ಕೌಟುಂಬಿಕ ಮೌಲ್ಯ ಪ್ರತಿಪಾದನೆಯ ಮೂಲಕ ಪ್ರೇಕ್ಷಕರ ಮನ ಗೆದ್ದ ಪೆರ್ಡೂರು ಮೇಳದ ‘ಸೂರ್ಯಸಂಕ್ರಾಂತಿ’

0
409

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)


ಯಕ್ಷಗಾನ ಪ್ರಸಂಗದಲ್ಲಿ ಮೌಲ್ಯ, ಗಟ್ಟಿ ಕಥಾವಸ್ತು, ನವರಸಗಳ ಅಭಿವ್ಯಕ್ತಿಗೆ ವಿಫುಲ ಅವಕಾಶಗಳಿದ್ದಾಗ ಆ ಪ್ರಸಂಗ ಮನಸ್ಸುಗಳನ್ನು ಅರಳಿಸುತ್ತದೆ. ಸಮಷ್ಟಿ ಕಲೆಯೆನಿಸಿಕೊಂಡ ಯಕ್ಷಗಾನದಲ್ಲೂ ಕೂಡಾ ಒಟ್ಟು ಮನೋರಂಜನೆಯನ್ನು ಪರಿಗಣಿಸಿದಾಗ ಕಥೆ ಮತ್ತು ಸಾಹಿತ್ಯದೊಂದಿಗೆ ಕಲಾವಿದರು ಪಾತ್ರಗಳನ್ನು ಸಚೇತನಗೊಳಿಸುವಿಕೆಯಿಂದ ಪ್ರಸಂಗ ಯಶಸ್ಸು ಪಡೆಯುತ್ತದೆ. ಯಕ್ಷಗಾನ ಎಂದರೆ ಅದ್ಬುತ, ನಿರೀಕ್ಷೆಗೂ ಮೀರಿದ್ದು ಎನ್ನುವ ಭಾವನೆ ಇದೆ. ಕಲ್ಪನೆಗೂ ನಿಲುಕದ ಅದ್ಬುತಗಳು ಸೃಷ್ಟಿಯಾಗುವುದು ಯಕ್ಷಗಾನದಲ್ಲಿ. ಆ ಹಿನ್ನೆಲೆಯಲ್ಲಿ ಪೆರ್ಡೂರು ಮೇಳದವರ ದ್ವಿತೀಯ ಪ್ರಸಂಗವಾಗಿ ಪ್ರದರ್ಶನಗೊಳ್ಳುತ್ತಿರುವ ‘ಸೂರ್ಯ ಸಂಕ್ರಾಂತಿ’ ವಿಭಿನ್ನ ಕಥಾವಸ್ತು, ಜೋಶ್ ನೀಡಬಲ್ಲ ಪದ್ಯಗಳಿಂದ ಕಲಾಭಿಮಾನಿಗಳ ಹೃನ್ಮನಗಳಲ್ಲಿ ಉಳಿದು ಬಿಡುತ್ತದೆ.

‘ಸೂರ್ಯ ಸಂಕ್ರಾಂತಿ’ ಪ್ರಸಂಗದ ಕಥಾಕರ್ತರು ಮಣೂರು ವಾಸುದೇವ ಮಯ್ಯರು. ಪದ್ಯ ಸಾಹಿತ್ಯ ಒದಗಿಸಿದವರು ಪ್ರಸಾದ್ ಕುಮಾರ್ ಮೊಗೆಬೆಟ್ಟು. ಕೌಟುಂಬಿಕ ಮೌಲ್ಯಗಳನ್ನು ಪ್ರತಿಪಾದಿಸುವ, ಸ್ನೇಹದ ಅರ್ಥವನ್ನು ಉನ್ನತೀಕರಿಸುವ, ಮನುಷ್ಯರೊಳಗಿನ ಕ್ರೋಧದ ಅನರ್ಥವನ್ನು ಅನಾವರಣಗೊಳಿಸುವ, ಪ್ರೇಮದ ಪಾವಿತ್ರ್ಯವನ್ನು ನಿರೂಪಿಸುವ, ದೇಶಭಕ್ತಿಯನ್ನು ಉದ್ದೀಪನಗೊಳಿಸುವಂಥಹ ಬಹುಮೌಲಿಕತೆಯನ್ನು ಒಳಗೊಂಡ ಪ್ರಸಂಗ ಪ್ರಥಮ ಪ್ರಯೋಗದಲ್ಲಿಯೇ ಮುಕ್ತ ಪ್ರಶಂಸೆ ಪಡೆದುಕೊಂಡಿದೆ.

