ಉಳ್ಳೂರು ಮೂಕಾಂಬಿಕಾ ಐತಾಳ್ ಅವರ ಬದುಕು ಮತ್ತು ಸಮಗ್ರ ಸಾಹಿತ್ಯ ಕುರಿತ ಸುಬ್ರಹ್ಮಣ್ಯ ಐತಾಳ್ ಸಂಪಾದಿಸಿದ ಹೊತ್ತಗೆ ‘ಮೂಕಜ್ಜಿ’ ಅನಾವರಣ

0
617

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಎಲ್ಲರೂ ಪ್ರೀತಿಯಿಂದ ಮೂಕಜ್ಜಿ ಎಂದು ಕರೆಯುವ ಉಳ್ಳೂರು ಮೂಕಾಂಬಿಕಾ ಐತಾಳ್ ಕುಂದಗನ್ನಡದಲ್ಲಿ ಆಶು ಸಾಹಿತ್ಯ ರಚಿಸಿದ ಮೊದಲಿಗರು. ಅವರ ಕವನ ಮತ್ತು ಕತೆಗಳಲ್ಲಿ ಕುಂದಗನ್ನಡದ ಪದಗಳು, ನುಡಿಗಟ್ಟುಗಳು ಸಮೃದ್ಧವಾಗಿವೆ ಎಂದು ಕುಂದಾಪುರದ ಹಿರಿಯ ನ್ಯಾಯವಾದಿ, ಸಾಹಿತಿ ಎ. ಎಸ್. ಎನ್. ಹೆಬ್ಬಾರ್ ಹೇಳಿದರು.

ನಾಗೂರಿನ ರಾಮಕೃಷ್ಣ ಐತಾಳ್ ಕಾಂಪೌಂಡ್‍ನ ‘ಸುಧಾಮ’ದಲ್ಲಿ ಭಾನುವಾರ ಖ್ಯಾತ ಆಶು ಕವಯಿತ್ರಿ ಉಳ್ಳೂರು ಮೂಕಾಂಬಿಕಾ ಐತಾಳ್ ಅವರ ಬದುಕು ಮತ್ತು ಸಮಗ್ರ ಸಾಹಿತ್ಯ ಕುರಿತ ಸುಬ್ರಹ್ಮಣ್ಯ ಐತಾಳ್ ಸಂಪಾದಿಸಿದ ಹೊತ್ತಗೆ ‘ಮೂಕಜ್ಜಿ’ ಅನಾವರಣಗೊಳಿಸಿ, ಮಾತನಾಡಿದರು.

ಯಾವುದೇ ಸಾಂಪ್ರದಾಯಿಕ ಶಿಕ್ಷಣ ಇಲ್ಲದೆ, ಬಾಲವಿಧವೆಯಾಗಿ ಸಂಪ್ರದಾಯದ ಕಟ್ಟುಪಾಡುಗಳಿಗೆ ಬಂಧಿಯಾಗಿ ಬಾಹ್ಯ ಪ್ರಪಂಚದೊಂದಿಗೆ ಅಷ್ಟಾಗಿ ಬೆರೆಯದೆ ಬೆಳೆದ ಮೂಕಾಂಬಿಕಾ ಅಮ್ಮ ವಿವಿಧ ಛಂದಸ್ಸುಗಳಲ್ಲಿ, ವೈವಿಧ್ಯಮಯ ವಿಚಾರಗಳ ಮೇಲೆ ಕವನ ರಚಿಸಿದುದು ಮತ್ತು ಕತೆಗಳನ್ನು ಕಟ್ಟಿರುವುದು ಅಚ್ಚರಿಯ ವಿಷಯ. ಅವರ ಎಷ್ಟೋ ಕೃತಿಗಳು ಬೆಳಕಿಗೆ ಬಂದಿಲ್ಲ. ಪ್ರಸಕ್ತ ಪುಸ್ತಕ ಅವರ ಅಳಿದುಳಿದ ಕೃತಿಗಳನ್ನು ದಾಖಲಿಸುವ ಮಹತ್ವದ ಕೆಲಸ ಎಂದರು.

ಮೂಕಜ್ಜಿ ಕೃತಿಗಳ ವಿಮರ್ಶೆ ಮಾಡಿದ ನಿವೃತ್ತ ಪ್ರಾಧ್ಯಾಪಕಿ, ಹಿರಿಯ ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಕುರಿತೋದದ ಮೂಕಜ್ಜಿ ತನ್ನ ಕಾಲದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಿಚಾರಗಳ ಕುರಿತು ಮಹತ್ವದ ಕೃತಿ ರಚಿಸಿದ್ದರೂ, ಕನ್ನಡದ ಮಹಿಳಾ ಸಾಹಿತಿಗಳ ಸಾಲಿನಲ್ಲಿ ಪರಿಗಣನೆಗೆ ಬಾರದಿರುವುದು ಬೇಸರದ ವಿಚಾರ ಎಂದರು.

