ಶೀರೂರಿಗರ ನೆಚ್ಚಿನ ಮಾಸ್ಟರ್ ಮೀರಾನ್ ಸಾಹೇಬ್: ಜನತೆ ಸದಾ ಸ್ಮರಿಸುವ ಆದರ್ಶ ಸಮಾಜ ಸೇವಕ

0
2116

ಮಾದರಿ ಶಿಕ್ಷಕರಾಗಿ, ಯಶಸ್ವಿ ಉದ್ಯಮಿಯಾಗಿ, ತಮ್ಮ ಸುತ್ತಮುತ್ತಲ ಜನರ ಕಷ್ಟಸುಖಗಳಿಗೆ ಸದಾ ಸ್ಪಂದಿಸುವ ಸಮಾಜ ಸೇವಕನಾಗಿ, ಪ್ರಾಮಾಣಿಕ ಕಾಳಜಿಯ ಜನ ಪ್ರತಿನಿಧಿಯಾಗಿ ಸೈಯದ್ ಮೀರಾನ್ ಸಾಹೇಬರು ಊರವರ ಮನದಲ್ಲಿ ಮೂಡಿಸಿದ ಛಾಪು ಅಚ್ಚಳಿಯದೆ ಉಳಿದಿದೆ

32770

ರ್ಮ, ಜಾತಿ, ವರ್ಗಗಳ ಭೇದವಿಲ್ಲದೆ ಶೀರೂರಿನ ಸರ್ವ ನಾಗರಿಕರೂ ಮಾಸ್ಟರ್ ಮೀರಾನ್ ಸಾಹೇಬ್ ಅಥವಾ ಉಸ್ತಾದ್ ಸಾಬ್ ಎಂದು ಅತ್ಯಂತ ಗೌರವದಿಂದ ಸ್ಮರಿಸುವ ವ್ಯಕ್ತಿ ಶೀರೂರಿನ ದಿವಂಗತ ಸೈಯದ್ ಮೀರಾನ್ ಸಾಹೇಬರು. ಮಾದರಿ ಶಿಕ್ಷಕರಾಗಿ, ಯಶಸ್ವಿ ಉದ್ಯಮಿಯಾಗಿ, ತಮ್ಮ ಸುತ್ತ ಮುತ್ತಲ ಜನರ ಕಷ್ಟಸುಖಗಳಿಗೆ ಸದಾ ಸ್ಪಂದಿಸುವ ಸಮಾಜ ಸೇವಕನಾಗಿ, ಪ್ರಾಮಾಣಿಕ ಕಾಳಜಿಯ ಜನ ಪ್ರತಿನಿಧಿಯಾಗಿ ಅವರು ಊರವರ ಮನದಲ್ಲಿ ಮೂಡಿಸಿದ ಛಾಪು ಅಚ್ಚಳಿಯದೆ ಉಳಿದಿದೆ. ಸೈಯದ್ ಮೀರಾನ್ ಸಾಹೇಬರ ಸೌಜನ್ಯ, ಅಕ್ಷರ ಪ್ರೇಮ, ನಿಸ್ವಾರ್ಥ ಮನೋವೃತ್ತಿ ಹಾಗೂ ಅವರು ಮಾಡಿದ ಸಮಾಜಮುಖಿ ಕೆಲಸಗಳನ್ನು ಊರಿನ ಜನರು ಮರೆತಿಲ್ಲ. ಮೀರಾನ್ ಸಾಹೇಬರು ಒಂದು ವಿಶಾಲ ಕುಟುಂಬದ ಯಜಮಾನ ಹಾಗೂ ಒಬ್ಬ ಆದರ್ಶ ತಂದೆಯಾಗಿದ್ದರು.

