ಮಣಿಪಾಲದ ವಿದ್ಯಾರ್ಥಿ ಅಮೆರಿಕದ ಶ್ರೇಷ್ಠ ಬಾಣಸಿಗ

0
676

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

chef_Vikas_obama.

ಅಡುಗೆ ಕ್ಷೇತ್ರದಲ್ಲಿ ಬಗೆಬಗೆ ಅವಕಾಶ, ವಿಕಾಸ್ ಖನ್ನಾ ಸಾಹಸ

(* ಎಸ್. ಜಿ. ಕುರ್ಯ ಉಡುಪಿ)
ಮಣಿಪಾಲದ ವಿದ್ಯಾರ್ಥಿ ಈಗ ಅಮೆರಿಕದಲ್ಲಿ ಖ್ಯಾತ ಬಾಣಸಿಗ (ಚೆಫ್). ಹೌದು, ಮಣಿಪಾಲದ ವೆಲ್‌ಕಂ ಗ್ರೂಪ್ ಗ್ರಾಜುಯೇಟ್ ಸ್ಕೂಲ್‌ಆಫ್ ಹೋಟೆಲ್ ಅಡ್ಮಿನಿಸ್ಟ್ರೇಶನ್‌ನಲ್ಲಿ ವಿದ್ಯಾರ್ಥಿಯಾಗಿದ್ದ, ಪಂಜಾಬ್ ಮೂಲದ ವಿಕಾಸ್ ಖನ್ನಾ (43) ಅಡುಗೆಗೆ ಸಂಬಂಧಿಸಿದಂತೆ 11 ಕೃತಿ ರಚಿಸಿದ್ದಾರೆ.

ಪಂಜಾಬಿನ ಅಮೃತಸರದ ದೇವಿಂದರ್, ಬಿಂದು ಖನ್ನಾ ದಂಪತಿಯ ಮಗನಾದ ಖನ್ನಾ , 13 ನೇ ವಯಸ್ಸಿನ ತನಕ ಕಾಲು, ಪಾದದ ಸಮಸ್ಯೆ ಹೊಂದಿದ್ದರೂ ಅಜ್ಜಿಯ ಅಡುಗೆ ಮನೆ ಪ್ರೀತಿ, ಖನ್ನಾ ಬಾಣಸಿಗನಾಗಲು ಪ್ರೇರಣೆಯಾಯಿತು. ಕುಟುಂಬದ ಕೇಟರಿಂಗ್ ವ್ಯವಹಾರದಲ್ಲೂ ತೊಡಗಿದ್ದ ಖನ್ನಾ 17ರ ಹರಯಕ್ಕೇ ಲಾರೆನ್ಸ್ ಗಾರ್ಡನ್ಸ್ ಬ್ಯಾಂಕ್ವೆಟ್ಸ್ ಮೂಲಕ ಮದುವೆ, ಕೌಟುಂಬಿಕ ಸಮಾರಂಭಗಳಿಗೆ ಆಹಾರ ಪೂರೈಸುತ್ತಿದ್ದರು. ಅಮೃತಸರದ ಸ್ವರ್ಣ ಮಂದಿರದಲ್ಲಿ ಸಮುದಾಯ ಸೇವೆ ಮಾಡಿ, ಬಾಣಸಿಗನಾಗಿ ಗಮನ ಸೆಳೆದಿದ್ದರು.

ಚಿಕ್ಕಪ್ಪನ ನೆರವಿನಿಂದ ಬಾಣಸಿಗ ಪದವಿಯನ್ನು ವೃತ್ತಿಪರವಾಗಿ ಕಲಿಯಲು ಮಣಿಪಾಲಕ್ಕೆ ಬಂದ ಖನ್ನಾ , ಮರ, ಕಲ್ಲಿನ ಕೆತ್ತನೆ, ದಕ್ಷಿಣ ಭಾರತೀಯ ಅಡುಗೆ, ಜೇಡಿ ಮಣ್ಣಿನಿಂದ ಶಿಲ್ಪ ರಚನೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕನ್ನಡ ಕಲಿಕೆ ಜತೆಗೆ ಭಕ್ತಿ ಸಂಗೀತವನ್ನು ಉಡುಪಿ ಶ್ರೀಕೃಷ್ಣಮಠಕ್ಕೆ ತೆರಳಿ ಆಲಿಸುತ್ತಿದ್ದರು.

