ಕೆರೆಮನೆ ಪ್ರತಿಷ್ಠಾನದ “ಬ್ರಾಂಡ್ ಪ್ರಾಡಕ್ಟ್”- “ಅಭಿನೇತ್ರಿ” ನೀಲ್ಕೊಡು…

0
1118

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಯಕ್ಷಗಾನದ ತ್ರಿವಳಿ ಜಿಲ್ಲೆಗಳಲ್ಲಿ ಒಂದಾದ ಉತ್ತರ ಕನ್ನಡದ ಹೊನ್ನಾವರದ ನೀಲ್ಕೋಡು ಗ್ರಾಮೀಣ ಪ್ರದೇಶದ ಪ್ರತಿಭೆ ಇಂದು ಬಲವಾದ ಕನಸಿನೊಂದಿಗೆ ಮುಗಿಲೆತ್ತರಕ್ಕೆ ಹೆಜ್ಜೆ ಹಾಕುತ್ತಿದೆ. ಹೌದು.. ಪ್ರಸ್ತುತ ತೆಂಕು ಬಡಗು ಉಭಯ ತಿಟ್ಟುಗಳಲ್ಲಿ ತನ್ನದೇ ಛಾಪೊಂದನ್ನು ಮೂಡಿಸುತ್ತಿರುವ ನೀಲ್ಕೊಡು ಶಂಕರ ಹೆಗಡೆ ಸಮಕಾಲೀನ ಯಕ್ಷಗಾನ ಕಲಾವಿದರ ಪಾಲಿಗೆ ರೋಲ್ ಮಾಡೆಲ್. ಯಾರಾದ್ರೂ ಸ್ತ್ರೀ ಪಾತ್ರಧಾರಿಗಳ ಬಳಿ ನಿಮಗೆ ಯಾವ ಯಕ್ಷಗಾನ ಕಲಾವಿದ ಇಷ್ಟ ಎಂದು ಕೇಳಿದ್ರೆ ಕಲಾವಿದರ ಬಾಯಲ್ಲಿ ಕೇಳಿಬರೋ ಕೆಲವೇ ಕೆಲವು ಹೆಸರಲ್ಲೊಂದು ನೀಲ್ಕೋಡು ಶಂಕರ ಹೆಗ್ಡೆ.

ಹೊನ್ನಾವರದ ನೀಲ್ಕೊಡು, ಶಂಕರ್ ಹೆಗ್ಡೆಯವರ ಸ್ವಂತ ಊರು, ಹುಟ್ಟೂರು ಎಲ್ಲವೂ. ಇವರು ಹುಟ್ಟಿದ್ದು ಮೇ 9 1978 ಇವರ ತಂದೆ ವಿಶ್ವನಾಥ ಹೆಗ್ಡೆ, ತಾಯಿ ಪಾರ್ವತಿ ಹೆಗ್ಡೆ. ತಮ್ಮ ವಿದ್ಯಾಭ್ಯಾಸವನ್ನು ಎಸ್ ಕೆಪಿ ಸ್ಕೂಲ್ ಅರೆಯಂಗಡಿಯಲ್ಲಿ ಮುಗಿಸಿಕೊಂಡ ಇವರು ಪಿಯುಸಿಗೆ ವಿದ್ಯಾಭ್ಯಾಸ ನಿಲ್ಲಿಸಿ ವೃತ್ತಿ ಜೀವನವನ್ನು ಆರಿಸಿಕೊಳ್ತಾರೆ. ಮಣ್ಣಿನ ಗುಣ, ಕಲೆ, ಜಾನಪದ ಮನುಷ್ಯನ ಮೇಲೆ ಸಹಜವಾಗಿ ಪರಿಣಾಮ ಬೀರುವಂತೆ ಇವರನ್ನು ಬಹುವಾಗಿ ಆಕರ್ಷಿಸಿದ್ದು ಯಕ್ಷಗಾನ.. ಕೌಟುಂಬಿಕವಾಗಿ ಯಾವುದೇ ಯಕ್ಷಗಾನದ ಹಿನ್ನಲೆ ಇಲ್ಲದೇ ಹೋದರೂ, ಇವರು ಯಕ್ಷಗಾನ ಕ್ಷೇತ್ರದಲ್ಲಿ ನೆಲೆಯೂರಿದ್ದಷ್ಟೇ ಅಲ್ಲದೆ ಸದ್ಯ ಇವರ ಹೆಸರು ಎಲ್ಲೆಲ್ಲೂ ಶೈನಿಂಗ್.. ಅಂದ ಹಾಗೆ ನೀಲ್ಕೋಡು ಶಂಕರ ಹೆಗಡೆ ಕರ್ನಾಟಕದ ಪ್ರತಿಷ್ಠಿತ ಯಕ್ಷಗಾನ ಕೇಂದ್ರ ಕೆರೆಮನೆಯ ಶ್ರೀಮಯ ಕಲಾ ಕೇಂದ್ರದ ಬ್ರಾಂಡ್ ಪ್ರಾಡಕ್ಟ್.

