ಧಾರ್ಮಿಕ-ಸಾಂಸ್ಕೃತಿಕ ಮಹತ್ವದ ಕರಾವಳಿಯ ಜನಪದರ ಮಹಾಸತಿ ಆರಾಧನೆ : ಬೈಂದೂರು ಚಂದ್ರಶೇಖರ ನಾವಡ

0
211

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನಾಗ,ಭೂತ,ದೈವಾರಾಧನೆಯ ಜತೆಯಲ್ಲಿ ಭೂತದ ಕೋಲ,ಯಕ್ಷಗಾನ, ಢಕ್ಕೆ ಬಲಿ, ನಾಗಮಂಡಲದಂತಹ ಕಲೆ ಹಾಗೂ ಭಕ್ತಿಯ ಸಂಗಮದ ವರ್ಣರಂಜಿತ ಪರಂಪರೆ ಕರಾವಳಿ ಜಿಲ್ಲೆಗಳ ಜನರ ಬದುಕಿನಲ್ಲಿ ನೂರಾರು ವರ್ಷಗಳಿಂದ ಹಾಸುಹೊಕ್ಕಾಗಿದೆ. ಮಹಾಸತಿ ಮತ್ತು ವೀರಗಲ್ಲುಗಳ ಆರಾಧನೆಯೂ ಇಲ್ಲಿನ ಜನಪದರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಭಟ್ಕಳ ತಾಲೂಕಿನ ಸೋಡಿಗದ್ದೆ, ಕೊಲ್ಲೂರು ಬಳಿ ಚುಟ್ಟಿಬೇರು ಹಾಗೂ ಬೈಂದೂರಿನ ಯಡ್ತರೆ ಗ್ರಾಮದಲ್ಲಿರುವ ಮಹಾಸತಿ ಇಂದಿಗೂ ಗ್ರಾಮೀಣರ ಬದುಕಿಗೆ ಸಾತ್ವಿಕ ಶಕ್ತಿಯ ಸೆಲೆಯಾಗಿ ಮಹತ್ವವನ್ನು ಉಳಿಸಿಕೊಂಡಿವೆ.

ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಾವಿರಾರು ಕುಟುಂಬಗಳು ವರ್ಗದ ಮನೆ ಅಥವಾ ಕುಟುಂಬದ ದೈವವೆಂದು ಆರಾಧಿಸುವ ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ  ಸುಮಾರು 400 ವರ್ಷಗಳ ಹಿಂದೆ ಭಟ್ಕಳ ತಾಲೂಕಿನ ಹಾಡುವಳ್ಳಿ ಮನೆತನದ ರಾಣಿ ಚನ್ನಬೈರಾದೇವಿಯಿಂದ ಆರಾಧಿಸಲ್ಪಟ್ಟ ಶಕ್ತಿ ಸ್ಥಳವೆಂದು ಹೇಳಲಾಗುತ್ತದೆ. ವತ್ತಿನೆಣೆ ಗುಡ್ಡದ ಇಳಿಜಾರಿನಲ್ಲಿ ನೆಲೆಸಿದ ಕಾರಣಕ್ಕಾಗಿ ವತ್ತಿನಕಟ್ಟೆ ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿದೆ. ರಾಷ್ಟ್ರೀಯ ಹೆದ್ದಾರಿ 66 ರ ಸಮೀಪದಲ್ಲೇ ಇರುವ ಮಹಾಸತಿ ನಂಬಿದವರ ಇಷ್ಟಾರ್ಥ ನಡೆಸಿ ಕೊಡುವ ದೈವ  ಎನ್ನುವ ಮಾನ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ರಚನೆಯ ಪೂರ್ವದಲ್ಲಿ ದಾರಿಹೋಕರು ದೇವಿಯನ್ನು ಆರಾಧಿಸಿಯೇ ಮುಂದೆ ಸಾಗುತ್ತಿದ್ದರೆನ್ನುವ ಕಾರಣದಿಂದ ಹಾದಿ ಮಾಸ್ತಿ ಎಂದೂ ಹಿಂದೆ ಕರೆಯಲ್ಪಟ್ಟಿತ್ತು.

