೆ.

773 ಹೆಕ್ಟೇರ್ ಪ್ರದೇಶದ ವಿಸ್ತೀರ್ಣ ಹೊಂದಿರುವ ಈ ಊರಿನ ಜನಸಂಖ್ಯೆ 7454. ಶ್ರೀ‌ಅಗಸ್ತ್ಯೇಶ್ವರ ದೇವಸ್ಥಾನವಲ್ಲದೇ ಪೀಠ ಸೇರಿ 27 ಅಡಿ ಎತ್ತರದ ಏಕಶಿಲಾ ವೀರ ಹನುಮಾನ್ ದೇವಸ್ಥಾನ, ಮಹಾಗಣಪತಿ ದೇವಸ್ಥಾನ, ವಿಶಾಲಾಕ್ಷಿ ದೇವಸ್ಥಾನ, ಅಕ್ಕರೆಯ ಮಠ ದೇವಸ್ಥಾನ, ಹತ್ತಾರು ದೈವಸ್ಥಾನ ಹಾಗೂ ಮೂರು ಮಸೀದಿಗಳು ಇಲ್ಲಿನ ಪ್ರಮುಖ ಧಾರ್ಮಿಕ ಕೇಂದ್ರಗಳು. ಎಲ್ಲಾ ಧರ್ಮಿಯರು ಸಾಮರಸ್ಯದಿಂದ ಕೂಡಿ ಬಾಳುತ್ತಿರುವ ಈ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಅಗಸ್ತ್ಯೇಶ್ವರ ದೇವರ ವಾರ್ಷಿಕ ಜಾತ್ರೆಯೂ ನಡೆಯುತ್ತದೆ. ಇದು ಕಿರುಮುಂದ್ಲ ಹಬ್ಬ ಎಂದು ಪ್ರಸಿದ್ಧಿ ಪಡೆದಿದ್ದು, ಈ ಭಾಗದ ಕೊನೆಯ ಜಾತ್ರೆಯಾಗಿದೆ. ಇಲ್ಲಿ ಒಟ್ಟು 6 ಸರಕಾರಿ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳು, 1 ಸರಕಾರಿ ಪ್ರೌಢಶಾಲೆ ಹಾಗೂ ಎರಡು ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಎರಡು ಸಹಕಾರಿ ಸಂಘಗಳು, ತಲಾ ಒಂದು ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿವೆ. ಅರಬೀ ಸಮುದ್ರ ತೀರದಲ್ಲಿರುವ ಈ ಗ್ರಾಮದಲ್ಲಿ ಭತ್ತ, ನೆಲಗಡಲೆ, ಕಲ್ಲಂಗಡಿ ಬೆಳೆಗಳನ್ನು ಹೆಚ್ಚು ಬೆಳೆಸುತ್ತಾರೆ. ಕೃಷಿ ಹಾಗೂ ಮೀನುಗಾರಿಕೆ ಇಲ್ಲಿನ ಜನರ ಮುಖ್ಯ ಕಸುಬು.

kiru 4

ಕೊಡೇರಿ ಪ್ರಮುಖ ಬಂದರು ಪ್ರದೇಶವಾಗಿ ಬೆಳೆಯುತ್ತಿದೆ. ಕೊಡೇರಿ ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರ ಮಾಡಲು ವಿಫುಲ ಅವಕಾಶಗಳಿದೆ. ಈ ಗ್ರಾಮದ ವ್ಯಾಪ್ತಿಗೆ ಬರುವ ಪ್ರಮುಖ ಎಡಮಾವಿನ ಹೊಳೆ ಹರಿದು ಉಪ್ಪುಂದದ ಮಡಿಕಲ್‌ನ ಸಮುದ್ರ ಸೇರಲು ಸಮೀಪವಾದರೂ. ಹಾಗಾಗದೇ ಈ ಹೊಳೆ ಸುತ್ತುವರಿದು ಕೊಡೇರಿ ಶಾಲೆಯ ಬಳಿ ಕಡಲನ್ನು ಸೇರುತ್ತದೆ. ಈ ಕಡೆ ಹೊಳೆ ಹಾಗೂ ಆ ಕಡೆ ಕಡಲು ಮಧ್ಯದಲ್ಲಿ ನೂರು ಮೀ. ಅಂತರದಲ್ಲಿ ಮರಳಿನ ಭೂ ಪ್ರದೇಶ. ಇದೊಂದು ಆಕರ್ಷಣೀಯ ಸ್ಥಳವಾಗಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿದರೆ ಮುಂದಿನ ದಿನಗಳಲ್ಲಿ ಇದೊಂದು ದೊಡ್ಡ ಪ್ರವಾಸಿ ತಾಣವಾಗುವ ಎಲ್ಲಾ ಲಕ್ಷಣಗಳಿವೆ.

