ರಣಜಿ: ರಾರಾಜಿಸುವುದೇ ಕರ್ನಾಟಕ?

0
749

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

karnataka-ranji

ಮಹಮ್ಮದ್‌ ನೂಮಾನ್‌

ಮತ್ತೊಂದು ರಣಜಿ ಋತುವಿಗೆ ಚಾಲನೆ ಲಭಿಸಿದೆ. ಹಾಲಿ ಚಾಂಪಿಯನ್‌ ಎಂಬ ಹಣೆಪಟ್ಟಿ ಹೊತ್ತುಕೊಂಡಿರುವ ಕರ್ನಾಟಕ ತಂಡ ದೇಸಿ ಕ್ರಿಕೆಟ್‌ನ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಮತ್ತೊಮ್ಮೆ ಪ್ರಭುತ್ವ ಮೆರೆಯಲು ಸಜ್ಜಾಗಿದೆ. ಹೋದ ವರ್ಷ ಗೆದ್ದ ಕಿರೀಟವನ್ನು ತನ್ನಲ್ಲೇ ಉಳಿಸಿಕೊಳ್ಳಬೇಕೆಂಬುದು ಕರ್ನಾಟಕದ ಅದಮ್ಯ ಬಯಕೆ.

ಪ್ರಸಕ್ತ ರಣಜಿ ಋತುವಿನ ಮೊದಲ ಪಂದ್ಯ ಭಾನುವಾರ ಆರಂಭವಾಗಿದೆ. ಕರ್ನಾಟಕ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮಿಳುನಾಡು ವಿರುದ್ಧ ಪೈಪೋಟಿ ನಡೆಸುತ್ತಿದೆ. ಟೂರ್ನಿಯಲ್ಲಿ ಸಕಾರಾತ್ಮಕ ಆರಂಭ ಪಡೆಯುವುದು ರಾಜ್ಯ ತಂಡದ ಗುರಿ.

ಈ ಬಾರಿ ಆರ್‌. ವಿನಯ್‌ ಕುಮಾರ್‌ ಬಳಗದ ಮೇಲಿರುವ ನಿರೀಕ್ಷೆ ಅಪಾರ. ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿರುವ ತಂಡ ಹೋದ ಒಂದು ವರ್ಷದ ಅವಧಿಯಲ್ಲಿ ದೇಸಿ ಕ್ರಿಕೆಟ್‌ನಲ್ಲಿ ‘ರಾಜ’ನಾಗಿ ಮೆರೆದದ್ದು ಎಲ್ಲರಿಗೂ ತಿಳಿದಿದೆ. 2013–14 ರ ರಣಜಿ ಟೂರ್ನಿಯ ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಮಣಿಸಿ ಕರ್ನಾಟಕ ಚಾಂಪಿಯನ್‌ ಆಗಿತ್ತು.

ರಾಜ್ಯ ತಂಡ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿತ್ತು. ಆ ಬಳಿಕವೂ ಅಮೋಘ ಆಟ ಮುಂದುವರಿಸಿದ್ದ ಕರ್ನಾಟಕ ಇರಾನಿ ಕಪ್‌ ಮತ್ತು ವಿಜಯ್‌ ಹಜಾರೆ ಟ್ರೋಫಿಯಲ್ಲೂ ಕಿರೀಟ ಮುಡಿಗೇರಿಸಿಕೊಂಡಿತ್ತು. ವಿಜಯ್‌ ಹಜಾರೆ ಟ್ರೋಫಿಯನ್ನು ಕರ್ನಾಟಕ ಈ ಬಾರಿಯೂ ತನ್ನಲ್ಲೇ ಉಳಿಸಿಕೊಂಡಿದೆ. ಇತ್ತೀಚೆಗೆ ನಡೆದ ದೇವಧರ್‌ ಟ್ರೋಫಿ ಮತ್ತು ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯದ ಆಟಗಾರರು ಆತ್ಮವಿಶ್ವಾಸದೊಂದಿಗೆಯೇ ರಣಜಿ ಋತುವನ್ನು ಆರಂಭಿಸಿದ್ದಾರೆ.