ತಾಜ್, ಒಬೇರಾಯ್, ವೆಲ್‌ಕಂ ಗ್ರೂಪ್ ಹೋಟೆಲ್, ಮುಂಬೈಯ ಲೀಲಾ ಹೋಟೆಲ್‌ನಲ್ಲಿ ವಿಶಿಷ್ಟ ಅನುಭವ ಗಳಿಸಿದ ಇವರು, ಅಮೆರಿಕದ ನ್ಯೂಯಾರ್ಕ್‌ನ ಕಾರ್ನೆಲ್ ವಿವಿಯಲ್ಲಿ ಉನ್ನತ ಅಧ್ಯಯನ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಆತಿಥ್ಯ ಸಮೂಹ
ನ್ಯೂಯಾರ್ಕ್‌ನಲ್ಲಿ ಜುನೂನ್ ರೆಸ್ಟೋರೆಂಟ್ ಸ್ಥಾಪಿಸಿ, ವಿಕಾಸ್ ಆತಿಥ್ಯ ಸಮೂಹವನ್ನು ಹೊಂದಿದ್ದಾರೆ. ಮಾಸ್ಟರ್ ಚೆಫ್ ಇಂಡಿಯಾ ಟಿ.ವಿ. ಶೋ (1,2,3) ನೀಡಿದ್ದಾರೆ. ಅಡುಗೆ ಕುರಿತ ಸಿನಿಮಾ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಪರವಾಗಿ ರುಬಿನ್ ಮ್ಯೂಸಿಯಮ್ ಆಫ್ ಆರ್ಟ್‌ನಲ್ಲಿ ಅಡುಗೆ ಮಾಡುವ ಮೂಲಕ ನಿಧಿಯೆತ್ತಿದ್ದಾರೆ.

ಸೌತ್ ಏಶ್ಯನ್ ಕಿಡ್ಸ್ ಇನ್‌ಫಿನೆಟ್ ವಿಶನ್(ಎಸ್‌ಎಕೆಐವಿ)ನಿಂದ ಸುನಾಮಿ ಸಹಿತ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಅದರಲ್ಲೂ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ನೆರವಾಗುತ್ತಿದ್ದು ವಿಶ್ವದ ಶ್ರೇಷ್ಠ ಬಾಣಸಿಗರನ್ನೊಳಗೊಂಡ ಕುಕ್ಕಿಂಗ್ ಫಾರ್ ಲೈಫ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ಸೆಕ್ಸಿಯೆಸ್ಟ್ ಮ್ಯಾನ್
2011ರಲ್ಲಿ ನ್ಯೂಯಾರ್ಕಿನ ಹಾಟೆಸ್ಟ್ ಚೆಫ್ ಮಾತ್ರವಲ್ಲ, ಸೆಕ್ಸಿಯೆಸ್ಟ್ ಮ್ಯಾನ್ ಅಲೈವ್ ಖ್ಯಾತಿಯನ್ನೂ ಪಡೆದಿದ್ದಾರೆ. ಸೂತ್ರ, ಮೋಡರ್ನ್ ಇಂಡಿಯನ್ ಕುಕ್ಕಿಂಗ್, ಎವ್ವೆರಿ ಒನ್ ಕ್ಯಾನ್ ಕುಕ್…ಸಹಿತ 11 ಕೃತಿ ರಚಿಸಿದ್ದು ರಿವರ್ಸ್‌ ಕೃತಿ 2014ನೇ ಸಾಲಿನ ಜೇಮ್ಸ್ ಬಿಯರ್ಡ್ ಫೌಂಡೇಶನ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ.
—–

ಅಂತಾರಾಷ್ಟ್ರೀಯ ಅಡುಗೆ, ಬಾಣಸಿಗ ಕ್ಷೇತ್ರದಲ್ಲಿ ಭಾರತೀಯರಿಗೆ ವಿಪುಲ ಅವಕಾಶಗಳಿವೆ. ಹೋಟೆಲ್, ರೆಸ್ಟೋರೆಂಟ್ ಬದಲು ಆಹಾರ ಸಲಹೆಗಾರ, ಟಿವಿ ಅಡುಗೆ ಶೋ ನಿರ್ಮಾಪಕ, ಬ್ಲಾಗಿಂಗ್, ಆಹಾರ ವಿಮರ್ಶಕ, ಲೇಖಕನಾಗಬಹುದು. ಸಾಧನೆಗೆ ಸ್ವ ಸಾಮರ್ಥ್ಯ, ಕಠಿಣ ಪರಿಶ್ರಮ ಅಗತ್ಯ.
* ವಿಕಾಸ್ ಖನ್ನಾ, ಅಂತಾರಾಷ್ಟ್ರೀಯ ಖ್ಯಾತಿಯ ಬಾಣಸಿಗ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)