ಅತ್ಯಂತ ಕಡಿಮೆ ವ್ಯಾಪ್ತಿಯ ಭೂ ಪ್ರದೇಶವಿರುವ ಈ ಗ್ರಾಮದ 6 ಕಿ.ಮಿ. ಉದ್ದಕ್ಕೂ ರಾಷ್ಟ್ರೀಯ ಹೆದ್ದಾರಿ ಹಾದು ಹೊಗುತ್ತದೆ. ಪಶ್ಚಿಮದ ಸಮುದ್ರದಿಂದ ಒಂದು ಕಿ.ಮಿ. ಅಂತರದಲ್ಲಿ ಪೇಟೆ ಇದೆ. ಕೆಲವು ಕಡೆಗಳಲ್ಲಿ ಇರುವುದು ಕೇವಲ 400 ಮೀ. ಅಂತರ ಮಾತ್ರ. ಪೂರ್ವದಲ್ಲಿ ಕೊಂಕಣ ರೈಲ್ವೆ ಟ್ರಾಕ್ ಇದೆ. ಸಿ‌ಆರ್‌ಝೆಡ್ ವ್ಯಾಪ್ತಿಯಿಂದ 500 ಮೀ. ಹೊರಗೆ ಹಾಗೂ ರೈಲ್ವೆ ಟ್ರಾಕ್‌ಗಿಂತ 30 ಮೀ. ಅಕ್ಕ-ಪಕ್ಕದಲ್ಲಿ ಕಾನೂನಿನಂತೆ ಮನೆ, ಕಟ್ಟಡಗಳು ನಿರ್ಮಾಣ ಮಾಡುವಂತಿಲ್ಲ. ಇದು ಈ ಭಾಗದ ಜನರ ಮುಖ್ಯವಾದ ದೊಡ್ಡ ಸಮಸ್ಯೆ.

ತೆಂಕು-ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ ಮೇರು ಕಲಾವಿದ ದಿ. ತೆಕ್ಕಟ್ಟೆ ಆನಂದ ಮಾಸ್ತರ್, ಗಾನಕೋಗಿಲೆ ಬಿರುದಾಂಕಿತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ್, ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಅಂಚಿನಲ್ಲಿರುವ ದೊಡ್ಮನೆ ಕೃಷ್ಣ ಮತ್ತು ಚೌಕಿಮನೆ ಕೃಷ್ಣ ಈ ಊರಿನ ಸಾಧಕರ ಸಾಲಿಗೆ ಸೇರುತ್ತಾರೆ. ಇಲ್ಲಿನ ಹೆರೇಂಜಾಲು ಯಕ್ಷಗಾನ ಪ್ರತಿಷ್ಟಾನ ಸಂಸ್ಥೆಯಲ್ಲಿ ಭಾಗವತ ಹೇರಂಜಾಲು ಗೋಪಾಲ ಗಾಣಿಗರ ನೇತೃತ್ವದಲ್ಲಿ ಹೆಣ್ಣು, ಗಂಡು ಮಕ್ಕಳಿಗೆ ಉಚಿತವಾಗಿ ಯಕ್ಷಗಾನ ಕಲಿಸಿ ಕೊಡಲಾಗುತ್ತಿದೆ. ಒಂದು ಗೇರುಬೀಜ ಸಂಸ್ಕರಣ ಘಟಕವಿದೆ.

kiru 5

ಹೇಳಿಕೆ: ಗ್ರಾಮದ ವಿಸ್ತೀರ್ಣ ಕಡಿಮೆಯಿದ್ದರೂ ಗ್ರಾಮ ಅಭಿವೃದ್ಧಿಗೆ ಹಲವಾರು ರೀತಿಯ ಅವಕಾಶಗಳಿದೆ. ಆದರೆ ಪೂರ್ವಕ್ಕೆ ರೈಲ್ವೆ ಟ್ರಾಕ್, ಪಶ್ಚಿಮಕ್ಕೆ ಸಮುದ್ರ. ನಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೊಗುತ್ತದೆ. ಇದರಿಂದ ಇಕ್ಕಟ್ಟು ಜಾಸ್ತಿಯಾಗಿದೆ. ಸಿ‌ಆರ್‌ಝೆಡ್ ವ್ಯಾಪ್ತಿಯನ್ನು 200 ಮೀ.ಗೆ ಕಡಿತಗೊಳಿಸಬೇಕು.-ಶೇಖರ ಖಾರ್ವಿ, ಉಪಾಧ್ಯಕ್ಷ ಗ್ರಾಪಂ ಕಿರಿಮಂಜೇಶ್ವರ.

