ಶಬರಿಮಲೆ ದೇವಸ್ಥಾನ ಇಂದು ಓಪನ್, ಮಹಿಳೆಯರಿಗೆ ರಕ್ಷಣೆಯಿಲ್ಲ

0
1222

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ತಿರುವನಂತಪುರ, ನವೆಂಬರ್ 16: ಶಬರಿಮಲೆ ದೇವಸ್ಥಾನಕ್ಕೆ ಮಹಿಳಾ ಪ್ರವೇಶ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಮುಂದೂಡಿದ ಎರಡು ದಿನಗಳ ನಂತರ ಅಯ್ಯಪ್ಪಸ್ವಾಮಿ ದೇವಸ್ಥಾನವು ಮಂಡಲ ಪೂಜಾ ಹಬ್ಬಕ್ಕಾಗಿ ಇಂದು ತೆರೆಯಲಿದೆ. ಎಲ್ಲಾ ವಯಸ್ಸಿನ ಮಹಿಳೆಯರಿಗೆ ದೇವಸ್ಥಾನದ ಒಳಗೆ ಹೋಗಲು ಅವಕಾಶವಿರುತ್ತದೆ, ಆದರೆ ಮಹಿಳೆಯರಿಗೆ ಯಾವುದೇ ರಕ್ಷಣೆ ನೀಡಲಾಗುವುದಿಲ್ಲ. ವಾ‍ರ್ಷಿಕ ಮಂಡಲ ತೀರ್ಥಯಾತ್ರೆಯ ಸಲುವಾಗಿ ಶಬರಿಮಲೆ ದೇವಸ್ಥಾನದ ಬಾಗಿಲುಗಳು ತೆರೆಲಾಗುತ್ತದೆ.

ನಿರ್ದಿಷ್ಟ ವಯಸ್ಸಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಕ್ಕೆ ವಿರೋಧಿಸಿ, ತೀವ್ರ ಟೀಕೆಗೆ ಗುರಿಯಾಗಿರುವ ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ ಇದೇ ನವೆಂಬರ್ 20 ರ ನಂತರ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡಲಿದ್ದು, ಅವರಿಗೆ ಭದ್ರತೆ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ತಿಳಿದು ಬಂದಿಲ್ಲ. ಈಗಾಗಲೇ ಯಾತ್ರಾರ್ಥಿಗಳು ಶಬರಿಮಲೆ ದೇವಸ್ಥಾನಕ್ಕೆ ಹೋಗಲು ಪ್ರಾರಂಭಿಸಿದ್ದಾರೆ. ಆದರೆ ಮಹಿಳೆಯರು ಪ್ರವೇಶಿಸುತ್ತಾರೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಏನಿದು ಶಬರಿಮಲೆ ಪ್ರಕರಣ.? : 10 ರಿಂದ 50 ವರ್ಷದೊಳಗಿನ ಮಹಿಳೆಯರನ್ನು ತಿರುವಾಂಕೂರು ದೇವಸ್ವಂ ಮಂಡಳಿಯು 1951 ರಿಂದ ದೇವಸ್ಥಾನ ಪ್ರವೇಶಿಸುವುದನ್ನು ನಿಷೇಧಿಸಿತ್ತು. ಈ ಕಟ್ಟಪ್ಪಣೆಯು 1965 ರಿಂದ ಕಾನೂನುಬದ್ಧವಾಗಿ ಜಾರಿಗೆ ಬಂದಿತು. 1991 ರಲ್ಲಿ ಕೇರಳ ಹೈಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿಯಿತು.

ನಂತರ, ಸೆಪ್ಟೆಂಬರ್ 28,2018ರಂದು ಸುಪ್ರೀಂ ಕೋರ್ಟ್ ಎಲ್ಲಾ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಿತು. ಈ ಆದೇಶದಿಂದ ಕೇರಳದಲ್ಲಿ ಗಲಭೆಗಳು ನಡೆಯುವುದಕ್ಕೆ ಶುರುವಾದವು. ಸಂಘ ಪರಿವಾರ ಮತ್ತು ಹಿಂದೂ ಸಂಘಟನೆಗಳು ಸೇರಿ ಮುಟ್ಟಿನ ಮಹಿಳೆಯರನ್ನು ದೇವಾಲಯಕ್ಕೆ ಪ್ರವೇಶಿಸುವುದನ್ನು ತಡೆಯಲು ಪ್ರಾರಂಭಿಸಿದರು.

ಅಂದಿನ ಸಿಜೆಐ ದೀಪಕ್ ಮಿಶ್ರಾ ಅವರು ಮಹಿಳೆಯರ ದೇವಸ್ಥಾನ ನಿಷೇಧವು ಹಿಂದೂ ಧರ್ಮದ ‘ಅಗತ್ಯ ಭಾಗ’ ಅಲ್ಲ, ಬದಲಿಗೆ ‘ಧಾರ್ಮಿಕ ಪುರು‍ಷ ಪ್ರಭುತ್ವದ’ ಒಂದು ರೂಪ ಎಂದು ಹೇಳಿದ್ದರು.

ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಮೊದಲ ಬಾರಿಗೆ ದೇವಸ್ಥಾನ ತೆರೆದಾಗ ಅಕ್ಟೋಬರ್ 17, 2018 ರಂದು ನೀಲಕ್ಕಲ್ ಮತ್ತು ಪಂಬಾ ಬೇಸ್ ಕ್ಯಾಂಪ್ ಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ದೇವಾಲಯ ಪ್ರವೇಶಿಸಲು ಯತ್ನಿಸಿದ ಮಹಿಳಾ ಕಾರ್ಯಕರ್ತರು, ಪತ್ರಕರ್ತರು ಮತ್ತು ಇತರ ಮಹಿಳೆಯರ ಮೇಲೆ ಪ್ರತಿಭಟನಾಕಾರರು ಹಲ್ಲೆ ಮಾಡಿದ್ದರು.

ಮಹಿಳಾ ಪತ್ರಕರ್ತರ ಕ್ಯಾಮೆರಾಗಳನ್ನು ಕದ್ದು, ವಾಹನಗಳನ್ನು ಜಖಂಗೊಳಿಸಿದ್ದರು. ಪೊಲೀಸರ ಮೇಲೂ ಹಲ್ಲೆ ನಡೆಸಲಾಗಿತ್ತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)