ಈ ಬಾರಿ ತಂಡದಲ್ಲಿ ಹೆಚ್ಚಿನ ಬದಲಾವಣೆ ಏನೂ ಮಾಡಿಲ್ಲ. ಹೋದ ಋತುವಿನಲ್ಲಿ ಆಡಿದ ಆಟಗಾರರಿಗೆ ಅವಕಾಶ ನೀಡಲಾಗಿದೆ. ತಮಿಳುನಾಡು ವಿರುದ್ಧದ ಪಂದ್ಯಕ್ಕೆ ಆಯ್ಕೆ ಮಾಡಿರುವ ತಂಡದಲ್ಲಿ ಕಾಣಿಸಿಕೊಂಡಿರುವ ಏಕೈಕ ಹೊಸಮುಖ ಎಂದರೆ ಶಿಶಿರ್‌ ಭವಾನೆ ಮಾತ್ರ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಪ್ರಸಕ್ತ ವರ್ಷ ಆಯೋಜಿಸಿದ್ದ ವಿವಿಧ  ಟೂರ್ನಿಗಳಲ್ಲಿ ಹುಬ್ಬಳ್ಳಿಯ ಈ ಎಡಗೈ ಬ್ಯಾಟ್ಸ್‌ಮನ್‌   ಅತ್ಯುತ್ತಮ  ಪ್ರದರ್ಶನ ತೋರಿದ್ದಾರೆ. ಈ ಕಾರಣ ಅವರಿಗೆ ರಣಜಿ ತಂಡದಲ್ಲಿ ಅವಕಾಶ ದೊರೆತಿದೆ.

ರಾಹುಲ್‌ ಅನುಪಸ್ಥಿತಿ ಕಾಡುವುದೇ?
ಹೋದ ರಣಜಿ ಋತುವಿನಲ್ಲಿ ಕರ್ನಾಟಕದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಕೆ.ಎಲ್‌. ರಾಹುಲ್‌. ಆದರೆ ಈ ಬಾರಿ ತಂಡಕ್ಕೆ ಅವರ ನೆರವು ಲಭಿಸುತ್ತಿಲ್ಲ. ರಾಹುಲ್‌ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕ ತಂಡದಲ್ಲಿ ರಾಹುಲ್‌ ಅನುಪಸ್ಥಿತಿ ಎದುರಾಳಿ ತಂಡಗಳಿಗೆ ಸಂತಸ ನೀಡಬಹುದು ನಿಜ. ಆದರೆ ಅವರು ಇಲ್ಲದೆಯೂ ಬೃಹತ್‌ ಮೊತ್ತ ಪೇರಿಸುವ ತಾಕತ್ತು ಕರ್ನಾಟಕ ತಂಡಕ್ಕಿದೆ. ಏಕೆಂದರೆ ತಂಡದ ಬ್ಯಾಟಿಂಗ್‌ ಶಕ್ತಿ ಅಪಾರವಾಗಿದೆ. ಎಲ್ಲ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿರುವುದು ಸಂತಸ ಉಂಟುಮಾಡುವ ವಿಚಾರ. ರಾಬಿನ್‌ ಉತ್ತಪ್ಪ, ಮನೀಷ್ ಪಾಂಡೆ, ಮಯಂಕ್‌ ಅಗರವಾಲ್‌ ಮತ್ತು ಕರುಣ್‌ ನಾಯರ್‌ ಒಂದಲ್ಲ ಒಂದು ಟೂರ್ನಿಗಳಲ್ಲಿ ಮಿಂಚುತ್ತಾ ಇದ್ದಾರೆ.

