ಬೈಂದೂರು : ಯಡ್ತರೆ ಗ್ರಾಮ ದರ್ಶನ

5
7874

30-04-2015-7

ಬೈಂದೂರು : ಯಡ್ತರೆ ಗ್ರಾಮ ಪಂಚಾಯತ್‌ನ ವ್ಯಾಪ್ತಿಯಲ್ಲಿ ಯಡ್ತರೆ ಎನ್ನುವ ಒಂದು ಕಂದಾಯ ಗ್ರಾಮ ಮಾತ್ರ ಇದೆ. ಈ ಗ್ರಾಮಕ್ಕೆ ಯಡ್ತರೆ ಎನ್ನುವ ಹೆಸರು ಬರಲು ಕಾರಣವೇನು ಎನ್ನುವ ಬಗ್ಗೆ ನಿಶ್ಚಿತವಾಗಿ ಏನೂ ತಿಳಿದು ಬಂದಿಲ್ಲವಾದರೂ ಯಡ್ತರೆ ಮನೆತನ ಹಿಂದಿನಿಂದಲೂ ಈ ಗ್ರಾಮದಲ್ಲಿ ಅತ್ಯಧಿಕ ಭೂಮಿಯನ್ನು ತನ್ನ ವಶದಲ್ಲಿ ಒಡೆತನಹೊಂದಿದ್ದು ಧಾರ್ಮಿಕ, ಆರ್ಥಿಕ, ಹಾಗೂ ಸಾಮಾಜಿಕವಾಗಿ ಪ್ರಸಿದ್ಧಿಯಾಗಿತ್ತು. ಇವರು ಅನೇಕ ದೇವಾಲಯಗಳಿಗೆ ಭೂಮಿಯನ್ನು ಉಂಬಳಿ ರೂಪದಲ್ಲಿ ಕೊಟ್ಟ ಬಗ್ಗೆಯೂ ಅಲ್ಲಲ್ಲಿ ಮಾಹಿತಿ ದೊರೆಯುತ್ತದೆ.

ಇಂದು ಕೂಡ ಈ ಮನೆತನವು ಧಾರ್ಮಿಕ, ಸಾಮಾಜಿಕ, ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಹೆಸರು ಗಳಿಸಿರುತ್ತಾರೆ. ಶೈಕ್ಷಣಿಕವಾಗಿ ಈ ಮನೆಯವರು ದೇಶವಿದೇಶಗಳಲ್ಲಿ ನೆಲೆಸಿ ಹೆಸರು ಮಾಡಿರುತ್ತಾರೆ. ದಿವಂಗತ ಯಡ್ತರೆ ಮಂಜಯ್ಯ ಶೆಟ್ರರು ಜನಪ್ರಿಯ ಶಾಸಕರಾಗಿ ಈ ಭಾಗದಲ್ಲಿ ಕೆಲಸಮಾಡಿದವರು. ಹಿಂದೆ ಈ ಮನೆತನವು ದಾನಕ್ಕೆ ಹೆಸರುವಾಸಿಯಾಗಿದ್ದು ಆ ಅಭಿಮಾನ ಜನಮನದಲ್ಲಿ ಈಗಲೂ ಗೌರವಾದರಗಳಿವೆ.

