ಬಡಗು ತಿಟ್ಯಾನ ಯಕ್ಷಶೈಲಿಗೆ ಜೀವ ತುಂಬುವ ಕಲಾವಿದ : ಮಂಕಿ ಈಶ್ವರ ನಾಯ್ಕ

0
1154

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

eshwara manki 2

ಬೈಂದೂರು : ಯಕ್ಷಗಾನ ನಮ್ಮ ನಾಡಿನ ಶ್ರೀಮಂತ ಕಲೆಯಲ್ಲೊಂದು. ಇಂತಹ ಗೌರವಾಭಿಮಾನದೊಂದಿಗೆ, ಜನಪ್ರಿಯತೆಯೊಂದಿಗೆ ಮೆರೆದ ಈ ಯಕ್ಷರಂಗ ತೆಂಕು – ಬಡಗು ತಿಟ್ಟುಗಳೆಂಬ ಎರಡು ಪ್ರಕಾರಗಳಲ್ಲಿ ಬೆಳೆದು ನಿಂತಿದ್ದರೆ ಈ ಎರಡು ತಿಟ್ಟುಗಳಲ್ಲಿ ತಮ್ಮದೇ ಆದ ಸ್ಥಾನಮಾನ – ನಾಮಾಂಕಿತದೊಂದಿಗೆ ಯಕ್ಷರಂಗದಲ್ಲಿ ವಿಜೃಂಭಿಸಿದ ಕೆಲವೊಂದು ಬಳಗವನ್ನು ಅಗ್ರ ಪಂಕ್ತಿ ಸಾಲಲ್ಲಿ ಗುರುತಿಸಬಹುದು. ಅಂತಹ ಯಕ್ಷಗಾನ ಬಳಗಗಳಲ್ಲಿ ಬಡಗು ತಿಟ್ಯಾನ ಯಕ್ಷಶೈಲಿಯನ್ನು ಪ್ರತಿಬಿಂಬಿಸುವ ಬಹು ಪ್ರಸಿದ್ಧಿಯನ್ನು ಪಡೆದ ಪೆರ್ಡೂರು ಮೇಳ ಮತ್ತು ಸಾಲಿಗ್ರಾಮ ಮೇಳ ಡೇರೆ ಮೇಳಗಳಾಗಿ ಕಲಾ ಸೇವೆ ನೀಡುತ್ತಿದ್ದರೆ, ಮಂದಾರ್ತಿ, ಮಾರಣಕಟ್ಟೆ, ಕಮಲಶಿಲೆ, ಸೌಕೂರು, ಅಮೃತೇಶ್ವರಿ, ನೀಲಾವರ, ಹಿರಿಯಡಕ, ಹಾಲಾಡಿ, ಮಡಾಮಕ್ಕಿ ಮುಂತಾದ ಯಕ್ಷ ತಂಡಗಳು ಹರಕೆ ಬಯಲಾಟದ ಮೇಳಗಳಾಗಿ ಕಲಾ ವ್ಯವಸಾಯ ಗೈಯುತ್ತಿವೆ.

ಬಡಗು ತಿಟ್ಯಾನ ಯಕ್ಷರಂಗವನ್ನು ಶ್ರೀಮಂತಗೊಳಿಸುತ್ತಾ ಬಂದಿರುವ ಈ ಮೇಳಗಳು ಬಡಗು ಯಕ್ಷ ಶೈಲಿಗೆ ಮರಳು ಹೋದ, ತಮ್ಮ ಅಪ್ರತಿಮ ಪ್ರತಿಭೆಯೊಂದಿಗೆ ಯಕ್ಷಗಾನ ಸೇವೆಯನ್ನು, ಕಲಾದಾಹವನ್ನು ತೀರಿಸಲು ಮುಂದಾಗುವ ಅನೇಕ ಹಿರಿಯ – ಕಿರಿಯ ಕಲಾವಿದರಿಗೆ, ಕಲಾಕಾರರಿಗೆ ಆಶ್ರಯವನ್ನು ನೀಡುತ್ತಾ ಬಂದಿರುವುದು ಅಭಿಮಾನದ ಸಂಗತಿಯಾಗಿದೆ. ಇಂತಹ ಗೌರವಾನ್ವಿತ ಸ್ಥಾನ ಪಡೆದವರಲ್ಲಿ ಬಡಗು ತಿಟ್ಯಾನ ವರ್ತಮಾನ ಕಾಲದ ಅಧ್ಯಯನಶೀಲ ಕಲಾವಿದ ಮಂಕಿ ಈಶ್ವರ ನಾಯ್ಕರು ಓರ್ವರೆನ್ನಬಹುದು. ಕಳೆದ ಸುಮಾರು 18 ವರ್ಷಗಳಿಂದ ತನ್ನ ಕಲಾ ಪ್ರತಿಭೆಯನ್ನು, ಯಕ್ಷ ಶೈಲಿಯನ್ನು ತೆರೆದಿಟ್ಟು ಯಕ್ಷಕಲಾ ರಸಿಕರ ಮನಗೆದ್ದಿರುವ ಈಶ್ವರ ನಾಯ್ಕರು ಇದೀಗ ನೀಲಾವರ ಮೇಳದಲ್ಲಿ ಪ್ರಧಾನ ಕಲಾವಿದರಾಗಿ ತನ್ನ ಪ್ರತಿಭೆಗೆ ಸಾಕ್ಷಿ ನುಡಿಯುತ್ತಿದ್ದಾರೆ.

