ಪಡುವರಿ ಗ್ರಾಮದ ಚಾರಿತ್ರಿಕ ಹಿನ್ನಲೆ

3
5586

29-04-2015-13

ಬೈಂದೂರಿನ ಪಶ್ಚಿಮಕ್ಕೆ ಅರಬ್ಬಿ ಸಮುದ್ರ ವ್ಯಾಪಾರ ನಡೆಸಲು ಪ್ರಶಸ್ಥವಾದ ಒಂದು ಕೋಣೆಯಂತೆ ಭದ್ರವಾದ ಈ ಸ್ಥಳಕ್ಕೆ ಪಡು-ಓವರಿ ಎಂಬ ಹೆಸರಿತ್ತು. ಪಡು ಎಂದರೆ ಪಶ್ಚಿಮ, ಓವರಿ ಎಂದರೆ ಕೋಣೆ. ಪಶ್ಚಿಮ ದಿಕ್ಕಿನಲ್ಲಿ ಇರುವ ಕೋಣೆ ಪಡು ಓವರಿ ಎಂದು ಕರೆದಿರಬಹುದು. ಅದು ಕಾಲ ಕ್ರಮೇಣ ಜನರ ಮಾತಿನಲ್ಲಿ ಪಡುವರಿ ಆಗಿ ಮಾರ್ಪಾಡಾಗಿರಬಹುದು. ಇಲ್ಲಿ ಶ್ರೀ ಪಂಚಲಿಂಗೇಶ್ವರಿ ದೇವಾಲಯವಿದ್ದು. ಆ ಕಾರಣದಿಂದ ಪಡುವರಿ ಎಂಬ ಹೆಸರು ಬಂದಿರಲೂಬಹುದು ಎಂದು ಊಹಿಸಲು ಸಾಧ್ಯವಿದೆ. ಇಂದಿಗೂ ಹಿಂದುಳಿದ ನಮ್ಮೂರ ಇತಿಹಾಸದ ಬಗ್ಗೆ ಚಾರಿತ್ರಿಕ ಸ್ಥಳಗಳಾಗಲೀ, ಶಾಸನಗಳಾಗಲೀ, ಅರಮನೆಗಳಾಗಲೀ ಭವ್ಯ ದೇವಾಲಯಗಳಾಗಲೀ, ಗ್ರಂಥಗಳಲ್ಲಿ ಲಭ್ಯವಿಲ್ಲ.

29-04-2015-12

ಪಡುವರಿ ಗ್ರಾಮ ಪಂಚಾಯತ್ ಚಾರಿತ್ರಿಕ ಹಿನ್ನಲೆ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉತ್ತರ ಭಾಗದಲ್ಲಿರುವ ಪಡುವರಿ ಗ್ರಾಮವು ವಿಶಾಲವಾದ ಏಳು ವಾರ್ಡಗಳನ್ನು ಹೊಂದಿರುತ್ತದೆ. ಈ ಗ್ರಾಮದ ಪೂರ್ವಕ್ಕೆ ಯಡ್ತರೆ ಗ್ರಾಮ, ದಕ್ಷಿಣದಲ್ಲಿ ಸುಮನಾ ನದಿ ಮತ್ತು ಉಪ್ಪುಂದ ಗ್ರಾಮ, ಪಶ್ಚಿಮದಲ್ಲಿ ವಿಶಾಲವಾದ ಅರಬ್ಬಿ ಸಮುದ್ರ, ಉತ್ತರದಲ್ಲಿ ಶಿರೂರು ಗ್ರಾಮ, ಇವು ಮೇರೆಯಾಗಿದ್ದು, ಆಯಾಕಟ್ಟಿನ ಸ್ಥಳದಲ್ಲಿದ್ದು ಒಂದು ಭದ್ರವಾದ ಕೋಣೆಯಂತೆ ಭಾಸವಾಗುತ್ತದೆ. ನಮ್ಮೂರಿನ ಬಗ್ಗೆ ಐತಿಹಾಸಿಕ ದಾಖಲೆಗಳು ಅಲಭ್ಯವಾದರೂ ಅನೇಕ ಇತಿಹಾಸಗಳು ಪ್ರಚಲಿತವಿದೆ. ಈ ಗ್ರಾಮಕ್ಕೆ ಪೂರ್ವದಲ್ಲಿರುವ ಬೈಂದೂರು ಹಿಂದಿನಿಂದಲೂ ಒಂದು ಪ್ರಮುಖ ಕೇಂದ್ರವಾಗಿದ್ದು, ಅದು ದಕ್ಷಿಣ ಕನ್ನಡ ಜಿಲ್ಲೆ ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಸಂಪರ್ಕಿಸುವ ವ್ಯಾಪಾರ ನಡೆಸಲು ಬಂದು ಹೋಗುವ ಊರಾಗಿತ್ತು.