30-04-2015-8

ಸುಪ್ರಸಿದ್ಧ ಶ್ರೀ ಸೇನೇಶ್ವರ ದೇವಾಸ್ಥಾನ ಸಂಪೂರ್ಣ ಶಿಲೆಯಿಂದಲೇ ನಿರ್ಮಿಸಲಾಗಿದ್ದು ಹೊಯ್ಸಳ ಶಿಲ್ಪ ಕಲೆ ಏಕಶಿಲಾ ಬಸವ ನಂದಿ ಮಂಟಪ ಕೆತ್ತನೆಚಿತ್ರಗಳ ಒಳಪ್ರಾಂಗಣ ನೋಡುವವರಿಗೆ ಬೇಲೂರನ್ನು ಕರಾವಳಿಯಲ್ಲಿ ನೆನಪಿಸುತ್ತದೆ. ಶ್ರೀ ರಾಮಚಂದ್ರ ಸೀತೆ ಹುಡುಕುತ್ತಾ ಬಂದಾಗ ವಿಶ್ರಾಂತಿಯನ್ನು ತೆಗೆದುಕೊಳ್ಳುವ ಮಯದಲ್ಲಿ ಅವರ ವಾನರಸೇನೆ ಶ್ರೀ ರಾಮನಿಗೆ ಪೂಜೆ ಸಲ್ಲಿಸಲು ಈಶ್ವರನ ದೇವಾಲಯವನ್ನು ನಿರ್ಮಿಸಿದ್ದು ಅದಕ್ಕೆ ಶ್ರೀ ಸೇನೇಶ್ವರನೆಂದು ನಾಮಕರಣ ಮಾಡಿದನೆಂಬ ಪ್ರತೀತಿ ಇದೆ. ಬಿಂದು ಋಷಿಯ ಪ್ರಖ್ಯಾತತೆಯಿಂದ ಬಿಂದುಪುರ, ಬಿಂದುನಾಡು ಎಂದು ಕರೆಯುತ್ತಾ ಕಾಲಕ್ರಮೇಣ ಬೈಂದೂರು ಎಂದು ಕರೆಯಲ್ಪಟ್ಟಿದೆಂಬ ಅಭಿಪ್ರಾಯವಿದೆ. ಮೇ ತಿಂಗಳ ಸಂಕ್ರಮಣದಂದು ಜಾತ್ರೆ ನಡೆಯುತ್ತದೆ.

ಮೊದಲು ಯಡ್ತರೆ ಶೆಟ್ಟರ ಮನೆ ಹಾಗೂ ಹೊಳ್ಳರ (ದಿ. ಡಾ.ಮಹಾಬಲ ಹೊಳ್ಳ) ಮನೆಯವರು ದೇವಸ್ಥಾನ, ರಥೋತ್ಸವ ನಡೆಸುತ್ತಿದ್ದರು. ಭೂಸುಧಾರಣೆ ಕಾಯ್ದೆ ಬಂದದ್ದರಿಂದ ಇವೆರಡು ಮನೆತನಗಳ ಭೂಮಿ ಒಕ್ಕಲುಗಳ ಪಾಲಾದ ಮೇಲೆ ಕ್ರಮೇಣ ಈ ವ್ಯವಸ್ಥೆ ಸಾರ್ವಜನಿಕರಿಗೆ ಹಸ್ತಾಂತರಗೊಂಡು ಈಗ ಮುಜರಾಯಿ ಇಲಾಖೆಯ ತೆಕ್ಕೆಗೆ ಸೇರಿದೆ ಎನ್ನುವುದು ಇತಿಹಾಸ.

ಈ ಗ್ರಾಮದಲ್ಲಿ ಒಟ್ಟು 12 ದೇವಾಲಯ, 3 ಮಸೀದಿ ಹಾಗೂ 4 ಚರ್ಚು ಇದ್ದು, ಎಲ್ಲರು ಪರಸ್ಪರ ಸೌಹಾರ್ದತೆಯಿಂದ ಬದುಕು ನಡೆಸುತ್ತಿದ್ದಾರೆ. ಈ ವರೆಗೂ ಇಲ್ಲಿ ಕೋಮುಗಲಭೆಗಳಂತಹ ಅಹಿತಕರ ಘಟನೆ ನಡೆದ ದಾಖಲೆಗಳಿಲ್ಲ.

ಬೈಂದೂರು ಯಡ್ತರೆ ಗ್ರಾಮದ ಹೃದಯ ಭಾಗವಾಗಿದ್ದು ಇಂದು ತಹಶೀಲ್ದಾರರ ಕಛೇರಿ, ಪಂಚಾಯತ್ ರಾಜ್ ಇಂಜಿನೀರಿಂಗ್ ಉಪ-ವಿಭಾಗ, ಮೆಸ್ಕಾಂ ಉಪ-ವಿಭಾಗ, ವಲಯ ಅರಣ್ಯಾಧಿಕಾರಿಗಳ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮೂಹ ಸಂಪನ್ಮೂಲ ಕಛೇರಿ, ಸಮುದಾಯ ಆರೋಗ್ಯ ಕೇಂದ್ರ, ಉಪನೋಂದಾಣಾಧಿಕಾರಿ ಹಾಗೂ ಉಪ-ಖಜಾನೆ, ಪೋಲೀಸ್ ಠಾಣಾಧಿಕಾರಿ ಮತ್ತು ವೃತ್ತ ನಿರೀಕ್ಷಕರ ಕಛೇರಿ, ನಿರೀಕ್ಷಣಾ ಬಂಗಲೆ, ಹೆಸರಾಂತ ಶ್ರೀ ಮೂಕಾಂಬಿಕಾ ರೈಲ್ವೆ ನಿಲ್ದಾಣ, ಪದವಿ-ಪೂರ್ವ ಕಾಲೇಜು ,8 ಹಿರಿಯ-ಕಿರಿಯ ಸರಕಾರಿ ಶಾಲೆಗಳು, ವಿಶಾಲವಾದ ಗಾಂಧಿ ಮೈದಾನ, 3 ಖಾಸಗಿ ವಿದ್ಯಾಸಂಸ್ಥೆಗಳು ಹಲವಾರು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತದೆ. ಶುಕ್ರವಾರ ವಾರದ ಸಂತೆ ನಡೆಯುತ್ತಿದ್ದು, ಸುತ್ತಲಿನ ಹತ್ತುಹಳ್ಳಿಯವರಿಗೆ ವಾರದ ಅಡುಗೆ ಹಾಗೂ ತರಕಾರಿ ಸಾಮನುಗಳನ್ನು ಖರೀದಿಸುವ ದೊಡ್ಡ ಮಾರುಕಟ್ಟೆಯಾಗಿದೆ.