ಸ್ತ್ರೀ ಪಾತ್ರವಿರಲಿ ಪುರುಷ ವೇಷವಿರಲಿ, ಸೌಮ್ಯ ಗುಣದ್ದಾಗಿರಲೀ ಇನ್ನೊಂದಿರಲಿ, ಯಾವ ಪಾತ್ರಕ್ಕೂ ಸೈ ಎನಿಸಿಕೊಳ್ಳಬಲ್ಲ ಕಲಾವಿದ ನೀಲ್ಕೊಡು, ತಾನೊಬ್ಬ ಭಾಗವತನಾಗಬೇಕೆಂದು ಬಯಸಿ ಸೇರಿದ್ದು ಶ್ರೀಮಯ ಕಲಾಕೆಂದ್ರಕ್ಕೆ.. ನಂತರ ಭಾಗವತಿಕೆಯಲ್ಲಿ ತಾನ್ಯಾಕೋ ಮುಂದುವರೆಯೋದು ಸಾಧ್ಯವಿಲ್ಲ ಎಂದೆನಿಸಿ ಯಕ್ಷಗಾನದ ಹೆಜ್ಜೆಗಳನ್ನು ಕಲಿಯೋದಕ್ಕೆ ಪ್ರಾರಂಭಿಸ್ತಾರೆ. ಇವರ ಪ್ರಾರಂಭದ ಗುರುಗಳು ಹೆರಂಜಾಲು ಗೋಪಾಲ ಗಾಣಿಗ, ವಿದ್ವಾನ್ ಗಣಪತಿ ಭಟ್.. ಎ ಪಿ ಪಾಠಕ್. ಮುಂದೆ ಕೆರೆಮನೆಯ ಇಡಗುಂಜಿ ಮೇಳದಲ್ಲಿ ಇವರ ಪ್ರಥಮ ವರ್ಷದ ತಿರುಗಾಟ ಪ್ರಾರಂಭವಾಗುತ್ತದೆ. ನಂತರ ಮಂದಾರ್ತಿ ಪೆರ್ಡೂರು ಮೇಳದಲ್ಲಿ 10 ವರ್ಷ, ಸೇರಿದಂತೆ ಇನ್ನಿತರ ಮೇಳಗಳಲ್ಲಿ ಒಟ್ಟು 22 ವರ್ಷಗಳ ಅನುಭವ ಇವರ ಜೋಳಿಗೆಯಲ್ಲಿದೆ. ಇದೀಗ 2020 ರಲ್ಲಿ ಮೊದಲ ಬಾರಿಗೆ *ಸಾಲಿಗ್ರಾಮ ಮೇಳಕ್ಕೆ* ಗ್ರಾಂಡ್ ಎಂಟ್ರಿ ನೀಡೋದರ ಮೂಲಕ 2 ನೇ ಇನ್ನಿಂಗ್ಸ್ ಮತ್ತೆ ಪ್ರಾರಂಭಿಸಿದ್ದಾರೆ.

ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗದೆ, ಎಲ್ಲ ರೀತಿಯ ಪಾತ್ರಗಳನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಕೌಶಲ್ಯ ಇವರದು. ಕೆಲ ವರ್ಷಗಳ ಹಿಂದೆ ಸಿನಿಮಾ ಕಥೆಯನ್ನಾಧರಿಸಿ ಮೂಡಿ ಬಂದ ದೇವದಾಸರ ಪ್ರಸಂಗ ನಾಗವಲ್ಲಿ ಇವರ ತಿರುಗಾಟದ ವೃತ್ತಿ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಎಂದೇ ಹೇಳಬಹುದು. ಅಲ್ಲಿಂದ ಯಶಸ್ಸಿನ ನಾಗಾಲೋಟಕ್ಕೆ ಶುರು ಮಾಡಿದ ನೀಲ್ಕೋಡು ಮತ್ತೆಂದೂ ಹಿಂದೆ ನೋಡಿಲ್ಲ. ಇವರ ಕೆಲಸಮಯಗಳ ಅನುಪಸ್ಥಿತಿ ಅಭಿಮಾನಿಗಳ ಪಾಲಿಗೆ ಖಾಲಿ ಖಾಲಿ ಎಂಬ ಭಾವನೆ ಹುಟ್ಟಿ ಹಾಕಿದ್ದು ಸುಳ್ಳಲ್ಲ.

