ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ

0
3858

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
21-deepavali-festival3
ಹಬ್ಬಗಳು ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳು. ನೀರಸ ಬದುಕನ್ನು ಸುಂದರಗೊಳಿಸುವ ಪ್ರಯತ್ನಗಳು ಈ ಹಬ್ಬಗಳು. ಒಮ್ಮೊಮ್ಮೆ ಹಬ್ಬಗಳು ನಮ್ಮ ಹಿರಿಯರ ಆವಿಷ್ಕಾರಗಳು ಎಂದೆನಿಸಿದ್ದಿದೆ. ಈ ಆವಿಷ್ಕಾರದ ಹಿಂದೆ ಪುರಾಣ, ಇತಿಹಾಸ, ಸುಂದರ ಕಲ್ಪನೆಗಳು, ಉದಾತ್ತ ಆಶಯಗಳು ಬೆರೆತಿವೆ. ನಮ್ಮ ಹಿರಿಯರು ಕೆಲವು ಹಬ್ಬಗಳನ್ನು ಋತುಮಾನಕ್ಕೆ ಅನುಗುಣವಾಗಿ ರೂಪಿಸಿದ್ದಾರೆ. ಉದಾಹರಣೆಗೆ, ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ದಿನವನ್ನು ಸಂಕ್ರಾಂತಿಯಾಗಿ, ಸೂರ್ಯ ತನ್ನ ಪಥ ಬದಲಿಸುವ ದಿನವನ್ನು ರಥಸಪ್ತಮಿಯಾಗಿ, ಪ್ರಕೃತಿಯ ಉಲ್ಲಾಸಮಯ ದಿನಗಳ ಆರಂಭವನ್ನು ವಸಂತ ಋತುವಿನ ಆಗಮನವನ್ನು ಯುಗಾದಿಯಾಗಿ, ವಸಂತ ಪಂಚಮಿಯಾಗಿ… ಹೀಗೆ ನಮ್ಮ ಬದುಕನ್ನು ಆಸಕ್ತಿಕರವಾಗಿಸಲು ಹತ್ತು ಹಲವು ಹಬ್ಬಗಳನ್ನು ರೂಪಿಸಿದ್ದಾರೆ. ಇಷ್ಟೊಂದು ಒಳ್ಳೆಯ ಆಶಯ, ಸಂಭ್ರಮ ತುಂಬಿಕೊಂಡ ಹಬ್ಬಗಳು ಇತ್ತೀಚಿಗೆ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ನಿಜವಾಗಲು ವಿಷಾದಕರ. ಈ ಜಾಗತೀಕರಣಗೊಂಡ ದುಡ್ಡಿನ ಜಗತ್ತಿನಲ್ಲಿ ಹಬ್ಬಗಳೆಂದರೆ ಡಿಸ್ಕೌಂಟ್ ಸೇಲ್, ಶಾಪಿಂಗ್ ಸಮಯ, ಟಿವಿಯಲ್ಲಿ ವಿಶೇಷ ಕಾರ್ಯಕ್ರಮ, ಪ್ರವಾಸಕ್ಕೆ ಸಮಯ, ಕೇವಲ ರಜೆ ಎಂದಾಗಿ ಹೋಗಿದೆ. ಇದು ನಿಜವಾಗಲು ದುಃಖದ ವಿಷಯ. ನಮ್ಮ ಸುಂದರ ಸಂಸ್ಕೃತಿ ಯ ಆಶಯಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆಯಾ? ಎಂದು ಆಲೋಚಿಸಬೇಕಾಗಿದೆ.
  ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ ನಾವು ಹಬ್ಬಗಳನ್ನು ಏಕೆ ಆಚರಿಸಬೇಕು? ಮೊನ್ನೆ ಪ್ರಗತಿಪರ ಸ್ನೇಹಿತರ ಮನೆಗೆ ಹೋಗಿದ್ದೆ, ಅವರೆಂದರು “ನಾವು ದೇವರನ್ನು ನಂಬುವುದಿಲ್ಲ ಹಾಗಾಗಿ ನಾವು ಯಾವುದೇ ಹಬ್ಬಗಳನ್ನ ಆಚರಿಸುವುದಿಲ್ಲ…”. ಅಯ್ಯೋ ಎಷ್ಟೊಂದು ಒಳ್ಳೆಯ ಆಶಯಗಳನ್ನು ಧ್ಯಾನಿಸುವ ಅವಕಾಶವನ್ನು, ಬದುಕಿನ ಸಂಭ್ರಮವನ್ನು ಕಳೆದುಕೊಳ್ಳುತ್ತಿದ್ದಾರಲ್ಲ ಎಂದು ವ್ಯಥೆಯಾಯಿತು. ಹಬ್ಬಗಳು ಬರಿ ಸಿಹಿ ಊಟ ಮಾಡುವ, ಹೊಸ ಬಟ್ಟೆ ತೊಡುವ ಸಂಭ್ರಮಕ್ಕೆ ಮಾತ್ರ ಸೀಮಿತವಲ್ಲ. ಅದನ್ನೂ ಮೀರಿದ ಉದಾತ್ತ ಉದ್ದೇಶ ಹಬ್ಬಗಳಿಗಿದೆ. ಇದನ್ನೆಲ್ಲಾ ಯೋಚಿಸುತ್ತಾ ಪ್ರಗತಿಪರ ಸ್ನೇಹಿತರಿಗೆ ಹೇಳಿದೆ “ನೀವು ಢಂಬಾಚಾರ, ಆಡಂಬರವನ್ನು ನಿರಾಕರಿಸಿ… ಆದರೆ ಹಬ್ಬದ ಆಚರಣೆಯನ್ನು ನಿಲ್ಲಿಸಬೇಡಿ… ಹಬ್ಬವನ್ನು ನಿರಾಕರಿಸಿದರೆ ಅದರ ಹಿಂದಿನ ಸುಂದರ ಆಶಯ, ಉದಾತ್ತ ಉದ್ದೇಶ ನಿರಾಕರಿಸಿದಂತೆ”. ಬಹುಶಃ ಅವರು ಮುಂದಿನ ಹಬ್ಬದಿಂದ ನಮ್ಮ ನಿಲುವನ್ನು ಬದಲಿಸಿಕೊಳ್ಳುವರು ಎಂದು ಆಶಿಸುತ್ತೇನೆ.
diya
ಹೊಸ ಬೆಳವಣಿಗೆ ಇನ್ನೊಂದು ಸಂತೋಷದ ವಿಷಯವೆಂದರೆ, ಜಾತಿ, ಧರ್ಮಗಳ ಕಟ್ಟಳೆ ಮೀರಿ ಜನರು ಹಬ್ಬಗಳನ್ನು ಆಚರಿಸುತ್ತಿರುವುದು. ಜಾಗತೀಕರಣ ಜಗತ್ತಿನ ಒಂದು ಒಳ್ಳೆ ಕಾಣಿಕೆ ಇದು. ಉತ್ತಮ ಬೆಳವಣಿಗೆ. ಬೆಂಗಳೂರಿನ ಅನೇಕ ಅಪಾರ್ಟಮೆಂಟುಗಳಲ್ಲಿ ಎಲ್ಲಾ ಕುಟುಂಬಗಳು ಒಟ್ಟಾಗಿ, ಯಾವುದೆ ಭೇದವಿಲ್ಲದೆ ಹಬ್ಬಗಳ ಆಚರಣೆ ಮಾಡುತ್ತಿದ್ದಾರೆ. ಒಂದು ಸಮುದಾಯ ಅರಿತು ಬೆರೆತು ಹಬ್ಬಗಳ ಆಚರಣೆ ಮಾಡಿದರೆ ಅದರ ಸೊಗಸೇ ಬೇರೆ. ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ ಬೆಳದಿಂಗಳು ಚೆಲ್ಲುವ ಕೌಮುದಿ ಉತ್ಸವವಿದು ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ… ಓಂ ಶಾಂತಿ, ಶಾಂತಿ ಶಾಂತಿಃ ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ನಿಮಗೆ ಗೊತ್ತಿರಲಿ, ಸರಿಯಾಗಿ ಆಚರಿಸಿದರೆ ದೀಪಾವಳಿ ಆರು ದಿನದ ಹಬ್ಬ! ಅನೇಕ ಪುರಾಣ, ನಂಬಿಕೆ, ಸುಂದರ ಆಶಯ ಬೆರೆತಿರುವ ಹಬ್ಬಗಳ ಸರಪಳಿ, ಹಬ್ಬಾವಳಿ! ಅಮಾವಾಸ್ಯೆ ಕತ್ತಲಿದ್ದರು ದೀಪಗಳು ಚೆಲ್ಲುವ ಬೆಳಕಿಗೋ, ಪಟಾಕಿಗಳಿಂದ ಹೊಮ್ಮುವ ಬೆಳಕಿಗೋ ಏನೋ, ದೀಪಾವಳಿಗೆ ಕೌಮುದಿ ಉತ್ಸವ ಎಂದೂ ಕರೆಯುವುದುಂಟು. ಕೌಮುದಿ ಎಂದರೆ ಬೆಳದಿಂಗಳು ಎಂದರ್ಥ. ಉತ್ತರ ಭಾರತದಲ್ಲಿ ಗೋವತ್ಸ ದ್ವಾದಶಿಯಿಂದಲೇ ಹಬ್ಬದ ಸಡಗರ ಆರಂಭ. ಬರಗಾಲ ಕಳೆದು ಇಳೆಗೆ ಸಮೃದ್ಧಿ ಮರಳಿದ ದಿನವಾಗಿ ಹಬ್ಬವನ್ನಾಚರಿಸುತ್ತಾರೆ. ಗೋವಿನ ರೂಪದ ಭೂದೇವಿಯನ್ನು ಓಡಿಸಿಕೊಂಡು ಹೋಗಿ, ಪೂಜಿಸಿ, ಹಾಲು ಕರೆದು ಬರಗಾಲ ನೀಗಿಸಿದ ದೊರೆ ಪೃಥುವಿನ ಕತೆಯ ಹಿನ್ನಲೆಯಿದೆ. ಅವನಿಂದಲೇ ಭೂಮಿಗೆ ಪೃಥ್ವಿ ಎಂಬ ಹೆಸರು ಬಂದಿದ್ದು.
ಧನ್ ತೇರಾಸ್ (ಕೃಷ್ಣಪಕ್ಷದ ತ್ರಯೋದಶಿ) ಈ ದಿನ ಬಂಗಾರ ಮತ್ತು ಮನೆಗೆ ಬೇಕಾಗುವ ಪಾತ್ರೆಗಳ ಖರೀದಿಗೆ ಶುಭದಿನ ಎಂದು ಭಾವಿಸಲಾಗಿದೆ. ಇದೇ ದಿನ ವೈದ್ಯ ಧನ್ವಂತ್ರಿ ಸಮುದ್ರ ಮಥನದಲ್ಲಿ ಜನಿಸಿದ್ದು ಎಂದು ಪುರಾಣಗಳು ಹೇಳುತ್ತವೆ. ನರಕ ಚತುರ್ದಶಿಯ ಬೆಳಗಿನ ಜಾವದ ಅಭ್ಯಂಜನ ಸ್ನಾನಕ್ಕೆ ಹಿಂದಿನ ದಿನವೆ ನೀರು ಕಾಯಿಸುವ ಹಂಡೆ, ಪಾತ್ರೆಗಳಿಗೆ ಪೂಜಿಸಿ, ಅಲಂಕರಿಸಿ ನೀರನ್ನು ತುಂಬಿಸಿದುವುದರಿಂದ ಈ ದಿನಕ್ಕೆ ನೀರು ತುಂಬಿಸುವ ಹಬ್ಬ ಎಂದು ಕೂಡ ಕರೆಯುತ್ತಾರೆ. ನರಕ ಚತುರ್ದಶಿ ಎಲ್ಲೆಡೆ ಆಚರಿಸಲಾಗುತ್ತದೆ. ಶ್ರೀ ಕೃಷ್ಣ, ಸತ್ಯಭಾಮೆಯ ಒಡಗೂಡಿ ನರಕಾಸುರನ ವಧಿಸಿ, ಹದಿನಾರು ಸಾವಿರ ಸ್ತ್ರೀಯರನ್ನು ಬಂಧನದಿಂದ ಬಿಡುಗಡೆ ಮಾಡಿದ ದಿನ. ಅಷ್ಟೇ ಅಲ್ಲ ಅವರೆಲ್ಲರನ್ನು ತನ್ನ ಪತ್ನಿಯರನ್ನಾಗಿ ಸ್ವೀಕರಿಸಿ, ಅವರಿಗೆಲ್ಲಾ ಒಂದು ಸಾಮಾಜಿಕ ಸ್ಥಾನಮಾನ ಕೊಟ್ಟು ರಕ್ಷಣೆ ಮಾಡಿದ ದಿನ.
