ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಗ್ರಾಮೀಣ ಪ್ರತಿಭೆ – ಧನಂಜಯ್

0
909

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

9-1-2014-3

ಧನಂಜಯ್ ಗೆ ಓಡಲು ಶೂಗಳಿಲ್ಲ, ಕೋಚ್ ಗಳ ಸಲಹೆಗಳಿಲ್ಲ

ಬೈಂದೂರು : ಸಾಧಿಸಬೇಕೆಂಬ ಛಲ, ಹೃದಯದಲ್ಲಿನ ಅದಮ್ಯ ಉತ್ಸಾಹ, ಕಠಿಣ ಪ್ರಯತ್ನಗಳಿದ್ದಾಗ ಸಾಧನೆ ತನ್ನಿಂತಾನೆ ಸಾಧ್ಯವಾಗುತ್ತದೆ. ಕ್ರೀಡಾವಿಭಾಗದಲ್ಲಿ ಕೆಲವರು ತರಬೇತಿಗಾಗಿ ಲಕ್ಷಾಂತರ ರೂ. ವ್ಯಯಿಸುತ್ತಾರೆ. ಹತ್ತಾರು ಸವಲತ್ತುಗಳನ್ನು ನೀಡಿದರು ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಿಲ್ಲ. ಆದರೆ ಯಾವುದೇ ಕೋಚ್ ಗಳ ತರಬೇತಿ ಇಲ್ಲದೇ, ಓಟಕ್ಕೆ ಅವಶ್ಯಕವಾದ ಸ್ಪೈಶೂಗಳು ಇಲ್ಲದೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ ಹೆಗ್ಗಳಿಕೆ ಬೈಂದೂರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಧನಂಜಯ್ ನದ್ದಾಗಿದೆ.

ಮೂಲತ: ಶಿರೂರು ಸಮೀಪದ ಗೋರ್ಟೆಯ ಧನಂಜಯ್ ಮಂಜುನಾಥ ಮೊಗೇರ ಪ್ರತಿಭಾವಂತ ಬಡ ವಿದ್ಯಾರ್ಥಿಯಾಗಿದ್ದಾನೆ. ಮೀನುಗಾರಿಕೆ ಇವರ ಜೀವನಾಧಾರವಾಗಿದೆ. ಆರ್ಥಿಕ ಮುಗ್ಗಟ್ಟು ಹಾಗೂ ಸೂಕ್ತ ಸಹಕಾರದ ಕೊರತೆಯಿಂದಾಗಿ ಹತ್ತಾರು ಉತ್ತಮ ಅವಕಾಶಗಳನ್ನು ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ.

ಧನಂಜಯ್ ಕ್ರೀಡಾ ಕುಟುಂಬದಿಂದ ಬಂದವರಲ್ಲ. ಸ್ವ ಸಾಮರ್ಥ್ಯದಿಂದ ಕ್ರೀಡೆಗೆ ಒಲವು ತೋರಿದ್ದಾನೆ. ಈತನ ಸಹೋದರಿ ರಾಜ್ಯಮಟ್ಟದ ಕ್ರೀಡಾಪಟುವಾಗಿದ್ದಾರೆ. ದಸರಾ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ 100 ಹಾಗೂ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಆರ್ಥಿಕ ಸಹಕಾರದ ಕೊರತೆಯಿಂದಾಗಿ ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸದಿರುವುದು ನೈಜ ಪ್ರತಿಭೆಗಳ ವಾಸ್ತವತೆಯನ್ನು ಬಿಂಬಿಸುತ್ತದೆ. ಈತನ ಪ್ರತಿಭೆಯನ್ನು ಕಂಡು ಪ್ರೋತ್ಸಾಹಿಸಿದ ಹೆಗ್ಗಳಿಕೆ ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅನಿಲ್ ಕುಮಾರ್ ಶೆಟ್ಟಿಯವರದ್ದಾಗಿದೆ. ಇವರ ನೆರವಿನಿಂದಾಗಿ ವಿಶ್ವವಿದ್ಯಾನಿಲಯದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭರವಸೆಯ ಕ್ರೀಡಾಪಟು ಆಗಿ ಮೂಡಿಬಂದಿದ್ದಾನೆ.