ಸೇನರು ಎಂಬ ಅರಸು ಮನೆತನದವರು ಇಲ್ಲಿನ ಕೇಂದ್ರ ಸ್ಥಾನದಲ್ಲಿ ಸೇನೇಶ್ವರ ದೇವಾಲಯ ಅಲ್ಲಿಂದ ಪೂರ್ವಕ್ಕೆ ಸುಮಾರು ಒಂದು ಕಿ.ಮೀ. ದೂರದಲ್ಲಿ ಬಂಕೇಶ್ವರ ದೇವಾಲಯ, ಕೇಂದ್ರ ಸ್ಥಾನದಿಂದ ಎರಡು ಕಿ.ಮೀ. ಪಶ್ಚಿಮದಲ್ಲಿ ಸೋಮೇಶ್ವರ ದೇವಾಲಯ ಎಂಬ ಶಿವ ದೇವಾಲಯಗಳನ್ನು ನಿರ್ಮಿಸಿರಬಹುದೆಂದು ಇತಿಹಾಸದಿಂದ ತಿಳಿದುಬರುತ್ತದೆ. ಇಂದಿಗೂ ಈ ಮೂರು ದೇವಾಲಯಗಳ ಆಡಳಿತ ಮಂಡಳಿ ಉತ್ಸವಾದಿಗಳು ಮುಂದುವರಿದುಕೊಂಡು ಬರುತ್ತಿದೆ.

29-04-2015-10

29-04-2015-11

ಪಡುವರಿ ಗ್ರಾಮದ ವೈಶಿಷ್ಟ್ಯಗಳು: ಪಡುವರಿ ಗ್ರಾಮದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ನದಿಗಳು ಸಮುದ್ರವನ್ನು ಸೇರುವಾಗ ಉಂಟಾದ ಅಳಿವೆ ರುದ್ರ ರಮಣೀಯವಾಗಿದೆ. ಇಗರ್ಜಿ ಗುಡ್ಡದ ಮೇಲಿರುವ ಪವಿತ್ರ ಶಿಲುಬೆ ಹಾಗೂ ಹೋಲಿಕ್ರಾಸ್ ಚರ್ಚ. ಇಲ್ಲಿನ ಗಂಟೆ ಶಬ್ದ ಬೈಂದೂರು ಪೇಟೆಗೂ ಕೇಳಿಸುತ್ತದೆ. ಶ್ರೀ ಸೋಮೇಶ್ವರ ದೇವಾಲಯ ಹಾಗೂ ಪವಿತ್ರ ನಾಗತೀರ್ಥ, ಜಟ್ಟಿಗೇಶ್ವರ ದೇವಾಲಯವಿದೆ. ಸೋಮೇಶ್ವರ ಕಡಲ ಕಿನಾರೆ ಹಾಗೂ ಸೂರ್ಯಾಸ್ತದ ಸುಂದರ ದೃಶ್ಯ ಕಣ್ಮನಗಳಿಗೆ ಮುದನೀಡುತ್ತದೆ. ಇದನ್ನು ವೀಕ್ಷಿಸಲು ದಿನಾ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಪಕ್ಕದಲ್ಲಿ ಅರಣ್ಯ ಇಲಾಖೆಯ ಕ್ಷಿತಿಜ ನೇಸರಧಾಮ, ದೊಂಬೆಯಲ್ಲಿ ಸಾಯಿ ವಿಶ್ರಾಂತಿಧಾಮ, ಒತ್ತಿನೆಣೆಯ ಶ್ರೀ ರಾಘವೇಂದ್ರ ಮಠ ಪಡುವರಿ ಗ್ರಾಮದ ವೈಶಿಷ್ಟ್ಯಗಳಾಗಿವೆ.

