ಬೈಂದೂರು ವಿಶೇಷ ತಹಶೀಲ್ದಾರ ಕಚೇರಿಗೆ ಹೈಟೆಕ್‌ ಸ್ಪರ್ಶ….

0
2812

bdr

ಬೈಂದೂರು: ಒಂದು ಕಾಲವಿತ್ತು, ಜಾಗದ ಪಹಣಿಯ ಚಿಕ್ಕ ತಿದ್ದುಪಡಿಗಾಗಿ ವಾರಗಟ್ಟಲೆ ಅಲೆಯಬೇಕು, ನಿರ್ದಿಷ್ಟ ಅಧಿಕಾರಿಯ ಭೇಟಿ ಮಾಡಬೇಕೆಂದರೆ ದಿನವಿಡೀ ಕಾದು ಕುಳಿತುಕೊಳ್ಳಬೇಕು. ಒಟ್ಟಾರೆ ಬದುಕಿನ ಬಹುಮುಖ್ಯ ಅಂಗವಾದ ಕಂದಾಯ ಕೆಲಸಕ್ಕಾಗಿ ಜನರು ಹೈರಾಣಾಗಿ ಹೋಗಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ಸರಕಾರದ ಹೊಸ ಚಿಂತನೆಗಳು ಜನಸಾಮಾನ್ಯರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿವೆ. ಗ್ರಾಮೀಣ ಭಾಗವಾದ ಬೈಂದೂರಿನ ವಿಶೇಷ ತಹಶೀಲ್ದಾರರ ಕಚೇರಿ ಪಡೆಸಾಲೆ ಯೋಜನೆಯಲ್ಲಿ ಹೈಟೆಕ್‌ ಸ್ಪರ್ಶದೊಂದಿಗೆ ಕಂಗೊಳಿಸುತ್ತಿದೆ.

bdr3

bdr 4

bdr 2

ಏನಿದು ಪಡಸಾಲೆ ಯೋಜನೆ?

ಸಾಮಾನ್ಯವಾಗಿ ಹಲವಾರು ವರ್ಷಗಳಿಂದ ಕಂದಾಯ ಇಲಾಖೆ ಅವ್ಯವಸ್ಥೆಯ ಆಗರವಾಗಿದೆ. ಭೂ ದಾಖಲೆ ಸೇರಿದಂತೆ ಪ್ರತಿ ಯೊಂದು ಕಾರ್ಯಕ್ಕೂ ಕಂದಾಯ ಇಲಾಖೆಯ ಅವಲಂಬನೆಯಿಂದಾಗಿ ಸಹಜವಾಗಿಯೇ ಜನಸಾಮಾನ್ಯರ ಅಲೆದಾಟ ಮಾಮೂಲಿ ಯಾಗಿತ್ತು. ಕಂಪ್ಯೂಟರೀಕರಣಗೊಂಡ ಬಳಿಕ ಕೊಂಚ ಮಟ್ಟಿನ ಸುಧಾರಣೆ ಕಂಡರೂ ಸಹ ಭೂಮಾಪನ ವಿಭಾಗ, ಸೇರಿದಂತೆ ಬಹುತೇಕ ವಿಭಾಗಗಳಲ್ಲಿ ತಿಂಗಳುಗಟ್ಟಲೆ ಅಲೆಸುತ್ತಿದೆ. ಪಡಿತರ ಚೀಟಿ, ಆದಾಯ ದೃಢೀಕರಣ ಪತ್ರ, ವಾಸ್ತವ್ಯ ದೃಢೀಕರಣ, ಸೇರಿದಂತೆ ಎಲ್ಲಾ ಅಗತ್ಯ ಕಾರ್ಯಗಳಿಗೂ ತಾಲೂಕು ಕಚೇರಿಯ ಅವಲಂಬನೆಯಿಂದ ವ್ಯವಸ್ಥಿತ ಸಮಯದಲ್ಲಿ ನಿಭಾಯಿಸಲು ಕೆಲಸ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಅತ್ಯಂತ ಆರೋಗ್ಯಕರ ವಾತಾವರಣ ಮತ್ತು ಸಮರ್ಪಕ ಸೇವೆ ದೊರೆಯುವ ಉದ್ದೇಶದಿಂದ ಸರಕಾರ ನೂತನವಾಗಿ ಜಾರಿಗೆ ತಂದ ಯೋಜನೆಯೆ ಕಂದಾಯ ಇಲಾಖೆಯ ಪಡೆಸಾಲೆಯಾಗಿದೆ.ಕಂದಾಯ ವ್ಯವಸ್ಥೆ ಮೇಲ್ದರ್ಜೆಗೇರಿಸುವ ಜತೆಗೆ ಸಾರ್ವಜನಿಕರಿಗೆ ವಿಶ್ರಾಂತಿ ಸ್ಥಳ, ಕುಡಿಯುವ ನೀರು, ಮೊಬೈಲ್‌ ಚಾರ್ಜರ್‌, ಶುದ್ಧ ಗಾಳಿ ಬೆಳಕಿನ ವ್ಯವಸ್ಥೆ, ಕಂದಾಯ ನಿರೀಕ್ಷಕರ ಜತೆ ಸಮಾಲೋಚನೆಗೆ ಅವಕಾಶ ಟಿ.ವಿ. ವ್ಯವಸ್ಥೆ, ಪ್ರತಿ ಕಂದಾಯ ಅಧಿಕಾರಿಗಳಿಗೆ ಪ್ರತ್ಯೇಕ ವಿಭಾಗದ ವ್ಯವಸ್ಥೆ ಹೀಗೆ ಹತ್ತಾರು ಬದಲಾವಣೆಗಳಿಂದ ಬೈಂದೂರು ವಿಶೇಷ ತಹಶೀಲ್ದಾರರ ಕಚೇರಿ ಕಂಗೊಳಿಸುತ್ತಿದೆ.

