ಬೈಂದೂರು ವಿಶೇಷ ತಹಶೀಲ್ದಾರ ರಾಜು ಮೊಗವೀರ – ವಿಶೇಷ ಸಂದರ್ಶನ.

0
2034

raju

ಬೈಂದೂರು : ಕುಂದಾಪುರ ತಾಲೂಕಿನ ಅತ್ಯಂತ ವಿಸ್ತಾರ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಬೈಂದೂರು ಪ್ರಮುಖವಾಗಿದೆ. ಒಂದೆಡೆ ಕರಾವಳಿಯ ಕಡಲು ಇನ್ನೊಂದೆಡೆ ಸಹ್ಯಾದ್ರಿಯ ಮಡಿಲು, ವಿಶಾಲ ಕೃಷಿ ಭೂಮಿ, ಬಲಪಾಶ್ವದಲ್ಲಿ ಹಾಯ್ದು ಹೋದ ಕೊಂಕಣ ರೈಲ್ವೆ ಮಾರ್ಗ, ಸಮಾನಂತರವಾಗಿ ಸಾಗಿದ ರಾಷ್ಟ್ರೀಯ ಹೆದ್ದಾರಿ, ನದಿ, ಕೆರೆ, ಗಿರಿ ಪರ್ವತದ ಸೊಬಗು, ಪ್ರಾಕೃತಿಕ ವೈಭವ, ಕಣ್ಮನ ಸೆಳೆಯುವ ನೈಸರ್ಗಿಕ ಪರಿಸರ, ಔದ್ಯಮ, ಕೃಷಿ, ಮೀನುಗಾರಿಕೆಯನ್ನು ಪ್ರಮುಖ ಉದ್ಯೋಗವಾಗಿರಿಸಿಕೊಂಡ ಬೈಂದೂರು ಉಡುಪಿ ಜಿಲ್ಲೆಯಲ್ಲಿಯೇ ವಿಶಿಷ್ಟತೆಯಿಂದ ಗುರುತಿಸಿಕೊಂಡಿದೆ.

ತಾಲೂಕು ಕೇಂದ್ರವಾಗುತ್ತಿರುವ ಬೈಂದೂರಿನಲ್ಲಿ ಹತ್ತಾರು ಇಲಾಖೆಗಳ ಸಾಲಿನಲ್ಲಿ ಅತ್ಯಂತ ಪ್ರಾಮುಖ್ಯತೆ ಕಂಡುಕೊಂಡಿರುವುದು ಕಂದಾಯ ಇಲಾಖೆ. ಈ ಹಿಂದೆ ಹಲವು ವರ್ಷಗಳಿಂದ ಸೂಕ್ತ ಕಛೇರಿ ಕೊರತೆ, ಸಮರ್ಪಕ ಸೇವೆಯ ಹಿನ್ನಡೆಯಿಂದ ಬಳಲುತ್ತಿದ್ದ ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿ ಬದಲಾವಣೆ ಸೇರಿದಂತೆ ಸಮರ್ಪಕ ಸೇವೆಯ ಹೊಸಹುಮ್ಮಸ್ಸು ತುಂಬಿದ ಬದಲಾವಣೆಯ ಹರಿಕಾರರಂತೆ ಮೂಡಿ ಬಂದಿರುವುದು ಬೈಂದೂರು ವಿಶೇಷ ತಹಶೀಲ್ದಾರ ರಾಜು ಮೊಗವೀರ. ಇವರು ಬೈಂದೂರು ಡಾಟ್ ಕಾಮ್ ನ ಈ ವಾರದ ವಿಶೇಷ ಅತಿಥಿ.

ನಿಮ್ಮ ಬಾಲ್ಯ ಮತ್ತು ಪ್ರಾಥಮಿಕ  ಹಂತದ ದಿನಗಳು ಹೇಗಿದ್ದವು ?

ಕುಂದಾಪುರ ತಾಲೂಕಿನ ಕೋಣಿಗ್ರಾಮ ನನ್ನ ಹುಟ್ಟೂರು. ಕೃಷ್ಣ ಮೊಗೇರ ಮತ್ತು ಚಂದಮ್ಮ ದಂಪತಿಗಳ ಮಗನಾಗಿ ನವಂಬರ್ 7. 1965 ರಲ್ಲಿ ಜನಿಸಿದ್ದೆ. ಕೋಣಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಖಾಸಗಿಯಾಗಿ ಪ್ರೌಢಶಿಕ್ಷಣ 1990 ರಲ್ಲಿ ಕುಂದಾಪುರ ಭಂಡರ್ ಕಾರ್ರ್ ಕಾಲೇಜಿನಲ್ಲಿ ಪದವಿ ಮುಗಿಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1992 ರಲ್ಲಿ ಎಮ್. ಬಿ. ಎ. ಪೂರ್ಣಗೊಳಿಸಿದೆ.