ಟೆಂಟ್ ಮೇಳದಲ್ಲಿ ಈ ವರ್ಷ ಯಶಸ್ಸಿನ ಅಲೆ ಹುಟ್ಟು ಹಾಕಿದ ಪ್ರಸಂಗ ಸಾಲಿಗ್ರಾಮ ಮೇಳದ ದೇವದಾಸ ಈಶ್ವರ ಮಂಗಲರ ಚಂದ್ರಮುಖಿ ಸೂರ್ಯಸಖಿ. ಪ್ರಸಂಗದ ಪ್ರಮುಖ ಪಾತ್ರವಾಗಿರೊ ಸೂರ್ಯಸಖಿ ಹಲವಾರು ಕಾರಣಗಳಿಗಾಗಿ ಯಕ್ಷ ಪ್ರೇಮಿಗಳ ಗಮನ ಸೆಳೆದಿದೆ. ಜನರ ಮನಸಿನಲ್ಲಿ ನೆಲೆಯೂರಿದೆ. ಸೂರ್ಯಸಖಿಯ ಪಾತ್ರ ನೀಲ್ಕೋಡು ಅವರಿಗಾಗಿಯೇ ಸೃಷ್ಠಿ ಮಾಡಿದಂತಿದೆ, ಖಳನಾಯಕಿ ಚಂದ್ರಮುಖಿಗೆ ತದ್ವಿರುದ್ಧವಾಗಿರುವ ಸೌಮ್ಯ, ಶಾಂತ ಕರುಣೆಯ ಹೆಣ್ಣಾಗಿ ಸೂರ್ಯಸಖಿಯ ಪಾತ್ರ ಚಿತ್ರಿಣಗೊಂಡಿದೆ. ದುಷ್ಟಳಾದ ಚಂದ್ರಮುಖಿ ಕೆಟ್ಟದ್ದನ್ನೇ ಬಗೆದ್ರೂ ತನ್ನ ಒಳ್ಳೆಯ ಗುಣಗಳಿಂದಲೇ ಕೆಡುಕನ್ನು ಗೆಲ್ಲುವ ಸೂರ್ಯಸಖಿ ಪಾತ್ರದಲ್ಲಿ ನೀಲ್ಕೋಡು ಶಂಕರ್ ಹೆಗಡೆಯವರ ದೈತ್ಯ ಪ್ರತಿಭೆ ಮತ್ತೊಮ್ಮೆ ಅನಾವರಣಗೊಂಡಿದೆ. ಅಂದ ಹಾಗೆ ಈ ಅಭಿನೇತ್ರಿ ಮೊದಲು ವೇಷ ಹಾಕಿದ್ದು ಮಾಯಾ ಹಿಡಿಂಬೆಯಾಗಿ…
ಟೆಂಟ್ ಮೇಳಗಳಲ್ಲಿ ಕಲಾವಿದ ಜನರಿಗೆ ತಲುಪೋದು ಸಾಮಾಜಿಕ ಪ್ರಸಂಗಗಳ ಮೂಲಕ ಅನ್ನೋದು ಇವರ ಅಂಬೋಣ. ಇನ್ನು ಸಿನಿಮಾ ಶೈಲಿಯ ಹಾಡುಗಳು ಯಕ್ಷಗಾನದಲ್ಲಿ ಬಳಕೆಯಾಗುವುದರಿಂದ ಯಕ್ಷಗಾನಕ್ಕೆ ಯಾವುದೇ ರೀತಿಯ ಲೋಪಗಳಾಗಲಾರದು ಅನ್ನೋದು ಅವರ ಅನಿಸಿಕೆ.. ಕಲಾವಿದನ ಅಭಿಮಾನಕ್ಕಾಗಿ ಗುಂಪುಗಳನ್ನು ಮಾಡೋದು ಬೇಡ. ಯಕ್ಷಗಾನ ಕಲೆಗಾಗಿ ಒಂದು ಗುಂಪಾಗೋಣ ಎಂದು ಯಕ್ಷಪ್ರೇಮಿಗಳಲ್ಲಿ ವಿನಂತಿಸಿಕೊಳ್ತಾರೆ.