ಪುಸ್ತಕ ಪರಿಚಯಿಸಿದ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ, ಎಲ್ಲೆಲ್ಲೋ ಚದುರಿಹೋಗಿ, ಮರೆಯಾಗುವ ಅಪಾಯ ಎದುರಿಸುತ್ತಿದ್ದ ಮೂಕಜ್ಜಿಯ ಅಮೂಲ್ಯ ಕೃತಿಗಳನ್ನು ಒಂದೆಡೆ ಸೇರಿಸಿ ಮುಂದಿನ ಪೀಳಿಗೆಗೆ ಸಿಗುವಂತೆ ಮಾಡಿದ ಸುಬ್ರಹ್ಮಣ್ಯ ಐತಾಳ್ ಅವರ ಶ್ರಮವನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪುಸ್ತಕದ ಮಾರಾಟಕ್ಕೆ ಸಹಕರಿಸುವ ಭರವಸೆ ನೀಡಿದರು.

ಸುಬ್ರಹ್ಮಣ್ಯ ಐತಾಳ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಐತಾಳ್ ನಿರೂಪಿಸಿ, ವಂದಿಸಿದರು. ಅಶ್ವಿನಿ ಐತಾಳ್ ಮತ್ತು ರಾಕೇಶ್ ಹೊಸಬೆಟ್ಟು ಮೂಕಜ್ಜಿ ಹಾಡುಗಳನ್ನು ಪ್ರಸ್ತುತಪಡಿಸಿದರು.

ಕೋಟ್ : ಪ್ರಸ್ತಾವಿತ ಮಂಗಳೂರು ವಿಶ್ವವಿದ್ಯಾಲಯದ ಕುಂದಗನ್ನಡ ಅಧ್ಯಯನ ಪೀಠಕ್ಕೆ ಕರಾವಳಿಯ ಖ್ಯಾತ ಆಶುಕವಯಿತ್ರಿ ಮೂಕಜ್ಜಿಯ ಹೆಸರಿಡಬೇಕು-ಎ.ಎಸ್.ಎನ್. ಹೆಬ್ಬಾರ್

ಮೂಕಜ್ಜಿ ಮರುಹುಟ್ಟು ! : ಸಮಾರಂಭದಲ್ಲಿ ಸೇರಿದವರು ಮೂಕಜ್ಜಿಯ ಸಮಗ್ರ ಸಾಹಿತ್ಯ ಸಂಕಲನದ ಬಿಡುಗಡೆಯ ಮೂಲಕ ಆಕೆ ಮರುಹುಟ್ಟು ಪಡೆಯುವುದನ್ನು ನಿರೀಕ್ಷಿಸುತ್ತಿದ್ದರು. ಪುಸ್ತಕದ ಚೀಲವನ್ನು ಕಂಕುಳಲ್ಲಿರಿಸಿಕೊಂಡು ಕೋಲೂರುತ್ತ ಸಭೆಯ ನಡುವಿನಿಂದ ವೇದಿಕೆಯೆಡೆಗೆ ನಡೆದುಬಂದ ಮೂಕಜ್ಜಿಯನ್ನು ಕಂಡು ಒಂದು ಕ್ಷಣ ಮೈಮರೆತರು. ‘ಮೂಕಜ್ಜಿ’ ಚೀಲವನ್ನು ಹೆಬ್ಬಾರರಿಗೆ ಹಸ್ತಾಂತರಿಸುತ್ತಿದ್ದಂತೆ ಚಪ್ಪಾಳೆ ಮೂಲಕ ಸ್ವಾಗತಿಸಿದರು. ಹೆಬ್ಬಾರ್ ಪುಸ್ತಕ ಬಿಡುಗಡೆ ಮಾಡುತ್ತಿದ್ದಂತೆ ‘ಮೂಕಜ್ಜಿ’ ನಡುಗುವ ಸ್ವರದಲ್ಲಿ ತಮ್ಮದೊಂದು ಕವನ ಹಾಡಿದರು. ನಿರೂಪಕಿ ಅಶ್ವಿನಿ ಐತಾಳ್ ಪುಸ್ತಕ ಬಿಡುಗಡೆಗೆ ನಾವೀನ್ಯತೆಯ ಮೆರುಗು ತೊಡಿಸಲು ಮೂಕಜ್ಜಿ ವೇಷದಲ್ಲಿ ಬಂದವರು ಕಲಾವಿದೆ ಶೈಲಜಾ ರಮೇಶ ಭಟ್ ಎಂದು ಪ್ರಕಟಿಸಿ ಎಲ್ಲರ ಕುತೂಹಲಕ್ಕೆ ತೆರೆ ಎಳೆದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)