30-04-2015-9

ಈ ಗ್ರಾಮದಲ್ಲಿ ಮುಖ್ಯವಾಗಿ ಸಾಂಸ್ಕೃತಿಕ ಹಾಗೂ ಕಲಾ ಸಂಸ್ಥೆಗಳಾದ ಲಾವಣ್ಯ ಮತ್ತು ಸುರಭಿ ರಾಜ್ಯಾಂದ್ಯಂತ ಹೆಸರುಗಳಿಸಿದೆ. ವರ್ಷವಿಡೀ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ನಡೆಸುತ್ತಾ ಈ ಭಾಗದ ಜನರಿಗೆ ಕಲಾ‌ಔತಣವನ್ನು ನೀಡುತ್ತಿದ್ದು, ಸಾಂಸ್ಕೃತಿಕವಾಗಿ ಜನರ ಮನದಲ್ಲಿ ನೆಲೆಸಿದೆ. ಈ ಎರಡೂ ಸಂಸ್ಥೆಗಳ ಹಲವಾರು ಕಲಾವಿದರು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿರುವುದು ಈ ಗ್ರಾಮದ ಹಿರಿಮೆಯ ಮುಕುಟಕ್ಕೆ ಸೇರಿದ ಇನ್ನೊಂದು ಗರಿ ಎಂದರೂ ತಪ್ಪಾಗಲಾರದು.

1977ರಲ್ಲಿ ಪರಿಸರದ ಗೆಳಯರನ್ನು ಸೇರಿಸಿಕೊಂಡು ಲಾವಣ್ಯ ಕಲಾವೃಂದ ಸ್ಥಾಪಿಸಿ ಕಳೆದ 38 ವರ್ಷಗಳಿಂದ ರಂಗಭೂಮಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಬಿ.ಗಣೇಶ ಕಾರಂತ್, ರಾಜಕೀಯವಾಗಿ ಹೆಸರು ಮಾಡಿದ ಜಿಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ತಾಪಂ ಸದಸ್ಯ ಎಸ್.ರಾಜು ಪೂಜಾರಿ, ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವಲ್ಲಿ ಸತತವಾಗಿ ಪ್ರಯತ್ನಿಸಿ ಯಶಸ್ವಿಯಾದ ಕೆ. ವೆಂಕಟೇಶ ಕಿಣಿ, ಪ್ರಸ್ತುತ ಯಡ್ತರೆ ಮನೆತನದ ಹಿರಿಯ ಹಾಗೂ ಐ‌ಎಫ್‌ಎಸ್ ನಿವೃತ್ತ ಅಧಿಕಾರಿ, ತಾಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ, ಕೊಲ್ಲೂರು ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ರಾಜಕೀಯ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ದುಡಿಯುತ್ತಿರುವ ಗಿರೀಶ್ ಬೈಂದೂರು ಹೀಗೆ ಹಲವಾರು ಪ್ರಮುಖರನ್ನು ಈ ಗ್ರಾಮದ ಸಾಧಕರನ್ನಾಗಿ ಗುರುತಿಸಬಹುದಾಗಿದೆ.

