ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಪ್ರಗತಿ ಪರಿಶೀಲನೆ ಸಭೆ

0
249

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸಮಗ್ರ ಅಭಿವೃದ್ಧಿಗಾಗಿ ಸರಕಾರ ಚಿಂತನೆ ನಡೆಸಿದ್ದು, ಮುಂದಿನ 50 ವರ್ಷಗಳವರೆಗಿನ ದೂರದೃಷ್ಟಿ ಇಟ್ಟುಕೊಂಡು ಮಾಸ್ಟರ್‌ ಪ್ಲ್ಯಾನ್‌ ಸಿದ್ಧಪಡಿಸಿ, ಮುಂದಿನ ಸಭೆಯಲ್ಲಿ ಮಂಡಿಸುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಲ್ಲೂರು ಗ್ರಾಮ ಹಾಗೂ ದೇವಳಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ 2015ರಲ್ಲಿ 33 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕೆಲವೊಂದು ನ್ಯೂನತೆಗಳಿಂದಾಗಿ ಈವರೆಗೆ ಸಮರ್ಪಕ ನೀರು ಪೂರೈಕೆಯಾಗಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಎಲ್ಲ ನ್ಯೂನತೆ ಸರಿಪಡಿಸಿ ಅಕ್ಟೋಬರ್ 15ರೊಳಗೆ ಸಮರ್ಪಕ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ದೇವಳದ ವಠಾರದಲ್ಲಿ ಒಳಚರಂಡಿ ಹಾಗೂ ಸಂಪರ್ಕ ಜಾಲ ಅನುಷ್ಠಾನಗೊಳಿಸಲು 19 ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿಯೂ ಕೆಲವೊಂದು ನ್ಯೂನತೆಗಳು ಕಂಡು ಬಂದಿದ್ದು, ಅದನ್ನು ಶೀಘ್ರ ಸರಿಪಡಿಸಬೇಕು ಎಂದು ಸೂಚನೆ ನೀಡಿದರು. ದೇವಳದ ಅಧೀನಕ್ಕೆ ಒಳಪಟ್ಟು ತೊಪ್ಪಲುಕಟ್ಟೆಯಲ್ಲಿ ಸುಮಾರು 10 ಎಕರೆ ಜಾಗದಲ್ಲಿ ಗೋಶಾಲೆ ನಿರ್ಮಿಸಲಾಗಿದ್ದು, ಪ್ರಸ್ತುತ ಅದರಲ್ಲಿ 125 ಗೋವುಗಳಿವೆ. ಈ ಗೋಶಾಲೆಯಲ್ಲಿ ಸುಮಾರು ಒಂದು ಸಾವಿರ ಗೋವು ಸಾಕಲು ವ್ಯವಸ್ಥೆ ಇರುವುದರಿಂದ, ಈ ಭಾಗದಲ್ಲಿ ಯಾವುದಾದರೂ ಅನಾಥ ಗೋವುಗಳನ್ನು ಇಲ್ಲಿಗೆ ತಂದು ಬಿಟ್ಟರೆ ಅವುಗಳನ್ನು ಸಾಕುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಹೆಲಿಪ್ಯಾಡ್‌ ಅಭಿವೃದ್ಧಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸೂಚನೆಯಂತೆ ಅರೆ ಶಿರೂರಿನಲ್ಲಿರುವ ಹೆಲಿಪ್ಯಾಡ್‌ನಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಲು 18.25 ಲಕ್ಷ ರೂ. ಅಂದಾಜುಪಟ್ಟಿ ಸಿದ್ಧಪಡಿಸಿದ್ದು, ಅದರ ಶೀಘ್ರ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಮುಜರಾಯಿ ವ್ಯಾಪ್ತಿಯಲ್ಲಿರುವ ಎಲ್ಲ ದೇಗುಲಗಳ ಜಾಗ ಪರಾಭಾರೆಗೊಂಡರೆ, ಅದರ ತೆರವು ಕಾರ್ಯಾಚರಣೆಗಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಶೀಘ್ರ ವ್ಯವಸ್ಥಾಪನಾ ಸಮಿತಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಸೇರಿದಂತೆ 84 ದೇವಾಲಯಗಳಲ್ಲಿ ವ್ಯವಸ್ಥಾಪನಾ ಸಮಿತಿ ರಚನೆ ಪ್ರಕ್ರಿಯೆ ನಡೆಯುತ್ತಿದ್ದು, ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿದೆ. ಒಂದೆರೆಡು ವಾರಗಳಲ್ಲಿ ನೂತನ ವ್ಯವಸ್ಥಾಪನಾ ಸಮಿತಿ ರಚನೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್ಲದೇ ಪ್ರವಾಸೋದ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೊಡಚಾದ್ರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಬಗ್ಗೆ ಇಲ್ಲಿನ ಸಂಸದರು ಆಸಕ್ತಿ ವಹಿಸಿದ್ದು, ಆ ಯೋಜನೆಗೆ ದೇವಳದ ವತಿಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)