ಉಪ್ಪುಂದ ಗ್ರಾಮ ದರ್ಶನ….

0
3210

ಉಪ್ಪುಂದ : ಹಿಂದೆ ರಾಶಿ ರಾಶಿ ಪ್ರಮಾಣದಲ್ಲಿ ಉಪ್ಪನ್ನು ಉತ್ಪಾದಿಸುವ ಈ ಪ್ರದೇಶ ಉಪ್ಪಗುಂದವಾಗಿತ್ತು. ಗುಂದ ಎಂದರೆ ರಾಶಿ ಎಂದರ್ಥ. ಕಾಲಕ್ರಮೇಣ ನಾಗರೀಕತೆ ಬೆಳೆದಂತೆ ಈ ಉಪ್ಪಗುಂದ ಉಪ್ಪುಂದವಾಗಿ ಜನಪ್ರೀಯವಾಯಿತು. ಈಗಲೂ ಈ ಗ್ರಾಮದಲ್ಲಿ ಉಪ್ಪಿನಕೋಟೆ ಎಂಬ ಪ್ರದೇಶವಿದ್ದು ಇತಿಹಾಸಕ್ಕೆ ಸಾಕ್ಷಿಯಾಗಿದೆ. ಉಪ್ಪುಂದ ಗ್ರಾಮವು ಒಂದು ಸುಂದರ ಗ್ರಾಮವಾಗಿದ್ದು ಅರಬ್ಬೀ ಸಮುದ್ರದ ದಂಡೆಯ ಮೇಲಿದೆ. ಸಮುದ್ರತೀರದಿಂದ ಕೆಲವು ಕಿ.ಮೀ.ವರೆಗೆ ಭೂಮಿ ಅಗೆದರೆ ಬರೀ ಉಪ್ಪುನೀರೇ ಹೊರತು ಸಿಹಿನೀರು ಲಭ್ಯವಾಗುವುದು ತೀರಾ ಅಪರೂಪ. ಎತ್ತ ನೋಡಿದರತ್ತ ನೀರಿದೆ ಅದರೆ ಬಾಯರಿಕೆಯನ್ನು ಇಂಗಿಸಲು ಒಂದು ಹನಿ ನೀರಿಲ್ಲ ಎಂದು ಹಿಂದೊಮ್ಮೆ ಜಲಯಾನ ಕೈಗೊಂಡ ಯಾತ್ರಿಕ ಹೇಳಿದ್ದನಂತೆ.