ಏಜೆಂಟ್‌ರಿಗೆ ಕತ್ತರಿ,ರೇಕಾರ್ಡ್‌ ರೂಮ್‌ ಭದ್ರತೆ

ಸಾಮಾನ್ಯವಾಗಿ ಕಂದಾಯ ಇಲಾಖೆ ಗಳಲ್ಲಿ ಮದ್ಯವರ್ತಿಗಳ ಹಾವಳಿ ಅಧಿಕ ವಾಗಿದೆ. ಪಡೆಸಾಲೆ ವ್ಯವಸ್ಥೆಯಿಂದಾಗಿ ಪ್ರತಿಯೊಬ್ಬ ಜನಸಾಮಾನ್ಯರು ನೇರ ವಾಗಿ ಮಧ್ಯವರ್ತಿಗಳನ್ನು ಅವಲಂಬಿಸದೇ ಕಂದಾಯ ಕೆಲಸಗಳನ್ನು ಪೂರೈಸಿಕೊಳ್ಳ ಬಹುದಾಗಿದೆ. ರೆಕಾರ್ಡ್‌ ರೂಮ್‌ಗಳಲ್ಲಿ ಭದ್ರತೆ ಹೆಚ್ಚಿಸಿರುವುದರಿಂದ ಎಲ್ಲೆಂದರಲ್ಲಿ ನುಗ್ಗುವ ಏಜೆಂಟರ ಹಾವಳಿ ತಪ್ಪಿದಂತಾಗಿದೆ.ಶಿಕ್ಷಣ ವ್ಯವಸ್ಥೆ, ಜನಜೀವನ ಸುಧಾರಿಸಿದಂತೆ ಬಹುಮುಖ್ಯ ವಾದ ಕಂದಾಯ ವ್ಯವಸ್ಥೆಗೆ ಸುಧಾರಣೆ  ತಂದಿರುವುದು ಜನಸಾಮಾನ್ಯರ ಸಂಕಷ್ಟ ಕ್ಕೊಂದಿಷ್ಟು ರಿಲ್ಯಾಕ್ಸ್‌ ನೀಡಿದಂತಾಗಿದೆ.

~ ಅರುಣ ಕುಮಾರ್‌, ಶಿರೂರು