ಶಿಕ್ಷಣದ ಬಳಿಕ ತಮ್ಮ ಉದ್ಯೋಗಕ್ಕೆ ಆಯ್ಕೆಗೊಂಡಿರುವುದು ಹೇಗೆ ?

ಎಮ್. ಬಿ. ಎ. ಮುಗಿಸಿದ ಬಳಿಕ ಡೆಕ್ಕನ್ ಹೆರಾಲ್ಡ್ ದಿನ ಪತ್ರಿಕೆಯ ಬೆಂಗಳೂರು ಪ್ರಧಾನ ಕಛೇರಿಯಲ್ಲಿ 3 ವರ್ಷ ಜಾಹಿರಾತು ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ್ದೆ.

ಸರಕಾರಿ ಸೇವೆಗೆ ನಿಯುಕ್ತಿಗೊಂಡಿರುವುದು ಹೇಗೆ ?

1997 ರಲ್ಲಿ ಕೆ. ಎ. ಎಸ್. ತೇರ್ಗಡೆಯಾಗಿ ಜಿಲ್ಲಾ ಎಂಪ್ಲಯ್ ಮೆಂಟ್ ಅಧಿಕಾರಿಯಾಗಿ ಕಾರವಾರ ಮತ್ತು ಉಡುಪಿಯಲ್ಲಿ ಸೇವೆಸಲ್ಲಿಸಿದ್ದು ನಿರಂತರ 8 ವರ್ಷ ಕೆ. ಎ. ಎಸ್. ವಿಚಾರದಲ್ಲಿ ನ್ಯಾಯದಲ್ಲಿರುವ ಕಾರಣ ನಿರ್ಣಯ ಅಂತಿಮಗೊಂಡಿರಲಿಲ್ಲ. 2006 ರಲ್ಲಿ ಕೆ. ಎ. ಎಸ್. ಮಾನದಂಡದಲ್ಲಿ ತಹಶೀಲ್ದಾರನಾಗಿ ಪ್ರಥಮವಾಗಿ ಮಂಗಳೂರಿನಲ್ಲಿ ನೇಮಕಗೊಂಡೆ. ಆ ಬಳಿಕ ಶಿವಮೊಗ್ಗದಲ್ಲಿ 5 ತಿಂಗಳು, ಕುಂದಾಪುರದಲ್ಲಿ 1 – 3 ವರ್ಷ, ಭಟ್ಕಳದಲ್ಲಿ 10 ತಿಂಗಳು ಸೇವೆ ಸಲ್ಲಿಸಿ ಪ್ರಸ್ತುತ 4 ತಿಂಗಳಿಂದ ಬೈಂದೂರು ವಿಶೇಷ ತಹಶೀಲ್ದಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ಬೈಂದೂರು ತಾಲೂಕು ರಚನೆ ಪ್ರಕ್ರಿಯೆ ಇಲಾಖಾ ವ್ಯಾಪ್ತಿಯಲ್ಲಿ ಹೇಗಿದೆ ?