ನಂತರ ಅಮವಾಸೆ. ಅಮವಾಸೆಯ ದಿನ ಲಕ್ಷ್ಮಿಯನ್ನು ಪೂಜಿಸುವ ದಿನ. ಕೆಲವೆಡೆ ಸಂಪತ್ತಿನ ಅಧಿ ದೇವತೆ ಲಕ್ಷ್ಮಿಯ ಜೊತೆ ಗಣೇಶನನ್ನೂ ಪೂಜಿಸುವ ಪದ್ಧತಿಯು ಇದೆ. ವಿಕ್ರಮ ಶಕೆಯ ಪಂಚಾಂಗ ಪಾಲಿಸುವವರಿಗೆ ವರ್ಷದ ಕೊನೆಯ ದಿನ. 24ನೇ ತೀರ್ಥಂಕರನಾದ ಮಹಾವೀರನು ನಿರ್ವಾಣಹೊಂದಿದ ದಿನವಾದ ದೀಪಾವಳಿ ಅಮಾವಾಸ್ಯೆಯನ್ನು, ರಾಜಸ್ಥಾನದ ಜೈನ ಸಮುದಾಯದವರು ಹೊಸವರ್ಷವೆಂತಲೂ ಆಚರಿಸುತ್ತಾರೆ.
ಬಲಿ ಪಾಡ್ಯ ಅಥವಾ ಬಲಿ ಪ್ರತಿಪದ ದೀಪಾವಳಿ ಹಬ್ಬದ ಅತ್ಯಂತ ಪ್ರಮುಖ ದಿನ. ವಾಮನರೂಪಿ ವಿಷ್ಣು ಬಲಿ ಚಕ್ರವರ್ತಿಯನ್ನು ಮೂರು ಹೆಜ್ಜೆ ದಾನ ಕೇಳಿ, ಭೂಮಿ, ಆಕಾಶ ಆವರಿಸಿ ಕೊನೆಗೆ ಬಲಿಯ ತಲೆ ಮೇಲೆ ಪಾದವಿಟ್ಟು ದಾನ ಪಡೆದು ಬಲಿಯನ್ನು ಪಾತಾಳಕ್ಕೆ ಕಳುಹಿಸಿದ ದಿನ. ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಅಹಂಕಾರಿ ಇಂದ್ರನಿಗೆ ಪಾಠ ಕಲಿಸಿದ ದಿನ ಕೂಡ ಹೌದು. ರಾವಣನ ಸಂಹರಿಸಿ, ಸೀತ, ಲಕ್ಷ್ಮಣರೊಡನೆ ಆಯೋಧ್ಯೆಗೆ ಶ್ರೀರಾಮಚಂದ್ರ ಮರಳಿದ್ದು ದೀಪಾವಳಿ ಸಮಯದಲ್ಲೇ. ವಿಕ್ರಮ ಶಕೆಯ ಪಂಚಾಂಗ ಪಾಲಿಸುವವರಿಗೆ ಪಾಡ್ಯದ ದಿನ. ಹೊಸ ವರುಷದ ಸಂಭ್ರಮದ ಮೊದಲ ದಿನ.
