ಉಪ್ಪುಂದ : ಕಿರಿಮಂಜೇಶ್ವರ ಗ್ರಾಮದ ನಾಗೂರು ರಾ.ಹೆದ್ದಾರಿ 66ರಲ್ಲಿ ನೀಡಿರುವ ಯೂಟರ್ನ್ ಅವೈಜಾನಿಕವಾಗಿದ್ದು ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯ ನಾಗರಿಕರು ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಜ.11ರಂದು ನಾಗೂರಿನಲ್ಲಿ ಪ್ರತಿಭಟನೆ ನಡೆಯಿತು.
ನಾಗೂರು ರಾ.ಹೆದ್ದಾರಿ 66ರಲ್ಲಿ ಉಪ್ರಳ್ಳಿ ಮಾರ್ಗವಾಗಿ ನೀಡಿರುವ ಯುಟರ್ನ್ ಜಾಗದಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇಲ್ಲಿನ ಅಪಘಾತದಲ್ಲಿ ಜೀವ ಹಾನಿ, ಕೈ ಕಾಲು ಕಳೆದುಕೊಂಡಿರುವ ಹಲವಾರು ಘಟನೆಗಳು ನಡೆಯಲು ಈ ಅವೈಜಾನಿಕ ಯೂಟರ್ನ್ ಕಾಮಗಾರಿ ನಡೆಸಿರುವುದು ಕಾರಣವಾಗಿದೆ ಎಂದರು. ಉಪ್ರಳ್ಳಿ ಮಾರ್ಗವಾಗಿ ಬರುವ ವಾಹನಗಳ ಸವಾರರು ಅಗತ್ಯ ವಸ್ತುಗಳಿಗಾಗಿ ನಾಗೂರು ಪೇಟೆಯನ್ನು ಹೆಚ್ಚು ಅವಲಂಭಿಸಿರುತ್ತಾರೆ. ಯೂಟರ್ನ್ಮಧ್ಯ ಭಾಗದಲ್ಲಿ ನೀಡಿರುವ ಸ್ಥಳವಕಾಶ ತುಂಬಾ ಕಿರಿದಾಗಿರುವುದು ನಿತ್ಯ ಅಪಘಾತ ಸಂಭವಿಸಲು ಕಾರಣವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಕಿರಿಮಂಜೇಶ್ವರ ಹಾಗೂ ನಾಗೂರಿನ ಪೇಟೆಯ ಸುತ್ತಮುತ್ತ ಬ್ಯಾಂಕ್, ಸೊಸೈಟಿ, ದೇವಸ್ಥಾನ, ಮಸೀದಿ, ಸಭಾಭವನ, ಬಸ್, ರಿಕ್ಷಾ ನಿಲ್ದಾಣ, ಗ್ರಾ.ಪಂ., ಶಾಲೆಗಳು ಇರುವುದರಿಂದ ಮುಂದಿನ ದಿನಗಳಲ್ಲಿ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಆದರಿಂದ ಯೂಟರ್ನ್ನ ಅಗಲಗೊಳಿಸುವಂತೆ ಆಗ್ರಹಿಸಿದರು.
ರಾ.ಹೆದ್ದಾರಿಯಲ್ಲಿ ಅಳವಡಿಸಿರುವ ಬೀದಿ ದೀಪಗಳು ಬೆಳಗದಿರುವ ಕುರಿತು, ನೀರು ಹರಿದು ಹೋಗಲು ಸಮರ್ಪಕ ಒಳಚರಂಡಿ ವ್ಯವಸ್ಥೆ ಸಮಸ್ಯೆಗಳು ಗಂಭೀರವಾಗಿದ್ದು ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಟ್ಟು ಕೊಡೇರಿ, ನಾಗೂರು, ಉಪ್ರಳ್ಳಿ, ಕಿರಿಮಂಜೇಶ್ವರ ಗ್ರಾಮದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ಮುಕ್ತಿ ನೀಡಬೇಕು ಎಂದು ಆಗ್ರಹಿಸಿದರು. ನಿಗದಿತ ಸಮಯದಲ್ಲಿ ಪರಿಹರಿಸದಿದ್ದಲ್ಲಿ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ನಾಗರಿಕರು ಎಚ್ಚರಿಕೆ ನೀಡಿದರು.