19-05-2015-22

ಗ್ರಾಪಂನ ಪರಿಚಯ: ಉಪ್ಪುಂದ ಗ್ರಾಮವು ಕುಂದಾಪುರ ತಾಲೂಕಿನ ಉತ್ತರ ಭಾಗದ ಸುಮಾರು 30ಕಿ.ಮೀ ದೂರದಲ್ಲಿರುವ ಕರಾವಳಿಯಲ್ಲಿನ ಒಂದು ಪುಟ್ಟಗ್ರಾಮ. ರಾ.ಹೆ.66ರಲ್ಲಿ ಕುಂದಾಪುರದಿಂದ ಉತ್ತರದ ಭಟ್ಕಳಕ್ಕೆ ಹೋಗುವಾಗ ಹೆದ್ದಾರಿಯ ಎರಡೂ ಕಡೆಗಳಲ್ಲಿ ಹರಡಿಕೊಂಡಿರುವ ಈ ಗ್ರಾಮವನ್ನು ಕಾಣಬಹುದು. ಈ ಗ್ರಾಮದ ಒಟ್ಟೂ ವಿಸ್ತೀರ್ಣ ಕೇವಲ 530.62 ಹೆಕ್ಟೇರು. ಆಡಳಿತ ದೃಷ್ಟಿಯಿಂದ ಹತ್ತು ವಾರ್ಡಗಳಾಗಿ ವಿಂಗಡಿಸಲಾಗಿದೆ. ಹಾಗಂತ ಇದು ತೀರಾ ಹಿಂದುಳಿದ ಪ್ರದೇಶವಲ್ಲ. ಅಕ್ಕಪಕ್ಕದ ಹಳ್ಳಿಗಳಿಗೆ ಇದೇ ಪ್ರಮುಖ ಪೇಟೆಯಾಗಿದ್ದು, ನಗರಗಳಲ್ಲಿ ಸಿಗುವ ಇಲ್ಲಾ ತರಹದ ಸಾಧನ, ಸರಂಜಾಮುಗಳು ಈ ಪೇಟೆಯಲ್ಲಿ ಸಿಗುತ್ತದೆ. ಮಂಗಳವಾರ ವಾರದ ಸಂತೆ ಕೂಡಾ ಇಲ್ಲಿ ನಡೆಯುತ್ತದೆ. ಸಮುದ್ರ ತೀರದಲ್ಲಿದ್ದರೂ ಇಲ್ಲಿ ಕಳೆದ 400 ವರ್ಷಗಳಿಂದ ಇಲ್ಲಿಯವರೆಗೆ ಯಾವುದೇ ನೆರೆಹಾವಳಿ, ಬರಗಾಲಗಳು ಬಂದಿಲ್ಲ ಎಂಬುದು ಸಂತಸದ ವಿಚಾರ. ಇಲ್ಲಿಂದ 3ಕಿ.ಮೀ. ದಕ್ಷಿಣದ ಗಂಗೇಬೈಲು ಹಾಗೂ ಉತ್ತರದ ಸೋಮೇಶ್ವರ ಎಂಬಲ್ಲಿ ಎರಡು ಪವಿತ್ರ ನದಿಗಳು ಸಮುದ್ರ ಸೇರುತ್ತದೆ. ಉಪ್ಪುಂದವು ಒಂದೇ ಗ್ರಾಮವಾಗಿದ್ದು 27 ಪ್ರದೇಶಗಳನ್ನು ಒಳಗೊಂಡಿದೆ. ಕರಾವಳಿ ಪ್ರದೇಶವಾದ್ದರಿಂದ ಮೀನುಗಾರಿಕೆ ಪ್ರಮಖ ಉದ್ಯಮವಾಗಿದೆ. ಪರಿಸರದ ಜನರಿಗೆ ಮನರಂಜನೆ ನೀಡುವ ಪ್ರಯುಕ್ತ ಮಡಿಕಲ್ ಕಡಲತೀರದಲ್ಲಿ ಪ್ರತೀವರ್ಷ ಕಡಲೋತ್ಸವ ಮತ್ತು ಉಪ್ಪುಂದೋತ್ಸವ ನಡೆಯುತ್ತದೆ. ಮಡಿಕಲ್‌ನಲ್ಲಿ ಹೊರಬಂದರು ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದ್ದು, ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ.

ಶಿಕ್ಷಣ ಮತ್ತು ಧಾರ್ಮಿಕ ನೋಟ: ನೂರಿಪ್ಪತ್ತು ವರ್ಷಗಳ ಇತಿಹಾಸವಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಎಂಟು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳು ಇಲ್ಲಿದೆ. ಹಾಗೂ ಒಂದು ಪದವಿ ಪೂರ್ವ ಕಾಲೇಜು ಕೂಡಾ ಇದ್ದು ಸುಮಾರು 1,400ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ದೇಶದ ನಾನಾ ಭಾಗದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುವುದರ ಮೂಲಕ ಹುಟ್ಟೂರಿನ ಹೆಸರನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿದ್ದಾರೆ. ಒಂದು ಅಂಗ್ಲಮಾಧ್ಯಮ ಶಾಲೆ ಹಾಗೂ ಉರ್ದು ಶಾಲೆ ಕಾರ್ಯನಿರ್ವಹಿಸುತ್ತಿದೆ.