ಪುಷ್ಪಪಾವನ ನಗರದ ಚಕ್ರವರ್ತಿ ಸೇತುಪತಿ ಮಹಾರಾಜನು ರಾಜವಂಶದ ಪರಂಪರೆಯಂತೆ 25 ವರ್ಷಕ್ಕೊಮ್ಮೆ ಬರುವ ‘ಸೂರ್ಯಸಂಕ್ರಾಂತಿ’ ಉತ್ಸವದಲ್ಲಿ ರಾಜವಂಶದ ಹೆಣ್ಣುಮಗಳಿಂದಲೇ ಚಂದ್ರದ್ರೋಣ ಪರ್ವತದಲ್ಲಿ ದೀಪ ಬೆಳಗಿಸುವ ಕ್ರಮ, ಇದು ಅರಸನ ರಾಜವಂಶದ ಏಳ್ಗೆಯ ಗುಟ್ಟು ಆಗಿರುತ್ತದೆ. ಈ ನಿಮಿತ್ತ ಒಂದು ಸೂರ್ಯಸಂಕ್ರಾಂತಿ ಕಳೆದು ಮತ್ತೆ ಒದಗುವ ಮತ್ತೊಂದು ಸೂರ್ಯಸಂಕ್ರಾಂತಿಯ ಒಳಗಿನ ಕಥೆ ಸೂರ್ಯಸಂಕ್ರಾಂತಿ. ಸನ್ಯಾಸಧರ್ಮ ಇಚ್ಛಿಸುವ ರಾಜಕುಮಾರ ಪವಿತ್ರ ಪ್ರೇಮಬಂಧನ ಗ್ರಹಸ್ಥ ಧರ್ಮ ಅನುಸರಿಸಿ, ಮತ್ತೆ ಯತಿಧರ್ಮ ಪಾಲಿಸುವುದು, ಭಾತೃತ್ವಕ್ಕಿಂತಲೂ ಸ್ನೇಹವೇ ಶ್ರೇಷ್ಠವೆಂದು ಗೆಳೆಯರು ನಿರೂಪಿಸುವುದು, ತಂದೆಯ ದುರ್ವರ್ತನೆಗೆ ಛಲವಾದಿ ಹೆಣ್ಣು ಮಗಳು ಪ್ರತ್ಯೇಕ ಸಾಮ್ರಾಜ್ಯ ಕಟ್ಟಿ ಆಳುವುದು, ಛಿದ್ರವಾದ ಸಂಸಾರ, ಕುಟುಂಬ ಸೂತ್ರವನ್ನು ರಾಜವಂಶದ ಅರಸನ ಮೊಮ್ಮಗ ಒಂದುಗೂಡಿಸುವುದು ಸೂರ್ಯಸಂಕ್ರಾಂತಿಯ ಕಥಾಂಶ.

