ಮೂರು ದಶಕದ ಹೋರಾಟಕ್ಕೆ ದೊರಕುವುದೇ ಮನ್ನಣೆ : ನನಸಾಗುವುದೇ ಬೈಂದೂರು ತಾಲೂಕು ರಚನೆಯ ಕನಸು….?

0
1625

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

nh 2

ಬೈಂದೂರು : ಕಳೆದ ಮೂರು ದಶಕಗಳಿಂದ ಬೈಂದೂರು ತಾಲೂಕು ರಚನೆಯ ಹೋರಾಟಕ್ಕೆ ಸರಕಾರದಿಂದ ಮನ್ನಣೆ ದೊರೆಯದಿರುವುದು ಹಾಗೂ ಕೇವಲ ಭರವಸೆಗೆ ಮಾತ್ರ ಸೀಮಿತವಾಗಿರುವುದು ತಾಲೂಕು ರಚನೆಯ ನಿರೀಕ್ಷೆಯಲ್ಲಿದ್ದ ಬೈಂದೂರು ಜನತೆಗೆ ತೀವ್ರ ನಿರಾಶೆ ಮೂಡಿಸಿದೆ. 1980 ರಿಂದ ಬೈಂದೂರು ತಾಲೂಕು ರಚನೆ ಮತ್ತು ಅಭಿವೃದ್ಧಿ ಸಮಿತಿ ಜೊತೆಗೆ ಸಾರ್ವಜನಿಕರು ನಿರಂತರ ಪ್ರಯತ್ನಿಸುತ್ತಿದ್ದು ಹೋರಾಟ ತೀವ್ರಗೊಂಡ ಬಳಿಕ ಬೈಂದೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜನಗಣತಿ ಬಳಿಕ ಶೀಘ್ರ ಘೋಷಣೆ ಮಾಡುವ ಆಶ್ವಾಸನೆ ನೀಡಿದ್ದು ಹಾಲಿ ಮುಖ್ಯಮಂತ್ರಿಗಳು ಸಹ ಇತ್ತೀಚೆಗೆ ಕೊಲ್ಲೂರಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಮನವಿ ಸ್ವೀಕರಿಸಿ ಭರವಸೆ ನೀಡಿದ್ದರು. ಆದರೆ ಜನಗಣತಿ ವರದಿ ಅಂತಿಮಗೊಂಡರೂ ರಾಜಕೀಯ ಅರಾಜಕತೆ ನಡುವೆ ತಾಲೂಕು ರಚನೆಯ ಕೂಗು ಗೌಣವಾಗುತ್ತಿದೆ ಎಂಬಂತೆ ಬಾಸವಾಗುತ್ತಿದೆ.