ಕೆರೆಮನೆ ಪ್ರತಿಷ್ಠಾನದಿಂದ ಯಕ್ಷಗಾನದ ಪ್ರದರ್ಶನಕ್ಕಾಗಿ ಸಿಂಗಾಪುರ್ ನ ಲಾವೊಸೆ, ಫಿಲಿಫೈನ್ಸ್ ನ ಬರ್ಮಾ, ದುಬೈ ನ ಬಹರೈನ್ ಯು ಎಸ್ ಎ ಮೊದಲಾದ ದೇಶಗಳನ್ನು ಪ್ರವಾಸ ಮಾಡಿದ್ದಷ್ಟೇ ಅಲ್ಲದೇ ಯಕ್ಷಗಾನದ ಕಂಪನ್ನು ಹೊರನಾಡಿನ ಮಣ್ಣಿನಲ್ಲಿ ಪಸರಿಸಿದ ಹಿರಿಮೆಯೂ ಇವರದು.

ಅಂದ ಹಾಗೆ ನೀಲ್ಕೋಡು ಅವರದು ಪ್ರೇಮ ವಿವಾಹ.. ಡಿಸೆಂಬರ್ 13 2009ರಲ್ಲಿ ಯಕ್ಷಗಾನದ ಕಲೆಯ ಆಸಕ್ತಿ ಎರಡು ಜೀವಗಳನ್ನು ಬೆಸೆಯುತ್ತೆ. ಇವರ ಪ್ರತಿಭೆಯನ್ನು ಮೆಚ್ಚಿ ಪ್ರೇಮಕ್ಕೆ ಬಿದ್ದವರು ತೃಪ್ತಿ ಶಂಕರ್ ಹೆಗಡೆ ಈ ಪ್ರೇಮ ಹಾಗೂ ದಾಂಪತ್ಯದ ಸಂಕೇತವಾಗಿ ದ್ಯುತಿ ಎಂಬ ಮುದ್ದಾದ ಮಗಳನ್ನು ಹೊಂದಿರುವ ಸಂತೃಪ್ತ ಕುಟುಂಬ ಇವರದು.

ಅಭಿನೇತ್ರಿ ಕನಸು : ಹೊನ್ನಾವರದಲ್ಲೊಂದು ಯಕ್ಷಗಾನ ಕಲಾವಿದರಿಗಾಗಿ, ಅವರ ಖಾಸಗಿ ಕಾರ್ಯಕ್ರಮಗಳಿಗಾಗಿ ಸಭಾಭವನ ನಿರ್ಮಾಣದ ಕನಸು, ಅಶಕ್ತ ಕಲಾವಿದರ ಪಾಲಿಗೆ ನೆರವಿನ ಹಸ್ತ ಚಾಚುವ ಕನಸು, ಕಲೆ ಕಲಾವಿದರ ಕಲ್ಯಾಣಕ್ಕಾಗಿ ಒಂದಷ್ಟು ಸೇವಾಕಾರ್ಯಗಳ ಕನಸು ಇವೆಲ್ಲಾ ಒಟ್ಟಾಗಿ ಪ್ರೇರೇಪಿಸಿದ್ದು “ಅಭಿನೇತ್ರಿ” ಎಂಬ ಸಂಸ್ಥೆಯೊಂದರ ಹುಟ್ಟಿಗೆ.. ತಾನು ಗಳಿಸಿದ ಹೆಸರು ಖ್ಯಾತಿಯನ್ನು ತನ್ನ ಸ್ವಂತ ಉದ್ಧಾರಕ್ಕಾಗಿ ಮಾತ್ರ ಬಳಸಿಕೊಳ್ಳದೇ ಸಮಾಜ ಸೇವೆಯ ಕಾರ್ಯಗಳಿಗೂ ವಿನಿಯೋಗಿಸಿಕೊಳ್ಳುತ್ತಿರುವ ಕೆಲವೇ ಕೆಲವು ಕಲಾವಿದರ ಸಾಲಿನಲ್ಲಿ ನೀಲ್ಕೋಡು ನಿಲ್ಲುತ್ತಾರೆ. ತೃಪ್ತಿ ಹಾಗು ನೀಲ್ಕೋಡು ಶಂಕರ್ ಹೆಗ್ಡೆಯವರ ಕನಸಿನ ಕೂಸು ಅಭಿನೇತ್ರಿಗೆ ಇದೀಗ ಮೂರು ವರ್ಷ,, ನೀಲ್ಕೊಡು ದಂಪತಿಗಳ ಕಲಾ ಸೇವೆಯ ಕನಸಿನ ಕೂಸಿಗೆ ಅಭಿನೇತ್ರಿ ಅಂತ ನಾಮಕರಣ ಮಾಡಿದವ್ರು ವಿದ್ವಾನ್ ಉಮಾಕಾಂತ್ ಭಟ್. ಕಳೆದೆರಡು ವರ್ಷಗಳಲ್ಲಿ ಲಕ್ಷಾಂತರ ರುಪಾಯಿ ಹಣವನ್ನು ಸಮಾಜಸೇವೆಗೆ ಬಳಸಿಕೊಂಡ ಸಾರ್ಥಕತೆ ಅಭಿನೇತ್ರಿ ಆರ್ಟ್ ಟ್ರಸ್ಟ್ ಇದರದು.

