ರಾಜ್ಯಕ್ಕೆ ಮಾದರಿ ಬೈಂದೂರು ರೈಲ್ವೇ ನಿಲ್ದಾಣ

0
1006

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗಾಮೀಣ ಭಾಗದಲ್ಲಿ 2ಕೋ. ರೂ. ಆದಾಯ

25-05-2013-9

ಬೈಂದೂರು : ಬೈಂದೂರಿನ ಮೂಕಾಂಬಿಕಾ ರೈಲ್ವೇ ನಿಲ್ದಾಣ 2012 -13ರ ಆರ್ಥಿಕ ವರ್ಷದಲ್ಲಿ 2ಕೋ. ರೂ. ಆದಾಯ ಗಳಿಸುವ ಮೂಲಕ ರಾಜ್ಯಕ್ಕೆ ಮಾದರಿ ಸಾಧನೆಗೈದಿದೆ. ರೈಲ್ವೇ ಇಲಾಖೆಯ ಇತಿಹಾಸದಲ್ಲಿ ಗ್ರಾಮೀಣ ಭಾಗದಲ್ಲಿ ಪೂರ್ಣ ಸವಲತ್ತು ಹೊಂದಿರದೆ ಗರಿಷ್ಠ ಆದಾಯ ಗಳಿಸಿದ ಏಕೈಕ ರೈಲ್ವೇ ನಿಲ್ದಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

1991ರಲ್ಲಿ ಕೊಂಕಣ ರೈಲ್ವೇ ಕಾಮಗಾರಿ ಪ್ರಾರಂಭಗೊಂಡು 1998ರಲ್ಲಿ ಅಧಿಕೃತ ಚಾಲನೆ ಕೈಗೊಂಡಿತು. ರೈಲ್ವೇ ಇಲಾಖೆಗೆ ಅತ್ಯಂತ ಸವಾಲಾಗಿ ಪರಿಣಮಿಸಿದ ಒತ್ತಿನೆಣೆ ಸುರಂಗದ ಹಿನ್ನೆಲೆ, ಬೈಂದೂರಿನ ಬಗೆಗಿನ ನಿರಾಸಕ್ತಿಯಿಂದಾಗಿ ಸಾಮಾನ್ಯ ನಿಲ್ದಾಣ ನಿರ್ಮಿಸಿ ಲೋಕಲ್ ರೈಲಿಗೆ ಮಾತ್ರ ನಿಲುಗಡೆ ನೀಡಿದ್ದರು. ಆ ಬಳಿಕ ನಿರಂತರ ಹೋರಾಟ, ರೈಲ್ವೆ ಯಾತ್ರಿ ಸಂಘದ ಕೇಂದ್ರ ಮಟ್ಟದ ಪ್ರಯತ್ನದ ಮೂಲಕ ಅಭಿವೃದ್ಧಿ ಸಾಧಿಸಿದೆ. ಮಡಗಾಂವ್ ಹೊರತುಪಡಿಸಿದರೆ ಅತ್ಯಂತ ದೊಡ್ಡ ರೈಲ್ವೆ ನಿಲ್ದಾಣ ಬೈಂದೂರಿನಲ್ಲಾಗುತ್ತಿರುವುದು ಸ್ಥಳೀಯರ ಹೋರಾಟದ ಫಲವಾಗಿದೆ.

25-05-2013-10

ಪ್ರಸ್ತುತ 12 ಜೋಡಿ ಎಕ್ಸ್ ಪ್ರೆಸ್ ರೈಲುಗಳು ಬೈಂದೂರು ಮೂಕಾಂಬಿಕಾ ನಿಲ್ದಾಣದಲ್ಲಿ ನಿಲುಗಡೆಗೊಳ್ಳುತ್ತಿದೆ. ಪ್ರತಿ ದಿನ ಸರಾಸರಿ ಒಂದು ಸಾವಿರಕ್ಕೂ ಅಧಿಕ ಪ್ರಯಾಣಿಕರು ಇಲ್ಲಿಂದ ಪ್ರಯಾಣ ಬೆಳೆಸುತ್ತಾರೆ. ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಕೊಲ್ಲೂರಿಗೆ ಕೇರಳ ಹಾಗೂ ಅನ್ಯ ರಾಜ್ಯಗಳಿಂದ ಸಾವಿರಾರು ಯಾತ್ರಾರ್ಥಿಗಳು ಆಗಮಿಸುತ್ತಿದ್ದಾರೆ. ಇಲ್ಲಿನ ರೈಲ್ವೆ ನಿಲ್ದಾಣದ ವಾರ್ಷಿಕ ಆದಾಯದ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ರೈಲ್ವೆ ಇಲಾಖೆ ಅಧಿಕೃತವಾಗಿ ವಿವರ ನೀಡಿದೆ. 2012 ಎಪ್ರಿಲ್ ನಿಂದ 2013ರ ಮಾರ್ಚ್ ವರೆಗೆ ರಿಸರ್ವ್ ರಹಿತವಾಗಿ 83,96,000 ರೂ. ಹಾಗೂ ರಿಸರ್ವ್ ಟಿಕೇಟ್ ನಿಂದ 1,08,61,987ರೂ ಆದಾಯ ಗಳಿಸಿರುವುದನ್ನು ಸ್ಪಷ್ಟಪಡಿಸಿದೆ. ಯಾವುದೇ ಪೂರ್ಣ ಪ್ರಮಾಣದ ಸವಲತ್ತುಗಳಿಲ್ಲದೇ ಈ ಮಟ್ಟಿನ ಆದಾಯ ಗಳಿಸಿರುವುದು ರೈಲ್ವೆ ಇಲಾಖೆಯ ಇತಿಹಾಸದಲ್ಲಿ ದಾಖಲೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

