ಯಕ್ಷರಂಗದ ಮೇರು ಕಲಾವಿದ ಶ್ರೀ ನಾಗೇಶ್ ಕುಲಾಲ್

0
436

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)

 

ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ”
ಮೇಲಿನ ಈ ವಾಕ್ಯ ತನ್ನ ನೈಜ ಅರ್ಥ ತಂದುಕೊಳ್ಳುವುದು ಮನುಷ್ಯನ ಜೀವನದಲ್ಲಿ ಹೋಲಿಸಿ ಕೊಂಡಾಗ; ನಾವು ಎಷ್ಟೋ ಬಾರಿ ನೋಡುತ್ತಿರುತ್ತೇವೆ,ಸಾಮಾನ್ಯವಾಗಿ ಯಾವುದೇ ವಿಷಯದಲ್ಲಿ ಅರ್ಧ ಪಾಂಡಿತ್ಯ ಹೊಂದಿದವರು; ಎಲ್ಲವೂ ತಮಗೆ ಸಿದ್ಧಿಸಿದೆ ಎನ್ನುವ ಅಹಂಕಾರ ತೋರಿಸುವುದನ್ನು.ವಾಸ್ತವವಾಗಿ ಅವರಿಗೆ ಯಾವುದೇ ರೀತಿಯ ಪರಿಪೂರ್ಣತೆ ಇರುವುದಿಲ್ಲ.ಆದರೆ ಅದಕ್ಕೆ ತದ್ವಿರುದ್ದ ಎಂಬಂತೆ ಯಾವುದಾದರೂ ಕ್ಷೇತ್ರದಲ್ಲಿ ಪರಿಪೂರ್ಣತೆ ಪಡೆದವರೊಬ್ಬರು;ತಮಗೆ ಏನೂ ಗೊತ್ತಿಲ್ಲ ಎನ್ನುವ ಹಾಗೆ ಸಾಮಾನ್ಯರಲ್ಲಿ ಸಾಮಾನ್ಯವಾಗಿ ಇದ್ದು ಬಿಡುತ್ತಾರೆ. ತಾನು ಕಲಿತದ್ದು ಕಡಿಮೆ ಕಲಿಯಬೇಕಾಗಿರುವುದು ಹೆಚ್ಚು ಎನ್ನುವ ವಾಸ್ತವದ ಅರಿವು ಇರುವುದೇ ಅದಕ್ಕೆ ಕಾರಣ.ಇಂತಹವರನ್ನೇ ತುಂಬಿದ ಕೊಡ ಅನ್ನುವುದು. ಹೌದು ಇಲ್ಲಿ ಹೇಳ ಹೊರಟಿರುವುದು ಶ್ರೀ ನಾಗೇಶ್ ಕುಲಾಲ್ ನಾಗರ ಕೊಡಿಗೆ ಎನ್ನುವ ಅಂತಹದೇ ಒಂದು ತುಂಬಿದ ಕೊಡದ ಬಗ್ಗೆ.

ಶ್ರೀ ನಾಗೇಶ್ ಕುಲಾಲ್ ನಾಗರ ಕೊಡಿಗೆ…….. : ಯಕ್ಷಗಾನ ಕ್ಷೇತ್ರದಲ್ಲಿ ಚಿರಪರಿಚಿವಾದ ಹೆಸರು ಶ್ರೀ ನಾಗೇಶ್ ಕುಲಾಲ್ ರದ್ದು. ಯಾವುದೇ ಪ್ರಚಾರದ ಹಿಂದೆ ಬೀಳದೆ,ಯಾವಾಗಲೂ ಹಸನ್ಮುಖಿಯಾಗಿ ನಿಷ್ಠೆ ಇಂದ, ಪ್ರಾಮಾಣಿಕವಾಗಿ ಯಕ್ಷಗಾನ ಸೇವೆ ಮಾಡುತ್ತಾ ಬಂದವರು ಶ್ರೀಯುತರು. ಯಕ್ಷಗಾನ ಕುರಿತಾಗಿ ಸರ್ವ ಜ್ಞಾನ ಇದ್ದರೂ,ಎಲ್ಲಿಯೂ ಅದು ಅತಿಯಾಗದಂತೆ,ಮಿತಿಯಲ್ಲೇ ವ್ಯವಹರಿಸುವ ಪ್ರಭುದ್ದ ಕಲಾವಿದರು.