kiru 6

ಹೇಳಿಕೆ: 50 ವರ್ಷ ಹಿಂದೆ ನಿರ್ಮಿಸಿದ ಗ್ರಾಮ ಪಂಚಾಯತ್ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಹೊಸ ಕಟ್ಟಡ ರಚನೆ ಆಗಬೇಕಿದೆ. ಸುವರ್ಣಗ್ರಾಮ ಯೋಜನೆ ನಮ್ಮ ಗ್ರಾಮಕ್ಕೆ ಇನ್ನೂ ಬಂದಿಲ್ಲ. ಈ ಯೋಜನೆ ಬಂದರೆ ಹೊಸ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತದೆ.-ಮಾಧವ ಕಾರಂತ್, ಪ್ರಭಾರ ಪಿಡಿ‌ಓ ಗ್ರಾಪಂ ಕಿರಿಮಂಜೇಶ್ವರ.

ನರಸಿಂಹ ನಾಯಕ್…..

1 COMMENT

 1. ಪ್ರಿಯ ನರಸಿಂಹ ನಾಯಕ್ ಅವರೆ… ತಮ್ಮಗ್ರಾಮದರ್ಶನ ಓದಿದೆ.ಚೆನ್ನಾಗಿದೆ.
  ಓದುಗರ ಮಾಹಿತಿಗಾಗಿ ನಿಮ್ಮ ಪ್ರಯತ್ನ ಅದ್ಭುತ.
  ಇದು ಇನ್ನು ಮುಂದುವರೆಯಲಿ…
  ಇಲ್ಲಿ ಅಗಸ್ತ್ಯ ಮುನಿಯು ಕುಶಸ್ಥಳಿ ನದಿ ಅಂದರೆ ಈಗಿನ ಎಡಮಾವಿನಹೊಳೆಯಲ್ಲಿ ಸ್ನಾನಮಾಡಿ ಕುಶಸ್ಥಳಿ ನದಿಯ ಪಕ್ಕದಲ್ಲಿರು ವೀರಮಾರುತಿ ದೇವಸ್ಥಾನದ ಎದುರು ಅಂದರೆ ಹಳಗೇರಿಗೆ ಹೋಗುವ ರಸ್ತೆ ಸಮೀಪ ಹಿಂದೆ ಇದ್ದ ಪುಷ್ಕರಣಿಯಿಂದ ನೀರು ತೆಗೆದುಕೊಂಡು ವೀರಮಾರುತಿಗೆ ಅಭಿಷೇಕ ಪೂಜೆಗಳನ್ನು ಮಾಡಿ ಅಗಸ್ತ್ಯರು ಕಿರಿಮುನೀಶ್ವರನಿಗೆ ಪೂಜೆಮಾಡಲು ಇಲ್ಲಿಂದಲೇ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರೆಂದು ಕೇಳಿದ್ದೇನೆ. ಈ ಮಾಹಿತಿಯೂ ಕೂಡ ಓದುಗರಿಗೆ ಅನುಕೂಲವಾಗಬಹುದು. ತಾವು ಈಗ ತೋರಿಸಿದ ಆಂಜನೇಯನ ವಿಗ್ರಹ ಅಂದು ಇದ್ದಿಲ್ಲ. ಆದರೆ ಹೊಳೆಬಾಗಿಲಿನಲ್ಲಿರುವ ವೀರಮಾರುತಿಗೆ 400 ವರ್ಷಗಳ ಇತಿಹಾಸವಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿಯೂ ಅದು ಕಂಡುಬಂದಿತ್ತು. ಕುಂದಾಪುರದ ದೇವಾಲಯಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಚಂದ್ರಶೇಖರ ಹೊಳ್ಳರನ್ನು ಸಂಪರ್ಕಿಸ ಬಹುದು.
  ಆದಿತ್ಯಪ್ರಸಾದ್ ಎಂ.
  ವಿಜಯವಾಣಿ
  ಕನ್ನಡ ದಿನಪತ್ರಿಕೆ
  ಶಿವಮೊಗ್ಗ ಆವೃತ್ತಿ

Leave a Reply to ADITYAPRASAD M Cancel reply

one × 3 =

SHARE
Previous articleಗಂಗೊಳ್ಳಿಯಲ್ಲಿ ಮುದ್ದುಕೃಷ್ಣ ಸ್ಪರ್ಧೆ
Next articleಗ್ರಾಹಕರ ಖಾತೆಗೆ ಆಧಾರ್ ಜೋಡನೆ ಮಾಡುವ ಆಧಾರ್ ಲಿಂಕ್ ಕಾರ್ಯಕ್ರಮ