ಇದು 13-06-1997 ರ ಪೂರ್ವದಲ್ಲಿ ಬೈಂದೂರು ಪುರಸಭೆಯಾಗಿದ್ದು ತದನಂತರ ಎರಡು ಪಂಚಾಯತ್‌ಗಳಾಗಿ ವಿಭಜನೆಗೊಂಡು ಯಡ್ತರೆ ಮತ್ತು ಬೈಂದೂರು ಪಂಚಾಯತ್‌ಗಳಾಗಿ ಕಾರ್ಯನಿರ್ವಹಿಸುತ್ತಿದೆ. ಈ ಭಾಗದ ಮುಖ್ಯ ಸಮಸ್ಯೆ 4ವಾರ್ಡುಗಳ ಭೂ ಭಾಗ ಉಪ್ಪು ನೀರಿನ ಅವೃತಗೊಂಡಿದ್ದು ಕುಡಿಯುವ ನೀರಿನ ಶಾಶ್ವತ ಪರಿಹಾರ ಇಲ್ಲಿ ತನಕ ಸಾಧ್ಯವಾಗಿರುವುದಿಲ್ಲ. ಉಳಿಕೆಯಲ್ಲಿ ಗುಡ್ಡಾಗಾಡು ಮತ್ತು ಅರಣ್ಯದಿಂದ ಕೂಡಿದೆ. ಬೈಂದೂರು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲು ಹತ್ತಾರು ವರ್ಷದಿಂದ ಈ ಭಾಗದ ಬೇಡಿಕೆಯಾಗಿರುತ್ತದೆ, ಹಾಗೂ ಯಡ್ತರೆ ಮತ್ತು ಬೈಂದೂರು ಗ್ರಾಮಗಳನ್ನು ಸೇರಿ ಪುನಃ ಪಟ್ಟಣ ಪಂಚಾಯತ್ ಆಗಿ ಆಯ್ಕೆಗೊಳಿಸಲು ಬೇಡಿಕೆ ಸಲ್ಲಿಸಿರುತ್ತಾರೆ. ಇನ್ನು ಇವೆಡರ ಫಲಿತಾಂಶ ಪ್ರಕಟಗೊಳ್ಳಬೇಕಿದೆ.

30-04-2015-5

ಹೇಳಿಕೆ: ಆಳುಗಳ ಕೊರತೆಯಿಂದ ಗ್ರಾಮದಲ್ಲಿ ಕಸವಿಲೇವಾರಿ ಸರಿಯಾಗಿ ಮಾಡಲಾಗುತ್ತಿಲ್ಲ. ಹಾಗೂ ಡಂಪಿಂಗ್ ಯಾರ್ಡ್ ಮಾಡಲು ಸ್ಥಳದ ದೊಡ್ಡ ಸಮಸ್ಯೆ ಇದೆ. ಸುತ್ತಲೂ ಅರಣ್ಯ ಪ್ರದೇಶವಾಗಿದ್ದು, ಸ್ಥಳದ ಬಗ್ಗೆ ಇಲಾಖೆಯವರ ಆಕ್ಷೇಪವೂ ಇದೆ. ಈ ಬಗ್ಗೆ ಬೇರೆ ಕಡೆಗಳಲ್ಲಿ ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಕುಡಿಯುವ ನೀರಿನ ಸಮಸ್ಯೆಯಿದ್ದರೂ ಟ್ಯಾಂಕರ್ ಮೂಲಕ ಸಮರ್ಪಕ ನೀರು ಸರಬರಾಜು ಮಾಡಲಾಗುತ್ತದೆ.ಎನ್.ನಾಗರಾಜ ಶೆಟ್ಟಿ, ಅಧ್ಯಕ್ಷರು ಗ್ರಾಪಂ ಯಡ್ತರೆ.

30-04-2015-6

ಹೇಳಿಕೆ: ಬೈಂದೂರು ಕೇಂದ್ರಸ್ಥಾನದಲ್ಲಿರುವ ಈ ಗ್ರಾಪಂ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ, ಶಾಸಕ ಕೆ. ಗೋಪಾಲ ಪೂಜಾರಿಯವರು ಈ ಭಾಗಕ್ಕೆ ನೀಡಿದ ಹೆಚ್ಚಿನ ಅನುದಾನದಿಂದ ಮೂಲಸೌಕರ್ಯ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಪರಿಹಾರವಾಗಲಿದೆ.-ಎಸ್.ರಾಜು ಪೂಜಾರಿ, ಸದಸ್ಯರು ತಾಪಂ ಬೈಂದೂರು.

ವರದಿ – ನರಸಿಂಹ ನಾಯಕ್