ಬಲಿ ಪಾಡ್ಯದ ಮರುದಿನ ಯಮ ದ್ವಿತೀಯ (ಭಾಯಿಧುಜ್) ಎಂದು ಉತ್ತರ ಭಾರತದ ಕಡೆ ಆಚರಿಸುತ್ತಾರೆ. ಈ ಆಚರಣೆ ದಕ್ಷಿಣ ಭಾರತದಲ್ಲಿ ಅಷ್ಟಿಲ್ಲ. ಯಮ ತನ್ನ ತಂಗಿ ಯಮಿಯ ಮನೆಗೆ ಬೇಟಿ ನೀಡಿ ಅವಳ ಆತಿಥ್ಯ ಸ್ವೀಕರಿಸಿದ ದಿನ. ಬಹಳ ಸಂತುಷ್ಟನಾದ ಯಮ, ಯಮಿಗೆ ಕಾಣಿಕೆ ನೀಡಿದ. ಈ ದಿನವನ್ನು ಉತ್ತರ ಭಾರತದಲ್ಲಿ ಅಣ್ಣ-ತಂಗಿಯ ಪ್ರೀತಿ ವಾತ್ಸಲ್ಯದ ದಿನವಾಗಿ ಆಚರಿಸುತ್ತಾರೆ.
diwali crackers
ದೀಪಾವಳಿಗೆ ಹೊಸದಾಗಿ ಮದುವೆಯಾದೆ ಮಗಳು-ಅಳಿಯನನ್ನು ಸತ್ಕರಿಸಿ ಉಡುಗರೆ ಕೊಡುವದಂತು ಬಹಳ ಪ್ರಸಿದ್ಧಿ. ಹಾಗಾಗಿ ಎಲ್ಲಾ ಹೊಸ ಅಳಿಯಂದಿರು ಈ ಹಬ್ಬಕ್ಕೆ ಸಂಕೋಚದಿಂದ ಎದಿರು ನೋಡುತ್ತಿರುತ್ತಾರೆ. ಹಾಗೆಯೇ ಭಾವ ತರುವ ಪಟಾಕಿ ಮತ್ತಿತರ ಉಡುಗರೆಗೆ ಮೈದುನ, ನಾದಿನಿಯರು ಕಾದಿರುತ್ತಾರೆ. ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ ಪಟಾಕಿ ಢಮ್! ಢಮ್! ದೀಪಾವಳಿ ಬೆಳಕಿನ ಹಬ್ಬ. ಮಕ್ಕಳಿಗೆ ಪಟಾಕಿ ಹೊಡೆಯುವ ಸಂಭ್ರಮದ ಸಮಯ. ನರಕ ಚತುರ್ದಶಿಯ ಮುಂಜಾವಿನಿಂದ ಪ್ರಾರಂಭವಾಗುವ ಪಟಾಕಿ ಸಂಭ್ರಮದ ಸದ್ಧು ತುಳಸಿ ಹಬ್ಬದ ತನಕ ಮುಂದುವರೆಯುತ್ತದೆ. ಪಟಾಕಿ ಸದ್ದಿಲ್ಲದ, ಬೆಳಕಿಲ್ಲದ ದೀಪಾವಳಿಯನ್ನು ಊಹಿಸುವುದೂ ಅಸಾಧ್ಯ. ದೀಪಾವಳಿಯ ಮರುದಿನ ಅನೇಕ ಮಕ್ಕಳು ಗಾಯ, ಕಣ್ಣಿಗೆ ಹಾನಿ, ಅನಾಹುತ ಮಾಡಿಕೊಂಡಿರುವ ಸುದ್ದಿಯನ್ನು ಪತ್ರಿಕೆಯಲ್ಲಿ ಓದುತ್ತೇವೆ.