1972 ರಲ್ಲಿ ಕುಂದಾಪುರ ತಾಲೂಕಿನ ಹುಣಸೇಮಕ್ಕಿ ಎಂಬಲ್ಲಿ ಶ್ರೀ ಶಂಕರ ಕುಲಾಲ್ ಹಾಗೂ ಶ್ರೀಮತಿ ಲಚ್ಚಮ್ಮ ದಂಪತಿ ಗಳಿಗೆ ಮಗನಾಗಿ ಹುಟ್ಟಿದರು. 7 ನೆ ತರಗತಿಯ ವರೆಗೆ ವಿದ್ಯಾಬ್ಯಾಸ ಮಾಡಿರುವ ಶ್ರೀಯುತರು,ಆಗಿನ ಶ್ರೀ ನಾಗರಕೊಡಿಗೆ ಮೇಳದ ಸಂಚಾಲಕರಾದ ಶ್ರೀ ರಾಮಕೃಷ್ಣಯ್ಯ ರವರ ಪ್ರಭಾವದಿಂದಾಗಿ ಯಕ್ಷಕಲಿಕೆ ಗೆ ಮುಂದಾದರು. ಪ್ರಥಮವಾಗಿ ಕೋಟ ಹಂಗಾರಕಟ್ಟೆ ಯಕ್ಷಗಾನ ಕೇಂದ್ರಕ್ಕೆ ಸೇರ್ಪಡೆ ಯಾದರು. ಅಲ್ಲಿ ಗುರು ಶ್ರೇಷ್ಠರಾದ ಶ್ರೀ ಕೆ. ಪಿ.ಹೆಗ್ಡೆ ಯವರ ಸಮರ್ಥ ಮಾರ್ಗದರ್ಶನದಲ್ಲಿ ಭಾಗವತಿಕೆ ಅಭ್ಯಾಸ ಮಾಡಿದರು. ಅವರಿಂದಲೇ ರಾಗ, ತಾಳ ಅಭ್ಯಾಸ, ಪ್ರಸಂಗ ನಡೆ ರಂಗತಂತ್ರಗಳನ್ನು ಕಲಿತರು.ಆಗಲೇ; ಮುಂದೆ ಒಬ್ಬ ಸಮರ್ಥ ಭಾಗವತರ ರಾಗುವ ಎಲ್ಲಾ ಲಕ್ಷಣಗಳು ಕುಲಾಲ್ ರಲ್ಲಿ ಎದ್ದು ಕಾಣುತ್ತಿದ್ದವು.ಅದೇ ಕೇಂದ್ರದಲ್ಲಿ ಶ್ರೀ ರಮೇಶ್ ಭಟ್ ಶೃಂಗೇರಿ ಇವರಿಂದ ಮದ್ದಳೆ ಅಬ್ಯಾಸವನ್ನೂ ಮಾಡಿದರು.