ಈಗಾಗಲೇ ತಾಲೂಕು ರಚನೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳು ಸರಕಾರಕ್ಕೆ ಒದಗಿಸಿದ್ದು ಸರಕಾರದಿಂದ ಘೋಷಣೆಯಾಗುವುದು ಮಾತ್ರ ಬಾಕಿಯಿದೆ. ಪ್ರಮುಖವಾಗಿ ಕಂದಾಯ ಇಲಾಖೆಗೆ ಅಗತ್ಯವಿರುವ ಹಾಗೂ ಎಲ್ಲಾ ಕಛೇರಿಗಳು ಒಂದೇ ಕಡೆ ದೊರಕಿಸುವ ಮಿನಿ ವಿಧಾನ ಸೌಧ ರಚನೆ ಪ್ರಸ್ತಾಪ ಸರಕಾರದ ಮುಂದಿದ್ದು ಅಂತಿಮ ಆದೇಶ ಹಾಗೂ ಅನುದಾನ ದೊರಕಿಸುವ ಬಗ್ಗೆ ಜನಪ್ರತಿನಿಧಿಗಳ ಸಹಕಾರದಿಂದ ಪ್ರಯತ್ನ ನಡೆಯುತ್ತಿದೆ. ಪ್ರಸ್ತುತ ಪಶು ವೈದ್ಯಕೀಯ ಆಸ್ಪತ್ರೆ ಜಾಗವನ್ನು ಮಿನಿ ವಿಧಾನ ಸೌಧಕ್ಕೆ ಮೀಸಲಿರಿಸಿ ಪಶು ಆಸ್ಪತ್ರೆಗೆ ಬದಲಿ ಸ್ಥಳ ಮಂಜೂರು ಮಾಡಲಾಗಿದೆ. ಸಂಸದರ ವ್ಯಾಪ್ತಿಯಲ್ಲಿರುವ ಏಕೈಕ ವಿಶೇಷ ತಹಶೀಲ್ದಾರರ ಕ್ಷೇತ್ರವಾಗಿದ್ದ ಆಡಳಿತಾತ್ಮಕ ಮತ್ತು ತಾಲೂಕು ರಚನೆ ಹಿನ್ನಲೆಯಲ್ಲಿ ಮಿನಿ ವಿಧಾನ ಸೌಧ ಶೀಘ್ರ ಪ್ರಾರಂಭಗೊಳ್ಳಬೇಕಾಗಿದೆ.

ಕಂದಾಯ ಇಲಾಖೆ ಸಿಬ್ಬಂದಿ ಕೊರತೆ ಮತ್ತು ವಿಳಂಬ ಸೇವೆಯ ಬಗ್ಗೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸುವ ಬಗ್ಗೆ ತಮ್ಮ ಅಭಿಪ್ರಾಯವೇನು?

ಸಿಬ್ಬಂದಿ ಕೊರತೆ ಎಲ್ಲಾ ಇಲಾಖೆಯಲ್ಲೂ ಕಾಡುವ ಪ್ರಮುಖ ಸಮಸ್ಯೆಯಾಗಿದೆ. ನಿವೃತ್ತಿ ವರ್ಗಾವಣೆ ಸೇರಿದಂತೆ ಹಲವು ಕಾರಣದಿಂದ ಕೊರತೆ ಉಂಟಾಗುತ್ತದೆ. ಆದರೆ 2010 ರಲ್ಲಿ 6 ರಿಂದ 7 ಗ್ರಾಮ ಕರಣಿಕರು ಮತ್ತು 2012 ರ ಸಾಲಿನಲ್ಲಿ 6 – 7 ಗ್ರಾಮಕರಣಿಕರು ನೇಮಕಗೊಂಡಿದ್ದರೆ ಪ್ರಸ್ತುತ ಗಣಕೀಕೃತವಾದುದರಿಂದ ಯಾವುದೇ ಸೇವೆಯು ವಿಳಂಬವಾಗುವುದಿಲ್ಲ. ಸಾರ್ವಜನಿಕರು ಈ ಬಗ್ಗೆ ಸಮರ್ಪಕ ಮಾಹಿತಿಯೊಂದಿಗೆ ಸ್ಪಂದಿಸಬೇಕಾಗಿದೆ.

ಮರಳುಗಾರಿಕೆ ಮತ್ತು ಗಣಿಗಾರಿಕೆ ಬೈಂದೂರು ವ್ಯಾಪ್ತಿಯಲ್ಲಿ ಅತಿಯಾಗಿರುವ ಬಗ್ಗೆ ತಮ್ಮ ಅಭಿಪ್ರಾಯವೇನು ?