9-1-2014-2

ಇವರ ಅಭಿಪ್ರಾಯದ ಪ್ರಕಾರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇದುವರೆಗೆ ನೂರು ಮೀಟರ್ ಓಟದ ದಾಖಲೆಗೆ ತೆಗೆದುಕೊಂಡ ಸಮಯ 10.06 ಸೆಕೆಂಡ್ ಗಳಾಗಿದೆ. ಯಾವುದೇ ತರಬೇತಿಗಳಿಲ್ಲದಿದ್ದರೆ ಗರಿಷ್ಠವೆಂದರೆ 11 ಸೆಕೆಂಡ್ ಗಳಲ್ಲಿ ನೂರು ಮೀಟರ್ ಕ್ರಮಿಸಬಹುದಾಗಿದೆ. ಆದರೆ ಧನಂಜಯ್ ಯಾವುದೇ ಕ್ರೀಡಾ ಮಾರ್ಗದರ್ಶನವಿಲ್ಲದೆ ನಾಲ್ಕೈದು ದಿನಗಳ ಪ್ರಯತ್ನದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಸ್ಪರ್ಧೆಯಲ್ಲಿ 10.6 ಸೆಕೆಂಡ್ ಗಳಲ್ಲಿ ನೂರು ಮೀಟರ್ ಓಟವನ್ನು ಮುಗಿಸಿ ಬೇಶ್ ಎನಿಸಿಕೊಂಡಿದ್ದಾನೆ. ಇದರ ಬಳಿಕ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ಪಂಜಾಬ್ ನ ಪಾಟಿಯಾಲದಲ್ಲಿ ನಡೆದ ಆಲ್ ಇಂಡಿಯಾ ಅಥ್ಲೆಟಿಕ್ ಮೀಟ್ 2014 ಕ್ರೀಡಾ ಸ್ಪರ್ಧೆಯಲ್ಲಿ ಒಟ್ಟು 177ವಿಶ್ವ ವಿದ್ಯಾನಿಲಯಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಅವರಲ್ಲಿ ಈತ 4×100 ಮೀಟರ್ ರಿಲೇ ಓಟದಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಸರಕಾರಿ ಕಾಲೇಜಿನ ಕ್ರೀಡಾ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾನೆ. ಆಶ್ಚರ್ಯವೆಂದರೆ ಕ್ರೀಡಾ ಸ್ಪರ್ಧೆಗೆ ತೆರಳಲು ಈತನಿಗೆ ಓಟದ ಶೂಗಳಿರಲಿಲ್ಲ, ಹೀಗಾಗಿ ಗೆಳೆಯನ ಶೂ ಧರಿಸಿ ಸ್ಪರ್ಧಿಸಿದ್ದಾನೆ. ಸ್ನೇಹಿತರು ಹಾಗೂ ಅಧ್ಯಾಪಕ ವೃಂದದವರು ಸೂಕ್ತ ಹಣಕಾಸು ನೆರವು ನೀಡಿರುವುದರಿಂದ ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಿದೆ.

ಅತ್ಯಂತ ಸರಳ ಸಜ್ಜನಿಕೆಯ ವಿದ್ಯಾರ್ಥಿಯಾಗಿರುವ ಈತ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನೂರು ಮೀಟರ್ ಓಟ 10.06 ಸೆಕೆಂಡ್ ಗಳ ದಾಖಲೆಯನ್ನು ಮುರಿಯಬೇಕು ಹಾಗೂ ಆಲ್ ಇಂಡಿಯಾ ಅಥ್ಲೇಟಿಕ್ಸ್ ನಲ್ಲಿ ನೂರು ಹಾಗೂ 200 ಮೀಟರ್ ಸ್ಪರ್ಧೆಯಲ್ಲಿ ಬಹುಮಾನಗಳಿಸಬೇಕೆನ್ನುವ ಕನಸು ಹೊಂದಿದ್ದಾನೆ. ಅಬ್ಬರದ ಪ್ರಚಾರ, ವೈಯಕ್ತಿಕ ಪ್ರಸಿದ್ಧಿಯ ಕಾರ್ಯಕ್ರಮಗಳಿಗೆ ಲಕ್ಷಾಂತರ ವ್ಯಯಿಸುವ ಸಮಾಜದ ನಡುವೆ ಇಂತಹ ಗ್ರಾಮೀಣ ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ ನೀಡಿದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗೊಂದಿಷ್ಟು ನೆರವು ನೀಡಿದ ಸಂತೃಪ್ತಿ ಮೂಡುತ್ತಿತ್ತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)