ಕರಾವಳಿಗೆ ಹತ್ತಿರವಾದ ಬೆಂಗಳೂರು

0
357

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (2) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ/ ಉಡುಪಿ: ಬೆಂಗಳೂರಿನಿಂದ ಕರಾವಳಿಯತ್ತ ಬರುವ ಜನರ ಅನುಕೂಲಕ್ಕಾಗಿ ಬೆಂಗಳೂರು – ಕಾರವಾರ- ವಾಸ್ಕೋ ಹೊಸ ವಿಶೇಷ ರೈಲನ್ನು ರೈಲ್ವೇ ಇಲಾಖೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಘೋಷಿಸಿದ್ದಾರೆ. ಈ ಹೊಸ ರೈಲಿನ ವೇಳಾಪಟ್ಟಿ ಮತ್ತು ಇನ್ನಿತರ ತಾಂತ್ರಿಕ ಗೊಂದಲ ನಿವಾರಣೆಯಾಗಿದ್ದು, ಸಂಚಾರ ಆರಂಭಕ್ಕೆ ಸಚಿವರಿಂದ ಹಸಿರು ನಿಶಾನೆಯಷ್ಟೇ ಬಾಕಿ ಇದೆ.

ಕರಾವಳಿಯ ಅದರಲ್ಲೂ ಉಡುಪಿ, ಕುಂದಾಪುರ, ಬೈಂದೂರು, ಕಾರವಾರ ಭಾಗದ ಜನರ ಅನುಕೂಲಕ್ಕಾಗಿ ಉತ್ತಮ ವೇಳಾಪಟ್ಟಿಯ ಹೊಸ ರೈಲಿಗಾಗಿ ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಈ ಹಿಂದೆ ಬೇಡಿಕೆ ಸಲ್ಲಿಸಿತ್ತು. ಅದಕ್ಕೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ರೈಲ್ವೇ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರು ಮಂಗಳೂರಿನ ಪಡೀಲ್‌ ಮಾರ್ಗವಾಗಿ ಬೆಂಗಳೂರಿನಿಂದ ಗೋವಾದ ವಾಸ್ಕೋಗೆ ಸಂಚರಿಸಲಿರುವ ಹೊಸ ರೈಲ(ರೈಲು ಸಂಖ್ಯೆ: 06587-06588)ನ್ನು ಕೊಡುಗೆಯಾಗಿ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸಭೆ : ರೈಲಿನ ಘೋಷಣೆಯಾದರೂ ವೇಳಾಪಟ್ಟಿ ಬಗ್ಗೆ ಸಮಿತಿಯು ತೀವ್ರ ಆಕ್ಷೇಪ ಹೊಂದಿದ್ದುದರಿಂದ ನೈಋತ್ಯ ರೈಲ್ವೇ ವಲಯದ ಮುಖ್ಯಸ್ಥರಾದ ಎ.ಕೆ. ಸಿಂಗ್‌ ಅವರನ್ನು ಹುಬ್ಬಳ್ಳಿಯಲ್ಲಿ ಸೋಮವಾರ ಭೇಟಿ ಮಾಡಿ ಚರ್ಚೆ ನಡೆಸಿತ್ತು.

ಈ ವೇಳೆ ಎ.ಕೆ. ಸಿಂಗ್‌ ಮತ್ತು ವಲಯದ ನಿಯಂತ್ರಕ ಹರಿಶಂಕರ್‌ ವರ್ಮ ನೇತೃತ್ವದ ತಂಡವು ಸಮಿತಿಗೆ ಹಲವು ತಾಂತ್ರಿಕ ತೊಂದರೆಗಳ ಬಗ್ಗೆ ವಿವರಿಸಿದರು. ಈಗ ತಾತ್ಕಾಲಿಕವಾಗಿ ವೇಳಾಪಟ್ಟಿ ತಯಾರಿಸಲಾಗಿದ್ದು, ಇನ್ನೂ ಅನುಕೂಲಕರ ರೀತಿಯಲ್ಲಿ ಪರಿಷ್ಕರಿಸಲಾಗುವುದು ಎಂದು ನೈಋತ್ಯ ರೈಲ್ವೇ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಸಂಸದೆ ಟ್ವೀಟ್‌ : ರೈಲ್ವೇ ಸಚಿವ ಸುರೇಶ್‌ ಅಂಗಡಿ ಹೊಸ ವಿಶೇಷ ರೈಲನ್ನು ಮಂಜೂರು ಗೊಳಿಸಿದ ವಿಚಾರವನ್ನು ಸಂಸದೆ ಶೋಭಾ ಕರಂದ್ಲಾಜೆ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ರೈಲು ಪ್ರಯಾಣಿಕರ ಸಮಿತಿಯ ಪ್ರಯತ್ನವನ್ನು ಸ್ಮರಿಸಿಕೊಂಡಿದ್ದಾರೆ.

ಕಾಯುವಿಕೆ ತಪ್ಪುತ್ತದೆ : ಈ ರೈಲು ಪಡೀಲ್‌ ಬೈಪಾಸ್‌ ಮೂಲಕ ಉಡುಪಿಯತ್ತ ಸಾಗುವುದ ರಿಂದ ಮಂಗಳೂರು ಸೆಂಟ್ರಲ್‌ ಮತ್ತು ಜಂಕ್ಷನ್‌ ನಿಲ್ದಾಣಗಳಲ್ಲಿ ಎರಡೂವರೆ ತಾಸಿಗೂ ಅಧಿಕ ಹೊತ್ತು ಅನಗತ್ಯ ಕಾಯುವಿಕೆಯನ್ನು ತಪ್ಪಿಸುತ್ತದೆ. ಬೆಂಗಳೂರಿನಲ್ಲಿರುವ ಕರಾವಳಿಯ ಜನತೆ ಕಡಿಮೆ ಸಮಯದಲ್ಲಿ ತಮ್ಮ ಊರನ್ನು ತಲುಪಲು ಅನುಕೂಲ ಮಾಡಿಕೊಡಲಿದೆ.