ಹೋದ ಋತುವಿನಲ್ಲಿ ರಣಜಿ ಟ್ರೋಫಿ ಎತ್ತಿಹಿಡಿದ ಬಳಿಕ ರಾಜ್ಯದ ಆಟಗಾರರು ಗೆಲುವಿನ ಅಲೆಯಲ್ಲಿ ಮೈಮರೆತು ಕುಳಿತುಕೊಳ್ಳಲಿಲ್ಲ. ಇನ್ನಷ್ಟು ಸಾಧಿಸಬೇಕೆಂಬ ತುಡಿತ ಅವರಲ್ಲಿತ್ತು. ಆದ್ದರಿಂದ ಕಠಿಣ ಪರಿಶ್ರಮ ನಡೆಸುತ್ತಲೇ ಇದ್ದಾರೆ. ಈ ಬಾರಿಯೂ ರಾಜ್ಯ ತಂಡ ಬ್ಯಾಟಿಂಗ್‌ ವಿಭಾಗವನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಆರಂಭದಲ್ಲೇ ಎದುರಾಳಿ ಬೌಲರ್‌ಗಳ ದಿಕ್ಕು ತಪ್ಪಿಸುವ ತಾಕತ್ತು ಮಯಂಕ್‌ ಅಗರವಾಲ್‌ ಬಾಹುಗಳಲ್ಲಿ ಅಡಗಿದೆ. ಉತ್ತಪ್ಪ ಅವರ ಸಾಮರ್ಥ್ಯ ಎಲ್ಲರಿಗೂ ತಿಳಿದದ್ದೇ. ಮನೀಷ್‌ ಪಾಂಡೆ ಕೂಡಾ ಆಕ್ರಮಣಕಾರಿ ಆಟವನ್ನು ಇಷ್ಟಪಡುತ್ತಾರೆ.

‘ಈ ಬಾರಿ ರಾಹುಲ್‌ ನೆರವು ಲಭಿಸುತ್ತಿಲ್ಲ. ಆದರೆ ಮಯಂಕ್‌, ಶಿಶಿರ್‌ ಭವಾನೆ, ಕುನಾಲ್‌ ಕಪೂರ್‌ ಮತ್ತು ಆರ್‌. ಸಮರ್ಥ್‌ ಅವರಂತಹ ಯುವ ಆಟಗಾರರು ತಂಡದಲ್ಲಿದ್ದಾರೆ. ಆದ್ದರಿಂದ ರಾಹುಲ್‌ ಇಲ್ಲದೆಯೂ ಬೃಹತ್‌ ಮೊತ್ತ ಪೇರಿಸುವುದು ಕಷ್ಟವಾಗದು’ ಎಂಬುದು ಕರ್ನಾಟಕ ತಂಡದ ಬ್ಯಾಟಿಂಗ್‌ ಕೋಚ್‌ ಜೆ. ಅರುಣ್‌ ಕುಮಾರ್‌ ಅವರ ಮಾತು.

ಆದರೂ ರಾಹುಲ್‌ ಅನುಪಸ್ಥಿತಿ ಸ್ವಲ್ಪ ಮಟ್ಟಿಗಾದರೂ ಕಾಡಬಹುದು. ಒತ್ತಡವನ್ನು ಮೆಟ್ಟಿನಿಂತು ನಿಧಾನವಾಗಿ ಇನಿಂಗ್ಸ್‌ ಕಟ್ಟುವುದರಲ್ಲಿ ರಾಹುಲ್‌ ಅವರದ್ದು ಎತ್ತಿದ ಕೈ. ರಾಬಿನ್‌, ಪಾಂಡೆ, ಕರುಣ್‌ ಮತ್ತು ಮಯಂಕ್‌ ಅಬ್ಬರದ ಆಟ ಇಷ್ಟಪಡುವರು. ಯಾವುದೇ ಕ್ಷಣದಲ್ಲೂ ಇವರು ಔಟಾಗಿ ಪೆವಿಲಿಯನ್‌ಗೆ ಮರಳುವರು ಎಂಬ ಆತಂಕ ಇರುತ್ತದೆ. ಆದರೆ ರಾಹುಲ್‌ ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವಂತಹ ಆಟಗಾರ. ಒಂದೆರಡು ವಿಕೆಟ್‌ಗಳು ಬೇಗನೇ ಬಿದ್ದರೂ, ಕ್ರೀಸ್‌ನಲ್ಲಿ ನೆಲೆಯೂರಿ ನಿಂತು ತಂಡವನ್ನು ಅಪಾಯದಿಂದ ಮೇಲೆತ್ತುವ ಕಲೆ ಅವರಿಗೆ ತಿಳಿದಿದೆ.