ಹಾಗಾಗಿ ಈ ಸೂಚನೆ ಸಲಹೆಗಳು : * ಮಕ್ಕಳೆಲ್ಲರು ಪಟಾಕಿಯನ್ನು ಹಿರಿಯರ ಸಮ್ಮುಖದಲ್ಲಿಯೆ ಹೊಡೆಯಬೇಕು. * ಮನೆಯ ಹಿರಿಯರು, ತಂದೆ-ತಾಯಂದಿರು ದಯವಿಟ್ಟು ಕಾಳಜಿ ವಹಿಸಬೇಕು. ಹಾಗೆಯೆ ಪಟಾಕಿ ಹಾವಳಿಯಿಂದ ಉಂಟಾಗುವ ಶಬ್ಧಮಾಲಿನ್ಯ ಮತ್ತು ವಾಯುಮಾಲಿನ್ಯದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. * ಆದಷ್ಟು ವಿಶಾಲವಾದ ಜಾಗಗಳಲ್ಲಿ ಪಟಾಕಿ ಹೊಡೆಯಿರಿ. ರಸ್ತೆ, ಓಣಿಗಳಲ್ಲಿ ಬೇಡ. * ಬೈಕು, ಸೈಕಲ್ ಸವಾರರು, ಪಾದಚಾರಿಗಳು ದೀಪವಳಿಯ ದಿನಗಳಲ್ಲಿ ಕೊಂಚ ಎಚ್ಚರಿಕೆಯಿಂದ ಸಂಚರಿಸಿ. * ರಾತ್ರಿ ಹತ್ತರ ನಂತರ ಪಟಾಕಿ ಹೊಡೆಯುವುದು ದಯವಿಟ್ಟು ಬೇಡ. ನೆರೆಹೊರೆಯವರ ನಿದ್ದೆಗೆ ತೊಂದರೆಯಾಗಬಹುದು.
ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ ದೀಪಾವಳಿಯ ಬೆಳಕು ಮತ್ತು ಹಬ್ಬದ ಆಶಯ;
ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಂ।
ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋsಸ್ತುತೆ ।।
ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನರ್ಧನಃ ।
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ॥
21-deepavali-festival4
ನಾವು ಹಚ್ಚುವ ದೀಪ ಬೆಳಕಿನಿಂದ ನಮ್ಮೊಳಗಿನ ಅಜ್ಞಾನ, ಅವಿವೇಕ, ದುಷ್ಟ ಗುಣಗಳು ನಾಶವಾಗಿ, ಸದ್ಗುಣಗಳು ಹೆಚ್ಚಲಿ. ಎಲ್ಲಡೆ ಶಾಂತಿ, ಸಮೃದ್ಧಿ ನೆಲಸಲಿ. ಎಲ್ಲರಿಗೂ ಮಂಗಳವಾಗಲಿ, ದೀಪದಲ್ಲಿ ನಮಗೆ ದೇವರ ರೂಪ ಕಾಣಿಸಲಿ ಎಂದು ಆಶಿಸುತ್ತಾ ದೀಪಾವಳಿಯ ದಿನ ದೀಪ ಹಚ್ಚಬೇಕು ಎಂಬರ್ಥದ ಸುಂದರ ಶ್ಲೋಕ.