19-05-2015-23

ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಪ್ರಮುಖ ಶ್ರದ್ಧಾಕೇಂದ್ರವಾಗಿದ್ದು, ಕೊಡಿ ತಿಂಗಳಲ್ಲಿ ವಾರ್ಷಿಕ ಜಾತ್ರೆ ನಡೆಯುವುದರಿಂದ ಉಪ್ಪುಂದ ಕೊಡಿಹಬ್ಬ ಎಂದೇ ಖ್ಯಾತಿಗೊಂಡಿದೆ. ಜಿ‌ಎಸ್‌ಬಿ ಸಮಾಜದವರ ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಮೂಡುಗಣಪತಿ ದೇವಸ್ಥಾನ, ಆನೆಗಣಪತಿ ದೇವಸ್ಥಾನದ ಜೊತೆಗೆ ಶ್ರೀರಾಮ ಭಜನಾ ಮಂದಿರ, ದೇವಿಯ ಓಲಗ ಮಂಟಪ, ಮಡಿಕಲ್‌ನಲ್ಲಿ ಮಸೀದಿ ಹಾಗೂ ಕಾಸನಾಡಿ, ಅರೆಹಾಡಿ, ಜೈನಜಟ್ಟಿಗ ಸೇರಿದಂತೆ ಅನೇಕ ದೈವಸ್ಥಾನಗಳು ಮತ್ತು ನಾಲ್ಕು ಕಲ್ಯಾಣ ಮಂಟಪಗಳು ಇಲ್ಲಿದೆ. ಇದೊಂದು ಸೌಹಾರ್ಧ ಸಾಮರಸ್ಯ ಹೊಂದಿದ ಗ್ರಾಮವಾಗಿದೆ ಎಂದರೆ ಅತಿಶೋಯಕ್ತಿಯಲ್ಲ.

19-05-2015-24

ಕುಂದಾಪುರ ತಾಲೂಕಿನಲ್ಲಿ ಮುಂಚೂಣಿಯಲ್ಲಿರುವ ವಾಣಿಜ್ಯಕೇಂದ್ರ ಉಪ್ಪುಂದ. ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಗಳಲ್ಲದೇ ಹಲವಾರು ವರ್ಷಗಳಿಂದ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಪಡೆಯುತ್ತಿದ್ದು, ಬೇರೆ ಐದುಗ್ರಾಮಗಳಲ್ಲಿ ಶಾಖೆಗಳಿರುವ ಉಪ್ಪುಂದದಲ್ಲಿ ಪ್ರಧಾನ ಕಛೇರಿ ಹೊಂದಿದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಸಹಕರಿ ಕ್ಷೇತ್ರದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಉಳಿದಂತೆ ಅನೇಕ ಸೌಹಾರ್ದ, ವಿವಿಧೊದ್ದೇಶ, ಮಹಿಳಾ ಸಹಕಾರಿ, ಮೀನುಗಾರರ ಸಹಕಾರಿ ಸಂಘಗಳು, (ಒಟ್ಟು 13) ಯಶಸ್ವಿಯಾಗಿ ವ್ಯವಹಾರ ನಡೆಸುತ್ತಿದೆ. ಪಂಚಾಯತ್ ಆದಾಯ ಹಾಗೂ ಸರಕಾರದ ಅನುದಾನ ಸೇರಿ ಒಟ್ಟು ರೂ.40 ಲಕ್ಷ ಇದ್ದರೂ ಮೂಲಸೌಕರ್ಯಗಳಾದ ಕುಡಿಯುವ ನೀರು ರಸ್ತೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳ ನಿರ್ವಹಣೆಗೆ ಸಾಕಾಗುತ್ತಿಲ್ಲ. ಗ್ರಾಪಂನ್ನು ಪಟ್ಟಣ ಪಂಚಾಯತ್‌ಯಾಗಿ ಮೇಲ್ದರ್ಜೆಗೇರಿಸುವಂತೆ ಗ್ರಾಪಂನಲ್ಲಿ ನಿರ್ಣಯಿಸಿ ಸಂಬಂಧಪಟ್ಟ ಇಲಾಖೆಗೆ ಮನವಿ ನೀಡಲಾಗಿದೆ. ಇದಕ್ಕೆ ಸಾರ್ವಜನಿಕರೂ ಧ್ವನಿಗೂಡಿಸಿದ್ದಾರೆ. ಆದರೆ ಈ ಭಾಗದ ಜನರ ಪಪಂ ಕನಸು ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ.