ಕರ್ನಾಟಕದ ಬೌಲಿಂಗ್‌ ವಿಭಾಗ ಕೂಡಾ ಸಮತೋಲನದಿಂದ ಕೂಡಿದೆ. ಪ್ರಮುಖ ಬೌಲರ್‌ಗಳು ಫಿಟ್‌ ಆಗಿದ್ದಾರೆ. ಯಾರೂ ಗಾಯದ ಸಮಸ್ಯೆ ಎದುರಿಸುತ್ತಿಲ್ಲ. ಆರ್‌. ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌, ಎಚ್‌.ಎಸ್‌. ಶರತ್ ಮತ್ತು ಎಸ್‌. ಅರವಿಂದ್‌ ವೇಗದ ಬೌಲಿಂಗ್‌ನ ಚುಕ್ಕಾಣಿ ಹಿಡಿಯಲಿದ್ದಾರೆ. ಶ್ರೇಯಸ್‌ ಗೋಪಾಲ್‌ ಮತ್ತು ಅಬ್ರಾರ್‌ ಖಾಜಿ ಸ್ಪಿನ್‌ ಬೌಲಿಂಗ್‌ನ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ವಿಶ್ವಕಪ್‌ ಮೇಲೆ ಕಣ್ಣು
ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಗೆ ಹೋದ ವಾರ ಪ್ರಕಟಿಸಲಾದ 30 ಸದಸ್ಯರ ಭಾರತ ಸಂಭಾವ್ಯ ತಂಡದಲ್ಲಿ ರಾಬಿನ್‌, ಮನೀಷ್‌ ಮತ್ತು ಸ್ಟುವರ್ಟ್‌ ಬಿನ್ನಿ ಸ್ಥಾನ ಪಡೆದಿದ್ದಾರೆ. ಆದ್ದರಿಂದ ಈ ಮೂವರು ಆಟಗಾರರಿಗೆ ರಣಜಿ ಪಂದ್ಯಗಳು ಮಹತ್ವದ್ದಾಗಿವೆ. ಏಕೆಂದರೆ ರಣಜಿ ಪಂದ್ಯಗಳಲ್ಲಿ ಇವರು ನೀಡುವ ಪ್ರದರ್ಶನವನ್ನು ಆಯ್ಕೆಗಾರರು ಗಮನಿಸಲಿದ್ದಾರೆ. ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಯಶಸ್ವಿಯಾದರೆ ವಿಶ್ವಕಪ್‌ ಟೂರ್ನಿಗೆ ಭಾರತ ತಂಡಕ್ಕೆ ಪರಿಗಣಸಬಹುದು.

ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಜನವರಿ 7ರ ಒಳಗಾಗಿ ವಿಶ್ವಕಪ್‌ಗೆ 15 ಸದಸ್ಯರ ಅಂತಿಮ ತಂಡವನ್ನು ಪ್ರಕಟಿಸಲಿದೆ. ಅದಕ್ಕೂ ಮುನ್ನ ಕರ್ನಾಟಕ ನಾಲ್ಕು ರಣಜಿ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳಲ್ಲಿ ಶ್ರೇಷ್ಠಮಟ್ಟದ ಪ್ರದರ್ಶನ ತೋರಿ ಆಯ್ಕೆಗಾರರ ಗಮನ ಸೆಳೆಯುವುದು ಈ  ಆಟಗಾರರ ಗುರಿ. ಹಾಲಿ ಚಾಂಪಿಯನ್‌ ಆಗಿರುವ ಕಾರಣ ಕರ್ನಾಟಕದ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಆದ್ದರಿಂದ ಅಲ್ಪ ಒತ್ತಡದಲ್ಲೇ ಆಡಬೇಕಿದೆ. ಅದನ್ನು ಮೆಟ್ಟಿನಿಂತು ಯಶಸ್ಸಿನ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಡುವುದೇ ಎಂಬ ಕುತೂಹಲ ಅಭಿಮಾನಿಗಳದ್ದು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)