32770_1

ಶಿರೂರಿನಲ್ಲಿರುವ ದೀನಾ ವಿಶೇಷ ಮಕ್ಕಳ ಶಾಲೆ

ಅವರು ಹಡವಿನಕೋಣೆ ಹಾಗೂ ಕೆಸರ್ ಕೋಡಿಯ ಶಾಲೆಗಳಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಶಿಕ್ಷಕ ವೃತ್ತಿಯನ್ನು ಕೇವಲ ಒಂದು ಉದ್ಯೋಗದಂತೆ ನೋಡದೆ ಅದನ್ನು ಸಮಾಜ ಕಟ್ಟುವ ಕೆಲಸವೆಂದೇ ಪರಿಗಣಿಸಿ ಅತ್ಯಂತ ಶ್ರದ್ಧೆಯಿಂದ ಶಿಕ್ಷಣ ಧಾರೆಯೆರೆದರು. ಸಂಬಳ ಸೀಮಿತವಾಗಿದ್ದರೂ ಮೀರಾನ್ ಸಾಹೇಬರ ಮನಸ್ಸು ವಿಶಾಲವಾಗಿತ್ತು. ಆದ್ದರಿಂದಲೇ ಅವರಿಂದ ವಿದ್ಯೆ ಕಲಿತವರೆಲ್ಲಾ ಅವರನ್ನು ತುಂಬಾ ಗೌರವ ಹಾಗೂ ಪ್ರೀತಿಯಿಂದ ನೆನೆಯುತ್ತಾರೆ. ಬದುಕಿನ ಒಂದು ಹಂತದಲ್ಲಿ ನಿಧಾನ ವಾಗಿ ಉದ್ಯಮ ರಂಗದತ್ತ ದೃಷ್ಟಿ ಹರಿಸಿದ ಮೀರಾನ್ ಸಾಹೇಬರು ಪಾಲುದಾರಿಕೆ ಆಧಾರದಲ್ಲಿ ಮೀನುಗಾರಿಕಾ ಬೋಟ್‌ಗಳಲ್ಲಿ (ವೆಸೆಲ್ಸ್) ವ್ಯಾಪಾರ ಪ್ರಾರಂಭಿಸಿದರು. ತಮ್ಮ ಪ್ರಾಮಾಣಿಕತೆ ಹಾಗೂ ಕಠಿಣ ಪರಿ ಶ್ರಮಗಳ ಫಲವಾಗಿ ಅವರು ಅಲ್ಪಾವಧಿಯಲ್ಲೇ ನಾಲ್ಕು ಮೀನುಗಾರಿಕಾ ಬೋಟ್‌ಗಳ ಮಾಲಕರಾದರು. ಕರಾವಳಿಯ ಉದ್ದಗಲಗಳಲ್ಲಿ ಈ ಬೋಟುಗಳ ಮೂಲಕ ತಮ್ಮ ಮತ್ಸೋದ್ಯಮ ಬೆಳೆಸಿದ ಅವರು ಮುಂದೆ ಸ್ವತಃ ಬೋಟು ನಿರ್ಮಿಸುವ ಸಾಹಸಕ್ಕೂ ಕೈ ಹಾಕಿ ಯಶಸ್ಸು ಗಳಿಸಿದರು. 1957ರಲ್ಲಿ ಮುಹಮ್ಮದಿಯ್ಯ ಎಂಬ ಹೆಸರಿನ ಸ್ಟೀಮರ್ (ಚಿಕ್ಕ ಹಡಗು) ಮೂಲಕ ತಮ್ಮ ಮೊದಲ ಹಜ್ ಯಾತ್ರೆಗೆ ತೆರಳಿದ ಮೀರಾನ್ ಸಾಹೇಬರು ತಾವು ನಿರ್ಮಿಸಿದ ಮೊದಲ ಬೋಟ್‌ಗೆ ಅದೇ ಹೆಸರನ್ನಿಟ್ಟರು. ಅವರ ಅನುಪಸ್ಥಿತಿಯಲ್ಲಿ ಬೋಟ್‌ನ ನಿರ್ಮಾಣದ ಉಸ್ತುವಾರಿಯನ್ನು ಅವರ ದ್ವಿತೀಯ ಪುತ್ರ ಎಸ್.ಎಂ. ಸಯೀದ್ ವಹಿಸಿಕೊಂಡಿದ್ದರು. ಮತ್ತೆ ಶೀರೂರು ಸುತ್ತಮುತ್ತಲ ಪರಿಸರದಲ್ಲೇ ಅತಿ ದೊಡ್ಡ ಬೋಟ್ ಒಂದನ್ನು ನಿರ್ಮಿಸಿದ ಮೀರಾನ್ ಸಾಹೇಬರು ಅದಕ್ಕೆ ಹಿಲಾಲ್ ಎಂದು ನಾಮಕರಣ ಮಾಡಿದರು. 1970ರಲ್ಲಿ ತಮ್ಮ ಪತ್ನಿ ಬೀಬಿ ಮಾಬಿ ಅವರೊಂದಿಗೆ ಮೀರಾನ್ ಸಾಹೇಬರು ಮತ್ತೊಮ್ಮೆ ಹಜ್ ಯಾತ್ರೆ ಕೈಗೊಂಡರು.