ಬೆಳಕಿನ ಹಬ್ಬ ದೀಪಾವಳಿ. ನಮ್ಮ ಸಂಪ್ರದಾಯದಲ್ಲಿ, ಕಾವ್ಯದಲ್ಲಿ ಬೆಳಕಿಗೆ ಅತ್ಯಂತ ಮಹತ್ವವಿದೆ. ನಾವು ಯಾವುದಾದರು ಶುಭ ಸಮಾರಂಭ ಆಚರಿಸುವುದೆ ದೀಪ ಹಚ್ಚುವುದರ ಮೂಲಕ. ಬೆಳಕು ಜ್ಞಾನದ ರೂಪಕ. ಯಾವುದೆ ಭೇದವಿಲ್ಲದೆ, ಕಟ್ಟಲೆಯಿಲ್ಲದೆ ಹರಡುವ ಬೆಳಕು ಸಮಾನತೆಯ ಸಂಕೇತವೂ ಹೌದು. ಬಣ್ಣ ಬಣ್ಣದ ಸುಂದರ ಚಿತ್ತಾಕರ್ಷಕ ದೀಪಾವಳಿಯ ಆಕಾಶ ಬುಟ್ಟಿಗಳು ಮತ್ತದರ ಬೆಳಕು ನಮ್ಮ ಸಂಭ್ರಮದ, ಸಂತಸದ ಪ್ರತೀಕ. ದೀಪಾವಳಿಯ ದಿನ ಆಕಾಶ ಬುಟ್ಟಿಯನ್ನು ಮಾಡಿ ಅದರಲ್ಲಿ ದೀಪವಿಟ್ಟು ಆಕಾಶದಲ್ಲಿ ಹಾರಿಬಿಟ್ಟರೆ, ಗತಿಸಿದ ಹಿರಿಯರಿಗೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಕೂಡ ಇದೆ. ಕಷ್ಟಗಳೆಂಬ ಕತ್ತಲನ್ನು ದೂಷಿಸುತ್ತಾ ಕೂರಬೇಡ, ಪ್ರಯತ್ನವೆಂಬ ಸಣ್ಣ ದೀಪವ ಹಚ್ಚು ಎನ್ನುತ್ತಾನೆ ಪ್ರಯತ್ನಶೀಲ ಆಶಾವಾದಿ. ಅವಳ ಕಿರು ನಗೆಯ ದೀಪವೊಂದೆ ಸಾಕು ನನ್ನ ದೀಪಾವಳಿಯ ಸಂಭ್ರಮ ಹೆಚ್ಚುಸಲು ಎನ್ನುತ್ತಾನೆ ಪ್ರೇಮಿ. ಹೀಗೆ ದೀಪಾವಳಿಯ ಬೆಳಕು ಎಲ್ಲರಿಗೂ ಬೇರೆ ಬೇರೆ ರೂಪದಲ್ಲಿ ಸಾಕ್ಷಾತ್ಕಾರ. ಈಗ ಎಲ್ಲೆಡೆ ಶತ್ರು ಸಂಹಾರದ ಉನ್ಮಾದ. ಅದರೆ ಅಧುನಿಕ ಜಗತ್ತಿನಲ್ಲಿ ಶತ್ರು ಯಾರು ಎಂಬುದೇ ದೊಡ್ಡ ಪ್ರಶ್ನೆ.
ನಮಗೆ ದೀಪಾವಳಿ ಬೆಳಕಲ್ಲಿ ಏನು ಕಾಣಬೇಕು? ಹೊರಗಿನ ಶತ್ರುಗಳು ಬೇಡ, ನಮ್ಮ ಅಂತರಂಗದಲ್ಲಿ ಅಡಗಿರುವ ಕೋಪ, ತಾಪ, ಮತ್ಸರವೆಂಬ ಶತ್ರುಗಳು ದೀಪಾವಳಿಯ ಬೆಳಕಲ್ಲಿ ನಮಗೆ ನಿಚ್ಚಳವಾಗಲಿ. ಮೊದಲು ನಮ್ಮೊಳಗಿನ ಶತ್ರುಗಳ ಗೆಲ್ಲೋಣ, ನಂತರ ಹೊರಗಿನ ವಿಚಾರ ಮಾಡೋಣ. ಹಾಗೆಯೇ ನಮಗೆ ದೀಪಾವಳಿ ಬೆಳಕಲ್ಲಿ ದೀನದಲಿತರ ಕಣ್ಣೀರು, ಸಂಕಷ್ಟ ಮತ್ತು ದುಃಖ ಕಾಣಿಸಲಿ ಮತ್ತು ಅದನ್ನು ಒರೆಸುವ ಕೈ ನಮ್ಮದಾಗಲಿ. ನನ್ನ ದೃಷ್ಟಿಯಲ್ಲಿ ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ ಎಂಬುದೆ ದೀಪಾವಳಿ ಹಬ್ಬದ ಪ್ರಮುಖ ಉದ್ದೇಶ. ನಿಮಗೆ, ನಿಮ್ಮ ಕುಟುಂಬದವರಿಗೆ ಮತ್ತು ನಿಮ್ಮ ಸ್ನೇಹಿತರಿಗೆ ಈ ದೀಪಾವಳಿ ಮಂಗಳ ಮಾಡಲಿ ಎಂದು ಹಾರೈಸುತ್ತಾ… ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
~ವಿದ್ಯಾಶಂಕರ ಹರಪನಹಳ್ಳಿ, ಬೆಂಗಳೂರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)