ಮಂಗಳೂರಿನಲ್ಲಿ ಹೈಅಲರ್ಟ್; ಬೂದಿ ಮುಚ್ಚಿದ ಕೆಂಡದಂತಿದೆ ಕಡಲನಗರಿ

0
336

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮಂಗಳೂರು, ಡಿಸೆಂಬರ್ 20: ನಗರದಲ್ಲಿ ನಿನ್ನೆ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ನಿನ್ನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿಸೆಂಬರ್ 22ರವರೆಗೂ ಕರ್ಫ್ಯೂ ಜಾರಿ ಮಾಡಲಾಗಿದೆ. ಇಡೀ ಜಿಲ್ಲೆಯಲ್ಲಿ ಸಂಚಾರ ವಿರಳವಾಗಿದ್ದು, ಬೂದಿ ಮುಚ್ಚಿದ ಕೆಂಡದಂತೆ ಕಾಣುತ್ತಿದೆ.

ಗೋಲಿಬಾರ್ ನಲ್ಲಿ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದು, ಪರಿಸ್ಥಿತಿ ನಿಯಂತ್ರಣ ಮೀರುತ್ತಿದ್ದ ಕಾರಣ ಜಿಲ್ಲೆಯಾದ್ಯಂತ ಕರ್ಫ್ಯೂ ವಿಧಿಸಲಾಗಿತ್ತು. ಹೀಗಾಗಿ ಇಂದು ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಿಸುವ ಎಲ್ಲಾ ರಸ್ತೆಗಳು ಬಂದ್ ಆಗಿವೆ. ಜಿಲ್ಲೆಯ ಗಡಿಭಾಗದಲ್ಲೂ ಬಂದ್ ವಾತಾವರಣ ನಿರ್ಮಾಣವಾಗಿದೆ. ಗೋವಾ ಕೇರಳದಿಂದ ಬರುತ್ತಿರುವ ವಾಹನಗಳಿಗೆ ತಡೆ ಒಡ್ಡಲಾಗುತ್ತಿದೆ. ಎಲ್ಲೆಡೆ ಖಾಕಿ ಕಣ್ಗಾವಲಿದ್ದು, ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಂಗಡಿಗಳು ಬಂದ್ ಆಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ನಿನ್ನೆಯೇ ಜಿಲ್ಲಾಧಿಕಾರಿ ರಜೆಯನ್ನು ಘೋಷಿಸಿದ್ದರು.

ನಲವತ್ತೆಂಟು ಗಂಟೆಗಳ ಕಾಲ ಇಂಟರ್ ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲು ಗೃಹ ಇಲಾಖೆಯಿಂದ ಆದೇಶ ದೊರೆತಿದೆ. ಇಂದು ಶುಕ್ರವಾರವಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಈ ನಡುವೆ ಇಂದು ಜಿಲ್ಲೆಯಲ್ಲಿ ಎರಡು ಕಡೆ ಕಲ್ಲು ತೂರಾಟದ ಘಟನೆಯೂ ವರದಿಯಾಗಿದೆ. ಮಂಗಳೂರಿನ ಪರಿಸ್ಥಿತಿ ಅವಲೋಕಿಸಲು ನಾಳೆ ಸಿಎಂ ಜಿಲ್ಲೆಗೆ ಆಗಮಿಸಲಿದ್ದು, ಪೊಲೀಸರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)