ಸಂಪರ್ಕ ವ್ಯವಸ್ಥೆ ದುಸ್ತರವಾಗಿದ್ದ ಅಂದಿನ ದಿನಗಳಲ್ಲಿ ಶೀರೂರಿನಲ್ಲಿ ಪ್ರಪ್ರಥಮ ಖಾಸಗಿ ದೂರವಾಣಿ ಸಂಪರ್ಕ ಪಡೆದವರು ಮೀರಾನ್ ಸಾಹೇಬರು. ತುರ್ತು ಸಂಪರ್ಕ ಹಾಗೂ ಮಾಹಿತಿಗಾಗಿ ತೀರಾ ಅನಿಶ್ಚಿತ ಟೆಲಿಗ್ರಾಂಗಳನ್ನೇ ನೆಚ್ಚಿ ಕೊಂಡಿರುತ್ತಿದ್ದ ಆಸುಪಾಸಿನ ಜನರಿಗೆ ಮೀರಾನ್ ಸಾಹೇಬರ ಮನೆಯ ದೂರವಾಣಿ ಹೊರ ಜಗತ್ತಿನ ಜೊತೆಗಿನ ಸಂಪರ್ಕಕೊಂಡಿ ಯಾಗಿತ್ತು. ಲಾರಿಗಳು ತೀರಾ ಸೀಮಿತ ಸಂಖ್ಯೆಯಲ್ಲಿದ್ದ ಆ ಕಾಲದಲ್ಲಿ ಶೀರೂರಿಗೆ ಮೊದಲ ಲಾರಿ ಬಂದಿದ್ದು ಕೂಡ ಮೀರಾನ್ ಸಾಹೇಬರ ಮನೆಗೇ.

ಎಲ್ಲರೊಂದಿಗೆ ಬೆರೆಯುತ್ತಿದ್ದ ಮೀರಾನ್ ಸಾಹೇಬರು ಸಹಜ ವಾಗಿಯೇ ಊರಿನ ಎಲ್ಲಾ ವರ್ಗಗಳ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದ್ದರಿಂದಲೇ ಪಂಚಾ ಯತ್ ಅಧ್ಯಕ್ಷರನ್ನು ನೇರವಾಗಿ ಆಯ್ಕೆ ಮಾಡುತ್ತಿದ್ದ ಅಂದಿನ ವ್ಯವಸ್ಥೆಯಲ್ಲಿ ಮೀರಾನ್ ಸಾಹೇಬರು ಅತೀ ಹೆಚ್ಚು ಮತ ಗಳಿಂದ ಜಯಗಳಿಸಿ ಶೀರೂರು ಗ್ರಾಮ ಪಂಚಾಯತ್‌ನ ಪ್ರಪ್ರಥಮ ಮುಸ್ಲಿಮ್ ಅಧ್ಯಕ್ಷರಾದರು. ಅವರ ಅಧ್ಯಕ್ಷತೆಯ ಅವಧಿಯಲ್ಲಿ ಗ್ರಾಮದ ಜನರ ನಡುವಿನ ಚಿಕ್ಕಪುಟ್ಟ ವೈಮನಸ್ಸು, ವಿವಾದಗಳನ್ನು ಪಂಚಾಯತ್‌ನಲ್ಲೇ ಇತ್ಯರ್ಥ ಪಡಿಸಿ ಜನರು ನ್ಯಾಯಾಲಯಕ್ಕೆ ಅಲೆಯುವುದನ್ನು, ಅವರು ತಪ್ಪಿಸುತ್ತಿದ್ದರು ಎಂದು ಶೀರೂರಿನ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