19-05-2015-19

ಹೇಳಿಕೆ: ಈ ಗ್ರಾಮದ ಹಲವು ಭಾಗಗಳಲ್ಲಿ ಉಪ್ಪು ನೀರಿನ ಪ್ರಮಾಣ ಹೆಚ್ಚಿದೆ. ಪಂಚಾಯತ್ ಬಾವಿಯಿಂದ ಹೆಚ್ಚಿನ ಕಡೆಗಳಲ್ಲಿ ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ ಕೊನೆಯ ದಿನಗಳಲ್ಲಿ ಈ ನೀರು ಸಾಕಾಗುತ್ತಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರವಾಗಿ ಅನುಷ್ಟಾನಗೊಳ್ಳಬೇಕಿದೆ.-ಜಗನ್ನಾಥ ಉಪ್ಪುಂದ, ಗ್ರಾಪಂ ಅಧ್ಯಕ್ಷರು.

19-05-2015-20

ಹೇಳಿಕೆ: ಇಲ್ಲಿ ತ್ಯಾಜ್ಯ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಡಂಪಿಂಗ್ ಯಾರ್ಡ್‌ಗೆ ಸರಿಯಾದ ಸ್ಥಳವಿಲ್ಲ. ಜಿಪಂ ಸಾಮಾನ್ಯ ಸಭೆಯಲ್ಲಿಯೂ ಕೂಡಾ ಈ ಬಗ್ಗೆ ಧ್ವನಿ ಎತ್ತಿದ್ದೇನೆ. ಅಲ್ಲದೇ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಿಗೆ ಸ್ಥಳದ ಕುರಿತಾದ ಬೇಡಿಕೆಯ ಗ್ರಾಪಂ ಮೂಲಕ ಮನವಿ ಸಲ್ಲಿಸಲಾಗಿದೆ. ಇವರೆಗೆ ಸ್ಥಳ ನೀಡಲಿಲ್ಲ.-ಗೌರಿ ದೇವಾಡಿಗ ಉಪ್ಪುಂದ, ಅಧ್ಯಕ್ಷೆ ಜಿಪಂ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ

19-05-2015-21

ಹೇಳಿಕೆ: ಉಪ್ಪುಂದ ಗ್ರಾಪಂ ವ್ಯಾಪ್ತಿಯ ಭೂಭಾಗ ಕಡಿಮೆಯಾಗಿದ್ದು, ಇಲ್ಲಿನ ಜನಸಾಂದ್ರತೆ ಹೆಚ್ಚಿದೆ. ಗ್ರಾಪಂನ್ನು ಪಪಂ ಆಗಿ ಮೆಲ್ದರ್ಜೆಗೇರಿಸುವಷ್ಟು ಜನಸಂಖ್ಯೆ ಇಲ್ಲಿದೆ. ಹಾಗಾಗಿ ಈ ಗ್ರಾಪಂನ್ನು ಶೀಘ್ರವಾಗಿ ಪಟ್ಟಣ ಪಂಚಾಯತ್ತಾಗಿ ಅನುಷ್ಟಾನಗೊಳಿಸಬೇಕು.-ಪ್ರಸನ್ನ ಕುಮಾರ್ ಉಪ್ಪುಂದ, ತಾಪಂ ಸದಸ್ಯರು.

 

ವರದಿ – ನರಸಿಂಹ ನಾಯಕ್