ಒಂದು ವರ್ಷದ ಯಕ್ಷಗಾನ ಕಲಿಕೆಯ ನಂತರ ಪ್ರಥಮವಾಗಿ ಶ್ರೀ ರಾಮಕೃಷ್ಣಯ್ಯ ರವರ ಸಂಚಾಲಕತ್ವದ ಶ್ರೀ ನಾಗರ ಕೊಡಿಗೆ ಮೇಳಕ್ಕೆ ಸಂಗೀತಗಾರ ರಾಗಿ ಸೇರ್ಪಡೆ ಗೊಂಡರು. ನಂತರ ಪ್ರಸಿದ್ದ ಮೇಳವಾದ ಶ್ರೀ ಕಮಲಶಿಲೆ ಮೇಳ ಸೇರಿ ಎರಡು ವರ್ಷ ಸಂಗೀತಗಾರನಾಗಿ, ಹಾಗೂ ಎರಡು ವರ್ಷ ಸಹಭಾಗವತರಾಗಿ ಸೇವೆ ಸಲ್ಲಿಸಿದರು. ಬಗ್ವಾಡಿ ಮೇಳದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ನಂತರ ಹಾಲಾಡಿ ಮೇಳದಲ್ಲಿ ಐದು ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದರು. ತರುವಾಯ, ಬಡಗುತಿಟ್ಟಿನ ಮಹಾಮೇಳ ವಾದ ಶ್ರೀ ಮಂದಾರ್ತಿ ಮೇಳದಲ್ಲಿ ನಿರಂತರ 20 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಾನೆ ಬಂದಿದ್ದಾರೆ.(ಮೊದಲ 8 ವರ್ಷ ಸಹಭಾಗವತರು,12 ವರ್ಷದಿಂದ ಪ್ರಧಾನ ಭಾಗವತರಾಗಿ)ಒಟ್ಟು 31 ವರ್ಷಗಳ ಅಗಾಧ ಅನುಭವ ಇದೆ.

ಸಹ ಕಲಾವಿದರೊಂದಿಗೆ ಅನ್ಯೋನ್ಯತೆ ಇಂದ ಬೆರೆಯುವ ಕುಲಾಲರು,ತನ್ನ ಕಲಾಜೀವನ ಬೆಳೆಯುವಲ್ಲಿ ಸಹಕರಿಸಿದ ಪ್ರತಿಯೊಬ್ಬ ರನ್ನೂ ಮನಸಾರೆ ಸ್ಮರಿಸುತ್ತಾರೆ.ಮಂದಾರ್ತಿ ಮೇಳದಲ್ಲಿ ತಮ್ಮ ಗುರುಗಳಾದ ಕೆ. ಪಿ.ಹೆಗ್ಡೆ ಯವರೊಂದಿಗಿನ ಒಡನಾಟ,ಮೇಳದಲ್ಲಿ ಅವರೊಂದಿಗಿನ ತಿರುಗಾಟದ ಪ್ರಭಾವದಿಂದ ದಿನೇ ದಿನೇ ಹೆಚ್ಚು ಹೆಚ್ಚು ಪ್ರಭುದ್ದರಾಗುತ್ತ ಹೋದರು..

ವಿಶಿಷ್ಟವಾದ ರಂಗತಂತ್ರ, ರಾಗಜ್ಞಾನ, ಎನ್ನುವುದು ಶ್ರೀಯುತರ ಹೆಚ್ಚುಗಾರಿಕೆ.ಯಂತಹವರನ್ನೂ ಕುಣಿಸಬಲ್ಲ ಚಾಕಚಕ್ಯತೆ ಕುಲಾಲರ ಪದ್ಯಕ್ಕಿದೆ ಅಂದರೆ ಅದು ಅತಿಶಯೋಕ್ತಿ ಅಲ್ಲ. ತನ್ನ ಧೀರ್ಘಕಾಲದ ಒಡನಾಡಿಗಳಾದ ಕೆ. ಪಿ ಹೆಗ್ಡೆ,ದಿ ಸುಬ್ರಹ್ಮಣ್ಯ ಆಚಾರ್ಯ,ಕಿಗ್ಗ ಹಿರಿಯಣ್ಣ ಆಚಾರ್ಯ, ಹೆರಂಜಾಲು ಗೋಪಾಲ ಗಾಣಿಗ,ಸದಾಶಿವ ಅಮೀನ್ ಕೊಕ್ಕರ್ಣೇ, ಕೃಷ್ಣ ಭಟ್ಟರು. ನಗರ ಅಣ್ಣಪ್ಪ ಶೆಟ್ಟಿ,ಉದಯ್ ಕುಮಾರ್ ಹೊಸಾಳ ಇನ್ನೂ ಮುಂತಾದ ಹಿರಿಯ, ಕಿರಿಯ ಹಿಮ್ಮೇಳ ಕಲಾವಿದರನ್ನು ಸ್ಮರಿಸುತ್ತಾರೆ. ಹಾಗೆಯೇ ಉಪ್ಪುಂದ ನಾಗೇಂದ್ರ ರಾವ್,ನರಾಡಿ ಬೋಜರಜ ಶೆಟ್ಟಿ,ಎಂ. ಎ.ನಾಯ್ಕ್,ಸುಂದರ ನಾಯ್ಕ್ ಬೇಳಂಜೆ, ಆಜ್ರಿ ಗೋಪಾಲ ಗಾಣಿಗ,ಮಹಾಬಲ ದೇವಾಡಿಗ ಕಮಲಶಿಲೆ ಮುಂತಾದ ಮುಮ್ಮೆಳ ಕಲಾವಿದರ ಸಹಕಾರ ಕೂಡ ತಿರುಗಾಟಕ್ಕೆ ಅನೂಕೂಲವಾಗಿದೆ ಎನ್ನುತ್ತಾರೆ.

