ರೈಲು ಇಳಿದ ಡಿವಿಎಸ್‌! – ಸದಾನಂದ ಗೌಡಗೆ ಕಾನೂನು; ಜಿ.ಎಂ.ಸಿದ್ದೇಶ್ವರಗೆ ಬ್ರಹತ್‌ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ

0
1023

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

gowda-siddesh

ನವದೆಹಲಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೆಲವರ ಖಾತೆಗಳೂ ಬದಲಾಗಿದ್ದು, ಡಿ.ವಿ.ಸದಾನಂದ ಗೌಡರು ರೈಲ್ವೆ ಖಾತೆಯನ್ನು ಕಳೆದು­ಕೊಂಡಿದ್ದಾರೆ. ಮೋದಿ ಅವರ ಆಪ್ತರಾದ ಸುರೇಶ್‌ ಪ್ರಭು ಅವರಿಗೆ ರೈಲ್ವೆ ಖಾತೆ ವಹಿಸಿ, ಸದಾನಂದ ಗೌಡರಿಗೆ ಕಾನೂನು ಖಾತೆ ವಹಿಸ­ಲಾ­ಗಿದೆ. ಕೇಂದ್ರ ಸಂಪುಟದಲ್ಲಿ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರಾಗಿದ್ದ ಜಿ.ಎಂ.ಸಿದ್ದೇಶ್ವರ ಅವ­ರಿಗೆ ಬೃಹತ್‌ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಜವಾಬ್ದಾರಿ  ನೀಡಲಾಗಿದೆ.

ದಾವಣಗೆರೆ ಲೋಕಸಭೆ ಕ್ಷೇತ್ರ ಪ್ರತಿನಿಧಿಸಿರುವ ಸಿದ್ದೇಶ್ವರ ತೆಲುಗು ದೇಶಂನ ಅಶೋಕ್‌ ಗಜಪತಿರಾಜ್‌ ಅವರ ಅಧೀನದಲ್ಲಿ ಕೆಲಸ ಮಾಡು­ತ್ತಿದ್ದರು. ಅವರೀಗ ಶಿವಸೇನಾ ಅನಂತ­ಗೀತೆ ಅವರಿಗೆ ಕಿರಿಯ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಡಿವಿಎಸ್‌ ಕೈತಪ್ಪಿದ ರೈಲ್ವೆ ಖಾತೆ
ನವದೆಹಲಿ:
 ಕೇವಲ ಐದೂವರೆ ತಿಂಗಳಲ್ಲಿ ಮಹತ್ವದ ರೈಲ್ವೆ ಖಾತೆ ಡಿ.ವಿ. ಸದಾನಂದಗೌಡರ ಕೈತಪ್ಪಿದೆ. ಇದರ ಬದಲು ಅವರಿಗೆ ಕಾನೂನು ಮತ್ತು ನ್ಯಾಯಾಂಗ ಖಾತೆ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ರೈಲ್ವೆ ಸಚಿವಾಲಯದಿಂದ ನಿರ್ಗಮಿ­ಸಿದ್ದಾರೆ. ರವಿಶಂಕರ್‌ ಪ್ರಸಾದ್‌ ಅವರ ಬಳಿ ಹೆಚ್ಚುವರಿಯಾಗಿದ್ದ ಕಾನೂನು ಖಾತೆ ಹಿಂದಕ್ಕೆ ಪಡೆದು ಅವರಿಗೆ ಕೊಡಲಾಗಿದೆ. ಇದು ಮಾಜಿ ಮುಖ್ಯಮಂತ್ರಿಗಾದ ಹಿನ್ನಡೆ ಎಂದೇ ರಾಜಕೀಯ ವಲಯದಲ್ಲಿ ಭಾವಿಸಲಾಗಿದೆ.