eshwara manki 1

ಯಕ್ಷಗಾನಕ್ಕೆ ಬೇಕಾದ ಹಾವ – ಭಾವ, ಸುಂದರ ಮೈಕಟ್ಟು, ಚುರುಕು ನಾಟ್ಯ, ಮೋಹಕ ರೂಪ, ನಿರರ್ಗಳ ಮಾತನಾಡುವ ಪಾಂಡಿತ್ಯ, ಶಕ್ತಿ ಸಾಮರ್ಥ್ಯ ಎಲ್ಲವನ್ನು ಮೈಗೂಡಿಸಿಕೊಂಡು ಯಕ್ಷಗಾನದ ಸಿರಿ ಸಂಪತ್ತನ್ನು ತನ್ನದೇ ಆದ ಆಕರ್ಷಕ ಶೈಲಿಯಲ್ಲಿ ತೆರೆದಿಡುತ್ತಾ ಬಂದಿರುವ ಈಶ್ವರ ನಾಯ್ಕರು ಮೂಲತ: ಹೊನ್ನಾವರ ತಾಲೂಕಿನ ಮಂಕಿಯವರು. ಹನುಮಂತ ನಾಯ್ಕ ಮತ್ತು ಶ್ರೀಮತಿ ಲಕ್ಷ್ಮೀ ದಂಪತಿಗಳ ಸುಪುತ್ರರಿವರು.

ತನ್ನ ಬದುಕಿನ ಹನ್ನೇರಡನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಂಕಿಯ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಪೂರೈಸಿ ಯಕ್ಷ ಕಲಾಮಾತೆಗೆ ಸಂಪೂರ್ಣ ಶರಣು ಹೋದ ಕಲಾವಿದರಿವರು. ಯಾವುದೇ ಯಕ್ಷಗಾನದ ಹಿನ್ನಲೆಯಿಲ್ಲದೆ, ಮನೆಯವರ ಪ್ರೋತ್ಸಾಹ, ಪ್ರೇರಣೆ ರಹಿತವೂ ತೀರಾ ಆಕ್ಷೇಪದ ಮಧ್ಯೆಯೂ ಕೆರೆಮನೆ ಶಂಭು ಹೆಗಡೆಯವರ ಗರಡಿ ಶ್ರೀ ಮಯ ಕಲಾಕೇಂದ್ರದ ಮುಖಾಂತರ ಯಕ್ಷರಂಗದ ದಶಾವತಾರಿ, ಸವ್ಯಸಾಚಿ ಕಲಾವಿದ ದಿವಂಗತ ಗುರು ಹೇರಂಜಾಲು ವೆಂಕಟರಮಣ ಗಾಣಿಗ ಮತ್ತು ಪರಂಪರೆಯ ಭಾಗವತ ಹೇರಂಜಾಲು ಗೋಪಾಲ ಗಾಣಿಗರ ಶಿಷ್ಯನಾಗಿ ಹೆಚ್ಚಿನ ತರಬೇತಿಯನ್ನು, ಯಕ್ಷಶೈಲಿಯನ್ನು ಅಭ್ಯಸಿಸಿ ಗೋಪಾಲನ ವೇಷದೊಂದಿಗೆ 1995ರಲ್ಲಿ ಮೊತ್ತ ಮೊದಲಿಗೆ ಯಕ್ಷರಂಗ ಮಂಚವನ್ನೇರಿದರು. ಅಂದಿನಿಂದ ಇಂದಿನವರೆಗೂ ಯಕ್ಷಗಾನವನ್ನು ವೃತ್ತಿಯನ್ನಾಗಿ ಸ್ವೀಕರಿಸಿ ತನ್ನ ಕಲಾ ಆಶೋತ್ತರಗಳಿಗೆ ಪೂರಕವಾದ ಅವಕಾಶವನ್ನು ಹಿರಿಯ – ಕಿರಿಯ ಕಲಾವಿದರ ಮಾರ್ಗದರ್ಶನ ಪ್ರೋತ್ಸಾಹದ ನೆಲೆಯಲ್ಲಿ ತನ್ನನ್ನು ತಾನು ಓರ್ವ ಉತ್ತಮ ಯಕ್ಷಗಾನ ಕಲಾವಿದನಾಗಿಯೂ ನಿರೂಪಿಸಿಕೊಂಡಿರುವ ಈಶ್ವರ ನಾಯ್ಕರು 1996ರಲ್ಲಿ ಒಂದು ವರ್ಷ ಗುಂಡಬಾಳ ಮೇಳದಲ್ಲಿ, 1997ರಲ್ಲಿ ಒಂದು ವರ್ಷ ಬಗ್ವಾಡಿ ಮೇಳದಲ್ಲಿ, 1998- 99ರವರೆಗೆ ಮತ್ತೆ ಎರಡು ವರ್ಷ ಕಾಲ ಗುಂಡಬಾಳ ಮೇಳದಲ್ಲಿದ್ದು 2000ರಲ್ಲಿ ಒಂದು ವರ್ಷ ಅಮೃತೇಶ್ವರಿ ಮೇಳದಲ್ಲಿ, 2001ರಿಂದ 2009ರವರೆಗೆ 8 ವರ್ಷ ಸಾಲಿಗ್ರಾಮ ಮೇಳದಲ್ಲಿ ಓರ್ವ ಸಮರ್ಥ ವೇಷಧಾರಿಯಾಗಿ, ಅರ್ಥಧಾರಿಯಾಗಿ, ನೃತ್ಯಗಾರನಾಗಿ ಹಂತ ಹಂತವಾಗಿ ಬೆಳೆದು 2010ರಿಂದ 2012ರವರೆಗೆ ಎರಡು ವರ್ಷ ಇನ್ನೊಂದು ನಾಮಾಂಕಿತ ಡೇರೆ ಮೇಳ, ಪೆರ್ಡೂರು ಮೇಳದಲ್ಲಿ ತನ್ನ ಕಲಾಸೇವೆ ಗೈದು ಇದೀಗ ಹೊಸದಾಗಿ ಪ್ರಾರಂಭಗೊಂಡ ನೀಲಾವರ ಮಹಿಷ ಮರ್ಧಿನಿ, ಹರಹೆ ಬಯಲಾಟ ಮೇಳದಲ್ಲಿ ಪ್ರಧಾನ ಕಲಾವಿದರಾಗಿ ಕಲಾ ವ್ಯವಸಾಯ ಗೈಯುತ್ತಿದ್ದಾರೆ.

