ನಂದಿತಾ ಕೈಬರಹ ಸಾಬೀತು?

0
505

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

2014_11$largeimg207_Nov_2014_225553413

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ತೀರ್ಥಹಳ್ಳಿಯ ಬಾಲಕಿ ನಂದಿತಾಳ ನಿಗೂಢ ಸಾವಿನ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ತನಿಖೆ ವೇಳೆ ಸಿಕ್ಕಿರುವ ಡೆತ್‌ನೋಟ್‌ನಲ್ಲಿರುವ ಕೈ ಬರಹ ನಂದಿತಾಳದ್ದೇ ಎಂದು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ. ಈ ವರದಿಯನ್ನು ಸಿಐಡಿ ತಂಡಕ್ಕೆ ಸಲ್ಲಿಸಲಾಗಿದೆ ಎನ್ನಲಾಗಿದ್ದು, ಅಧಿಕೃತವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿಲ್ಲ. ಆದರೆ, ಈ ವರದಿಗೆ ಆಕ್ಷೇಪ ವ್ಯಕ್ತಪಡಿಸಿರುವ ನಂದಿತಾಳ ತಂದೆ ಕೃಷ್ಣಮೂರ್ತಿ, ಈ ಕೈಬರಹ ತನ್ನ ಮಗಳದ್ದಾಗಿರಲು ಸಾಧ್ಯವೇ ಇಲ್ಲ. ಇದೊಂದು ಸೃಷ್ಟಿ ಎಂದು ಕಿಡಿ ಕಾರಿದ್ದಾರೆ.

ಪ್ರಕರಣವೇನು?:

ಅ.29 ರಂದು ಕಾರಿನಲ್ಲಿ ಆಗಮಿಸಿದ್ದ ಮೂವರು ಅಪರಿಚಿತರು ತೀರ್ಥಹಳ್ಳಿಯ ಬಸ್‌ನಿಲ್ದಾಣದಲ್ಲಿ ನಿಂತಿದ್ದ ನಂದಿತಾಳನ್ನು ಅಪಹರಿಸಿದ್ದರು. ಬಳಿಕ, ತೀರ್ಥಹಳ್ಳಿ ಹೊರವಲಯದ ಆನಂದಗಿರಿ ಗುಡ್ಡದಲ್ಲಿ ಆಕೆ ಪತ್ತೆಯಾಗಿದ್ದಳು. ಈ ವೇಳೆ, ಅಸ್ವಸ್ಥಳಾಗಿದ್ದ ಆಕೆಯನ್ನು ತೀರ್ಥಹಳ್ಳಿ, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆ, ಕೊನೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಆಕೆ ಕೆಎಂಸಿಯಲ್ಲಿ ಕೊನೆಯುಸಿರೆಳೆದಿದ್ದಳು.

ಆಕೆಯ ಸಾವು ಅನೇಕ ಅನುಮಾನಗಳಿಗೆ ಕಾರಣವಾಗಿತ್ತು. ಆಕೆಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ, ಬಲಾತ್ಕಾರವಾಗಿ ವಿಷಪ್ರಾಶನ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ನ.3ರಂದು ನಂದಿತಾ ಬರೆದಿದ್ದಾಳೆ ಎನ್ನಲಾದ ಡೆತ್‌ನೋಟ್‌ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ಈ ಡೆತ್‌ನೋಟ್‌ ಆಕೆ ಬರೆದಿದ್ದಲ್ಲ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಸತ್ಯಾಸತ್ಯತೆ ಅರಿಯಲು ಮುಂದಾದ ಪೊಲೀಸರು, ಡೆತ್‌ನೋಟ್‌ನ್ನು ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಇದನ್ನು ಪರೀಕ್ಷೆಗೆ ಒಳಪಡಿಸಿರುವ ತಜ್ಞರು, ‘ಇದರಲ್ಲಿನ ಕೈ ಬರಹ ನಂದಿತಾ ಕೈ ಬರಹ’ ಎಂದು ವರದಿ ನೀಡಿದ್ದಾರೆ. ಪೊಲೀಸರು ಈ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಆದರೆ, ಈ ವರದಿ ಸಿಐಡಿ ಪೊಲೀಸರ ಕೈ ತಲುಪಿದೆ ಎನ್ನಲಾಗಿದೆ.

ವರದಿ ನಿರಾಕರಿಸಿದ ನಂದಿತಾ ತಂದೆ:

ಈ ವರದಿಯ ಸತ್ಯಾಸತ್ಯತೆ ಬಗ್ಗೆ ಆಕ್ಷೇಪ ಎತ್ತಿರುವ ನಂದಿತಾಳ ತಂದೆ ಕೃಷ್ಣಮೂರ್ತಿ, ‘ಈ ಕೈಬರಹ ನನ್ನ ಮಗಳದ್ದಾಗಿರಲು ಸಾಧ್ಯವೇ ಇಲ್ಲ. ಆಕೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಕಾರಣ ಇರಲಿಲ್ಲ. ಇದನ್ನು ಸೃಷ್ಟಿ ಮಾಡಲಾಗಿದೆ’ ಎಂದು ಪುನರುಚ್ಚರಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)