32770_2

ತೌಹೀದ್ ಪಬ್ಲಿಕ್ ಸ್ಕೂಲ್, ಶೀರೂರು

ಶೀರೂರಿನಲ್ಲಿ ಪ್ರೌಢಶಾಲೆಯೂ ಇಲ್ಲದಿದ್ದ 1940/50ರ ದಶಕದಲ್ಲಿ ತನ್ನ ಮನೆಯಲ್ಲೇ ಮೀರಾನ್ ಸಾಹೇಬರು ಒಂದು ಶಿಕ್ಷಣ ಕ್ರಾಂತಿ ಮಾಡಿದ್ದರು. ಅವರಿಗೆ 6 ಗಂಡು ಹಾಗೂ 5 ಹೆಣ್ಣು ಮಕ್ಕಳು. ಹೈಸ್ಕೂಲ್ ಕಲಿಯಬೇಕಿದ್ದರೆ 6-7 ಕಿ.ಮೀ. ದೂರದ ಬೈಂದೂರಿಗೆ ನಡೆದು ಕೊಂಡು ಹೋಗಬೇಕಿದ್ದ ಅಂದಿನ ಕಾಲದಲ್ಲಿ ಮೀರಾನ್ ಸಾಹೇಬರ ಬೆಂಬಲ ಹಾಗೂ ಪ್ರೋತ್ಸಾಹ ದಿಂದ ಅವರ ಮಕ್ಕಳು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಉನ್ನತ ಶಿಕ್ಷಣ ಪಡೆದು ಅನನ್ಯ ಸಾಧನೆ ಮಾಡಿದರು. ಅವರ ಹಿರಿಯ ಪುತ್ರ ಸೈಯದ್ ಅಬೂಬಕರ್ ಬಿ. ಎ. ಬಳಿಕ ಮದ್ರಾಸ್ ವಿ. ವಿ.ಯಲ್ಲಿ ಇಡೀ ವಿ. ವಿ.ಗೆ ಪ್ರಥಮ ಸ್ಥಾನಿಯಾಗಿ ಬಿ.ಎಲ್. ಪದವಿ ಪಡೆದರು. ಜೊತೆಗೆ ಮೂರು ವಿಷಯಗಳಲ್ಲಿ ಚಿನ್ನದ ಪದಕವನ್ನೂ ಗಳಿಸಿದರು. ಇನ್ನೋರ್ವ ಪುತ್ರ ಎಸ್. ಎಂ. ಜಾಫರ್ ಅತ್ಯುತ್ತಮ ಅಂಕಗಳೊಂದಿಗೆ ಪಿಯುಸಿ ಮುಗಿಸಿ ಮುಂದೆ ಎಂಜಿನಿಯರಿಂಗ್ ಓದಿ ಸುಮಾರು 15 ವರ್ಷಗಳ ಕಾಲ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು. ಮತ್ತೋರ್ವ ಪುತ್ರ ಸೈಯದ್ ಹಸನ್ ಬಿಎಸ್ಸಿ ಕಲಿತು ವೈದ್ಯ ಪದವಿ ಪಡೆದು ದುಬೈಯಲ್ಲಿ ನೆಲೆಸಿದ್ದಾರೆ. ಸೈಯದ್ ಅಬ್ದುಲ್ ಖಾದರ್ ಬಾಶು ಹಾಗೂ ಎಲ್ಲರಿಗಿಂತ ಕಿರಿಯ ಸೈಯದ್ ಇಬ್ರಾಹೀಂ ಅವರು ಪದವೀಧರರಾಗಿ ಗಲ್ಫ್‌ಗೆ ತೆರಳಿ ಅಲ್ಲಿ ಉದ್ಯಮಿಗಳಾಗಿದ್ದಾರೆ. ತಂದೆಗೆ ಉದ್ಯಮದಲ್ಲಿ ಸಹಕರಿಸುತ್ತಿದ್ದ ದ್ವಿತೀಯ ಪುತ್ರ ಎಸ್.ಎಂ.ಸಯೀದ್ ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿ ಕೊಂಡಿದ್ದಾರೆ. ಅವರು ಎರಡು ಬಾರಿ ಶೀರೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿ, ಮತ್ತೊಮ್ಮೆ ಉಪಾಧ್ಯಕ್ಷರಾಗಿ, ಕುಂದಾಪುರ ತಾಲೂಕು ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರಾಗಿ, ಕುಂದಾಪುರ ತಾಲೂಕು ಪಂಚಾಯತ್‌ನಲ್ಲಿ ಶೀರೂರು ಕ್ಷೇತ್ರದ ಸದಸ್ಯರಾಗಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದ್ದಾರೆ.

