ಕನ್ನಡದ ಮನಸ್ಸುಗಳನ್ನು ಬೆಸೆದು ಒಂದುಗೂಡಿಸಿದ ಬೀಜಿಗೆ ಸಂದ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ

0
1378

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದ ಕುವೆಂಪುರವರ ಮಾತನ್ನು ಅಕ್ಷರಶ: ಪಾಲಿಸಿ ಕನ್ನಡ ನಾಡು-ನುಡಿಯ ಕಂಪನ್ನು ಗಲ್ಫ್ ದೇಶಗಳಲ್ಲಿ ಪಸರಿಸಿದ ಎಲ್ಲರಿಂದಲೂ ಪ್ರೀತಿಯಿಂದ ‘ಬೀಜಿ’ ಎಂದು ಕರೆಯಲ್ಪಡುವ  ಬಿ ಜಿ ಮೋಹನ್ ದಾಸ್ ರವರ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.(1-11-219)

ಬೈಂದೂರು ತಾಲೂಕಿನ ಬಿಜೂರಿನಲ್ಲಿ ಜನಿಸಿ ಉದ್ಯೋಗ ನಿಮಿತ್ತ ದೀರ್ಘ ಕಾಲ ತಾಯ್ನಾಡಿನಿಂದ ದೂರದ ದುಬಾಯಿಯಲ್ಲಿ ವಾಸವಾಗಿದ್ದ ಅವರು ಅಲ್ಲಿ ನೆಲೆಸಿದ್ದ ಕನ್ನಡಿಗರನ್ನು ಸಂಘಟಿಸಿ ನಾಡಿನ ಸಾಹಿತ್ಯ, ಸಿನಿಮಾ, ನಾಟಕ, ಯಕ್ಷಗಾನ, ಕ್ರೀಢೆ ಮೊದಲಾದ ಚವಟುಟಿಕೆಗಳನ್ನು ನಿರಂತರವಾಗಿ ಏರ್ಪಡಿಸಿ ಅವರಲ್ಲಿನ  ಕನ್ನಡತನ ಕಳೆದುಹೋಗದಂತೆ ಕಾಪಿಡುವ ಕೆಲಸ ಮಾಡಿದವರು. ಕೊಲ್ಲಿಯಲ್ಲಿ ನೆಲೆಸಿದ  ಮಣ್ಣಿನ ಮಕ್ಕಳಲ್ಲಿ ಧರ್ಮ-ಜಾತಿ ಮೀರಿದ ಭ್ರಾತ್ರತ್ವ ಪ್ರೇಮ ಬೆಳೆಸಿ, ನೀರೆರೆದು ಬದುಕಿನ ಕಷ್ಟ-ಸುಖಗಳಲ್ಲಿ ಪರಸ್ಪರ ಸಹಭಾಗಿಗಳಾಗುವಂತೆ ಪ್ರೋತ್ಸಾಹಿಸಿ ಕುವೆಂಪುರವರ ವಿಶ್ವಮಾನವ ಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸಿದ ಸಾಧಕರೆನಿಸಿದರು. ಹಾಗಾಗಿಯೇ ಅಬುಧಾಭಿ ಕರ್ನಾಟಕ ಸಂಘದ ಆಶ್ರಯದಲ್ಲಿ 2012ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ‘ಕುವೆಂಪು ವಿಶ್ವ ಮಾನವ ಪ್ರಶಸ್ತಿ’ ಸಹಜವಾಗಿಯೇ ಅವರಿಗೆ ಒಲಿದಿತ್ತು. ಯುಎಯಿಯಲ್ಲಿ ’ಮಯೂರ ವಿಶ್ವಮಾನವ” ಮತ್ತು ’ದ.ರಾ.ಬೇಂದ್ರೆ’ ಪ್ರಶಸ್ತಿ ಸಿಕ್ಕಿದ ಮೊದಲ ಕನ್ನಡಿಗರಾಗಿ ಮೂಡಿ ಬಂದಿದ್ದರು ಬೀಜಿ!

