ರಂಗಸಜ್ಜಿಕೆಯ ಅದ್ಭುತ ಪ್ರತಿಭೆ ರಾಮ ಟೈಲರ್

0
801

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

15-07-2013-9

ಬೈಂದೂರು : ಕೆಲವು ವ್ಯಕ್ತಿಗಳೇ ಹಾಗೇ ಅದ್ಭುತ ಪ್ರತಿಭಾವಂತರಾಗಿರುತ್ತಾರೆ ಆದರೆ ಎಲ್ಲೂ ಸಹ ಗುರುತಿಸಿಕೊಳ್ಳುವುದಿಲ್ಲ. ಸಭೆ, ಸಮಾರಂಭ, ಹೊಗಳಿಕೆಗಳಿಗೆ ಮಾರುದ್ದ ದೂರ ಹೋದರೂ ಸಹ ಕೈಂಕರ್ಯದಲ್ಲಿ ಭೇಷ್ ಎನಿಸಿಕೊಳ್ಳುವ ಪ್ರತಿಭಾವಂತರಾಗಿದ್ದಾರೆ. ಅಂತಹ ಪ್ರತಿಭಾವಂತ ಕಲಾವಿದನಾಗಿ ಗುರುತಿಸಿಕೊಂಡಿರುವುದು ಬೈಂದೂರಿನ ರಾಮ ಟೈಲರ್.

ಮೂರು ದಶಕಗಳಿಗಿಂತಲೂ ಅಧಿಕ ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಹೆಗ್ಗಳಿಕೆ ಬೈಂದೂರಿನ ಲಾವಣ್ಯ ಕಲಾಸಂಸ್ಥೆಯದ್ದಾಗಿದೆ. ಲಾವಣ್ಯ ಕುಟುಂಬದಲ್ಲಿ ಪ್ರತಿಭಾವಂತ ಕಲಾವಿದರನ್ನು ಹೊಂದಿದ್ದು ವೃತ್ತಿಯಲ್ಲಿ ಅತ್ಯಂತ ಸರಳತೆಯಿಂದಿರುವುದು ಇದರ ವೈಶಿಷ್ಟ್ಯವಾಗಿದೆ. ಕಾರಂತ ಕುಟುಂಬದ ಜೊತೆಗೆ ರಂಗವೇದಿಕೆಯಲ್ಲಿ ಪ್ರತಿ ನಾಟಕಕ್ಕೂ ರಂಗ ಸಜ್ಜಿಕೆಯ ಜವಾಬ್ದಾರಿ ರಾಮ ಟೈಲರ್ ದ್ದಾಗಿದೆ. 35 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡು ಹತ್ತಾರು ಪ್ರಶಸ್ತಿಗಳು ದೊರೆತರೂ ಸಹ ಇವರು ಮಾತ್ರ ಸರಳ ಸಹಜತೆಯಲ್ಲಿ ತೆರೆಮರೆಯಲ್ಲಿರುತ್ತಾರೆ.

ಜಿ. ಸೀತಾರಾಮ ಶೆಟ್ಟಿ ಸುರೇಶ ಆನಗಳ್ಳಿಯವರ ವಿನೂತನ ಚಿಂತನೆಯ ನಾಟಕಗಳಿಗೆ ಸೂಕ್ತ ವೇದಿಕೆ ನಿರ್ಮಿಸುವ ಜವಾಬ್ದಾರಿ ಟೈಲರ್ ದ್ದಾಗಿದೆ. ಮೀನಿನ ಹೆಜ್ಜೆ,  ಆನಂದ ನಿವಾಸ, ಬೇಲಿ ಮತ್ತು ಹೊಲ, ರೊಟ್ಟಿಯ ಋಣ, ತ್ಯಾಗಿ, ವಿಧಿವಂಚಿತೆ, ರಾಘವೇಂದ್ರ ಮಹಾತ್ಮೆ, ಚೋರ ಚರಣದಾಸ, ಆಲಿಬಾಬ ಮತ್ತು ನಲವತ್ತು ಕಳ್ಳರು, ಉದ್ಭವ, ಏಕಲವ್ಯ ಸೇರಿದಂತೆ 25ಕ್ಕೂ ಅಧಿಕ ಪ್ರಶಸ್ತಿ ವಿಜೇತ ನಾಟಕದಲ್ಲಿ ಶ್ರೇಷ್ಟ ರಂಗಸಜ್ಜಿಕೆ ನಿರ್ಮಿಸಿದ್ದಾರೆ. ವೃತ್ತಿಯಲ್ಲಿ ಟೈಲರ್ ಆಗಿದ್ದು ಮಕ್ಕಳ ನಾಟಕಗಳಿಗೆ ಸೂಕ್ತವಾದ ವಸ್ತ್ರವಿನ್ಯಾಸ, ಸೇರಿದಂತೆ ಸದ್ದಿಲ್ಲದೆ ನಡೆಸುವ ಇವರ ರಂಗಸೇವೆ ಶ್ಲಾಘನೀಯವಾಗಿದೆ.