ಬೀದಿಗೆ ಬಂದ ಪುತ್ರನ ಪ್ರೇಮ ಪ್ರಕರಣ; ಐದು ತಿಂಗಳಲ್ಲಿ ದ್ವಿಗುಣಗೊಂಡ ಆಸ್ತಿಯಿಂದ ಸುತ್ತಿ­ಕೊಂಡ ವಿವಾದ; ಅದಕ್ಷ ಆಡಳಿತ ರೈಲ್ವೆ ಖಾತೆ ಸದಾನಂದ­ಗೌಡ ಅವರ ಕೈಬಿಡಲು ಕಾರಣವಾ­ಯಿತು ಎಂದು ಬಿಜೆಪಿ ಉನ್ನತ ಮೂಲಗಳು ಹೇಳಿವೆ. ಮೋದಿ ಮೇ 26ರಂದು ಅಧಿಕಾರ ಸ್ವೀಕ­ರಿಸಿದಾಗ ಸದಾನಂದಗೌಡರ ಮೇಲೆ ವಿಶ್ವಾಸವಿಟ್ಟು ರೈಲ್ವೆ ಖಾತೆ ನೀಡಿದ್ದರು. ಪ್ರಮುಖ ಖಾತೆಯೊಂದು ಅವರಿಗೆ ದೊರೆತಿದ್ದರಿಂದ ಅವರ ರಾಜಕೀಯ ವಿರೋಧಿಗಳೂ ಸೇರಿದಂತೆ ಅನೇಕರು ಹುಬ್ಬೇರಿ­ಸಿ­ದ್ದರು. ಆದರೆ, ಪ್ರಧಾನಿಯವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಗೌಡರು ವಿಫಲರಾದ್ದರಿಂದ ಖಾತೆ ಬದಲಾವಣೆ ಆಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಲೋಕಸಭೆಯಲ್ಲಿ ಜುಲೈ 8ರಂದು ಸದಾನಂದ­ಗೌಡರು ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಬುಲೆಟ್‌–  ಹೈಸ್ಪೀಡ್‌ ರೈಲೂ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಇವೆಲ್ಲವೂ ಮೋದಿ ಅವರ ಕನಸಿನ ಯೋಜನೆಗಳು. ಈ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಕಾರ್ಯ­ಗತಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ವಿಳಂಬ ಮಾಡಿದ್ದರಿಂದ ಪ್ರಧಾನಿ ಅಸಮಾಧಾನ­ಗೊಂಡಿದ್ದರು.
ರೈಲ್ವೆ ಸಚಿವರು ದಕ್ಷತೆಯಿಂದ ಕೆಲಸ ಮಾಡುತ್ತಿರಲಿಲ್ಲ. ರೈಲ್ವೆ ಮಂಡಳಿ ಸೇರಿದಂತೆ ಅಧಿ­ಕಾರಿಗಳ ಮೇಲೆ ಹಿಡಿತ ಸಾಧಿಸಲು ಅವರಿಗೆ ಸಾಧ್ಯ­ವಾಗಿರಲಿಲ್ಲ. ರೈಲ್ವೆ ಖಾತೆ ಹೇಗೆ ಕೆಲಸ ಮಾಡುತ್ತದೆಂದು ಅರ್ಥ ಮಾಡಿಕೊಳ್ಳಲು ಸೋತರು. ಇದೊಂದು ದೊಡ್ಡ ಖಾತೆ ಸುಮಾರು 13 ಲಕ್ಷ ನೌಕರರಿದ್ದಾರೆ. ಇದರ ನಿಯಂತ್ರಣದಲ್ಲಿ 19 ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿವೆ. ಪ್ರತಿ ತೀರ್ಮಾನಕ್ಕೂ ರೈಲ್ವೆ ಸಚಿವರು, ಪ್ರಧಾನಿ ಅವರ ಬಳಿಗೆ ಓಡುತ್ತಿದ್ದರೆಂದು ಮೂಲಗಳು ವಿವರಿಸಿವೆ.

ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡಿ ಅನುಭವ ಇಲ್ಲದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಮ್ಮ ಆಪ್ತ ವಿಭಾಗದಲ್ಲಿ ಸದಾನಂದಗೌಡರು ಇಟ್ಟು­ಕೊಂಡಿದ್ದರು. ರೈಲ್ವೆ ಸಚಿವಾಲಯದಲ್ಲಿ ಪ್ರತಿನಿತ್ಯ ನೂರಾರು ಸಮಸ್ಯೆಗಳು ಬರುತ್ತವೆ. ಅವುಗಳನ್ನು ನಿಭಾಯಿಸುವ ತಾಕತ್ತು ರೈಲ್ವೆ ಸಚಿವರಿಗೆ ಇರಬೇಕು. ಸದಾನಂದಗೌಡರಿಗೆ ಅಂಥ ಛಾತಿ ಇರಲಿಲ್ಲ. ಅಧಿಕಾರಿಗಳು ಅವರ ಮಾತು ಕೇಳುತ್ತಿರಲಿಲ್ಲ.

ರೈಲ್ವೆ ಬಜೆಟ್‌ ಮೇಲೆ ಸಂಸತ್‌ ಚರ್ಚೆ ನಡೆಸುತ್ತಿದ್ದಾಗ ಸದಾನಂದಗೌಡರು ಸರಿಯಾದ ಸಮಯಕ್ಕೆ ಸದನಕ್ಕೆ ಬರದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಎರಡು ಸಲ ಕ್ಷಮೆ ಕೇಳಿ, ಎನ್‌ಡಿಎ ಸರ್ಕಾರವನ್ನು ಮುಜುಗರಕ್ಕೆ ಗುರಿಪಡಿಸಿದ್ದರು. ಜುಲೈ 22ರಂದು ಮಂಗಳವಾರ ರಾಜ್ಯಸಭೆ ರೈಲ್ವೆ ಬಜೆಟ್‌ ಮೇಲೆ ಚರ್ಚೆ ನಡೆಸುತ್ತಿದ್ದಾಗ ರೈಲ್ವೆ ಸಚಿವರು ತಡವಾಗಿ ಆಗಮಿಸಿದ್ದರು. ಸದಾನಂದಗೌಡರು ಸದನದಲ್ಲಿ ಹಾಜರಿರದ ಸಂಗತಿಯನ್ನು ಹಿರಿಯ ಕಾಂಗ್ರೆಸ್‌ ಸದಸ್ಯ ಜೈರಾಂ ರಮೇಶ್‌ ಸಭಾಪತಿಗಳ ಗಮನಕ್ಕೆ ತಂದಿದ್ದರು.

ಐದು ನಿಮಿಷ ತಡವಾಗಿ ಆಗಮಿಸಿದ ಸದಾನಂದಗೌಡರು ಸದನದ ಕ್ಷಮೆ ಯಾಚಿಸಿದರು. ಇದಕ್ಕೆ ಒಪ್ಪದ ಮಾಜಿ ಸಚಿವರೂ ಆಗಿರುವ ಜೈರಾಂ, ಸಚಿವರಿಗೆ ಎಚ್ಚರಿಕೆ ಕೊಡಬೇಕೆಂದು ಆಗ್ರಹಿಸಿದರು. ಸಿಪಿಎಂ ಸದಸ್ಯ ರಾಜೀವ್‌ ಅವರೂ ದನಿಗೂಡಿಸಿದ್ದರು. ಲೋಕಸಭೆಯಲ್ಲೂ ಒಮ್ಮೆ ರೈಲ್ವೆ ಬಜೆಟ್‌ ಮೇಲಿನ ಚರ್ಚೆ ಸಮಯದಲ್ಲಿ ಸಚಿವರು ಹಾಜರಿರದಿದ್ದರಿಂದ ಸರ್ಕಾರ ಮುಜುಗರ ಅನುಭವಿಸಿತ್ತು. ವಿರೋಧ ಪಕ್ಷಗಳ ಸದಸ್ಯರು ಸರ್ಕಾರವನ್ನು ಸಿಕ್ಕಾಪಟ್ಟೆ ಟೀಕಿಸಿದ್ದರು.

