ಶೇಂಗಾ ಬೆಳೆಯಲ್ಲೊಂದು ಪ್ರಯೋಗ : ಗುಜರಿ ಸೈಕಲ್ ಗೂ ಬಂತು ಬೇಡಿಕೆ..!

0
1508

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

18-1-2014-2

ಬೈಂದೂರು : ಕೃಷಿ ಕ್ಷೇತ್ರ ದಿನದಿಂದ ದಿನಕ್ಕೆ ಬದಲಾವಣೆ ಕಂಡುಕೊಳ್ಳುತ್ತಿದೆ. ಹೊಸ ಹೊಸ ಚಿಂತನೆಗಳು, ಪ್ರಯೋಗಗಳು ನಡೆಯುತ್ತಿವೆ. ಹಾಗೆಯೇ ಕರಾವಳಿ ಭಾಗದ ಶೇಂಗಾ ಸಾಲು ಗುಡಿಸಲು ಸೈಕಲ್ ಪ್ರಯೋಗದ ಅನ್ವೇಷಣೆ ರೈತರಿಗೆ ಹೊಸತನವೊಂದನ್ನು ಪರಿಚಯಿಸಿದೆ.

ಆಧುನಿಕ ತಂತ್ರಜ್ಝಾನಕ್ಕೆ ಒಗ್ಗಿಕೊಳ್ಳುತ್ತಿರುವ ಕೃಷಿ ಕ್ಷೇತ್ರ ಪರಿಕರಗಳ ದುಬಾರಿ ಬೆಲೆಯಿಂದ ಸಾಂಪ್ರದಾಯಿಕ ಪದ್ದತಿಯನ್ನೆ ಬಹುತೇಕ ರೈತರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇಂಥವುಗಳ ನಡುವೆ ಉಪ್ಪುಂದ ಸಮೀಪದ ಹೊಸ್ಕೋಟೆ ಮಾಣಿಹಾಡಿಯ ಪ್ರದೀಪ ಪೂಜಾರಿ ಗುಜರಿ ಸೈಕಲ್ ಗಳನ್ನು ಬಳಸಿಕೊಂಡು ಶೇಂಗಾ ಬೆಳೆ ಗುಡಿಸುವ ಹೊಸ ಪ್ರಯೋಗ ಕಂಡುಹಿಡಿದಿದ್ದಾರೆ. ನೆಲಗಡಲೆ ಗುಡಿಸಲು ಈ ಪ್ರಯೋಗ ಉತ್ತಮ ಬೇಡಿಕೆ ಕಂಡುಕೊಳ್ಳುತ್ತಿದೆ.

18-1-2014-3

ಬಹುತೇಕವಾಗಿ ಕರಾವಳಿ ಭಾಗದಲ್ಲಿ ಭತ್ತದ ಬೆಳೆಯ ಬಳಿಕ ಶೇಂಗಾ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. 90ರಿಂದ 100 ದಿನದ ವರೆಗೆ ಶೇಂಗಾ ಬೆಳೆ ಬೆಳೆಯುತ್ತಾರೆ. ಹೂಬಿಡುವ ಸಂದರ್ಭದಲ್ಲಿ ಗಿಡದ ಬುಡಕ್ಕೆ ಮಣ್ಣು ತುಂಬಿಸಬೇಕಾಗುತ್ತದೆ. ಸಾಮಾನ್ಯವಾಗಿ ರೈತರು ಸಪೂರವಾದ ಕಬ್ಬಿಣದ ಹಾರೆ ಮೂಲಕ ಶೇಂಗಾ ಗುಡಿಸುವ ಸಾಂಪ್ರದಾಯಿಕ ಪದ್ದತಿ ಅನುಸರಿಸುತ್ತಿದ್ದಾರೆ. ಆದರೆ ಈ ಸಮಸ್ಯೆಗೆ ಮುಕ್ತಿ ನೀಡುವ ಜೊತೆಗೆ ಕ್ಷಿಪ್ರವಾಗಿ ಶೇಂಗಾ ಗುಡಿಸಲು ಪ್ರದೀಪ ಪೂಜಾರಿ ಗುಜರಿ ಸೈಕಲ್ ಗಳನ್ನು ಬಳಸಿಕೊಂಡು ಯಶಸ್ವಿಯಾಗಿದ್ದಾರೆ.

ಸರಕಾರ ವಿದ್ಯಾರ್ಥಿಗಳಿಗೆ ನೀಡುವ ಸೈಕಲ್ ಗಳು ಒಂದೆರಡು ವರ್ಷಗಳಲ್ಲಿ ಗುಜರಿಯಾಗುತ್ತಿವೆ. ಇಂತಹ ಸೈಕಲ್ ಗಳು ನಿರುಪಯುಕ್ತವಾಗಬಾರದೆಂದು ಇವರು ಶೇಂಗಾ ಗುಡಿಸುವ ಯಂತ್ರವಾಗಿ ಮಾರ್ಪಡಿಸಿದ್ದಾರೆ. ಸೈಕಲ್ ನ ಹಿಂಬದಿಗೆ ಹ್ಯಾಂಡಲ್ ಅಳವಡಿಸಿ ಕೆಳಭಾಗದಲ್ಲಿ ಚಿಕ್ಕ ಕಬ್ಬಿಣ್ಣದ ಹಾರೆಯನ್ನು ಜೋಡಿಸಿದಾಗ ಯಂತ್ರ ಸಿದ್ಧಗೊಳ್ಳುತ್ತದೆ. ಇದರ ರಚನೆಗೆ 100ರಿಂದ 200 ರೂಪಾಯಿ ಖರ್ಚು ತಗಲುತ್ತದೆ. ಕೃಷಿಕರಿಗೆ ಕೈಗೆಟುಕದ ಸಾವಿರಾರು ರೂ. ಬೆಲೆಯ ಯಂತ್ರಗಳ ನಡುವೆ ಗುಜರಿ ಸೈಕಲ್ ನಿಂದ ನಿರ್ಮಿಸಿದ ಯಂತ್ರ ಸುಲಭದಲ್ಲಿ ರಚಿಸಬಹುದು. ಕಡಿಮೆ ಶ್ರಮ ಹಾಗೂ ಅಧಿಕ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎನ್ನುವುದು ಇವರ ಅಭಿಪ್ರಾಯವಾಗಿದೆ. ಒಟ್ಟಾರೆಯಾಗಿ ನೆಲಗಡಲೆ ಗುಡಿಸಲು ಸೈಕಲ್ ಪ್ರಯೋಗದ ಚಿಂತನೆ ಸರಕಾರದ ಗುಜರಿ ಸೈಕಲ್ ಗಳಿಗೂ ಬೇಡಿಕೆ ಬಂದಂತಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)