1989-90ರಲ್ಲಿ ದುಬಾಯಿ ಕರ್ನಾಟಕ ಸಂಘದ ಅಧ್ಯಕ್ಷರಾದ ಬಿ ಜಿ ಮೋಹನ್ ದಾಸ್ ಇಂಟರ್ ನೆಟ್ ನ ಸೌಲಭ್ಯವಿಲ್ಲದ, ವಾಟ್ಸಪ್-ಫೇಸ್ ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಿಲ್ಲದ ಕಾಲದಲ್ಲಿ ವಿದೇಶೀ ನೆಲದಲ್ಲಿ ಕನ್ನಡ ಭಾಷಾ-ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವಲ್ಲಿ ಮಂಚೂಣಿಯಲ್ಲಿದ್ದರು. 1989ರಲ್ಲಿ  ‘ಉದಯವಾಣಿ’  ದಿನಪತ್ರಿಕೆಯಲ್ಲಿ ಪ್ರತಿ ಬುಧವಾರ ‘ಗಲ್ಪ್ ವಾರ್ತಾ ಸಂಚಯ’ ಎಂಬ ಕೊಲ್ಲಿ ಅಂಕಣವನ್ನು ಪ್ರಾರಂಭಿಸುವುದಕ್ಕೆ ಕಾರಣರಾದರು. ನಾಡಿನ ಹಿರಿಯ ಕಲಾವಿದರು, ಸಾಹಿತಿಗಳು ಸಾಧಕರನ್ನು ದುಬಾಯಿ ಕನ್ನಡ ಸಂಘದ ಆಶ್ರಯದಲ್ಲಿ ಬರಮಾಡಿಕೊಂಡು ಅವರ ಪ್ರತಿಭೆ-ವಿದ್ವತ್ತನ್ನು ಗಲ್ಫ್ ಕನ್ನಡಿಗರು ಆಸ್ವಾದಿಸುವಂತೆ ಮಾಡಿದರು.

ಕೊಲ್ಲಿ ರಾಷ್ಟ್ರಗಳ ಎಲ್ಲಾ ಕನ್ನಡ ಸಂಘಗಳನ್ನು ಒಟ್ಟಿಗೆ ತರುವ, ವಿವಿಧ ಸಾಂಸ್ಕೃತಿಕ ಕಾರ್ಯಗಳನ್ನು ಏರ್ಪಡಿಸುವ ಹಾಗೂ ಅವುಗಳಲ್ಲೆಲ್ಲಾ ಅಲ್ಲಿನ ಸ್ಥಳೀಯರ ಹಾಗೂ ಸರ್ಕಾರಗಳ ಸಹಾಯ-ಸಹಕಾರ ಪಡೆಯಲು ಅಹರ್ನಿಶಿ ಪ್ರಯತ್ನ ನಡೆಸಿದರು. ತಮ್ಮ ಮೂರು ದಶಕಗಳ ಕನ್ನಡ ಸಂಘದ ಒಡನಾಟದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆಯ ಪರಿಚಯವಿಲ್ಲದೆ ಕೊರಗಬಾರದೆಂದು ಕನ್ನಡ ಭಾಷಾ ತರಬೇತಿ ತರಗತಿಗಳನ್ನು ಏರ್ಪಡಿಸುವ, ವರ್ಷಕ್ಕೊಮ್ಮೆ ವಾರ್ಷಿಕೋತ್ಸವ, ದೀಪಾವಳಿ, ರಾಜ್ಯೋತ್ಸವ ಮೊದಲಾದ ವಿಶೇಷ ದಿನಾಚರಣೆಗಳನ್ನು ಆಚರಿಸುವಲ್ಲಿ ಬೀಜಿ ಸದಾ ಮುಂದಿರುತ್ತಿದ್ದರು. ಮಹಿಳೆಯರಿಗೆ ಪಾಕಶಾಸ್ತ್ರ, ಕೋಮಲ ತ್ವಚೆ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸುವ ಹಾಗೂ ಅರ್ಹ-ಅಶಕ್ತ ಕಲಾವಿದರನ್ನು ಸಮ್ಮಾನಿಸುವ, ಆರ್ಥಿಕ ನೆರವು ನೀಡುವ ಅನೇಕ ಕಾರ್ಯಗಳಿಂದ ‘ಗಲ್ಫ್ ಕನ್ನಡಿಗ ಬೀಜಿ’ ಎಂದು ಕೊಲ್ಲಿ ದೇಶಗಳಲ್ಲೆಲ್ಲಾ ಜನಪ್ರಿಯರಾದರು.