25-05-2013-11
ಯಾತ್ರಿ ನಿವಾಸ, ರೈಲ್ವೇ ಹೊಟೇಲ್

ದೇಶದ ರೈಲ್ವೇ ಇತಿಹಾಸದಲ್ಲಿ ಈ ಕೆಟಗರಿ ರೈಲ್ವೆ ನಿಲ್ದಾಣದಲ್ಲಿ ಪ್ರಪ್ರಥಮ ಬಾರಿಗೆ ರಿಸರ್ವೇಶನ್ ಸೌಲಭ್ಯ, ಯಾತ್ರಿ ನಿವಾಸ ಹಾಗೂ ರೈಲ್ವೇ ಹೊಟೇಲ್ ಪ್ರಾರಂಭವಾಗಿರುವುದು ಬೈಂದೂರು ಮೂಕಾಂಬಿಕಾ ರೈಲ್ವೆ ನಿಲ್ದಾಣದಲ್ಲಿ ಮಾತ್ರ. ರೈಲ್ವೆ ಮೇಲ್ಸೆತುವೆ ಕಾಮಗಾರಿ ಪ್ರಾರಂಭವಾಗಿದ್ದು ಕಾಮಗಾರಿ ಭರದಿಂದ ಸಾಗುತ್ತಿದೆ.

25-05-2013-12

“ಬೈಂದೂರಿಗೆ ಬನ್ನಿ” ಮರುಚಾಲನೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಗೊಂಡಿರುವ ಪ್ರಾಕೃತಿಕ ಸೌಂದರ್ಯದ ಹತ್ತಾರು ಪ್ರದೇಶಗಳು ಬೈಂದೂರಿನ ಸುತ್ತಮುತ್ತಲಿವೆ. ಈಗಾಗಲೇ ರೈಲ್ವೇ ನಿಲ್ದಾಣದ ಬಳಿ ಭೂಮಿಯ ಬೆಲೆ ಗಗನಕ್ಕೇರಿದೆ. ತಾಲೂಕು ಕೇಂದ್ರವಾಗಿರುವ ಜೊತೆಗೆ ದಿನೇ ದಿನೇ ಬೈಂದೂರು ಅಭಿವೃದ್ಧಿಯತ್ತ ಸಾಗುತ್ತಿದೆ. ಉದ್ಯಮಿಗಳನ್ನು ಆಕರ್ಷಿಸುವ ಹಿನ್ನೆಲೆಯಲ್ಲಿ ರೂಪುಗೊಂಡ ಬೈಂದೂರಿಗೆ ಬನ್ನಿ ಕಾರ್ಯಕ್ರಮ ಪುನರ್ ಚಾಲನೆಗೊಳ್ಳಬೇಕಾಗಿದೆ. ರೈಲ್ವೇ ನಿಲ್ದಾಣದ ಜನಜಂಗುಳಿಯ ಜೊತೆಗೆ ವಸತಿ ಗೃಹ ಹಾಗೂ ಹೊಟೇಲ್ ಉದ್ಯಮಕ್ಕೆ ವಿಫುಲ ಅವಕಾಶಗಳಿವೆ.

25-05-2013-13

ಬೈಂದೂರು, ಪಡುವರಿ, ಯಡ್ತರೆ, ಮುನ್ಸಿಪಾಲಿಟಿಯಾಗುವ ಹಂತದಲ್ಲಿದ್ದು ಪ್ರವಾಸೋದ್ಯಮದ ಅಭಿವೃದ್ಧಿಯ ಜೊತೆಗೆ ಮೂಕಾಂಬಿಕಾ ರೈಲ್ವೇ ನಿಲ್ದಾಣ 2013-14ನೇ ಸಾಲಿನಲ್ಲಿ ಆದಾಯ ದ್ವಿಗುಣಗೊಳ್ಳಲಿದೆ. ಉದ್ದಿಮೆದಾರರಿಗೆ ಉತ್ತಮ ಅವಕಾಶಗಳಿವೆ ಎನ್ನುತ್ತಾರೆ ಸ್ಥಳೀಯರು.

ಒಟ್ಟಾರೆಯಾಗಿ ನಗಣ್ಯವಾಗಿದ್ದ ಬೈಂದೂರು ರೈಲ್ವೇ ನಿಲ್ದಾಣ ಕೆಲವೇ ವರ್ಷದಲ್ಲಿ ರಾಜ್ಯಕ್ಕೆ ಮಾದರಿಯಾಗುವಂತೆ ಮಾರ್ಪಡಿಸಿದ ಸ್ಥಳೀಯರ ಪ್ರಯತ್ನ ಭೇಷ್ ಎನ್ನಲೇಬೇಕು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)