‘‘ಯಾವತ್ತೂ ಲಂಚಕ್ಕೆ ಕೈ ಒಡ್ಡಬಾರದು ಹಾಗೂ ಸ್ವಾವಲಂಬಿಯಾಗಿ ಬದುಕಬೇಕು’’ ಎಂದು ನಮ್ಮ ತಂದೆ ನಮಗೆ ಕಲಿಸಿಕೊಟ್ಟಿದ್ದರು. ನಾವು ಅದೇ ಹಾದಿಯಲ್ಲಿ ಜೀವನ ನಡೆಸಿದ್ದೇವೆ ಎಂದು ತಮ್ಮ ತಂದೆಯನ್ನು ಸ್ಮರಿಸುತ್ತಾರೆ ಅವರ ಪುತ್ರ ಸೈಯದ್ ಜಾಫರ್.

ಊರ ಜನರಿಗೆ ಉಪಕಾರವಾಗುವ ಯಾವುದೇ ಕೆಲಸವಿದ್ದರೂ ನಿಸ್ವಾರ್ಥವಾಗಿ, ಅದರಲ್ಲಿ ಆಸಕ್ತಿ ವಹಿಸಿ ಸಕ್ರಿಯವಾಗಿ ಭಾಗವಹಿಸುವುದು ಮೀರಾನ್ ಸಾಹೇಬರ ಸ್ವಭಾವವಾಗಿತ್ತು. ಒಟ್ಟಿನಲ್ಲಿ ತಮ್ಮ ಊರು ಅಭಿವೃದ್ಧಿ ಯಾಗಬೇಕು, ಊರಿನ ಜನರು -ಮಕ್ಕಳು ಮುಂದೆ ಬರಬೇಕು, ಎಲ್ಲ ಸಮುದಾಯಗಳು ಸೌಹಾರ್ದದೊಂದಿಗೆ ಸಹಬಾಳ್ವೆ ನಡೆಸಬೇಕು ಎಂಬುದು ಅವರ ಆಶಯ ವಾಗಿತ್ತು. ಅದಕ್ಕಾಗಿ ಅವರು ತಮ್ಮ ಆರೋಗ್ಯವನ್ನೂ ನಿರ್ಲಕ್ಷಿಸಿ ತಮ್ಮಿಂದ ಸಾಧ್ಯ ವಿರುವ ಸರ್ವ ಪ್ರಯತ್ನವನ್ನು ತನ್ನ ಕೊನೆಯುಸಿರಿನವರೆಗೂ ಮಾಡುತ್ತಿದ್ದರು. ನಮ್ಮ ತಂದೆ ಬಾಳಿ ಬದುಕಿದ ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಮಕ್ಕಳಿಂದಾಗಿ ಮೀರಾನ್ ಸಾಹೇಬರ ನಂತರವೂ ಅವರ ಶೈಕ್ಷಣಿಕ, ಸಾಮಾಜಿಕ ಸೇವಾ ಕೈಂಕರ್ಯ ಶೀರೂರು ಪರಿಸರದಲ್ಲಿ ಅಬಾಧಿತ ವಾಗಿ ಮುಂದುವರಿಯುತ್ತಿದೆ. -ಕೆ. ಎಸ್.

