ಮರವಂತೆ ಗ್ರಾಮ ಸಭೆ : ಸೋಲಾರ್ ಬಳಕೆಗೆ ಬಿಲ್‍ನಲ್ಲಿ ರಿಯಾಯಿತಿ ಸಿಗುತ್ತಿಲ್ಲ ಆಕ್ಷೇಪ

0
98

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ : ಮರವಂತೆ ಗ್ರಾಮ ಪಂಚಾಯಿತ್‍ನಲ್ಲಿ ಪ್ರಸ್ತುತ ಆಡಳಿತಾ„ಕಾರಿ ಪಂಚಾಯಿತ್‍ನ ಹೊಣೆ ನಿರ್ವಹಿಸುತ್ತಿದ್ದು, ಸಿಬಂದಿ ನೆರವಿನಿಂದ ಪಂಚಾಯಿತ್‍ನ ದೈನಂದಿನ ಚಟುವಟಿಕೆಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಆಡಳಿತಾಧಿಕಾರಿ ಜ್ಯೋತಿ ಬಿ. ಹೇಳಿದರು.
ನ.20ರಂದು ಪಂಚಾಯಿತಿಯ ಸುವರ್ಣ ಸೌಧದಲ್ಲಿ ನಡೆದ ವರ್ಷದ ಮೊದಲ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲಾ ಕ್ರೀಡಾಂಗಣದಲ್ಲಿರುವ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಬೇಕು ಎಂಬ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಅವರ ಸಲಹೆಯನ್ನು ಮತ್ತು ಸೋಲಾರ್ ವಾಟರ್ ಹೀಟರ್ ಬಳಕೆಗೆ ಮಾಸಿಕ ಬಿಲ್‍ನಲ್ಲಿ ರಿಯಾಯಿತಿ ಸಿಗುತ್ತಿಲ್ಲ ಎಂದು ಲೀನಾ ಕ್ರಾಸ್ತಾ ಅವರ ಆಕ್ಷೇಪವನ್ನು ಮೆಸ್ಕಾಂ ಶಾಖಾಧಿಕಾರಿ ಸುಜಯೀಂದ್ರ ಆಚಾರ್ ಪರಿಶೀಲಿಸುವ ಭರವಸೆ ನೀಡಿದರು.

ಶಿವರಾಮ ಕಾರಂತ ಮಾರ್ಗದಲ್ಲಿ ರಸ್ತೆಗೆ ಹೊಂದಿಕೊಂಡು ನಿವಾಸಿಯೊಬ್ಬರು ನಿರ್ಮಿಸಿರುವ ಗೊಬ್ಬರಗುಂಡಿ ತೆರವುಗೊಳಿಸುವಂತೆ ಅಲ್ಲಿನ ಸಾರ್ವಜನಿಕರು ಸಲ್ಲಿಸಿರುವ ಆಕ್ಷೇಪಣೆಯ ಮೇಲೆ ಕೈಗೊಂಡ ಕ್ರಮದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು ಸ್ಥಳ ಪರಿಶೀಲನೆ ಮತ್ತು ಮಹಜರಿನಲ್ಲಿ ಗುಂಡಿ ಅಪಾಯಕಾರಿ ಮತ್ತು ಅಸಹ್ಯಕರ ವಾತಾವರಣ ನಿರ್ಮಿಸಿರುವದನ್ನು ಮನಗಾಣಲಾಗಿದೆ. ನಿಯಮದಂತೆ ಅದರ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ತಾಲ್ಲೂಕು ಪಂಚಾಯಿತ್ ಸದಸ್ಯ ಜಗದೀಶ ಪೂಜಾರಿ ಪಂಚಾಯಿತ್‍ಗೆ ಒದಗಿಸಲಾದ ಅನುದಾನದ ಮಾಹಿತಿ ನೀಡಿದರು.

ಕಾರ್ಯದರ್ಶಿ ದಿನೇಶ ಶೇರುಗಾರ್ ವಾರ್ಷಿಕ ವರದಿ ಓದಿದರು. ಕರಸಂಗ್ರಾಹಕ ಶೇಖರ ಮರವಂತೆ ಆಯವ್ಯಯದ ವಿವರ ಮಂಡಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸನ್ಮಾನ್ ಶೆಟ್ಟಿ ಕೋವಿಡ್-19 ಅಪಾಯದ ಬಗೆಗೆ ಜನರು ಹಿಂದಿಗಿಂತ ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಪಶು ವೈದ್ಯ ಡಾ| ಅರುಣ್ ಕೋಳಿಗಳಿಗೆ ಬಂದಿರುವ ಕಾಯಿಲೆಗೆ ಬಳಸಬೇಕಾದ ಮನೆಮದ್ದಿನ ಮಾಹಿತಿ ನೀಡಿದರು.

ಪ್ರಭಾಕರ ಖಾರ್ವಿ ಪ್ರಶ್ನೆಗೆ ಉತ್ತರಿಸಿದ ಮೀನುಗಾರಿಕಾ ಇಲಾಖೆಯ ಜೆ. ಎಂ. ವಿಶ್ವನಾಥಯ್ಯ ಮರವಂತೆಗೆ ಈ ಸಾಲಿನಲ್ಲಿ 11 ಮತ್ಸ್ಯಾಶ್ರಯ ಮನೆಗಳು ಮಂಜೂರಾಗಿವೆ ಎಂದರು. ವಸತಿ ಯೋಜನೆಯಡಿ ಎರಡು ವರ್ಷಗಳ ಹಿಂದೆ ಅರ್ಜಿ ನೀಡಿದ್ದ ಅಡಿಗಳಹಿತ್ಲು ಗಿರಿಜಾ ಪೂಜಾರಿ ಅವರಿಗೆ ಅಭಿವೃದ್ಧಿ ಅಧಿಕಾರಿ ಇತ್ತಿಚಿಗೆ ಯಾವುದೇ ವಸತಿ ಯೋಜನೆ ಮಂಜೂರಾಗಿಲ್ಲ ಎಂದು ಸಮಜಾಯಿಷಿ ನೀಡಿದರು. ಅರಣ್ಯ ಇಲಾಖೆಯ ಸದಾಶಿವ ಮರ ಬೆಳೆಸುವವರಿಗೆ ಸಿಗುವ ಅನುದಾನದ ಕುರಿತು, ಕೃಷಿ ಅಧಿಕಾರಿ ಪರಶುರಾಮ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಮಾಜಿ ಅಧ್ಯಕ್ಷ ಎಂ. ವಿನಾಯಕ ರಾವ್ ಶುದ್ಧ ಕುಡಿಯುವ ನೀರಿನ ಘಟಕಗಳ ಬಳಕೆ ಮತ್ತು ಅದರಿಂದ ಬರುವ ಆದಾಯದ ಬಗ್ಗೆ ಪ್ರಶ್ನಿಸಿ, ಉತ್ತರ ಪಡೆದರು.

ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್ ಸ್ವಾಗತಿಸಿ, ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)