ಸದಾನಂದಗೌಡರ ಪುತ್ರ ಕಾರ್ತಿಕಗೌಡ ಅವರ ಪ್ರೇಮ ಪ್ರಕರಣ ಹೊರ ಬಂದಾಗಲೂ ಮೋದಿ ಸರ್ಕಾರ ಇಕ್ಕಟ್ಟಿಗೆ ಸಿಕ್ಕಿಕೊಂಡಿತ್ತು. ಈ ಪ್ರಕರಣದ ಬಳಿಕ ಹಲವು ದಿನ ದೆಹಲಿ ಕಡೆ ಸಚಿವರು ತಲೆ ಹಾಕಿರಲಿಲ್ಲ. ಕೆಲವೇ ದಿನಗಳಲ್ಲಿ ಆಸ್ತಿ ವಿವಾದ ಹುಟ್ಟಿಕೊಂಡಿತು. ‘ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್‌’ ಐದು ತಿಂಗಳಲ್ಲಿ ರೈಲ್ವೆ ಸಚಿವರ ಆಸ್ತಿ ದುಪ್ಪಟ್ಟಾಗಿದೆ ಎಂಬ ಸಂಗತಿಯನ್ನು ಬಯಲು ಮಾಡಿತು.

ಲೋಕಸಭೆ ಚುನಾವಣೆಗೆ ಮೊದಲು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಸದಾನಂದಗೌಡರು ತಮ್ಮ ಬಳಿ 9.88 ಕೋಟಿ ಮೊತ್ತದ ಆಸ್ತಿಪಾಸ್ತಿ ಇರುವುದಾಗಿ ಘೋಷಿಸಿ­ಕೊಂಡಿದ್ದರು. ಮೋದಿ ಸಂಪುಟದಲ್ಲಿ ಸಚಿವರಾದ ಬಳಿಕ 20.46ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದರು. ಇದು ದೊಡ್ಡ ಪ್ರಚಾರ ಪಡೆಯಿತು.

ರೈಲ್ವೆ ಸಚಿವರು ಈ ಬಗ್ಗೆ ಪ್ರಧಾನಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರಿಗೆ ವಿವರಣೆ ನೀಡಿದರು. ಅವರು ಕೊಟ್ಟ ವಿವರಣೆ ಇಬ್ಬರೂ ನಾಯಕರಿಗೆ ಸಮಾಧಾನ ಆಗಲಿಲ್ಲ. ಈ ಕಾರಣಗಳಿಂದಾಗಿ ಸದಾನಂದಗೌಡರು ರೈಲ್ವೆ ಸಚಿವಾಲಯದಿಂದ ನಿರ್ಗಮಿಸಿದ್ದಾರೆ. ಮನಮೋಹನ್‌ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೊನೆಯ ಎಂಟು ತಿಂಗಳು ರೈಲ್ವೆ ಖಾತೆ ರಾಜ್ಯದವರೇ ಆಗಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಇತ್ತು. ಗೌಡರು ರೈಲ್ವೆ ಖಾತೆ ಕಳೆದುಕೊಂಡಿರುವುದರಿಂದ ರಾಜ್ಯಕ್ಕೆ ಬರಬಹುದಾಗಿದ್ದ ಒಂದಷ್ಟು ಯೋಜನೆಗಳು ಸ್ಥಗಿತಗೊಳ್ಳಬಹುದೇನೊ?

ರೈಲು ಇಳಿದ ಡಿವಿಎಸ್‌!