ಬಹುತೇಕ ಕರಾವಳಿ ಜಿಲ್ಲೆಗಳ ಪ್ರಮುಖ ಸಮಸ್ಯೆಯಾಗಿರುವ ಅಕ್ರಮ ಮರಳುಗಾರಿಕೆಯ ಬಗ್ಗೆ ಎನ್. ಐ. ಟಿ. ಕೆ. ಸುರತ್ಕಲ್ ನ ತಜ್ಝ ತಂಡ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಯಾವುದು ಮರಳುಗಾರಿಕೆಗೆ ಸೂಕ್ತ ಸ್ಥಳ ಎನ್ನುವ ಬಗ್ಗೆ ವರದಿ ನೀಡಿದೆ. ಆ ಬಗ್ಗೆ ಜಿಲ್ಲಾಡಳಿತ ಗುರುತಿಸಿದ ಜಾಗದಲ್ಲಿ ಮರಳುಗಾರಿಕೆಗೆ ಸೂಕ್ತ ಪರವಾನಗೆಯೊಂದಿಗೆ ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ಈ ಸಮಸ್ಯೆ ನಿವಾರಣೆಯಾಗಲಿದೆ. ಗಣಿಗಾರಿಕೆ ಬಗ್ಗೆ ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ.

ಸ್ಥಳೀಯ ರಾಜಕೀಯ ಅಭಿವೃದ್ಧಿ ಕಾರ್ಯದಲ್ಲಿ ಅಡಚಣೆಯಾಗುತ್ತಿದೆಯೇ ?

ಅಭಿವೃದ್ಧಿಗೆ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಸಾಂಘಿಕ ಪ್ರಯತ್ನ ಮುಖ್ಯ. ರಾಜಕೀಯದ ಜೊತೆಗೆ ಅಂತರ ಕಾಯ್ದುಕೊಂಡು ಕಾನೂನು ಹಿನ್ನೆಲೆಯಲ್ಲಿ ಉತ್ತಮ ಸಂಬಂಧ ವಿರಿಸಿಕೊಂಡಿದ್ದೇನೆ.

ಬೈಂದೂರು ಅಭಿವೃದ್ಧಿಯ ಬಗ್ಗೆ ತಮ್ಮ ಕನಸುಗಳೇನು ?

ಬೈಂದೂರು ಅತ್ಯಂತ ವಿಶಾಲ ವ್ಯಾಪ್ತಿ ಹೊಂದಿದೆ. ಹಳ್ಳಿ ಹೊಳೆಯವರು ಸಹ ಬೈಂದೂರಿಗೆ ಆಗಮಿಸಬೇಕಾಗಿದೆ. ಇದರಿಂದಾಗಿ ಸಣ್ಣ ಕೆಲಸಕ್ಕೆ ದಿನವಿಡಿ ವ್ಯಯಿಸಬೇಕಾಗುತ್ತದೆ. ಈಗಾಗಲೇ ವಂಡ್ಸೆಯಲ್ಲಿ ನಾಡಕಛೇರಿಯಿದ್ದು ಉಪತಹಶೀಲ್ದಾರರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಕೊಲ್ಲೂರನ್ನು ಕೇಂದ್ರವಾಗಿರಿಸಿಕೊಂಡು ಹೋಬಳಿ ರಚನೆ ಮಾಡಿದಲ್ಲಿ ಆ ಭಾಗದ ಗ್ರಾಮೀಣ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈ ಬಗ್ಗೆ ವರದಿ ಮತ್ತು ಮಾಹಿತಿಯನ್ನು ಇನ್ನಷ್ಟು ಸಂಗ್ರಹಿಸಬೇಕು. ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ನೀಡಬೇಕಾಗುತ್ತದೆ. ಇದರಿಂದಾಗಿ ಸಮರ್ಪಕ ಸೇವೆ ನೀಡಲು ಸಾಕಷ್ಟು ಅನುಕೂಲವಾಗುತ್ತದೆ. ಈಗಾಗಲೇ ನೆಮ್ಮದಿಕೇಂದ್ರ ಖಾಸಗಿಯವರಿಂದ ಮುಕ್ತಿಹೊಂದಿ ಸಂಪೂರ್ಣ ಜಿಲ್ಲಾಡಳಿತದ ಸುಪರ್ದಿಗೆ ದೊರೆತಿದೆ.

raju 2

ಗ್ರಾಮೀಣ ಭಾಗದಲ್ಲಿ ಜನಿಸಿ ತಾಲೂಕಿನ ವಾಸ್ತವಕತೆಯೆ ಬಗ್ಗೆ ಅನುಭವವಿರುವ ಮತ್ತು ಪ್ರತಿಭಾವಂತ ಅಧಿಕಾರಿಯಾದ ರಾಜು ಮೊಗವೀರರ ಅವಧಿಯಲ್ಲಿ ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿ ಇನ್ನಷ್ಟು ಅಭಿವೃದ್ಧಿಯಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.