ಈ ನಿಟ್ಟಿನಲ್ಲಿ ಅವರ ಅಭಿನಯದ ಈಶ್ವರಿ – ಪರಮೇಶ್ವರಿಯ ರಾಜವರ್ಧನ, ರೂಪ ವರ್ಧನ, ಮಾನಸ ಮಾಂಗಲ್ಯದ ಭಾಗ್ಯವರ್ಧನ, ಅಗ್ನಿ ನಕ್ಷತ್ರದ ಸಾತ್ವಿಕ, ರಜತ ಸಂಭ್ರಮ, ವಂಶವಲ್ಲರಿ ಮುಂತಾದ ಸಾಮಾಜಿಕ ಪ್ರಸಂಗದ ಪಾತ್ರಗಳು ಇವರಿಗೆ ಅಪಾರ ಕೀರ್ತಿಯನ್ನು ತಂದು ಕೊಟ್ಟರೆ ಪೌರಾಣಿಕ ಪ್ರಸಂಗದ ಅಭಿಮನ್ಯು ಕೃಷ್ಣ, ಚಂದ್ರಹಾಸ, ಲವಕುಶ, ಸುದನ್ವ ಇತ್ಯಾದಿ ಪಾತ್ರಗಳು ಬಹು ಜನಪ್ರಿಯತೆಯನ್ನು ತಂದುಕೊಟ್ಟಿರುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ಇವರು ನಿರ್ವಹಿಸುವ ಯಾವುದೇ ಪಾತ್ರವಿರಲಿ ಪಾತ್ರದ ಅಧ್ಯಯನದ ಕುರಿತು ಇವರ ಕಾಳಜಿ ಕಳಕಳಿ ಯಾರು ಮೆಚ್ಚಲೇ ಬೇಕು.