ಹುಬ್ಬಳ್ಳಿಗೆ ಭೇಟಿ ನೀಡಿದ ನಿಯೋಗದಲ್ಲಿ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್‌ ಪುತ್ರನ್‌, ಕಾರ್ಯದರ್ಶಿ ಪ್ರವೀಣ್‌ ಮತ್ತು ಸಂಚಾಲಕ ವಿವೇಕ್‌ ನಾಯಕ್‌, ಗೌತಮ್‌ ಶೆಟ್ಟಿ, ಉ. ಕನ್ನಡ ಸಮಿತಿಯ ಮತ್ತು ಕೊಂಕಣ ರೈಲ್ವೇ ಸಲಹಾ ಸದಸ್ಯ ರಾಜೀವ ಗಾಂವಕರ್‌, ಸದಸ್ಯರಾದ ಧರ್ಮಪ್ರಕಾಶ್‌, ಜೋಯ್‌ ಕರ್ವಾಲೋ ಉಪಸ್ಥಿತರಿದ್ದರು.

ವೇಳಾಪಟ್ಟಿ
ಹೊರಡುವ ನಿಲ್ದಾಣ: ಯಶವಂತಪುರ, ಬೆಂಗಳೂರು
ಸಮಯ: ಪ್ರತಿದಿನ ಸಂಜೆ 6.45
ಮಾರ್ಗ: ಹಾಸನ, ಸುಬ್ರಹ್ಮಣ್ಯ ಮೂಲಕ ಬೆಳಗ್ಗೆ 3.30: ಪಡೀಲ್‌, ಬೆಳಗ್ಗೆ 4.10: ಸುರತ್ಕಲ್‌, 4.50: ಉಡುಪಿ, 5.20: ಕುಂದಾಪುರ, 5.40: ಬೈಂದೂರು, 8.30: ಕಾರವಾರ, 10.30: ವಾಸ್ಕೋ.
ಮರುಪ್ರಯಾಣ
ಹೊರಡುವ ನಿಲ್ದಾಣ: ವಾಸ್ಕೋ
ಸಮಯ: ಸಂಜೆ 4.40
ಮಾರ್ಗ: ಸಂಜೆ 7: ಕಾರವಾರ, ರಾತ್ರಿ 10.33: ಬೈಂದೂರು, ರಾತ್ರಿ 10.55: ಕುಂದಾಪುರ, ರಾತ್ರಿ 11.25: ಉಡುಪಿ, 12.20: ಪಡೀಲ್‌, ಬೆಳಗ್ಗೆ 9: ಯಶವಂತಪುರ.

ಕರಾವಳಿಯ ಬಹುಕಾಲದ ಕನಸು ನನಸಾಗಿದೆ. ಈ ಬಗ್ಗೆ ಸಚಿವ ಸುರೇಶ್‌ ಅಂಗಡಿ, ನೈಋತ್ಯ ರೈಲ್ವೇಯ ಅಧಿಕಾರಿಗಳು, ಕುಂದಾಪುರ ಮತ್ತು ಉಡುಪಿ ರೈಲ್ವೇ ಸಮಿತಿಯವರು ಅಪಾರವಾಗಿ ಶ್ರಮಿಸಿದ್ದಾರೆ. ಕರಾವಳಿಯ ಮತ್ತಷ್ಟು ಬೇಡಿಕೆಗಳನ್ನು ಈಡೇರಿಸಲು ಯತ್ನಿಸಲಾಗುವುದು. – ಶೋಭಾ ಕರಂದ್ಲಾಜೆ, ಸಂಸದೆ

ಸಮಿತಿಯೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಸುರೇಶ್‌ ಅಂಗಡಿ, ರಾಜ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ, ಸಚಿವ ಪ್ರಹ್ಲಾದ್‌ ಜೋಶಿ, ಕುಮಟ ಶಾಸಕ ದಿನಕರ್‌ ಶೆಟ್ಟಿ, ಸಂಸದ ಅನಂತ್‌ ಕುಮಾರ್‌ ಹೆಗಡೆ ಮತ್ತು ಎಲ್ಲರ ಸಂಘಟಿತ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಈಗಾಗಲೇ ಸಂಚರಿಸುತ್ತಿರುವ ಹಳೆಯ ಬೆಂಗಳೂರು -ಕಾರವಾರ ರೈಲು ಹಳೆಯ ವೇಳಾಪಟ್ಟಿಯಂತೆಯೇ ಸಂಚರಿಸಲಿದೆ. ಕರಾವಳಿ ಜನರಿಗೆ ಕಡಿಮೆ ವೆಚ್ಚದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಈ ಎರಡು ರೈಲುಗಳು ಅನುಕೂಲವಾಗಿದೆ. – ಗಣೇಶ್‌ ಪುತ್ರನ್‌ ಅಧ್ಯಕ್ಷರು, ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ

ಕೃಪೆ : ಉದಯವಾಣಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (2) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)