32770_3

ಸೈಯದ್ ಮೀರಾನ್ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್

ತಮ್ಮ ತಂದೆ ಬಾಳಿ ಬದುಕಿದ ಉನ್ನತ ಆದರ್ಶ ಗಳನ್ನು ಮೈಗೂಡಿಸಿ ಕೊಂಡಿರುವ ಮಕ್ಕಳಿಂದಾಗಿ ಮೀರಾನ್ ಸಾಹೇಬರ ನಂತರವೂ ಅವರ ಶೈಕ್ಷಣಿಕ, ಸಾಮಾಜಿಕ ಸೇವಾ ಕೈಂಕರ್ಯ ಶೀರೂರು ಪರಿಸರದಲ್ಲಿ ಅಬಾಧಿತವಾಗಿ ಮುಂದುವರಿಯುತ್ತಿದೆ. ಈ ನಿಟ್ಟಿನಲ್ಲಿ ಮುಂದುವರಿದ ಹೆಜ್ಜೆಯಾಗಿ ಅವರ ಪುತ್ರ ಸೈಯದ್ ಅಬ್ದುಲ್ ಖಾದರ್ ಬಾಶು ಅವರ ನೇತೃತ್ವದಲ್ಲಿ ಸೈಯದ್ ಮೀರಾನ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟನ್ನು ಸ್ಥಾಪಿಸಲಾಗಿದೆ.

ಶೀರೂರು ಪರಿಸರದ ಅರ್ಹ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನೀಡುತ್ತಿರುವ ತೌಹೀದ್ ಪಬ್ಲಿಕ್ ಸ್ಕೂಲ್ ಹಾಗೂ ವಿಶೇಷ ಮಕ್ಕಳಿಗಾಗಿಯೇ ಮೀಸಲಾದ ದೀನಾ ಶಾಲೆಗಳನ್ನು ಈ ಟ್ರಸ್ಟ್‌ನ ಅಧೀನದಲ್ಲಿ ಮುಂದುವರಿಸಲಾಗುತ್ತದೆ. ಇದರ ಉಸ್ತುವಾರಿಯನ್ನು ಗಂಗೊಳ್ಳಿಯ ತೌಹೀದ್ ಎಜುಕೇಶನ್ ಟ್ರಸ್ಟ್‌ಗೆ ವಹಿಸಲಾಗಿದೆ. ದೀನಾ ಶಾಲೆಯನ್ನು ವಿಶೇಷ ಮಕ್ಕಳಿಗೆ ಸಮಗ್ರ ತರಬೇತಿ ಹಾಗೂ ಆರೈಕೆ ನೀಡುವ ಸರ್ವಸಜ್ಜಿತ ಕೇಂದ್ರವಾಗಿ ರೂಪಿಸಲು ಈಗಾಗಲೇ ನೀಲನಕ್ಷೆ ಸಿದ್ಧವಾಗಿದೆ. ಇತ್ತೀಚಿಗೆ ದೀನಾ ಶಾಲೆಯ ವತಿಯಿಂದ ಶೀರೂರು ಪರಿಸರದ ಜನರಿಗಾಗಿ ನೂತನ ಸುಸಜ್ಜಿತ ಆ್ಯಂಬುಲೆನ್ಸ್‌ವೊಂದನ್ನು ಶೀರೂರು ಅಸೋಸಿಯೇಶನ್‌ಗೆ ನೀಡಲಾಗಿದೆ. ಜೊತೆಗೆ ಇನ್ನೂ ಹಲವು ಜನೋಪಯೋಗಿ ಯೋಜನೆಗಳನ್ನು ಒಂದೊಂದಾಗಿ ಅನುಷ್ಠಾನಕ್ಕೆ ತರುವ ಗುರಿಯಿದೆ ಎಂದು ಅಬ್ದುಲ್ ಖಾದರ್ ಬಾಶು ಅವರು ತಿಳಿಸಿದ್ದಾರೆ.

-ಕೆ.ಎಸ್‌.

-ಕೃಪೆ: ವಾರ್ತಾಭಾರತಿ