ಗಲ್ಫ್ ಕನ್ನಡಿಗರಲ್ಲಿ ನಾಡಿನ ಘಟನಾಕ್ರಮಗಳ ಕುರಿತು ನಿರಂತರ ಆಸಕ್ತಿ ಹುಟ್ಟಿಸಲು 2000-2001ರಲ್ಲಿ ‘ಗಲ್ಫ್ ವಾರ್ತೆ.ಕಾಮ್’ ಎಂಬ ವೆಬ್ ಸೈಟ್ ಪ್ರಾರಂಭಿಸಿದರು. ಅದಕ್ಕೂ ಮೊದಲು ಅವರು ಕರ್ನಾಟಕ ಸಂಘದ ಅಧಿಕೃತ ವೆಬ್ ಸೈಟ್ www.karnatakasangha.com ನಿರ್ಮಿಸಿ ನಡೆಸಿಕೊಂಡು ಬಂದಿದ್ದರು. ಕೊಲ್ಲಿಯ ಎಲ್ಲಾ ಸುದ್ದಿ ವರದಿಗಳು, ಸಂತಾಪಗಳು,ಶುಭಾಶಯಗಳು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಏಕಕಾಲದಲ್ಲಿ ಹರಿದಾಡುವಂತೆ ಮಾಡಿದರು. ಗಲ್ಫ್ ವಾರ್ತೆ ಕೊಲ್ಲಿ ರಾಷ್ಟ್ರಗಳು ಹಾಗೂ ಕರ್ನಾಟಕದ ಎಲ್ಲ ಪ್ರದೇಶಗಳ ಅಚ್ಚುಮೆಚ್ಚಿನ ಜಾಲತಾಣವಾಯಿತು. ಅದುವರೆಗೆ ಆಂಗ್ಲ ಭಾಷೆಯಲ್ಲಿದ್ದ ಗಲ್ಫ್ ವಾರ್ತೆ ಡಾಟ್ ಕಾಮ್ ಕನ್ನಡದ ಯುನಿಕೋಡ್ ಬಳಕೆಗೆ ಬಂದ ನಂತರ 2008ರಲ್ಲಿ ಕನ್ನಡದಲ್ಲಿ ‘ಗಲ್ಫ್ ಕನ್ನಡಿಗ ಡಾಟ್ ಕಾಮ್’  ಆಗಿ ಪರಿವರ್ತಿತವಾಯಿತು. ‘ಗಲ್ಫ್ ಕನ್ನಡಿಗ ಡಾಟ್ ಕಾಮ್’ ಈಗ ಗಲ್ಫ್ ಕನ್ನಡಿಗರ ನೆಚ್ಚಿನ ಅಂತರ್ಜಾಲ ಸುದ್ದಿತಾಣವಾಗಿ ಪ್ರಸಿದ್ಧಿ ಹೊಂದಿದೆ.

ಸದ್ಯ ಮಣಿಪಾಲದಲ್ಲಿ ವಿಶ್ರಾಂತ ಬದುಕು ನಡೆಸುತ್ತಿರುವ ಬೀಜಿಯವರ ಉತ್ಸಾಹ ಇಂದಿಗೂ ಬತ್ತದ ಸೆಲೆಯೆನಿಸಿದೆ. ಸ್ವದೇಶಕ್ಕೆ ಮರಳಿದ ನಂತರವೂ ಮಣ್ಣಿನ ಋಣ ತೀರಿಸುವ, ಊರಿನ ಅಭಿವೃದ್ಧಿಗೆ ಸ್ಪಂದಿಸುವ, ಇತರರ ಕಷ್ಟಕ್ಕೆ ಮಿಡಿಯುವ ಅವರದು ಸುಮ್ಮನೆ ಕುಳಿತುಕೊಳ್ಳುವ ಜಾಯಮಾನವಲ್ಲ. ವಿಶ್ವದಾದ್ಯಂತ ನೆಲೆಸಿರುವ ಕರಾವಳಿಯ ಕನ್ನಡಿಗರು ಹುಟ್ಟಿದೂರಿನೊಂದಿಗೆ ಬಾಂದವ್ಯ ಬೆಸೆದಿಟ್ಟುಕೊಳ್ಳುವಲ್ಲಿ ನೆರವಾಗಲು ಅವರು ಬೈಂದೂರು ಡಾಟ್ ಕಾಮ್, ದೇವಾಡಿಗ ಡಾಟ್ ಕಾಮ್, ಕೊಲ್ಲೂರು ಡಾಟ್ ಕಾಮ್ ಸುದ್ದಿ ತಾಣಗಳನ್ನು ಮುನ್ನಡೆಸುತ್ತಿದ್ದಾರೆ. ತಡವಾದರೂ ಸರಿ ಕನ್ನಡದ ಮನಸ್ಸುಗಳನ್ನು ಒಟ್ಟುಗೂಡಿಸುವ ಸ್ನೇಹ ಜೀವಿ ಬೀಜಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಅವರ ಅಸಂಖ್ಯ ಅಭಿಮಾನಿಗಳಿಗೆ ಸಂತೋಷ ತಂದಿದೆ.

–ಬೈಂದೂರು ಚಂದ್ರಶೇಖರ ನಾವಡ