 

ಹೊಸದಿಲ್ಲಿ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಈಗಾಗಲೆ ನಿರೀಕ್ಷಿಸಲಾಗಿದ್ದಂತೆ ರೇಲ್ವೆ ಖಾತೆ ಕಳೆದುಕೊಂಡಿದ್ದಾರೆ. ರಾಜ್ಯದವರು ಮತ್ತು ದಕ್ಷಿಣ ಕನ್ನಡದವರೇ ಆಗಿದ್ದ ಕಾಂಗ್ರೆಸ್ಸಿನ ಎಂ.ವೀರಪ್ಪ ಮೊಯ್ಲಿ ನಿರ್ವಹಿಸಿದ್ದ ಕಾನೂನು ಖಾತೆಯು ಗೌಡರ ಪಾಲಿಗೆ ಬಂದಿರುವ ಹೊಸ ಪಂಚಾಮೃತ.

ಭಾನುವಾರ ಇಲ್ಲಿ ನಡೆದ ಮೋದಿ ಮಂತ್ರಿಮಂಡಲದ ವಿಸ್ತರಣೆಯ ನಂತರ ಕೆಲವು ಖಾತೆಗಳ ಅದಲು ಬದಲು ಮಾಡಲಾಗಿದೆ. ಈ ಅದಲು ವಕಾನೂನು ಮತ್ತು ನ್ಯಾಯ ಖಾತೆಯನ್ನು ಭಾನುವಾರ ಸಂಭ್ರಮದಿಂದ ಬಿಜೆಪಿಗೆ ಸೇರಿಸಿಕೊಳ್ಳಲಾಗಿರುವ ಶಿವಸೇನೆಯ ಟೆಕ್ನೋಕ್ರ್ಯಾಟ್ ರಾಜಕಾರಣಿ ಸುರೇಶ್ ಪ್ರಭು ಅವರು ರೇಲ್ವೆ ಖಾತೆಯ ಹೊಸ ಸಚಿವರು.

ಯುಪಿಎ ಸರ್ಕಾರದ ಕಡೆಯ ದಿನಗಳಲ್ಲಿ ಆರೇಳು ತಿಂಗಳ ಕಾಲವಷ್ಟೇ ರಾಜ್ಯದವರೇ ಆಗಿದ್ದ ಆದ ಮಲ್ಲಿಕಾರ್ಜುನ ಖರ್ಗೆ ಅವರ ನಂತರ ಪುನಃ ಮೋದಿ ಸರ್ಕಾರದಲ್ಲಿ ಇದೇ ಮಹತ್ವದ ಖಾತೆ ಸದಾನಂದಗೌಡರ ಪಾಲಿಗೆ ಒದಗಿತ್ತು. ಆದರೆ ಈ ಬಾರಿ ಕೂಡ ಆರು ತಿಂಗಳಿಗೆ ಮುನ್ನವೇ ರೇಲ್ವೆ ಖಾತೆ ಮತ್ತೊಬ್ಬ ಕನ್ನಡಿಗನ ಕೈ ಜಾರಿದೆ.

ತಿಂಗಳೊಪ್ಪತ್ತಿನಷ್ಟು ಹಿಂದೆ ಮಂತ್ರಿಮಂಡಲ ವಿಸ್ತರಣೆಯ ಪ್ರಸ್ತಾಪ ಆದಂದಿನಿಂದ ಸದಾನಂದಗೌಡ ಅವರ ಖಾತೆ ಬದಲಾವಣೆಯ ಮಾತು ಚಾಲ್ತಿಗೆ ಬಂದಿತ್ತು. ಕೆಲ ದಿನಗಳ ಹಿಂದೆ ಸುರೇಶ್ ಪ್ರಭು ಮಂತ್ರಿಮಂಡಲ ಸೇರುವರೆಂಬ ಸುದ್ದಿ ಹರಿದಾಡತೊಡಗಿದಾಗ , ರೇಲ್ವೆ ಖಾತೆಯ ಹೊಸ ಮಂತ್ರಿ ಅವರು ಎಂದೂ ರಾಜಕೀಯ ವಲಯಗಳಲ್ಲಿ ಬಗೆಯಲಾಗಿತ್ತು.