ಒಂದು ನಾಟಕದ ಯಶಸ್ಸಿಗೆ ಪಾತ್ರಧಾರಿಗಳ ಅಭಿನಯದಷ್ಟೇ ಸೆಟ್ಟಿಂಗ್ ಹಾಗೂ ಬೆಳಕು ನಿರ್ವಹಣೆಯ ಪಾತ್ರ ಪ್ರಮುಖವಾಗಿರುತ್ತದೆ. ಹರಿಶ್ಚಂದ್ರ ನಾಟಕದಲ್ಲಿ ಧಗಧಗನೇ ಉರಿಯುವ ಚಿತೆ ನಿರ್ಮಾಣ, ದೃಷ್ಟಿ ನಾಟಕದಲ್ಲಿ ಸಪ್ತ ಋಷಿಗಳನ್ನು ಮಿನುಗುವ ಆಗಸದಲ್ಲಿ ನಿರ್ಮಿಸಿದ ರಾಮಣ್ಣನ ಪ್ರತಿಭೆ ಅವರ ಆಸಕ್ತಿಗೆ ಸಾಕ್ಷಿಯಾಗಿದೆ.

ಪ್ರಸ್ತುತ ಲಾವಣ್ಯದ ಅಧ್ಯಕ್ಷರಾಗಿರುವ ಇವರು ಶಾರದೋತ್ಸವ ಸೇರಿದಂತೆ ಬೈಂದೂರಿನ ಹತ್ತಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಮನ್ನಣೆಗಳಿಸಿದ್ದಾರೆ. ರಂಗಭೂಮಿಯಲ್ಲಿ ಅದ್ಭುತ ರಂಗಸಜ್ಜಿಕೆಯಿಂದ ಗುರುತಿಸಿಕೊಂಡ ಇವರ ಸಂಕೋಚ ಸ್ವಭಾವದಿಂದಾಗಿ ಪ್ರಚಾರದಿಂದ ದೂರ ಉಳಿದಿದ್ದಾರೆ. ಹುಟ್ಟು ಕಲಾವಿದರಲ್ಲದಿದ್ದರೂ ಸಹ ಯಾವುದೇ ಹಿನ್ನಲೆಯಿಲ್ಲದೆ ರಂಗಭೂಮಿಯಲ್ಲಿ ಕೇವಲ ಆಸಕ್ತಿಯೊಂದರಿಂದ ಹಾಗೂ ಕಠಿಣ ಪರಿಶ್ರಮದಿಂದ ಗುರುತಿಸಿಕೊಳ್ಳುವ ಇಂತಹ ಕಲಾವಿದರಿಗೆ ಸಂಘ ಸಂಸ್ಥೆಗಳಿಂದ ಸೂಕ್ತ ಮನ್ನಣೆ ದೊರೆತಾಗ ಇವರ ಕೊಡುಗೆಗೊಂದಿಷ್ಟು ಸಾರ್ಥಕತೆ ದೊರೆಯುತ್ತದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)