ಪ್ರೇಕ್ಷಕರಿಗೆ ಏಕತಾನತೆ ಉಂಟು ಮಾಡದೆ, ಕ್ಷಣ-ಕ್ಷಣಕ್ಕೂ ವಿಭಿನ್ನ ತಿರುವು ಪಡೆದುಕೊಳ್ಳುವ, ಹೊಸ ವೇಷ-ಸನ್ನಿವೇಶದೊಂದಿಗೆ ಆದಿಯಿಂದ ಅಂತ್ಯದ ತನಕವೂ ಸಾಗುವ ಕಥೆ ರಂಜನೆ ನೀಡುತ್ತದೆ. ಛಂದೋಬದ್ದ ಸಾಹಿತ್ಯದಲ್ಲಿರುವ ಪದ್ಯಗಳು, ನವೀನ ಸಾಹಿತ್ಯದ ಝಲಕ್‍ನಲ್ಲಿ ಮೋಡಿ ಮಾಡುತ್ತದೆ. ಕಥೆಯ ಉದ್ದಕ್ಕೂ ಬರುವ ಪಾತ್ರಗಳ ಹೆಸರುಗಳು ಕೂಡಾ ಅಪರೂಪದ್ದಾಗಿದೆ.

ಜಲವಳ್ಳಿ ವಿದ್ಯಾಧರ ರಾವ್ ಅವರ ಸುಪ್ರತೀತ, ಥಂಡಿಮನೆ ಶ್ರೀಪಾದ ಭಟ್ಟರ ಸೇತುಪತಿ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರ ಕಥಾನಾಯಕಿ ಪಯಸ್ವಿನಿ, ರಮೇಶ ಭಂಡಾರಿಯವರ ಬಡ್ಡಿ ವ್ಯಾಪಾರಿ ಚರಣಮೂರ್ತಿ ಹಾಗೂ ಪಾರುಪತ್ಯದ ತ್ರಿಪಾಲ, ಕಿರಾಡಿ ಪ್ರಕಾಶ್ ಮೊಗವೀರರ ಯಶೋಧರ, ತೊಂಭಟ್ಟು ವಿಶ್ವನಾಥ ಆಚಾರ್ಯರ ಅಭಿನಂದನ, ಕಾರ್ತಿಕ ಹೆಗಡೆ ಚಿಟ್ಟಾಣಿಯವರ ವರ್ಧಮಾನ ಕಲಾರಸಿಕರ ಹೃನ್ಮನಗಳಲ್ಲಿ ನಿಲ್ಲುವ ಪಾತ್ರಗಳು. ರವೀಂದ್ರ ದೇವಾಡಿಗ-ಪುರಂದರ ಮುಡ್ಕಣಿಯವರ ಹಾಸ್ಯ ಜೋಡಿ ಪ್ರಶಂಸನೀಯ, ವಿಜಯ ಗಾಣಿಗ ಬೀಜಮಕ್ಕಿ, ನಾಗರಾಜ ಕುಂಕಿಪಾಲ, ನಾಗರಾಜ ದೇವಲ್ಕುಂದ ಇವರ ಸ್ತ್ರೀಪಾತ್ರಗಳು, ಮಾಗೋಡು ಅಣ್ಣಪ್ಪ, ವಿನಾಯಕ ಗುಂಡಬಾಳ, ಸನ್ಮಯ್ ಭಟ್ ಮೊದಲಾದವರ ಪಾತ್ರಗಳ ಕಲಾಭಿವ್ಯಕ್ತಿ ಯಶಸ್ಸಿಗೆ ಪೂರಕ.

ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯರ ಸುಮಧುರ ಕಂಠದಲ್ಲಿ ಮೊಗೆಬೆಟ್ಟು ಸಾಹಿತ್ಯ ಅರಳಿಕೊಳ್ಳುವ ಪರಿ ರಸರೋಚಕ. ಆರಂಭದಲ್ಲಿ ಭಾಗವತ ಬಾಳ್ಕಲ್ ಪ್ರಸನ್ನ ಭಟ್ ಅವರು ಉತ್ತಮ ವೇಗ ನೀಡುತ್ತಾರೆ. ಚಂಡೆಯಲ್ಲಿ ಸುಜನ್ ಹಾಲಾಡಿ, ರವಿ ಆಚಾರ್ಯ ಕಾಡೂರು, ಮದ್ದಳೆಯಲ್ಲಿ ಸುನಿಲ್ ಭಂಡಾರಿ, ಶಶಿಕುಮಾರ್ ಆಚಾರ್ಯ ಶಕ್ತಿಮೀರಿದ ಸಾಥ್ ನೀಡುತ್ತಾರೆ. ಸರ್ವ ಕಲಾವಿದರ ಸಾಂಘಿಕ ಶ್ರಮ ಯಶದ ಹಿನ್ನೆಲೆಯಾಗಿದೆ.