 ಇಂದಿನಂತೆ ಸರಿಯಾದ ವಾಹನ ಸೌಲಭ್ಯ ಇಲ್ಲದ ಕಾಲದಲ್ಲೂ ಭಟ್ಕಳ, ಹೊನ್ನಾವರ,ಶಿರಸಿ ಸಹಿತ ಉತ್ತರ ಕನ್ನಡದ ಭಕ್ತಾದಿಗಳು  ವರ್ಷದಲ್ಲಿ ಒಮ್ಮೆಯಾದರೂ ಶ್ರೀ ದೇವಿಯ ಯಾತ್ರೆ ಕೈಗೊಳ್ಳಲೇಬೇಕು ಎನ್ನುವ ನಿಯಮವನ್ನು ತಲೆ ತಲಾಂತರಗಳಿಂದ ಪಾಲಿಸಿಕೊಂಡು ಬಂದಿದ್ದರು. ಕೃಷಿ, ಮೀನುಗಾರಿಕೆ, ವ್ಯಾಪಾರ ಹೀಗೆ ತಾವು ಮಾಡುವ ಉದ್ಯೋಗದಲ್ಲಿ ಯಶಸ್ಸು ಸಿಗಲೆಂದು ಭಕ್ತಿ ಭಾವದಿಂದ ಬೇಡಿಕೊಂಡು ಪೂಜೆ ಸಲ್ಲಿಸಿ ಮನಶಾಂತಿ,ಸ್ಥೈರ್ಯ ಪಡೆಯುವುದು ಇಲ್ಲಿನ ವಾಡಿಕೆ. ಭಕ್ತರು  ಸಂತಾನ ಭಾಗ್ಯ, ಆರೋಗ್ಯ, ಸುಖ-ಶಾಂತಿ ಪ್ರಾಪ್ತಿಗಾಗಿ ಮರದ ಗೊಂಬೆ(ಬೊಂಬೆ),ಮರದ ಅಥವಾ ಬೆಳ್ಳಿಯ ತೊಟ್ಟಿಲು, ತುಲಾಭಾರ, ವಾರ್ಷಿಕ ಹಾಲು ಹಬ್ಬದಲ್ಲಿ ಕೆಂಡ ಮೆಟ್ಟುವ ಸೇವೆಯ ಹರಕೆ ಕಟ್ಟಿಕೊಳ್ಳುತ್ತಾರೆ.

ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನ ವಿಶೇಷಾಲಂಕಾರ ಪೂಜೆ, ದರ್ಶನ ಸೇವೆ, ರಾತ್ರಿ ಗೆಂಡ ಸೇವೆ ಹಾಗೂ ಮರು ದಿನ ಹಾಲು ಹಬ್ಬದ ಅಂಗವಾಗಿ ಊರ-ಪರವೂರ ಭಕ್ತಾದಿಗಳಿಂದ ಹಣ್ಣು-ಕಾಯಿ, ಪೂಜೆ ಸಲ್ಲಿಸುವ ಕ್ರಮವಿದೆ. ಫ್ರೆಬ್ರವರಿ ತಿಂಗಳಿನಲ್ಲಿ ವರ್ದಂತಿ, ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮೀ ವ್ರತ, ನವರಾತ್ರಿಯಲ್ಲಿ 10 ದಿನ ಚಂಡಿಕಾಹೋಮ, ವಿಶೇಷಪೂಜೆ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಹತ್ತಿರದಲ್ಲೇ ಇರುವ ನಾಗನ ಸನ್ನಿಧಿಯಲ್ಲಿ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ವಿಜ್ರಂಭಣೆಯಿಂದ ನೆರವೇರಿಸಿಕೊಂಡು ಬರಲಾಗುತ್ತಿದೆ.

2010ರಲ್ಲಿ ನೂತನ ಶಿಲಾಮಯ ಗರ್ಭಗುಡಿಯನ್ನು ನಿರ್ಮಿಸಿ ಶಕ್ತಿ ದೇವತೆಯ ಸನ್ನಿಧಿಗೆ ಮತ್ತಷ್ಟು ಕಳೆ ನೀಡಲಾಗಿದೆ. 2012ರಲ್ಲಿ ಶತಚಂಡಿಕಾಯಾಗ, 2014ರಲ್ಲಿ ಮಹಾರುದ್ರಹೋಮ, 2015ರಲ್ಲಿ ನಾಗಬನ ಜೀಣೋದ್ಧಾರ, 2016ರಲ್ಲಿ ಲಕ್ಷಮೋದಕ ಹೋಮ ಹಾಗೂ ನಾಗಮಂಡಲೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರೀ ಕ್ಷೇತ್ರ ಉಡುಪಿ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲೊಂದಾಗಿ ಗುರುತಿಸಿಕೊಂಡಿದೆ.  2018ರಲ್ಲಿ ದಶಕುಂಡಗಳಲ್ಲಿ ಶತಚಂಡಿಕಾ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಲೆ-ಸಂಸ್ಕ್ರತಿಯನ್ನು ಪೋಷಿಸುವ ಕೆಲಸದಲ್ಲೂ ಶ್ರೀ ಮಹಾಸತಿ ಅಮ್ಮನವರ ಸೇವಾ ಸಮಿತಿ ತೊಡಗಿಸಿಕೊಂಡಿದೆ. ಪ್ರಕೃತಿಯ ಮಡಿಲಲ್ಲಿರುವ ವತ್ತಿನಕಟ್ಟೆ ಯಲ್ಲಿ ಇದೇ ಬರುವ ಫೆ 16-18 ರಂದು ಭಜನಾ ಕಮ್ಮಟ, ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ತಿರುಪತಿಯ ಆಚಾರ್ಯರಿಂದ ದಾಸ ಸಾಹಿತ್ಯ ಶೈಲಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)