ಮುರುಡೇಶ್ವರನ ಸನ್ನಿಧಾನದಲ್ಲಿ ಕೊರೊನಾ ಬಗ್ಗೆ ಹಾಕಿದ ಪ್ರಶ್ನೆ: ಶುಭ ಸೂಚನೆ

0
1007

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಸಂಕಟ ಬಂದಾಗ ವೆಂಕಟರಮಣ ಎಂದು ದೇವಸ್ಥಾನಕ್ಕೆ ಹೋಗೋಣವೆಂದರೆ, ದೇವಾಲಯಕ್ಕೂ ವೈರಸ್ ಕಾಟ. ದೇವಸ್ಥಾನವನ್ನು (ದಿನದ ಕೆಲವು ಸಮಯ ಹೊರತು ಪಡಿಸಿ) ಮುಚ್ಚಿದ ಉದಾಹರಣೆಗಳೇ ಇಲ್ಲದ, ಪುರಾಣ ಪ್ರಸಿದ್ದ ದೇವಾಲಯಗಳನ್ನು ಮುಚ್ಚಿಸಲೂ ಕೊರೊನಾ ವೈರಸ್ ಯಶಸ್ವಿಯಾಗಿದೆ.

ಸಾಮಾನ್ಯವಾಗಿ ಮನುಷ್ಯ ತೊಂದರೆಯಲ್ಲಿ ಸಿಲುಕಿಕೊಂಡಾಗ ದೇವರು, ದೈವದ ಮೊರೆ ಹೋಗುತ್ತಾರೆ ಎನ್ನುವುದು ನಾವು ನೀವೆಲ್ಲಾ ಕೇಳಿದ ಮಾತು. ಅದೇ ರೀತಿ, ಇಡೀ ಮಾನವ ಕುಲಕ್ಕೆ ಕಣ್ಣಿಗೆ ಕಾಣಿಸದ ಒಂದು ವೈರಾಣು ಈ ರೀತಿ ಭಯ ಸೃಷ್ಟಿಸುತ್ತಿದೆ ಎಂದರೆ ಇದೆಂತಹ ದುರ್ವಿಧಿ ಇರಬಹುದು.

ಕೊರೊನಾ ವೈರಸಿನ ಆಯುಸ್ಸಿನ ಬಗ್ಗೆ ಈಗಾಗಲೇ ಹಲವು ಜ್ಯೋತಿಷಿಗಳು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಈಗ, ರಾಜ್ಯದ ಐತಿಹಾಸಿಕ ದೇವಾಯಲಗಳಲ್ಲೊಂದಾದ ಮುರುಡೇಶ್ವರ ದೇವಾಲಯದಲ್ಲಿ ಈ ಬಗ್ಗೆ ಪ್ರಶ್ನೆಯನ್ನು ದೇಗುಲದ ಸಂಪ್ರದಾಯದ ಪ್ರಕಾರ ಕೇಳಲಾಗಿದೆ.

ಕರಾವಳಿ ಭಾಗದ ದೇವಾಲಯಗಳಲ್ಲಿ ದೇವರ ಮೇಲೆ ಹೂವು ಇಟ್ಟು, ಪ್ರಾರ್ಥನೆ ಸಲ್ಲಿಸುವ ಪದ್ದತಿ ಹಿಂದಿನಿಂದಲೂ ಇದೆ. ಇದೇ ರೀತಿ, ಕೊರೊನಾದಿಂದ ದೇಶವನ್ನು ಕಾಪಾಡು ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ಶುಭಸೂಚನೆ ತೋರಿ ಬಂದಿದೆ:

ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಕಾರವಾರದಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಈ ದೇವಸ್ಥಾನ, ಮೂರು ಕಡೆಗಳಿಂದಲೂ ಅರೆಬಿಯನ್ ಸಮುದ್ರದಿಂದ ಸುತ್ತುವರೆದಿದೆ. ಪರಮಾತ್ಮ ಶಿವನ ದೇವಾಲಯ ಇದಾಗಿದೆ. 123 ಅಡಿ ಉದ್ದದ ಶಿವನ ಪ್ರತಿಮೆ ಹಾಗೂ ಶಿವಲಿಂಗವನ್ನೂ ಈ ದೇವಾಲಯದಲ್ಲಿ ಕಾಣಬಹುದು. ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದ ಇನ್ನು ನಾಲ್ಕು ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು, ಅದರಲ್ಲಿ ಮುರುಡೇಶ್ವರ ಒಂದು ಎಂಬುದು ಪುರಾಣದ ಕತೆ.

ಇಡೀ ವಿಶ್ವಕ್ಕೆ ಮಾರಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ಬಗ್ಗೆ ದೇವಾಲಯದಲ್ಲಿ ಪ್ರಶ್ನೆಯನ್ನು ಕೇಳಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕರು, “ನಾವೆಲ್ಲಾ ಭಕ್ತರು, ಊರಿನ ಹತ್ತು ಸಮಸ್ತರು, ನಿನ್ನಲ್ಲಿ ಪ್ರಾರ್ಥಿಸುತ್ತಿದ್ದೇವೆ. ಜಗತ್ತಿಗೆ ಎದುರಾಗಿರುವ ಎಲ್ಲಾ ಕಂಟಕವನ್ನು ನೀನು ದೂರಮಾಡಬೇಕು” ಎಂದು ಶಿವಲಿಂಗದ ಮೇಲೆ ಹೂವು ಇಟ್ಟು ಪ್ರಾರ್ಥಿಸಿದ್ದಾರೆ.

ಶಿವಲಿಂಗದ ಬಲಭಾಗದಿಂದ ಹೂವು ಬಿದ್ದಿದೆ : “ಇಡೀ ವಿಶ್ವ ಕೊರೊನಾ ಎನ್ನುವ ಮಹಾಮಾರಿಯಿಂದ ಬಳಲುತ್ತಿದೆ. ಇದರಿಂದ ವಿಶ್ವವನ್ನು ರಕ್ಷಿಸು” ಎಂದು ಅರ್ಚಕರು ಪ್ರಾರ್ಥಿಸಿದಾಗ, ಶಿವಲಿಂಗದ ಬಲಭಾಗದಿಂದ ಹೂವು ಬಿದ್ದಿದೆ. ಇದಾದ ನಂತರ, ಅರ್ಚಕರು ಮತ್ತೆ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

ಇಲ್ಲಿನ ಜನರ ನಂಬಿಕೆ : ಕರಾವಳಿ ಭಾಗದ ಹಲವು ದೇವಾಲಯಗಳಲ್ಲಿ ದೇವರ ಮೇಲೆ ಹೂವನ್ನು ಇಟ್ಟು ಪ್ರಶ್ನೆ ಕೇಳುವ ಪದ್ದತಿಯಿದೆ. ಬಲಭಾಗದಿಂದ ಹೂವು ಬಿದ್ದರೆ ಶುಭ, ಎಡಭಾಗದಿಂದ ಹೂವು ಬಿದ್ದರೆ, ಕೆಲಸ/ಪ್ರಾರ್ಥನೆ ಕೈಗೂಡುವುದಿಲ್ಲ ಎನ್ನುವುದು ಇಲ್ಲಿನ ಜನರ ನಂಬಿಕೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)