ಪೆರ್ಡೂರು ಮೇಳದ ಯಜಮಾನರಾದ ವೈ.ಕರುಣಾಕರ ಶೆಟ್ಟರ ವಿಶೇಷ ಮಾರ್ಗದರ್ಶನ, ಮೇಳದ ಪ್ರಬಂಧಕರಾದ ಸುಬ್ರಹ್ಮಣ್ಯ ಶಾಸ್ತ್ರಿಗಳ ಸಹಕಾರ, ಮೇಳದ ಪ್ರಧಾನ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯರ ರಂಗ ನಿರ್ದೇಶನದಲ್ಲಿ ಪ್ರಸಂಗ ಗೆಲುವು ಸಾಧಿಸಿದೆ. ಮೇಳದ ಸರ್ವ ಹಿಮ್ಮೇಳ-ಮುಮ್ಮೇಳ ಕಲಾವಿದರ ಸಾಂಘಿಕ ಪ್ರಯತ್ನ ಪ್ರಸಂಗದ ಯಶೋಗಾಥೆಯ ಪ್ರಮುಖಾಂಶ. ರಂಗ ನಿರ್ದೇಶಕ ರಮೇಶ್ ಬೇಗಾರ್, ರಶ್ಮಿ ಹೇರ್ಳೆ, ಸುಬ್ರಹ್ಮಣ್ಯ ಆಚಾರ್ಯ ಮೊದಲಾದವರ ನೇಪಥ್ಯ ಸಹಕಾರ ಪ್ರಸಂಗದ ಯಶಸ್ಸಿನಲ್ಲಿ ಗಮನಾರ್ಹ.
ಪೆರ್ಡೂರು ಮೇಳದ ಲೈಟಿಂಗ್ ಲೋಕೇಶರ ಧ್ವನಿ-ಬೆಳಕಿನ ಕೈ ಚಳಕ ಮರೆಯುವಂತಿಲ್ಲ. ಹೊಸ ಪ್ರಸಂಗವೆಂದಾಗ ನೂರಾರು ಗಿಮಿಕ್‍ಗಳ ಅವಶ್ಯಕತೆ ಇರುತ್ತದೆ. ಆದರೆ ಸೂರ್ಯ ಸಂಕ್ರಾಂತಿ ಯಕ್ಷಗಾನದ ಸೊಗಡಿನಲ್ಲಿಯೇ ಸಾಗುತ್ತಾ ಆಟ ನೋಡಲು ಕುಳಿತ ಪ್ರೇಕ್ಷಕರನ್ನು ಒಂದಿಷ್ಟು ಕದಲಿಸದೇ ಯಕ್ಷಲೋಕಕ್ಕೆ ಕೊಂಡೋಯ್ಯುತ್ತದೆ. ವಿಶೇಷವೆಂದರೆ ಪ್ರೌಢ ಕಲಾವಿದರ ಸಮ್ಮೀಳಿತ, ಕಥೆಯಲ್ಲಿನ ಕುತೂಹಲಕಾರಿ ಸನ್ನಿವೇಶಗಳು ಗಮನೀಯ. ಮಣೂರು ವಾಸುದೇವ ಮಯ್ಯರ ಸೂರ್ಯಸಂಕ್ರಾಂತಿ ಯಶಸ್ವಿ ಪ್ರಸಂಗವಾಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ -ನಾಗರಾಜ್ ಬಳಗೇರಿ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)