ಸಾಮಾನ್ಯವಾಗಿ ಪೌರಾಣಿಕ ಪ್ರಸಂಗಗಳನ್ನು ಇಷ್ಟ ಪಡುವ ಇವರಿಗೆ,ಸುಧನ್ವ ಮೋಕ್ಷ, ಕರ್ಣಪರ್ವ, ಮಾಯಾಪುರಿ ಮಹಾತ್ಮೆ, ಶ್ವೇತಕುಮಾರ ಚರಿತ್ರೆ,ಮಾಯಾ ಮೃಗಾವತಿ, ನಳ ದಮಯಂತಿ,ಶನೀಶ್ವರ ಮಹಾತ್ಮೆ,ಮಂದಾರ್ತಿ ಕ್ಷೇತ್ರ ಮಹಾತ್ಮೆ..ನೆಚ್ಚಿನ ಪ್ರಸಂಗಗಳು. ಅದೇ ರೀತಿ ಹಾಲಾಡಿ ಮೇಳದ ತಿರುಗಾಟದಲ್ಲಿ ಚೆಲುವೆ ಚಿತ್ರಾವತಿ,ಶ್ರೀದೇವಿ ಬನಶಂಕರಿ, ಬಾನುತೇಜಸ್ವಿ,ನಾಗಶ್ರೀ,ರತ್ನ ಕಂಕಣ ಇವೆ ಮುಂತಾದ ಹೊಸ ಪ್ರಸಂಗ ಗಳಿಗೂ ಸೈ ಅನಿಸಿದ್ದಾರೆ..
ಅಭಿಮಾನಿಗಳಿಂದ “ಮಲೆನಾಡ ಕೋಗಿಲೆ” ಅಂತಾನೆ ಕರೆಸಿಕೊಳ್ಳುವ ನಾಗೇಶ್ ಕುಲಾಲ್ ಅವರಿಗೆ ಹತ್ತು ಹಲವು ಸಂಘ ಸಂಸ್ಥೆ ಗಳು ಗುರುತಿಸಿ ಗೌರವಿಸಿದೆ. ಬೆಂಗಳೂರಿನ ಪ್ರತಿಷ್ಠಿತ ಯಕ್ಷಗಾನ ಸಂಸ್ಥೆಯೊಂದು ” ಮಲೆನಾಡ ಸ್ವರಸಿಂಧು” ಎನ್ನುವ ಬಿರುದು ನೀಡಿ ಗೌರವಿಸಿದೆ.  ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರ,ಹೈದರಾಬಾದ್ ಮುಂತಾದ ಪರರಜ್ಯಗಳಲ್ಲೂ ತಮ್ಮ ಕಲಾಪ್ರಸಾರ ಮಾಡಿದ್ದಾರೆ.