ಪ್ರಸ್ತುತ ಕುಂದಾಪುರ ತಾಲೂಕಿನಲ್ಲಿ 101 ಗ್ರಾಮಗಳು, 51 ಗ್ರಾಮ ಪಂಚಾಯತ್ ಒಂದು ಪುರಸಭೆ, 381048 ಎಕರೆ ವಿಸ್ತೀರ್ಣದ ಭೂಪ್ರದೇಶದಲ್ಲಿ 377420 ಜನಸಂಖ್ಯೆ ಹೊಂದಿದೆ. ಈ ಬಗ್ಗೆ ಸರಕಾರ ಆಡಳಿತ ಸುಧಾರಣೆಗೆ ವಿಸ್ಕ್ರತ ಅಧಿಕಾರದ ಉದ್ದೇಶದಿಂದ ನೂತನ ತಾಲೂಕು ರಚನೆಗೆ ನೇಮಿಸಿದ ಹುಂಡೇಕರ್ ಸಮಿತಿ, ಗದ್ದಿಗೌಡರ ಸಮಿತಿ, ವಾಸುದೇವರಾವ್ ಆಯೋಗಗಳು ಕುಂದಾಪುರ ತಾಲೂಕಿನ ಎತ್ತರದ ಭಾಗ ಮತ್ತು ದಕ್ಷಿಣ ಭಾಗಗಳೆಂದು ವಿಭಜಿಸಿ ಕೇಂದ್ರಿತ ತಾಲೂಕು ರಚನೆಗೆ ಶಿಫಾರಸ್ಸು ಮಾಡಿತ್ತು. ಈ ಪ್ರಕಾರ ಬೈಂದೂರು ಹೋಬಳಿಯ 26 ಗ್ರಾಮ ಮತ್ತು ವಂಡ್ಸೆ ಹೋಬಳಿಯ 30 ಗ್ರಾಮಗಳನ್ನೊಳಗೊಂಡ 233329ಎಕರೆ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ ಸಮೀಪದ ಕೆಲವು ಊರುಗಳನ್ನು ಈಗಿರುವಂತೆ ಕುಂದಾಪುರಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದಾಗ ಚಕ್ರಾನದಿಯ ಉತ್ತರದ ಭಾಗಗಳಲ್ಲಿರುವ 41 ಗ್ರಾಮಗಳಿಗೆ ಬೈಂದೂರು ಅತ್ಯಂತ ಸಮೀಪವಾಗುವ ಕಾರಣ ಆಡಳಿತ ಹಿತದೃಷ್ಟಿಯಿಂದ ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಮಾತ್ರವಲ್ಲದೆ ಬಂಟ್ವಾಡಿ, ಸೇನಾಪುರ ಒಳರಸ್ತೆಗಳಾದುದರಿಂದ ಕುಂದಾಪುರಕ್ಕಿಂತ ಬೈಂದೂರು ಅತ್ಯಂತ ಸಮೀಪವಾಗಿರುವುದರಿಂದ ವಾಸ್ತವ ಸಂಗತಿಯಾಗಿದೆ. ಈ ಬಗ್ಗೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಬೈಂದೂರಿನಲ್ಲಿ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳ ಮುಂದಾಳತ್ವದಲ್ಲಿ ತಾಲೂಕು ರಚನೆ ಬಗ್ಗೆ ವಿಶೇಷ ಸಭೆ ನಡೆಸಿ ಶೀಘ್ರ ಅನುಷ್ಟಾನಗೊಳಿಸುವ ಬಗ್ಗೆ ಒಕ್ಕೊರಲಿನ ತೀರ್ಮಾನ ಕೈಗೊಂಡಿದ್ದು ಪ್ರಸ್ತುತ 4 ವರ್ಷ ಕಳೆದರೂ ಅಧಿಕೃತ ಘೋಷಣೆಗೆ ಮುಹೂರ್ತ ಬಂದಿಲ್ಲದಿರುವುದು ಆಶ್ಚರ್ಯ ತಂದಿದೆ. ತಾಲೂಕು ರಚನೆಗೆ ಬೇಕಿರುವ ಎಲ್ಲಾ ಅರ್ಹತೆ, ಸೌಲಭ್ಯಗಳನ್ನು ಹೊಂದಿದ್ದು ಕುಂದಾಪುರ ನ್ಯಾಯಾಲಯದಲ್ಲಿ ಹೆಚ್ಚಿನ ಪ್ರಕರಣಗಳು ಬೈಂದೂರು ವ್ಯಾಪ್ತಿಯದ್ದಾಗಿದೆ.

ವ್ಯಾಪಕ ಒಮ್ಮತ – ಆದರೂ…?
ಬೈಂದೂರು ತಾಲೂಕು ಕೇಂದ್ರಕ್ಕೆ ಸಂಪೂರ್ಣ ಅರ್ಹತೆ ಹೊಂದಿದೆ. ಈ ಬಗ್ಗೆ ಪಕ್ಷಾತೀತ ಹೋರಾಟ ನಡೆದಿರುವುದು ಶ್ಲಾಘನೀಯ. ಈಗಾಗಲೇ ವಿಶೇಷ ಆಸಕ್ತಿಯಿಂದ ಸರಕಾರದ ಗಮನ ಸೆಳೆದಿದ್ದು ಇಡೀ ರಾಜ್ಯದಲ್ಲಿ ಬಾಕಿ ಇರುವ ತಾಲೂಕು ರಚನೆ ಏಕಕಾಲದಲ್ಲಿ ಘೋಷಣೆಯಾಗಬೇಕಾ ಗಿರುವುದರಿಂದ ವಿಳಂಬವಾಗಿದೆ. ಕ್ಷೇತ್ರದ ಸಂಸದನಾಗಿ ಬೈಂದೂರು ತಾಲೂಕು ರಚನೆ ಬಗ್ಗೆ ವಿಶೇಷ ಒಲವು ಹೊಂದಿದ್ದೇನೆ.