ಕೊಂಡದ ಕುಳಿ, ಕೃಷ್ಣಯಾಜಿ, ಹುಕಗೋಡ ಚಂದ್ರಹಾಸ, ಶಶಿಕಾಂತ ಶೆಟ್ರು ಕಾರ್ಕಳ, ಹೇರಂಜಾಲು ಗೋಪಾಲ ಗಾಣಿಗ, ಪರಮೇಶ್ವರ ಭಂಡಾರಿ, ಶಿವಾನಂದ ಕೋಟ, ತೀರ್ಥಹಳ್ಳಿ ಗೋಪಾಲ್ ಆಚಾರ್ ಮುಂತಾದ ನಾಮಾಂಕಿತ ಹಿರಿಯ – ಕಿರಿಯ ಕಲಾವಿದರ ಗರಡಿಯಲ್ಲಿ ಜೊತೆಯಾಗಿ ಅಭಿನಯಿಸಿ, ಆತ್ಮೀಯ ಒಡನಾಟದೊಂದಿಗೆ ಪಳಗಿ ಓರ್ವ ಪರಿಪೂರ್ಣ ಕಲಾವಿದನಾಗಿ ಬೆಳೆಯುವಲ್ಲಿ ಸಹಕಾರಿಯಾಯಿತೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಇವರನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿ ಗೌರವಿಸಿವೆ. ಇವರ ಯಕ್ಷ ಸೇವೆಗೆ 2003ರಲ್ಲಿ ದಿವಂಗತ ಕೊಂಡದ ಕುಳಿ ಸಹೋದರರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವರ್ತಮಾನ ಕಾಲದ ಉತ್ತಮ ಮೂರನೇ ವೇಷಧಾರಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿರುವುದು ಇವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಹೆಚ್ಚಿಸಿದೆ. ಅಲ್ಲದೇ ಮುಂಬೈ, ಹೊನ್ನಾವರ, ಹೈದರಾಬಾದ್ ಅನೇಕ ಸ್ಥಳಗಳಲ್ಲಿ ಅಭಿಮಾನಿ ವೃಂದದಿಂದ ಇವರನ್ನು ಸನ್ಮಾನಿಸುವ ಮೂಲಕ ಇವರ ಸಾಧನೆಗೆ ಗೌರವ ಸಂದಿದೆ.

ಕರ್ನಾಟಕ ಕರಾವಳಿ ಮೈತ್ರಿ ಸಂಘ ಹೈದರಾಬಾದ್ ಇವರು ನಟ ಶೇಖರ ಬಿರುದನ್ನು ನೀಡಿ ಸನ್ಮಾನಿಸಿದರೆ, ಕರಾವಳಿ ಮುಂಜಾವು ಪತ್ರಿಕೆ ಕಾರವಾರ ಇವರು ಅಂದಿನ ಜಿಲ್ಲಾಧಿಕಾರಿ ಶ್ರೀ. ಕೃಷ್ಣಯ್ಯ ಇವರ ಉಪಸ್ಥಿತಿಯಲ್ಲಿ ಕರ್ನಾಟಕ ಸರಕಾರದ ಸಚಿವರಾದ ಆನಂದ ಅಸ್ನೋಟಿಕರ ಅಧ್ಯಕ್ಷತೆಯಲ್ಲಿ ಸನ್ಮಾನ ಪಡೆದಿರುವುದು ಸಂತೋಷದ ವಿಚಾರವಾಗಿದೆ. ಈ ರೀತಿಯ ಹಿನ್ನಲೆಯನ್ನು ಹೊಂದಿದ ಸರಳ ಸಜ್ಜನಿಕೆಯ ಸೌಮ್ಯ ಸ್ವಭಾವದ ಸದಾ ಯಕ್ಷಗಾನವನ್ನು ಪೂಜನೀಯ ಸ್ಥಾನದಲ್ಲಿರಿಸಿ ಗೌರವಿಸುತ್ತಾ ಬಂದಿರುವ ಯಕ್ಷಕಲಾ ಮಾತೆ ಎಂದಿಗೂ ತನ್ನ ಕೈಬಿಡಲಾರಳು ಎನ್ನುವ ಅಚಲ ವಿಶ್ವಾಸದೊಂದಿಗೆ ಕಲಾ ಮಾತೆಯ ಸೇವೆಯನ್ನು ಧನ್ಯತೆಯೊಂದಿಗೆ ಮಾಡುತ್ತಾ ಬಂದಿರುವ ಇವರ ವೈವಾಹಿಕ ಜೀವನದಲ್ಲಿ ಪತ್ನಿ ಚಂದ್ರಕಲಾ ಮತ್ತು ಮಗ ಮೇಘರಾಜ, ಮಗಳು ಮಾನಸರೊಂದಿಗೆ ಸಂತೃಪ್ತ ಬದುಕನ್ನು ಕಂಡಿರುವ ಈಶ್ವರ ನಾಯ್ಕರ ಬದುಕು ಉಜ್ವಲವಾಗಲಿ. ಯಕ್ಷಗಾನ ಕ್ಷೇತ್ರಕ್ಕೆ ಇವರಿಂದ ಇನ್ನಷ್ಟು ಸೇವೆ ಲಭ್ಯವಾಗಲಿ ಎಂದು ಹಾರೈಸುತ್ತೇವೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)