2018 ರಲ್ಲಿ ಮೊದಲನೇ ವರ್ಷದಲ್ಲಿ ಅಭಿನೇತ್ರಿ ಆರ್ಟ್ ಟ್ರಸ್ಟ್ ವತಿಯಿಂದ ಯಕ್ಷಗಾನದ ಇಬ್ಬರು ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆದಿದೆ. ಆ ವರ್ಷ ಕಲಾವಿದರಿಗೆ 3 ಲಕ್ಷ ರುಪಾಯಿಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 13-10- 2019 ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನೇತ್ರಿ ಆರ್ಟ್ ಟ್ರಸ್ಟ್ ನಿಂದ ಕಲಾವಿದ ಹಡಿನಬಾಳ್ ಶ್ರೀಪಾದ ಹೆಗಡೆಯವರಿಗೆ 3 ಲಕ್ಷ ಗೌರವ ಧನ ಹಾಗೂ ಸನ್ಮಾನ ಸಮರ್ಪಣೆಯಾಗಿದೆ. ತ್ರಯಂಬಕ ಇಡುವಾಣಿ ಯವರಿಗೆ 75 ಸಾವಿರ, ದಿ, ಶ್ರೀ ಶಾಂತಾರಾಮ ಭಂಡಾರಿ ಕುಟುಂಬಕ್ಕೆ 50 ಸಾವಿರ ಧನಸಹಾಯ, ಕೋಟ ಸುರೇಶ್ ಕಣ್ಣಿ ಪ್ರಶಸ್ತಿ ಮೊತ್ತ 10 ಸಾವಿರದ ಒಂದು ರುಪಾಯಿಗಳು, ಶ್ರೀ ಮೂರೂರು ವಿಷ್ಣು ಭಟ್ಟ ಪ್ರಶಸ್ತಿ ಅಭಿನೇತ್ರಿ ಪ್ರಶಸ್ತಿ- 10 ಸಾವಿರದ ಒಂದು ರುಪಾಯಿ ನೀಡಲಾಗಿದೆ. ಅಲ್ಲದೆ ಟ್ರಸ್ಟ್ ನ ಮುಖಾಂತರ ಯಕ್ಷಗಾನ ತರಬೇತಿ ಶಾಲೆಯೂ ನಡೆಯುತ್ತಿದ್ದು ಪ್ರತಿವರ್ಷ ಯಕ್ಷಗಾನ ಕಾರ್ಯಕ್ರಮಗಳನ್ನೂ ಸಂಯೋಜಿಸಲಾಗುತ್ತದೆ.

ಶಂಕರ್ ಹೆಗ್ಡೆಯವರು ಕಲಾವಿದ ಮಾತ್ರವಲ್ಲ, ಉತ್ತಮ ಬರಹಗಾರರು ಹೌದು. ಇವರ ಮುಖಪುಟದ ಗೋಡೆಗಳ ಮೇಲೆ ಕಣ್ಣಾಡಿಸಿದರೆ ಜೀವನಾನುಭವಗಾಳ ಸಾಲುಗಳು, ಸೌಜನ್ಯದ ಮಾತುಗಳು ಕಲೆಯ ಮೇಲಿನ ಪ್ರೀತಿ ಇವೆಲ್ಲವೂ ಗೋಚರಿಸುತ್ತವೆ.

ಒಟ್ಟಿನಲ್ಲಿ, ಅಭಿನೇತ್ರಿ ಆಗಸದೆತ್ತರಕ್ಕೆ ಬೆಳೆಯಲಿ, ಕಲೆ ಕಲಾವಿದರನ್ನು ಪೋಷಿಸೋ ಆಲದ ಮರವಾಗಲಿ. ನೀಲ್ಕೋಡು ಶಂಕರ ಹೆಗಡೆ ದಂಪತಿಗಳು ಈ ಮೂಲಕ ಸಮಾಜಮುಖಿಯಾಗಿ ಇನ್ನಷ್ಟು ಸಾಧಿಸುವಂತಾಗಲಿ ಎಂಬುದೇ ನಮ್ಮ ಆಶಯ.

Author – ಶುಭಾಶಯ ಜೈನ್

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)