23-09-2014-1

~ ಬಿ. ರಾಘವೇಂದ್ರ ಸಂಸದ

ಹಲವು ಬಾರಿ ಸರಕಾರದ ಗಮನ ಸೆಳೆದಿದ್ದು ಜನಗಣತಿ ವಿಚಾರವಾಗಿ ವಿಳಂಬವಾಗಿದೆ. ಬೈಂದೂರು, ಬ್ರಹ್ಮಾವರ ತಾಲೂಕುಗಳ ಪ್ರಸ್ತುತ ಸರಕಾರದ ಮುಂದಿದ್ದು ತಾಲೂಕು ರಚನೆಯ ಬಗ್ಗೆ ಬೈಂದೂರಿನ ಜನತೆಯೊಂದಿಗೆ ಮುಕ್ತ ಬೆಂಬಲವಿದೆ. ಹಾಗೂ ಆ ಬಗ್ಗೆ ಕ್ರಿಯಾಶೀಲನಾಗಿದ್ದೇನೆ.

9-02-2013-7

~ ಕೆ. ಲಕ್ಷ್ಮೀನಾರಾಯಣ ಶಾಸಕ

ಸರಕಾರಕ್ಕೆ ಹಲವು ಬಾರಿ ಮನವಿ ನೀಡಿದ್ದು ಸಂಪೂರ್ಣ ಮಾಹಿತಿ ಒದಗಿಸಿ ಸರಕಾರವು ಸಹ ಒಪ್ಪಿಕೊಂಡಿದೆ. ಜನಪ್ರತಿನಿಧಿಗಳ ಒತ್ತಡ, ಮಂತ್ರಿಗಳ ಆಸಕ್ತಿ ಮುಖ್ಯ. ಶೀಘ್ರ ನಿರ್ಣಯ ಕೈಗೊಳ್ಳದಿದ್ದಲ್ಲಿ ಬೈಂದೂರು ಜನತೆಯೊಂದಿಗೆ ಮತ್ತೆ ಹೋರಾಟ ನಡೆಸಬೇಕಾಗುತ್ತದೆ.

1-09-2014-11

~ ರೋ. ಜಗನ್ನಾಥ ಶೆಟ್ಟಿ. ಅಧ್ಯಕ್ಷರು ತಾಲೂಕು ಹೋರಾಟ ಸಮಿತಿ

ಹಿಂದಿನ ಅವಧಿಯಲ್ಲಿ ತಾಲೂಕು ರಚನೆಯ ಪೂರ್ವಯೋಜನೆಯಂತೆ ವಿವಿಧ ಕಛೇರಿಗಳು, ಸಬ್ ರಿಜಿಸ್ಟಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರಿಗೆ ಬಂದಿದ್ದವು ಆದರೆ ಪ್ರಸ್ತುತ ಆಡಳಿತ ಪಕ್ಷದ ನಿರ್ಲಕ್ಷ ತಾಲೂಕು ಘೋಷಣೆಯ ಹಿನ್ನಡೆಗೆ ಕಾರಣ.

raju-p.ya.1

~ ರಾಜು ಪೂಜಾರಿ ಮಾಜಿ ಜಿಲ್ಲಾಧ್ಯಕ್ಷರು ಉಡುಪಿ

ಕೇವಲ ರಾಜಕೀಯ ಅರಾಜಕತೆ, ವೈಯಕ್ತಿಕ ಅಭಿವೃದ್ಧಿ, ಅಧಿಕಾರ ಹೊರತು ಪಡಿಸಿದರೆ ಅಭಿವೃದ್ಧಿಯ ಚಿಂತನೆಯಿಲ್ಲದಿರುವ ಸರಕಾರದ ಆಳ್ವಿಕೆ ತಾಲೂಕು ಘೋಷಣೆಯ ಹಿನ್ನಡೆಗೆ ಕಾರಣವಾಗಿದೆ.
~ ಬೋಜರಾಜ ಶೆಟ್ಟಿ. ಜೆ. ಡಿ. ಎಸ್. ಮುಖಂಡರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)