ಪಡುವರಿ ಗ್ರಾಮವು ಅರಬೀ ಸಮುದ್ರ ತೀರದಲ್ಲಿರುವುದರಿಂದ ಇಲ್ಲಿನ ಬಹುತೇಕ ಮನೆಯ ಬಾವಿ ಉಪ್ಪು ನೀರಿನಿಂದ ಕೂಡಿದೆ. ಗ್ರಾಪಂ ಪ್ರತಿ ಮನೆಗೂ ನಳ್ಳಿಯ ನೀರಿನ ವ್ಯವಸ್ಥೆ ಕಲ್ಪಿಸಿದ್ದು, ಇಲ್ಲಿನ ನಿವಾಸಿಗಳು ವರ್ಷದ ಎಲ್ಲಾ ದಿನವು ನೀರಿಗಾಗಿ ನಳ್ಳಿಯ ನೀರಿನ್ನೆ ಆಶ್ರಯಿಸಿದ್ದಾರೆ. ಸಮುದ್ರರಾಜನಿಗೆ ಉಪ್ಪಿಗೆ ಬರ ಎಂಬಂತೆ ಈ ಗ್ರಾಮದ ಎಲ್ಲಾ ಜನರಿಗೂ ನೀರುಣಿಸಬೇಕಾದ ಪಂಚಾಯಿತಿನ ಆಚಾರಿಕೇರಿ ಮತ್ತು ಚರ್ಚ್ ರಸ್ತೆಯಲ್ಲಿ ಎರಡು ಬೃಹತ್ ಬಾವಿಗಳು ಬೇಸಿಗೆಯ ಬಿಸಿಲಿನ ಆರ್ಭಟದಿಂದ ಬತ್ತಿ ಹೋಗಿದೆ. ಗ್ರಾಮದ ಕೋಟೆಬಾಗಿಲು, ದುರ್ಮಿ, ಇರೂಪಾಕ್ಷಿ, ಕಸ್ಟಮ್ ರಸ್ತೆ, ಚರ್ಚ್ ರಸ್ತೆ ಮೊದಲಾದ ಭಾಗಗಳಲ್ಲಿನ ಜನರು ಕುಡಿಯುವ ನೀರಿಗಾಗಿ ಪಡುವ ಅಧ್ವಾನ ಹೇಳತೀರದು. ಈಗ ವತ್ತಿನೆಣೆಯಲ್ಲಿರುವ ಬೋರ್‌ವೆಲ್‌ನಿಂದ ನೀರನ್ನು ಇಡೀ ಗ್ರಾಮಕ್ಕೆ ವಿತರಿಸಬೇಕಾಗಿದೆ. ಗ್ರಾಮದ ಎಲ್ಲಾ ಮನೆಗೂ ಎರಡು ದಿನಕ್ಕೊಮ್ಮೆ ನಳ್ಳಿಯಲ್ಲಿ ಪೂರೈಕೆಯಾಗುತ್ತಿದ್ದು, ಅದು ಕೇವಲ 5-6 ಕೊಡಪಾನ ನೀರು ಮಾತ್ರ ಸಿಗುತ್ತದೆ. ಅದರಲ್ಲಿಯೇ ಸ್ನಾನ ಪಾನ ಎಲ್ಲವೂ ಮಾಡಬೇಕಾದ ಸಂಕಷ್ಟ ನಿವಾಸಿಗರದ್ದು.

ಪಡುವರಿ ಗ್ರಾಪಂ 3897.39 ಹೆಕ್ಟೆರ್ ವಿಸ್ತೀರ್ಣ ಹೊಂದಿದ್ದು, 1498 ಕುಟುಂಬಗಳಿಂದ 8600 ಜನಸಂಖ್ಯೆ ಹೊಂದಿದೆ.

29-04-2015-8

ಹೇಳಿಕೆ: ಪಂಚಾಯತ್‌ನ ಆದಾಯ, ಅನುದಾನ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಒಂದನ್ನು ಬಿಟ್ಟರೆ ಬೇರಾವ ದೊಡ್ಡ ಮಟ್ಟದ ಸಮಸ್ಯೆಯಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಟಾನಗೊಂಡ ಬಳಿಕ ಈ ಸಮಸ್ಯೆಯೂ ಬಗೆಹರಿಯಲಿದೆ.-ಸುರೇಶ ಬಟವಾಡಿ, ಅಧ್ಯಕ್ಷರು ಗ್ರಾಪಂ ಪಡುವರಿ.

29-04-2015-9

ಹೇಳಿಕೆ: ನಮ್ಮ ಗ್ರಾಮದಲ್ಲಿ ಕಿಂಡಿ ಅಣೆಕಟ್ಟಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ತೆರೆದ ಬಾವಿ ಮತ್ತು ಕೊಳವೆ ಬಾವಿಗಳ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಪ್ರಯತ್ನಿಸಲಾಗಿದೆ.-ಮಂಜುನಾಥ ಪಿ., ಪಂಚಾಯತ್ ಅಭಿವೃದ್ಧಿ ಅಧಿಕಾರಿ. 

ವರದಿ – ನರಸಿಂಹ ನಾಯಕ್