ಇವರ ಭಾಗವತಿಕೆ ಗೆ ಮನ ಸೋಲದವರೆ ಇಲ್ಲ.ಯಕ್ಷಗಾನ ಅಂತ ಬಂದಾಗ ಅದು ಯಾವುದೇ ಪ್ರಕಾರ ಆದರೂ ಕೂಡ ಉದಾಸೀನ ಮಾಡಿದವರಲ್ಲ.ಮೇಳದ ಪ್ರದರ್ಶನ ಇರಬಹುದು ಅಥವ ಸಂಘ ಸಂಸ್ಥೆಗಳ ಪ್ರದರ್ಶನ ಇರಬಹುದು.ಸಾಮಾನ್ಯವಾಗಿ ವೃತ್ತಿ ಕಲಾವಿದರಿಗೂ ಹವ್ಯಾಸಿ ಕಲಾವಿದರಿಗೆ ವ್ಯತ್ಯಾಸ ಇರುತ್ತದೆ.ಹವ್ಯಾಸಿ ಕಲಾವಿದರೊಂದಿಗೆ ಯಾವುದೇ ಅಸೆಡ್ಡೆ ತೋರದೇ ಹೊಂದಾಣಿಕೆಯಿಂದ ವರ್ತಿಸಿ, ಪ್ರದರ್ಶನಕ್ಕೆ ಮೆರುಗು ನೀಡುವುದು ಇವರ ಹೆಚ್ಚುಗಾರಿಕೆ(ಸ್ವ ಅನುಭವ). ಇನ್ನೂ ಸಾಂಸಾರಿಕ ವಾಗಿಯೂ ಸಂತೃಪ್ತ ಜೀವನ ನಡೆಸುತ್ತಿರುವ ಇವರು ಮಡದಿ ,ಶ್ರೀಮತಿ ಜ್ಯೋತಿ ಕುಲಾಲ್ ಹಾಗೂ ಉಭಯ ಮಕ್ಕಳಾದ ಸುಮಂತ್ ಹಾಗೂ ಸುಚೇತಾ ರೊಂದಿಗೆ ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ನಾಗರ ಕೊಡಿಗೆ ಎಂಬಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಮಕ್ಕಳಿಗೂ ಯಕ್ಷಗಾನ ಕಲಿಸುತ್ತಿರುವ ಶ್ರೀಯುತರು, ಮುಂದಿನ ದಿನಗಳಲ್ಲಿ ಯಕ್ಷ ಕಲಿಕಾರ್ಥಿ ಗಳಿಗಾಗಿ ಯಕ್ಷಗಾನ ಕೇಂದ್ರವನ್ನು ಸ್ಥಾಪಿಸುವ ಉದ್ದೇಶವನ್ನು ಇರಿಸಿಕೊಂಡಿದ್ದಾರೆ.

ತನ್ನ 31 ವರ್ಷದ ತಿರುಗಾಟ ಯಾವುದೇ ಕಹಿಘಟನೆ ಗಳಿಲ್ಲದೆ ಸಾಗಿ ಬಂದಿದೆ,ಆದರೆ ಈ ವರ್ಷ ಕೊರೋನ ಭಾದೆಯಿಂದ ಮೇಳದ ತಿರುಗಾಟ ಅರ್ಧಕ್ಕೆ ನಿಲ್ಲಿಸುವಂತೆ ಆಗಿದೆ ಎಂದು ವಿಷಾಧ ವ್ಯಕ್ತಪಡಿಸುತ್ತಾರೆ.ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕಲಾವಿದರ ಕಷ್ಟಗಳನ್ನು ಅರ್ಥೈಸಿಕೊಳ್ಳುವ ಮೇಳದ ಆಡಳಿತ ಮಂಡಳಿಯವರಿಗೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸುತ್ತಾರೆ.  ನಾಗೇಶ್ ಕುಲಾಲ ರವರ ವೈಯಕ್ತಿಕ ಜೀವನ ಹಾಗೂ ಕಲಾ ಜೀವನ ಮುಂದೆಯೂ ಕೂಡಾ ನಿರ್ವಿಘ್ನವಾಗಿ ನೆರವೇರಲಿ,ಮಂದಾರ್ತಿ ಮಾತೆ ಸದಾ ಕಾಲ ಆಯುರ್ ಆರೋಗ್ಯ ಆಯಸ್ಸು ಸಮೃದ್ಧಿ ನೀಡಿ ಹರಸಲಿ ಎಂದು ಆಶಿಸೋಣ.

ಸುಧೀರ್ ಪಿ ನಾಯ್ಕ್ ಮಂಕಿ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)