ಮೆದು ಸ್ವಭಾವದ ಸದಾನಂದಗೌಡರು ಮಹತ್ವದ ಮೂಲಸೌಲಭ್ಯ ಖಾತೆಗಳಲ್ಲಿ ಒಂದೆನಿಸಿರುವ ರೇಲ್ವೆ ಖಾತೆಯನ್ನು ಹೊಸ ಸರ್ಕಾರದ ನಿರೀಕ್ಷೆಗಳ ಎತ್ತರಕ್ಕೆ ದಕ್ಷತೆ ಚಾಕಚಕ್ಯತೆಯಿಂದ ನಿರ್ವಹಿಸಲಾರದೆ ಹೋದರು ಎಂಬ ಮಾತುಗಳಿವೆ. ಪೊಲೀಸು ಠಾಣೆ ಮತ್ತು ಕೋರ್ಟು ಕಚೇರಿಗಳ ಮೆಟ್ಟಿಲೇರಿದ ಮಗನ ಪ್ರೇಮಪ್ರಕರಣದ ವಿವಾದ ಈಚಿನ ದಿನಗಳಲ್ಲಿ ಅವರನ್ನು ಸುತ್ತುವರೆದಿತ್ತು. ಅವರು ಘೋಷಿಸಿದ್ದ ತಮ್ಮ ಆಸ್ತಿಪಾಸ್ತಿ ಮೌಲ್ಯವೃದ್ಧಿಯು ನಾಟಕೀಯ ಎನ್ನುವಷ್ಟು ಹೆಚ್ಚಾಗಿದೆ ಎಂಬ ಅಂಶ ಗೌಡರನ್ನು ಇತ್ತೀಚಿನ ದಿನಗಳಲ್ಲಿ ಪ್ರತಿಕೂಲ ಪ್ರಚಾರದ ಮುಂಬೆಳಕಿನಲ್ಲಿ ಇಟ್ಟಿತ್ತು.

ಮಗನ ವಿವಾದ ಕುರಿತು ಮೋದಿಯವರು ಕೇಳದೆ ಹೋದರೂ ವಿವರಣೆ ನೀಡಿದ್ದೆ. ಇದೀಗ ಆಸ್ತಿಪಾಸ್ತಿ ಹೆಚ್ಚಳ ಕುರಿತು ಕೂಡ ಅವರು ಕೇಳದೆ ಹೋದರೂ ವಿವರಣೆ ಸಲ್ಲಿಸಲಿದ್ದೇನೆ ಎಂದು ಗೌಡರು ಇತ್ತೀಚೆಗೆ ಘೋಷಿಸಿದ್ದರು.

ಸದಾನಂದಗೌಡ ಅವರು ಮೋದಿ ಸಚಿವ ಸಂಪುಟವನ್ನು ರೇಲ್ವೆ ಖಾತೆಯ ಸಚಿವರಾಗಿ ಸೇರಿದ್ದ ಬೆಳವಣಿಗೆ ಬಿಜೆಪಿಯ ಒಳಗೆ ಮತ್ತು ಹೊರಗೆ ಹಲವು ಹುಬ್ಬುಗಳನ್ನು ಮೇಲೇರಿಸಿತ್ತು. ಆಡ್ವಾಣಿ ಅವರ ಸಮೀಪವರ್ತಿಯಾಗಿದ್ದ ಅನಂತಕುಮಾರ್, ಮೋದಿಯವರ ಮೇಲುಗೈ ಆಗುತ್ತಿದ್ದಂತೆ ಹೊಸ ನಾಯಕನ ನೆರಳಿಗೆ ಸರಿದಿದ್ದರು. ಆದರೂ ಅವರಿಗೆ ದೊರೆತ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಖಾತೆ ಮತ್ತು ಮಹತ್ವದ ಖಾತೆಯ ವಿಷಯದಲ್ಲಿ ಸದಾನಂದಗೌಡರು ಅನಂತಕುಮಾರ್ ಅವರನ್ನೂ ಹಿಂದೆ ತಳ್ಳಿದ್ದ ವಿದ್ಯಮಾನ ಬೆರಗು ಮೂಡಿಸಿದ್ದುಂಟು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)